ADVERTISEMENT

ಆಚರಣೆ: ಗೊಡಚಿಯ ಬಳುವಲ ಹಣ್ಣಿನ ಜಾತ್ರೆ

ಗಾಣಧಾಳು ಶ್ರೀಕಂಠ
ಚನ್ನಪ್ಪ ಮಾದರ
Published 13 ಡಿಸೆಂಬರ್ 2025, 20:30 IST
Last Updated 13 ಡಿಸೆಂಬರ್ 2025, 20:30 IST
ಗೊಡುಚಿ ಜಾತ್ರೆಯಲ್ಲಿ ‘ಬೇಲ ಹಣ್ಣಿನ ವ್ಯಾಪಾರ’ದ ನೋಟ
ಗೊಡುಚಿ ಜಾತ್ರೆಯಲ್ಲಿ ‘ಬೇಲ ಹಣ್ಣಿನ ವ್ಯಾಪಾರ’ದ ನೋಟ   

ಡಿಸೆಂಬರ್‌ ತಿಂಗಳಲ್ಲಿ ಹೊಸ್ತಿಲ ಹುಣ್ಣಿಮೆಯ ದಿನ ಬಂತೆಂದರೆ ಗೊಡಚಿಯ ವೀರಭದ್ರೇಶ್ವರ ದೇವಸ್ಥಾನದ ಅಂಗಳದ ತುಂಬಾ ಬೇಲದ ಹಣ್ಣುಗಳ ರಾಶಿಗಳು ಕಾಣಿಸಿಕೊಳ್ಳುತ್ತವೆ. ದೇವರ ದರ್ಶನ ಪಡೆದ ಭಕ್ತರು ನೇರವಾಗಿ ಹಣ್ಣಿನ ರಾಶಿ ಎದುರು ನಿಂತು ಡಜನ್‌ ಗಟ್ಟಲೆ ಬೇಲದ ಹಣ್ಣುಗಳನ್ನು ಖರೀದಿಸಿ, ಮನೆಗೆ ಒಯ್ಯುತ್ತಾರೆ..!

ಹೌದು. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಗೊಡಚಿಯ ವೀರಭದ್ರಶ್ವೇರ ದೇವರ ಜಾತ್ರೆಯಲ್ಲಿ ಭಕ್ತರು ಬೇಲ–ಬಾರೆ ಹಣ್ಣುಗಳನ್ನು ಪ್ರಸಾದದ ರೂಪದಲ್ಲಿ ಮನೆಗೆ ಒಯ್ಯವುದು ವಾಡಿಕೆ. ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಆಚರಣೆ.

ಹುಣ್ಣಿಮೆಯಿಂದ ಐದು ದಿನಗಳು ನಡೆಯುವ ಈ ಜಾತ್ರೆಗೆ ಬೆಳಗಾವಿ ಜಿಲ್ಲೆಯಲ್ಲದೇ, ಬಾಗಲಕೋಟೆ, ವಿಜಯಪುರ, ಹಾವೇರಿ, ಕೊಪ್ಪಳ ಸೇರಿದಂತೆ ದೂರದ ಊರುಗಳಿಂದ ಲಕ್ಷಾಂತರ ಭಕ್ತರು ಬರುತ್ತಾರೆ‌. ಜಾತ್ರೆಗೆ ಬಂದವರು (ಬಹುತೇಕರು) ದೇವರ ದರ್ಶನ ಮಾಡಿ ಪ್ರಸಾದವಾಗಿ ಬೇಲ- ಬಾರೆ ಹಣ್ಣನ್ನು ಒಯ್ಯುತ್ತಾರೆ.‌ ಐದನೇ ದಿನದ ಲಕ್ಷ ದೀಪೋತ್ಸವದ ನಂತರವೂ ಭಕ್ತರು ಅಮಾವಾಸ್ಯೆವರೆಗೂ, ದೇವರ ದರ್ಶನಕ್ಕೆ ಬರುವುದಿದೆ.

