
ಬೆಡಗು ಬಿನ್ನಾಣದಿಂದ ಮನ ಸೆಳೆಯೋ ಮೋಹಿನಿ...ನಯ ನಾಜೂಕಿನ ನಡಿಗೆಯಿಂದ ಹೃದಯಕ್ಕೆ ಲಗ್ಗೆ ಇಡುವ ರೂಪಿಣಿ.. ಮಿರಿ ಮಿರಿ ಮಿಂಚುವ ಮೈಬಣ್ಣದಿಂದ ಕಣ್ಮನ ಸೆಳೆಯುವ ಸೌಂದರ್ಯದ ಗಣಿ..
ಇವು ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ರೈಲು ನಿಲ್ದಾಣ ಪ್ರದೇಶದಲ್ಲಿ ಲಕ್ಷ್ಮೀದೇವಿ ಜಾತ್ರೆಯ ನಿಮಿತ್ಯ ಇದೇ ಜನವರಿ 2 ರಿಂದ 4 ರ ವರೆಗೆ ನಡೆದ ಕುದುರೆಗಳ ಪ್ರದರ್ಶನ ಮತ್ತು ಮಾರಾಟದ ಭಿನ್ನ ವಿಭಿನ್ನ ನೋಟಗಳು.
ಕುದುರೆಗಳು ಓಡುವುದನ್ನು ನೋಡುವುದೇ ಮಜಾ. ಶರವೇಗ ವೇಗಕ್ಕೆ ಕುದುರೆಗಳು ಪ್ರಸಿದ್ದಿ. ಆದರೆ ರಾಯಬಾಗದಲ್ಲಿ ನಡೆಯುವ ಜಾತ್ರೆಗೆ ಬರುವ ಕುದುರೆಗಳು ನೋಟಕ್ಕೆ ಪ್ರಸಿದ್ಧಿ! ಮೂರು ದಿನಗಳು ನಡೆಯುವ ಕುದುರೆ ಸಂತೆಯಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ, ಪುಣೆ, ಸಾಂಗ್ಲಿ, ಸಾತಾರಾ ಜಿಲ್ಲೆಗಳಿಂದ ಹಾಗೂ ರಾಜ್ಯದ ಧಾರವಾಡ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ವಿವಿಧೆಡೆಯಿಂದ ಕುದುರೆಗಳು ಬರುತ್ತವೆ. ದೇಶಿ ಕುದುರೆಗಳನ್ನು ಓಟದ ಸ್ಪರ್ಧೆ (ಶರ್ಯತ್ತು)ಗೆ ಬಳಸಿದರೆ, ಜಾತಿ ಕುದುರೆಗಳನ್ನು ನಡಿಗೆ, ನೃತ್ಯ ಹಾಗೂ ಸೌಂದರ್ಯ ಸ್ಪರ್ಧೆಗೆ ಬಳಸಲಾಗುತ್ತದೆ.
ಮಹಾರಾಷ್ಟ್ರದ ಅಕ್ಲುಜಾ, ಸಾರಂಗಖೇಡಾ, ಮಾಳೇಗಾಂವ, ಎವ್ಲಾ, ಇಂದಾಪೂರ ಸೇರಿದಂತೆ ವಿವಿಧೆಡೆ ಜಾತಿ ಕುದುರೆಗಳ ಸಂತೆಯನ್ನು ಆಯೋಜಿಸಲಾಗುತ್ತದೆ. ಹಲವು ವರ್ಷಗಳಿಂದ ನಡೆಯುವ ಅಲ್ಲಿನ ಸಂತೆಗೆ ನಮ್ಮ ರಾಜ್ಯದವರು ತಮ್ಮ ಕುದುರೆಗಳನ್ನು ಪ್ರದರ್ಶನ ಹಾಗೂ ವ್ಯಾಪಾರಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ನೂರಾರು ಕುದುರೆಗಳನ್ನು ಬೇರೆ ಕಡೆಗೆ ತೆಗೆದುಕೊಂಡು ಹೋಗಿ ಮಾರಾಟ ಹಾಗೂ ಪ್ರದರ್ಶನ ಮಾಡುವುದು ಕಷ್ಟವಾಗುತ್ತಿತ್ತು. ಆದ್ದರಿಂದ ತಮ್ಮ ನೆಲದಲ್ಲಿಯೇ ಇಂತಹದೊಂದು ಸಂತೆ ಮಾಡುವ ಆಲೋಚನೆ ಕುದುರೆ ಸಾಕುವ ಹವ್ಯಾಸ ಹೊಂದಿರುವ ಸ್ಥಳೀಯರಲ್ಲಿ ಏಳು ವರ್ಷಗಳ ಹಿಂದೆ ಹೊಳೆಯಿತು. ಈಗ ನಡೆದ ಕುದುರೆ ಸಂತೆ ಏಳನೆಯದು.
