ADVERTISEMENT

ಗುಡಿ ಬಿಟ್ಟು ಗುಡ್ಡ ಏರಿದ ಹನುಮ

ಸುಭಾಸ ಯಾದವಾಡ
Published 29 ಮಾರ್ಚ್ 2019, 19:30 IST
Last Updated 29 ಮಾರ್ಚ್ 2019, 19:30 IST
   

ಬಾಗಲಕೋಟ ಜಿಲ್ಲೆಯ ಶಿರೂರು ಸಣ್ಣ ಊರು. ಸಣ್ಣದಾದರೂ ಸಮೃದ್ಧ ಊರು. ಸಿರಿ ತುಂಬಿದ ಆ ಊರು ಸಿರಿಯೂರು ಆಗಿ ಈಗ ಶಿರೂರು ಆಗಿದೆ.

ಶಿರೂರಿನಲ್ಲಿರುವ ಬಳ್ಳಾರಿ ಅಜ್ಜನ ಸಮಾಧಿಯ ಪಕ್ಕದಲ್ಲಿಯೇ ಒಂದು ಪುರಾತನ ಶಿಲಾಮಂದಿರವಿದೆ. ಅದು ಕೇವಲ ಕಲ್ಲಿನಿಂದಲೇ ನಿರ್ಮಿಸಿದ ಗುಡಿ. ಅಲ್ಲಿನ ಕಲ್ಲುಗಳನ್ನು ಜೋಡಿಸಲು ಗಚ್ಚು-ಗಾರೆ-ಸಿಮೆಂಟ್‌ ಬಳಸಿಲ್ಲ ಎಂಬುದು ವಿಶೇಷ. ಅದರ ಛಾವಣಿಗೂ ಕಲ್ಲುಗಳನ್ನೇ ಹೊದಿಸಿದ್ದಾರೆ. ಕಲ್ಲುಗಳಲ್ಲೇ ಹಳ್ಳ ಕೊರೆದು ಪರಸ್ಪರ ಹಿಡಿದುಕೊಳ್ಳುವಂತೆ ಮಾಡಿರುವುದು ಅನನ್ಯವಾಗಿದೆ. ಆ ಗುಡಿಯಲ್ಲಿ ಭಗ್ನವಾದ ಒಂದು ಗಣಪತಿಯ ಮೂರ್ತಿ ಇದೆ. ಗುಡಿಯೊಳಗಿನ ಕಲ್ಲಿನ ಸ್ತಂಭಗಳ ಕಲಾಪೂರ್ಣ ಕುಸುರಿ ಮನಮೋಹಕವಾಗಿದೆ. ಅದನ್ನು ಕಟ್ಟಿದ್ದು ಯಾರು ಹಾಗೂ ಯಾವಾಗ ಎಂಬ ಮಾಹಿತಿ ಅಲ್ಲಿ ದೊರೆಯಲಿಲ್ಲ.

ಅದರ ಪಕ್ಕದಲ್ಲಿಯೇ ಒಂದು ಗುಡ್ಡವಿದೆ. ಅದರ ಮೇಲೆ ಒಂದು ಹನುಮಂತ ದೇವರ ಕಪ್ಪುಶಿಲೆಯ ಮೂರ್ತಿ ಇದೆ. ಅದಕ್ಕೆ ವಸ್ತ್ರ ಆಭರಣಗಳ ಯಾವ ಅಲಂಕಾರವೂ ಇಲ್ಲವಾದರೂ ಕೆತ್ತನೆ ಮಾತ್ರ ತುಂಬ ಸುಂದರವಾಗಿದೆ. ಈ ಹನುಮಗುಡ್ಡ ಏಕೆ ಏರಿದ ಎಂಬುದಕ್ಕೆ ಆ ಊರಲ್ಲಿ ರೋಚಕವಾದ ಕಥೆಯೊಂದು ಚಾಲ್ತಿಯಲ್ಲಿದೆ.

ADVERTISEMENT

ಹನುಮನೇರಿದ ಗುಡ್ಡವೂ ತುಂಬ ಸುಂದರವಾಗಿದೆ. ಅಲ್ಲಿಂದ ಇಡೀ ಶಿರೂರನ್ನು ನೋಡಬಹುದು. ಆ ಗುಡ್ಡವನ್ನು ಏರಲು ಮೆಟ್ಟಲುಗಳಿವೆ. ಗುಡ್ಡದ ಮೇಲೆ ಸ್ವಲ್ಪ ಜಾಗ್ರತವಾಗಿರಬೇಕು. ಅಲ್ಲಿ ಆಯ ತಪ್ಪಿದರೆ ಕೆಳಗೆ ಬೀಳುವ ಅಪಾಯವಿದೆ. ಅದರ ಸುತ್ತ ರಕ್ಷಣಾಗೋಡೆಯೊಂದನ್ನು ಕಟ್ಟುವ ಜರೂರತ್ತಿದೆ.