ADVERTISEMENT

ಬೇಲದ‌ಹಣ್ಣನ್ನು, ಪ್ರಾದೇಶಿಕವಾಗಿ ಬ್ಯಾಲ, ಬೇಲ, ಬೆಲವತ್ತೆ, ಬೆಳವಲ, ಬಳುವಲ, ಬಳುವೊಲ, ಬಳೋಳ, ಬೊಳ್ಳೋಳಿ, ದಂತಶಠ, ಕಪಿತ್ಥ ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ. ಇದರ ಸಸ್ಯಶಾಸ್ತ್ರೀಯ ಹೆಸರು ಲೀಮೊನಿಯಾ ಆಸಿಡಿಸೀಮಾ, ಇಂಗ್ಲಿಷ್‌ನಲ್ಲಿ 'ವುಡ್ ಆ್ಯಪಲ್'.

ರಾಮದುರ್ಗ ಭಾಗದಲ್ಲಿ ಈ ಹಣ್ಣನ್ನು ಬಳುವಲ ಎಂದು ಕರೆಯುತ್ತಾರೆ. ಈ ಜಾತ್ರೆಯಲ್ಲಿ ಭಕ್ತರು ಹೆಚ್ಚಾಗಿ ಬಳುವಲ ಹಣ್ಣನ್ನು ಪ್ರಸಾದವಾಗಿ ಖರೀದಿಸುತ್ತಾರೆ. ‘ಜಾತ್ರೆಗೆ ಬಂದವರು ಬಳುವಲ ಹಣ್ಣು ಖರೀದಿಸಿಕೊಂಡು ಹೋದರೆ ಮಾತ್ರ ಜಾತ್ರೆ ಪರಿಪೂರ್ಣಗೊಳ್ಳುತ್ತದೆ. ಅದಕ್ಕೆ ಗೊಡಚಿ ವೀರಭದ್ರ ದೇವರ ಜಾತ್ರೆಯು, ಬಳುವಲ ಹಣ್ಣಿನ ಜಾತ್ರೆ ಎಂದೇ ಪ್ರಸಿದ್ಧಿಯಾಗಿದೆ’ ಎನ್ನುತ್ತಾರೆ ಗೊಡಚಿ ಕ್ಷೇತ್ರದ ಭಕ್ತ ಈರಣ್ಣ ಕಾಮನ್ನವರ.

ಗೊಡಚಿಯಲ್ಲಿ ಬಳುವಲ ಜಾತ್ರೆ

ಲಾರಿಗಟ್ಟಲೆ ವಹಿವಾಟು

ಪ್ರತಿ ವರ್ಷ ಜಾತ್ರೆ ಆರಂಭದ ದಿನವೇ ಗೊಡಚಿಗೆ ಲಾರಿಗಟ್ಟಲೆ ಬೇಲದ‌‌ಹಣ್ಣು ಬರುತ್ತದೆ.‌ ಈ ಬಾರಿ ಜಾತ್ರೆಗೆ ಸುಮಾರು 15 ಲಾರಿಗಳಷ್ಟು ಹಣ್ಣುಗಳು ಬಂದಿವೆಯಂತೆ. ಗ್ರಾಮ ಪಂಚಾಯಿತಿ ಮತ್ತು ಜಾತ್ರಾ ಸಮಿತಿಯವರು ಬೇಲ, ಬಾರೆ, ಬಾಳೆ ಹಣ್ಣುಗಳ ಮಾರಾಟಕ್ಕಾಗಿ ಪ್ರತ್ಯೇಕ ಜಾಗಗಳ ವ್ಯವಸ್ಥೆ ಮಾಡುತ್ತಾರೆ. ವ್ಯಾಪಾರಸ್ಥರು ಪುಟ್ಟ ತೆರೆದ ಮಳಿಗೆಗಳಲ್ಲಿ ಬೇಲದ‌ ಹಣ್ಣುಗಳನ್ನು ರಾಶಿ ಹಾಕಿಕೊಂಡು ವ್ಯಾಪಾರ ಆರಂಭಿಸುತ್ತಾರೆ.