ತಳಿ ವೈವಿಧ್ಯ...
ಭಾರತದಲ್ಲಿ ಮಾರವಾರಿ, ಪಂಜಾಬಿ, ಕಾಠೇವಾರಿ, ಸಿಂಧಿ ತಳಿಯ ಕುದುರೆಗಳಿದ್ದು, ಇವೆಲ್ಲ ಕುದುರೆ ಸಂತೆಯಲ್ಲಿ ಭಾಗವಹಿಸಿದ್ದವು. ಪ್ರತಿ ವರ್ಷ ನೂರರಿಂದ ನೂರೈವತ್ತಕ್ಕೂ ಹೆಚ್ಚು ಕುದುರೆಗಳು ಬರುತ್ತವೆ. ಅಲ್ಲದೇ ವರ್ಷದಿಂದ ವರ್ಷಕ್ಕೆ ಕುದುರೆಗಳ ಸಂಖ್ಯೆ ಹೆಚ್ಚುತ್ತಿದೆ. ಸಂತೆಗೆ ಬರುವ ಕುದುರೆಗಳಿಗಾಗಿ ನಡಿಗೆ (ಚಾಲ್-ರೇವಾಳ), ನೃತ್ಯ, ಸೌಂದರ್ಯ ಸೇರಿದಂತೆ ವಿವಿಧ ಬಗೆಯ ಸ್ಪರ್ಧೆಯನ್ನು ಆಯೋಜನೆ ಮಾಡಿ ಬಹುಮಾನ ನೀಡಲಾಗುತ್ತದೆ.
ರಾಜಸ್ತಾನದ ಮಾರವಾರಿ ತಳಿ ಕುದುರೆ ಪ್ರಾಮಾಣಿಕತೆಗೆ, ಪಂಜಾಬಿನ ಪಂಜಾಬಿ ತಳಿ ಸೌಂದರ್ಯ ಹಾಗೂ ಎತ್ತರಕ್ಕೆ, ಗುಜರಾತ್ ಮೂಲದ ಕಾಠೇವಾರಿ ತಳಿ ಸಣ್ಣ ಗಾತ್ರ ಹಾಗೂ ಗುಣಮಟ್ಟಕ್ಕೆ, ಭಾರತ-ಪಾಕಿಸ್ತಾನ ಗಡಿ ಭಾಗದ ರಾಜ್ಯಗಳಲ್ಲಿ ಕಾಣುವ ಸಿಂಧಿ ತಳಿಯ ಕುದುರೆ ಚಾಲ್ (ನಡಿಗೆ)ಗೆ ಪ್ರಸಿದ್ಧಿಯಾಗಿವೆ. ದೇಶದ ವಿವಿಧ ತಳಿಯ ಕುದುರೆಗಳನ್ನು ನೋಡಲು, ಕೊಳ್ಳಲು ಹಾಗೂ ಮಾರಾಟ ಮಾಡಲು ವಿವಿಧೆಡೆಯಿಂದ ಆಸಕ್ತರು ಇಲ್ಲಿಗೆ ಬರುತ್ತಾರೆ.
