ADVERTISEMENT

ಪುಟ್ಟ ಸಾಹಿತಿಯ ದೊಡ್ಡ ಸಾಧನೆ

ಅನಿತಾ ಎಚ್.
Published 23 ಡಿಸೆಂಬರ್ 2020, 1:50 IST
Last Updated 23 ಡಿಸೆಂಬರ್ 2020, 1:50 IST
ಅಂತಃಕರಣ
ಅಂತಃಕರಣ   

ಕತೆ, ಕವಿತೆ, ಕಾದಂಬರಿ, ಅಂಕಣಬರಹ ಸಾಹಿತ್ಯ ಪ್ರಕಾರಗಳಲ್ಲಿ 5ನೇ ತರಗತಿಯೊಳಗೆ 5 ಕೃತಿಗಳನ್ನು ರಚಿಸುವ ಮೂಲಕ ರಾಷ್ಟ್ರಪ್ರಶಸ್ತಿಯ ಶಿಫಾರಸಿಗೆ ಪಾತ್ರನಾದವನು ಬಾಲ ಸಾಹಿತಿ ಶಿವಮೊಗ್ಗದ ಅಂತಃಕರಣ.

ನಾಲ್ಕನೇ ತರಗತಿಯಲ್ಲಿರುವಾಗಲೇ 'ಎಚ್ಚರಿಕೆ' ಪತ್ರಿಕೆ ಮತ್ತು ‘ವಿಶ್ವ ಕನ್ನಡಿಗ’ ಅಂತರ್ಜಾಲ ಪತ್ರಿಕೆಗೆ ವಾರದಲ್ಲಿ ಎರಡು ಅಂಕಣಗಳನ್ನು ಬರೆಯಲು ಆರಂಭಿಸಿದ ಅಂತಃಕರಣ ಇದುವರೆಗೆ 500 ಅಂಕಣ ಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ, 1 ನಾಟಕವನ್ನು ರಚಿಸಿದ್ದಾನೆ. 10ನೇ ತರಗತಿಯೊಳಗೆ 6 ಸಮಗ್ರ ಬರಹಗಳ ಕೃತಿಗಳು ಸೇರಿ ಒಟ್ಟು 33 ಕೃತಿಗಳನ್ನು ರಚಿಸಿದ್ದಾನೆ. ‘ನಾವೂ ನೀವೂ ಫ್ರೆಂಡ್ಸ್ ಅಲ್ವಾ?’ ನಾಟಕವು ಧಾರವಾಡ ವಿಭಾಗ ಮಟ್ಟದ ನಾಟಕೋತ್ಸವಕ್ಕೆ ಆಯ್ಕೆಯಾಗಿ 10 ಪ್ರದರ್ಶನಗಳನ್ನು ಕಂಡಿದೆ. ಹಾಗಂತ ಈ ಪುಟ್ಟ ಸಾಹಿತಿ ಓದಿನಲ್ಲೇನೂ ಹಿಂದೆ ಬಿದ್ದಿಲ್ಲ. ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 620 ಅಂಕಗಳನ್ನು ಗಳಿಸಿ ಶಾಲೆಗೂ, ಪೋಷಕರಿಗೂ ಗೌರವ ತಂದಿದ್ದಾನೆ.

‘ಚಿಕ್ಕವನಿದ್ದಾಗ ಅಮ್ಮ ದಿನಕ್ಕೊಂದು ಕತೆ ಹೇಳುತ್ತಿದ್ದರು. ತಾತ (ಅಮ್ಮನ ಅಪ್ಪ) ನಿತ್ಯ ‘ಪ್ರಜಾವಾಣಿ’ಯನ್ನು ಗಟ್ಟಿಯಾಗಿ ಓದುತ್ತಿದ್ದರು. ನಾನು ಅವರ ಬೆನ್ನ ಮೇಲೆ ಕೂತು ಕೇಳಿಸಿಕೊಳ್ಳುತ್ತಿದ್ದೆ. ಇದು ನನ್ನ ಓದಿಗೆ ಪ್ರೇರಣೆಯಾಯಿತು. ಎಲ್‌ಕೆಜಿ, ಯುಕೆಜಿ ಇರುವಾಗಲೇ ಕಿರಿಯರ ರಾಮಾಯಣ, ಮಹಾಭಾರತಗಳನ್ನು ಓದಿದ್ದೆ. ನಾನು ಇಲ್ಲಿಯವರೆಗೂ ಓದಿದ ಸೇಕ್ರೆಡ್ ಹಾರ್ಟ್, ಲೊಯಲಾ ಶಾಲೆಗಳಲ್ಲೂ ಉತ್ತಮ ಪ್ರೋತ್ಸಾಹ ಸಿಕ್ಕಿತು’ ಎನ್ನುತ್ತಾನೆ ಅಂತಃಕರಣ.

ADVERTISEMENT

ಕ್ರೀಡೆಯಲ್ಲೂ ಮುಂದಿದ್ದು ಫುಟ್‍ಬಾಲ್, ಕಬಡ್ಡಿ, ಡಿಸ್ಕಸ್ ಥ್ರೋ, ಕರಾಟೆ, ಚೆಸ್‍ಗಳಲ್ಲಿ ಭಾಗಿಯಾಗಿ ಬಹುಮಾನಗಳನ್ನು ಪಡೆದುಕೊಂಡಿದ್ದಾನೆ.

ಶಿವಮೊಗ್ಗ ನಗರದ ಡಿವಿಎಸ್‌ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಪಿಯು ವಿದ್ಯಾರ್ಥಿಯಾಗಿ ಅಭ್ಯಸಿಸುತ್ತಿರುವ ಅಂತಃಕರಣ ಕಂಪ್ಯೂಟರ್‌ ಪ್ರೋಗ್ರಾಂ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾನೆ. ಜತೆಗೆ ಸಾಹಿತ್ಯ ರಚನೆಯನ್ನು ಮುಂದುವರಿಸುವ ಗುರಿ ಹೊಂದಿದ್ದಾನೆ.

‘ಈಗಿನ ಮಕ್ಕಳು ಮೊಬೈಲ್‌, ಲ್ಯಾಪ್‌ಟಾಪ್‌ಗೆ ಒಗ್ಗಿಕೊಂಡಿರುವುದು ಸಾಮಾನ್ಯ. ಅಂತಃಕರಣನೂ ಚಿಕ್ಕವನಿದ್ದಾಗಿನಿಂದಲೇ ಕಂಪ್ಯೂಟರ್‌ನಲ್ಲಿಯೇ ಬರೆಯಲು ಆರಂಭಿಸಿದ್ದ. ಆದರೆ, ಅವನಿಗೆ ಓದುವ ಅಭ್ಯಾಸವಿದೆ’ ಎನ್ನುತ್ತಾರೆ ಪೋಷಕರಾದ ಸರ್ಜಾಶಂಕರ ಹರಳಿಮಠ ಮತ್ತು ಪ್ರತಿಮಾ.

ರಾಜ್ಯ ಸರ್ಕಾರ ಕೊಡುವ ರಾಜ್ಯಮಟ್ಟದ ‘ಅಸಾಧಾರಣ ಪ್ರತಿಭೆ’ ಪ್ರಶಸ್ತಿ ಸೇರಿ 16ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ಪಾತ್ರನಾಗಿರುವ ಅಂತಃಕರಣ, ರಾಜ್ಯಮಟ್ಟದ 3ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷನಾಗಿದ್ದ. ಮೈಸೂರಿನಲ್ಲಿ ನಡೆದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿದ್ದು ಹೆಗ್ಗಳಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.