ಜಾತ್ರೆಗೆ ಬರುವ ಭಕ್ತರು ದೇವರ ದರ್ಶನ ಪಡೆದು ನಂತರ ಬೇಲದ ಹಣ್ಣು ಖರೀದಿಸಿ ಊರಿನತ್ತ ಹೊರಡುತ್ತಾರೆ. ‘ಒಂದು ಕುಟುಂಬದವರು ಕನಿಷ್ಠ ಐದು, ಗರಿಷ್ಟ ಒಂದು ದೊಡ್ಡ ಕೈಚೀಲದ ತುಂಬಾ ಹಣ್ಣುಗಳನ್ನು ಕೊಂಡೊಯ್ಯುತ್ತಾರೆ' ಎನ್ನುತ್ತಾರೆ ಬೇಲದ‌ ಹಣ್ಣಿನ ವ್ಯಾಪಾರಿ ದ್ಯಾಮಣ್ಣ ನಾಗಪ್ಪ ಅಮರಗೋಳ.

ಒಬ್ಬರೇ ಇಷ್ಟೊಂದು ಹಣ್ಣುಗಳನ್ನು ತಗೊಂಡು ಹೋಗಿ ಏನು ಮಾಡುತ್ತಾರೆ’ ಎಂಬ ನನ್ನ ಕುತೂಹಲದ ಪ್ರಶ್ನೆಗೆ, ದ್ಯಾಮಣ್ಣ ಅವರು, ‘ಈ‌ ಹಣ್ಣುಗಳನ್ನು ತಮ್ಮೂರಿನ ಸ್ನೇಹಿತರು, ಪರಿಚಿತರಿಗೆ, ಸಂಬಂಧಿಕರಿಗೆ ಹಂಚುತ್ತಾರೆ. ಇದೂ ಕೂಡ ಒಂದು ಸಂಪ್ರದಾಯ' ಎಂದು ಅವರು ವಿವರಿಸಿದರು.

‘ಬಳುವಲು ಹಣ್ಣಿನೊಳಗಿರುವ ತಿರುಳು ತೆಗೆದು ಅದಕ್ಕೆ ಬೆಲ್ಲ ಸೇರಿಸಿ ಮತ್ತೆ ಸೊಗಟೆಗೆ(ಚಿಪ್ಪಿಗೆ) ತುಂಬಿ ಒಂದು ದಿನ ಕಳಿಯುವಂತೆ ಇಡುತ್ತಾರೆ. ಒಂದು ದಿನ ಬಿಟ್ಟು ಆ ಹೂರಣ ಸವಿದರೆ ಉತ್ತರ ಕರ್ನಾಟಕದ ಹುಗ್ಗಿಯ ಸವಿ ದೊರಕುತ್ತದೆ’ ಎನ್ನುತ್ತಾ ಬಳುವಲ ಪ್ರಸಾದ ಸವಿಯವ ವಿಧಾನವನ್ನು ವಿವರಿಸುತ್ತಾರೆ ಚಂದರಗಿ ಗ್ರಾಮದ ಬಸವ್ವ ತೋಟಗಟ್ಟಿ.

ಬಳುವಲ ಹಣ್ಣಿನ ಪ್ರಸಾದ

ಪ್ರತಿವರ್ಷ ಜಾತ್ರೆಯಲ್ಲಿ ಐವತ್ತಕ್ಕೂ ಹೆಚ್ಚು ವ್ಯಾಪಾರಸ್ಥರು ಬೇಲದ ಹಣ್ಣುಗಳನ್ನು ಮಾರಾಟ ಮಾಡುತ್ತಾರೆ. ತಿಂಗಳು ಪೂರ್ತಿ ನಡೆಯುವ ಜಾತ್ರೆಯಾದರೂ ಬಳುವಲ ಹಣ್ಣಿನ ವ್ಯಾಪಾರ ಹೆಚ್ಚು ನಡೆಯುವುದು ಹುಣ್ಣಿಮೆಯಿಂದ ಅಮಾವಾಸ್ಯೆವರೆಗೆ (ಐದು ದಿನಗಳಲ್ಲಿ ವ್ಯಾಪಾರ ಜೋರು) ಮಾತ್ರ. ಆನಂತರ ಹಣ್ಣುಗಳು ಖಾಲಿಯಾಗುತ್ತವೆ ಎನ್ನುತ್ತಾರೆ ವ್ಯಾಪಾರಸ್ಥರು.