ಸೌಂದರ್ಯ, ನಡಿಗೆ ಹಾಗೂ ನೃತ್ಯಕ್ಕೆ ಪ್ರಸಿದ್ಧಿಯಾಗಿರುವ ಈ ಕುದುರೆಗಳಿಗೆ ಕಡಲೆ, ಗೋಧಿ, ಬೂಸಾ (ಹೊಟ್ಟು), ಕಾಟ್ಯಾಳ ಹಿಟ್ಟು, ಹುಲ್ಲು ಮುಂತಾದವುಗಳನ್ನು ಆಹಾರವಾಗಿ ನೀಡಲಾಗುತ್ತದೆ. ಪ್ರತಿ ದಿನ ಬ್ರಷಿನಿಂದ ಮೈ ತಿಕ್ಕುವ ಮೂಲಕ ಕೈ ಇಟ್ಟರೆ ಜಾರುವ ರೀತಿಯಲ್ಲಿ ಕುದುರೆಗಳ ಮೈಕಟ್ಟನ್ನು ನುಣುಪಾಗಿ ಇಡಲಾಗುತ್ತದೆ. ಚಳಿಗಾಲದಲ್ಲಿ ವಾರಕ್ಕೊಮ್ಮೆ, ಇನ್ನುಳಿದ ದಿನಗಳಲ್ಲಿ ದಿನ ಬಿಟ್ಟು ದಿನ ಕುದುರೆಗಳಿಗೆ ಸ್ನಾನ ಮಾಡಿಸಲಾಗುತ್ತದೆ. ಹಾಗೆ ದಿನ ಬಿಟ್ಟು ದಿನ ಐದರಿಂದ ಹತ್ತು ಕಿಲೋಮೀಟರ್ ನಡಿಗೆ ಅಥವಾ ನಿಧಾನಗತಿಯ ಓಟ ಮಾಡಿಸಲಾಗುತ್ತದೆ.
ಸೌಂದರ್ಯ ವರ್ಧನೆಗೆ ಖರ್ಚು
ನೋಡಿದರೆ ನೋಡುತ್ತಲೇ ನಿಲ್ಲಬೇಕು ಎಂಬ ರೀತಿಯಲ್ಲಿ ಸೌಂದರ್ಯದ ಗಣಿಯಾಗಿರುವ ಕುದುರೆಗಳ ಅಲಂಕಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕನಿಷ್ಠ ಒಂದು ಕುದುರೆ ಅಲಂಕಾರಕ್ಕೆ ₹20 ರಿಂದ ₹30 ಸಾವಿರ ವರೆಗೆ ಖರ್ಚು ಮಾಡಲಾಗುತ್ತದೆ. ಸವಾರ ಕುಳಿತುಕೊಳ್ಳಲು ಆಸನ (ಶೀಟ್), ಮುಖಕ್ಕೆ ಮಕಾಡಾ, ಕಣ್ಣಿಗೆ ಅಂಧಾರಿ, ಕಾಲಿಗೆ ಗೆಜ್ಜೆ, ಎದೆಗೆ ಚಾತಿ ಬೆಲ್ಟ್ ಹಾಗೂ ತಲೆಗೆ ತುರಾಯಿ ಸೇರಿದಂತೆ ವಿವಿಧ ಸೌಂದರ್ಯ ಸಾಧನಗಳನ್ನು ಬಳಸಲಾಗುತ್ತದೆ. ಇದರಿಂದ ಕುದುರೆಗಳ ಸೌಂದರ್ಯ ಇಮ್ಮಡಿಗೊಳ್ಳುತ್ತದೆ.