ಗುಡ್ಡದ ಕೆಳಗೆ ಎರಡು ದೊಡ್ಡ ಕೆರೆಗಳಿವೆ. ಗುಡ್ಡದ ನೀರೆಲ್ಲ ಬಸಿದು ಆ ಕೆರಗಳಲ್ಲಿ ತುಂಬಿಕೊಳ್ಳುತ್ತಿತ್ತಂತೆ. ಅದೇ ಊರಿನಲ್ಲಿ ಹುಟ್ಟಿ ಬೆಳೆದ ಗೆಳೆಯ ನಬಿಸಾಹೇಬ ಮುಲ್ಲ ಅದರಲ್ಲಿ ಗಂಟೆಗಟ್ಟಲೆ ಈಜಾಡುತ್ತಿದ್ದರಂತೆ. ದೊಡ್ಡ ಕೆರೆ ಈಜಾಡಿ ಕೈಸೋತಾಗ ವಿಶ್ರಮಿಸಲು ಕೆರೆಯ ಮಧ್ಯೆ ಒಂದು ಕಟ್ಟೆ ಕಟ್ಟಿದ್ದಾರೆ. ಈಗ ಆ ಕಟ್ಟೆಯೇ ಎದ್ದುಕಾಣುತ್ತದೆ. ನೀರು ತಳ ಸೇರಿದೆ. ಈಗ ಈಜಿಕೊಂಡು ಕಟ್ಟೆಯ ಬಳಿ ಹೋಗುವ ಅಗತ್ಯವಿಲ್ಲ, ನಡೆದುಕೊಂಡೇ ಹೋಗಬಹುದಾಗಿದೆ. ಅದಕ್ಕೆ ಕಾರಣ ಮಳೆಯ ಅಭಾವ. ಮಳೆಯೇ ನಿಸರ್ಗದ ಸಿರಿ. ನೀರೇ ಬದುಕಿನ ಸಿರಿ. ಈಗ ಎರಡೂ ಇಲ್ಲದೆ ಸಿರಿಯೂರಿನ ಸಿರಿ ಒಂದಿಷ್ಟು ಕುಂದಿದೆ.

ಗುಡ್ಡ ಏರಿದ ಪುರಾಣದ ಕಥೆ
ಹನುಮ ಊರಲ್ಲಿರುವ ಗುಡಿಯಲ್ಲೇ ಇದ್ದನಂತೆ. ಸಂತಾನ ಫಲಕ್ಕಾಗಿ ಭಕ್ತೆಯೊಬ್ಬರು ದಿನವೂ ಆ ಗುಡಿಗೆ ಬಂದು ನಮಿಸುತ್ತಿದ್ದಳು. ಆದರೂ ಸಂತಾನಫಲ ಸಿಗಲಿಲ್ಲ. ನೆರೆಹೊರೆಯವರಲ್ಲ ಆಕೆಗೆ ಬಂಜೆ ಎಂದು ಮೂದಲಿಸುತ್ತಿದ್ದರು. ಒಂದು ದಿನ ಆಕೆ ಪಟ್ಟು ಹಿಡಿದು ‘ಸಂತಾನಫಲ ಕರುಣಿಸದಿದ್ದರೆ ನಿನ್ನ ಗುಡಿ ಬಿಟ್ಟು ಹೋಗುವುದಿಲ್ಲ’ ಎಂದು ಕುಳಿತು ಬಿಟ್ಟಳಂತೆ. ಅವಳಿಗೆ ಸಂತಾನಫಲಕ್ಕಾಗಿ ಹನುಮ ಆಶೀರ್ವದಿಸಿದ. ನಂತರದಲ್ಲಿ ಬಹುಶಃ ಹನುಮನನ್ನು ಇನ್ನೂ ಹೆಚ್ಚು ಜನ ಪೀಡಿಸುತ್ತಿದ್ದರೋ ಏನೋ! ಆ ಎಲ್ಲ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಆತ ಒಂದು ದಿನ ರಾತ್ರಿ ಅಲ್ಲಿಂದ ಹಾರಿ ನೆರೆಯ ಗುಡ್ಡಕ್ಕೆ ಜಿಗಿದು ಬಿಟ್ಟನಂತೆ. ಅಂದಿನಿಂದ ಹನುಮ ಗುಡ್ಡದ ಮೇಲೇಯೇ ನೆಲೆಸಿದ್ದಾನೆ ಎಂಬುದು ಇಲ್ಲಿನ ಜನರ ನಂಬಿಕೆ. ಈಗ ಅಲ್ಲಿಗೂ ಜನರು ಹೋಗುತ್ತಾರೆ. ಆದರೆ, ಹನುಮಂತನ ಮುಂದೆ ಯಾವ ಬೇಡಿಕೆಯನ್ನು ಇಡುವುದಿಲ್ಲವಂತೆ. ಅಲ್ಲಿಂದಲೂ ಆತ ಬೇರೆ ಕಡೆಗೆ ಹೋಗಬಾರದು ಎಂಬ ಕಾಳಜಿ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.