ಇಷ್ಟಕ್ಕೂ ಬೇಲದ‌ ಹಣ್ಣನ್ನು ಈ‌‌ ಭಾಗದಲ್ಲಿ ಬೆಳೆಯುವುದು ಕಡಿಮೆ. ಹಾವೇರಿ, ಶಿಗ್ಗಾವಿ, ಹಾನಗಲ್, ಗೊಂದಿ, ಆನವಟ್ಟಿ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚು ಬೆಳೆಯುತ್ತಾರೆ. ಜಾತ್ರೆ ಸಮಯದಲ್ಲಿ ಈ ಸ್ಥಳಗಳಿಂದ ಹಣ್ಣನ್ನು ತರಿಸಿಕೊಳ್ಳುತ್ತೇವೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

ಬೇಲಕ್ಕೂ ಜಾತ್ರೆಗೂ ನಂಟು

12ನೇ ಶತಮಾನದಲ್ಲಿದ್ದ ಮಡಿವಾಳ ಮಾಚಯ್ಯ ಶರಣರು ಈ ಭಾಗಕ್ಕೆ ಒಮ್ಮೆ ಭೇಟಿ ನೀಡಿದ್ದಾರೆ. ಆಗ ಈ ಪ್ರದೇಶದಲ್ಲಿ ರೋಗರುಜಿನ ಹೆಚ್ಚಿತ್ತಂತೆ. ಹಲವು ರೋಗಗಳಿಂದ ಮುಕ್ತಿ ಕೊಡುವ ಹಣ್ಣು ಬೇಲ-ಬಾರೆ ಯನ್ನು ಈ ಕಡೆ ‌ಹೆಚ್ಚು ಬೆಳೆಯುತ್ತಿದ್ದರಂತೆ. ರೋಗಗಳಿಗೆ ಔಷಧವಾಗುವ ಬೇಲದ ಹಣ್ಣನ್ನು ‘ಸುಮ್ಮನೆ ತಿನ್ನಿ’ ಎಂದರೆ ಯಾರೂ ತಿನ್ನುವುದಿಲ್ಲ. ಹೀಗಾಗಿ ಬೇಲ –ಬಾರೆ ಹಣ್ಣಿನ ಜಾತ್ರೆ ಎಂದೇ ಪ್ರಚಾರ ಮಾಡಿದರೆ ಜನ ದೈವಿಕ ಭಾವನೆಯಿಂದ ಹಣ್ಣು ತಿಂದಾರು ಎಂದು ಶರಣರು ಯೋಚಿಸಿದರಂತೆ. ಅಲ್ಲಿಂದ ಪ್ರಸಾದದ ರೂಪದಲ್ಲಿ ಬೇಲ- ಬಾರೆ ಹಣ್ಣುಗಳು ಭಕ್ತರ ಮನೆ ಸೇರುತ್ತಿವೆ’ ಎಂದು ಗೊಡಚಿಯ 70 ರ ಹರೆಯದ ಹಿರೇಮಠ ಎಂಬ ಹಿರಿಯರು ವಿಜ್ಞಾನಿ ಡಾ.ಕಿರಣ್‌ಕುಮಾರ ಗೋರಬಾಳ ಅವರಿಗೆ ಮಾಹಿತಿ ನೀಡಿದ್ದಾರೆ.

ಸದ್ಯ ಬಾಗಲಕೋಟೆಯ ತೋಟಗಾರಿಕೆ ವಿವಿಯಲ್ಲಿ ಪ್ರಾಧ್ಯಾಪಕರಾಗಿರುವ ಕಿರಣ್‌ ಕುಮಾರ್ 20 ವರ್ಷಗಳಿಂದ ಬೇಲದ ಅಧ್ಯಯನ ನಡೆಸುತ್ತಿದ್ದಾರೆ. ಇದರ ಭಾಗವಾಗಿ (2015ರಲ್ಲಿ) ಗೊಡಚಿಗೆ ಹೋಗಿದ್ದಾಗ ಜಾತ್ರೆ–ಬೇಲದ ನಂಟಿನ ಬಗ್ಗೆ ಹಿರೇಮಠರು ಈ ಮಾಹಿತಿ ನೀಡಿದ್ದಾರೆ. ಆದರೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲೂ ಲಿಖಿತ ದಾಖಲೆಗಳು ಲಭ್ಯವಾಗಿಲ್ಲ. ಬಹುಶಃ ಈ ಭಾಗದ ಜನರಲ್ಲಿರುವ ನಂಬಿಕೆಯೂ ಇರಬಹುದು.‌