ಗ್ರಾಮೀಣ ಭಾಗದ ಜಾತ್ರೆ, ಉತ್ಸವಗಳ ಸ್ಪರ್ಧೆಗಳಲ್ಲಿ ರೇಸ್ (ಶರ್ಯತ್ತು) ನಲ್ಲಿ ಬಳಸುವ ಕುದುರೆಗಳು ದೇಶಿ ತಳಿಯಾಗಿದ್ದು, ರಫ್ ಆ್ಯಂಡ್ ಟಫ್ ಆಗಿರುತ್ತವೆ. ಮೈ ಮೇಲೆ ಕೈ ಇಟ್ಟರೆ ಸಾಕು ಶರವೇಗದಲ್ಲಿ ಓಡಿ ನಿಗದಿತ ಗುರಿ ಮುಟ್ಟುತ್ತವೆ. ನಯ ನಾಜೂಕಿನಿಂದ ಕೂಡಿರುವ ಜಾತಿ ಕುದುರೆಗಳನ್ನು ಮದುವೆ, ಜಾತ್ರೆ, ಉತ್ಸವ, ಕಾರ್ಯಕ್ರಮ, ಸಿನಿಮಾ ಚಿತ್ರೀಕರಣದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಎರಡು ಕಾಲಗಳ ಮೇಲೆ ನಿಲ್ಲುವುದು, ವಾದ್ಯದ ಶಬ್ದಕ್ಕೆ ತಕ್ಕಂತೆ ನೃತ್ಯ ಮಾಡುವುದು, ಸಂಯಮದಿಂದ ಮೆರವಣಿಗೆಯ ರಥ ಅಥವಾ ಗಾಡಿಯನ್ನು ಎಳೆಯುವುದನ್ನು ಮಾಡುತ್ತವೆ. ಇವು ಶಬ್ದಕ್ಕೆ ಹೆದರುವುದಿಲ್ಲ, ಜನರಿಗೆ ಬೆದರುವುದಿಲ್ಲ.
ನಾಲ್ಕು ದಶಕಗಳಿಂದ ಜಾತಿ ಕುದುರೆ ಸಾಕುವ ಹವ್ಯಾಸವಿದೆ. ಇಪ್ಪತ್ತು ವರ್ಷಗಳ ಹಿಂದೆ ಮೂವತ್ತಕ್ಕೂ ಹೆಚ್ಚು ಕುದುರೆಗಳಿದ್ದವು. ಇದೀಗ ಆರು ಕುದುರೆಗಳಿವೆ. ಕುದುರೆ ಸಂತತಿ ಉಳಿಯಬೇಕು. ಬೆಳೆಯಬೇಕು ಎಂಬ ಕಾರಣಕ್ಕಾಗಿ ಪ್ರತಿ ವರ್ಷ ಕುದುರೆ ಸಂತೆಯನ್ನು ಆಯೋಜನೆ ಮಾಡಲಾಗುತ್ತಿದೆ.– ಕಲ್ಯಾಣರಾವ್ ದೇಶಪಾಂಡೆ, ಕುದುರೆ ಸಂತೆ ಆಯೋಜಕರು
ಹಿಂದೆ ರಾಜ–ಮಹಾರಾಜರು, ಶ್ರೀಮಂತರು ಕುದುರೆಗಳನ್ನು ಸಾಕುತ್ತಿದ್ದರು. ಅಂತಹ ಕುದುರೆಗಳನ್ನು ಸಾಕಿ ಸಲಹುವ ಖುಷಿ ಬೇರೊಂದರಲ್ಲಿ ಸಿಗುವುದಿಲ್ಲ. ನಮ್ಮ ಬಳಿ ತಲಾ ₹10 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ನಾಲ್ಕು ಕುದುರೆಗಳಿವೆ. ರಾಯಬಾಗ ಸಂತೆಯಿಂದ ನಮಗೆ ಸಾಕಷ್ಟು ಅನುಕೂಲವಾಗಿದೆ.– ಮಾರುತಿ ಮಾರಿಗುಡಿ, ಕುದುರೆ ಮಾಲೀಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.