ಬೇಲದಹಣ್ಣಿನ ವ್ಯಾಪಾರ

ಬಹಳ ಹಿಂದಿನಿಂದಲೂ ಭಕ್ತರು ಬೇಲದ ಹಣ್ಣನ್ನು ಭಕ್ತರು ಪ್ರಸಾದವಾಗಿ ಸೇವಿಸುತ್ತಿದ್ದಾರೆ ಎನ್ನುವುದಕ್ಕೆ ಹಣ್ಣಿನ ವ್ಯಾಪಾರ ಮಾಡುವ ಬಸಪ್ಪ ಅಮರಗೋಳ ನೀಡುವ ಮಾಹಿತಿ ಸಾಕ್ಷಿಯಾತ್ತದೆ. ‘ನಮ್ಮ ತಂದೆ ಈ ಜಾತ್ರೆಯಲ್ಲಿ ಬೇಲದ ಹಣ್ಣನ್ನು ಮಾರುತ್ತಿದ್ದರು. ನಮ್ಮ ತಾತ ಕೂಡ ಮಾರಾಟ ಮಾಡುತ್ತಿದ್ದರಂತೆ. ಈಗ ನಾನು ಮುಂದುವರಿಸಿರುವೆ’ ಎಂದು ಮೂರು ತಲೆಮಾರುಗಳ ಬೇಲದ ವಹಿವಾಟನ್ನು ವಿವರಿಸಿದರು ಹಣ್ಣಿನ ವ್ಯಾಪಾರಿ ದ್ಯಾಮಣ್ಣ ಅಮರಗೋಳ.

ಪೋಶಕಾಂಶಗಳ ಆಗರ

ಹುಳಿ-ಸಿಹಿ ಮಿಶ್ರಿತ ರುಚಿಯಿರುವ ಬೇಲದಹಣ್ಣು ಪೋಷಕಾಂಶಗಳ ಆಗರ. ವಿಟಮಿನ್ ಸಿ, ಪೊಟ್ಯಾಸಿಯಂ, ಫಾಸ್ಪರಸ್ ಮತ್ತಿತರ ಪೋಷಕಾಂಶ‌ಗಳನ್ನು ಹೊಂದಿದೆ. ಹಲವು ರೋಗಗಳಿಗೆ ಔಷಧವಾಗುವ ಗುಣಗಳಿರುವ ಕಾರಣಕ್ಕೆ ಇದನ್ನ ‘ಬಹುರೋಗಗಳಿಗೆ ಔಷಧಿಯಾಗುವ ಹಣ್ಣು’ ಎಂದು ಕರೆಯುತ್ತಾರೆ. ಇಂಥ ಅಪರೂಪದ ಹಣ್ಣು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಜನರಿಗೆ ದೇವರ ಪ್ರಸಾದದ ರೂಪದಲ್ಲಿ ತಲುಪುತ್ತಾ, ಆರೋಗ್ಯ ವೃದ್ಧಿಗೆ ಪೂರಕವಾಗುತ್ತಿರುವುದು ಉತ್ತಮ ಬೆಳವಣಿಗೆ.

ಕಳೆದ ವರ್ಷದ ಜಾತ್ರೆಯಲ್ಲಿದ್ದ ಬೇಲದ ಹಣ್ಣುಗಳ ರಾಶಿ ಚಿತ್ರ: ಡಾ. ಕಿರಣ್ ಕುಮಾರ್
ಬಳುವಲ ಹಣ್ಣು ಖರೀದಿಸುತ್ತಿರುವ ಭಕ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.