ADVERTISEMENT

ಆಂತರ್ಯದ ಹಣತೆ ಹಚ್ಚುತ್ತ...

ಎಸ್.ರಶ್ಮಿ
Published 13 ನವೆಂಬರ್ 2020, 20:00 IST
Last Updated 13 ನವೆಂಬರ್ 2020, 20:00 IST
ಹಣತೆ
ಹಣತೆ   

ಐದು ದಿನಗಳ ಹಬ್ಬದಾಚರಣೆ ಒಂದು ದಿನಕ್ಕೆ ಬಂದಿಳಿದಿದ್ದು ಯಾವಾಗ ಅಂತನೆ ನೆನಪಿಲ್ಲ. ಆದರೂ ದೀಪಾವಳಿ ಅಂದ್ರ ಮನ್ಯಾಗಿನ ನೀರಿನ ಪಾತ್ರಿಗೆ ಬೆಳಕು ತೋರಸೂದೇ ಆಗಿರ್ತಿತ್ತು. ಹುಣಸಿಹಣ್ಣು, ಉಪ್ಪು ಹಾಕಿ, ತಿಕ್ಕಿ, ಮತ್ತದ ಕಿಲುಬು ಕಾಣಬಾರದು ಅಂತ ವಿಭೂತಿ ಹಚ್ಚಿ ತೊಳದ್ರ, ಯಾವ ಪೌಡರ್‌ ಸಹ ಬೇಕಾಗ್ತಿರಲಿಲ್ಲ. ಈಗಷ್ಟೆ ಹುಟ್ಟಿದ ಕೂಸಿನ ತಿಳಿಗುಲಾಬಿ ತುಟಿ ಬಣ್ಣದ ಹಂಗ ಮುಖ ಮಾಡ್ಕೊಂಡು ಇವೆಲ್ಲ ಮಿಂಚ್ತಿದ್ವು. ಅವೊತ್ತು ಹಂಡೆ, ತಪೇಲಿ, ಕೊಳಗ, ಚರಗಿ, ಗಿಂಡಿ, ಮಿಳ್ಳಿ, ಜಾಂಬು (ಹಿತ್ತಾಳೆಯ ಲೋಟ) ಎಲ್ಲ ತುಂಬಿಸಿಡೂದೆ.

ಮರುದಿನ ಬೆಳಗ್ಗೆ ಎಚ್ಚರ ಆಗ್ತಾ ಇದ್ದದ್ದೇ ತೆಂಗಿನೆಣ್ಣೆ ಕಾಯಿಸುತ್ತಿರುವ ವಾಸನೆಯಿಂದ. ಅದರೊಳಗೆ ಕರಿಬೇವು ಹಾಗೂ ಬೆಳ್ಳುಳ್ಳಿಯನ್ನು ಹಾಕಿ, ಕಾಯಿಸುವಾಗಲೇ ಕಣ್ತೆರೆಯುತ್ತಿದ್ದುದು. ಚುಮುಚುಮು ಚಳಿ. ಹಾಸಿಗೆಯಡಿಯಿಂದ ಹೆಬ್ಬೆರೆಳು ಸೋಕುತ್ತ, ಮೈ ಇಡೀ ಆವರಿಸಿಕೊಳ್ಳುವಾಗಲೇ, ಅಮ್ಮ,ಅಪ್ಪನ ಕೂಗು... ‘ಸ್ನಾನಕ್ಕ ಬರ್ರಿ.. ಪೂಜಾಕ ಹೊತ್ತಾಗ್ತದ‘

ಅಷ್ಟರೊಳಗ ಹಿತೋಷ್ಣ ಎನಿಸುವ ಎಣ್ಣಿ ನೆತ್ತಿಗೆ ಹಾಕಿ ಆ ಆಆಆಆ ಅನಿಸುಮುಂದ ಬ್ರಾಹ್ಮಿಮುಹೂರ್ತದ ಸ್ನಾನ ಬ್ರಹ್ಮ, ವಿಷ್ಣು, ಮಹೇಶ್ವರ ಮೂವರನ್ನೂ ನೆನಪಿಸುಹಂಗ ಮಾಡ್ತಿತ್ತು. ಎಣ್ಣೆಯ ಮರ್ದನ ಅದೆಷ್ಟು ಹಿತ ಅನಿಸ್ತಿತ್ತೊ, ಅಷ್ಟೇ ಹಿಂಸೆ ಆಗ್ತಿದ್ದಿದ್ದು ಸೀಗಿಕಾಯಿ ಹಾಕಿ ಅದನ್ನು ಹೋಗಲಾಡಿಸುವ ಮುಂದ...ಎರಡು ಚರಗಿ ಬಿಸಿನೀರು ಬೀಳುವ ಅಂತರದೊಳಗಿನ ಸಮಯದೊಳಗ ಚಳಿಯೆಂಬ ರಾಕ್ಷಸ ನಮ್ಮ ಮೂಳೆಗಳನ್ನೆಲ್ಲ ಅಪ್ಪಿ ಮುದ್ದಿಡ್ತಿದ್ದ.

ADVERTISEMENT

ಹಂಗೂಹಿಂಗೂ ಸ್ನಾನ ಮುಗಿಸಿ, ಹೊಸ ಅರವಿ ಹಾಕ್ಕೊಂಡು ಬರೂದ್ರೊಳಗ, ದೇವರ ಮನಿಯ ದೇವರೆಲ್ಲ ಲಕಲಕ ಹೊಳೀತಿದ್ರು. ಅದರ ಮುಂದಿನ ಆರತಿ ತಟ್ಟಿಯೊಳಗಿನ ಬೆಳಕು ಇವರಿಗೆಲ್ಲ ಬಂಗಾರ ಬಣ್ಣನೆ ಕೊಡ್ತಿತ್ತು. ಅಪ್ಪಾಜಿಗೆ, ಅಣ್ಣಂದಿರಿಗೆ ಆರತಿ ಬೆಳಗಿ, ವೀರತಿಲಕ ಇಡುವ ಹೊತ್ತದು. ಪುಟ್ಟ ಹೆಬ್ಬೆರಳನಿಂದ ವೀರತಿಲಕ ಹಚ್ಚಿ, ಅಕ್ಷತೆಯನ್ನು ಹಣೆಗೊತ್ತಿದರೆ ದೇವರ ದೇವತ್ವವೆಲ್ಲ ಇವರ ಕಂಗಳಿಗೆ ಬಂದಂತೆ. ಆರತಿ ಬೆಳಗೂಮುಂದ ತಲಿಗೆ ಎಲ್ಲಾರೂ ಟೋಪಿ ಹಾಕ್ಕೊಳ್ಳೋರು. ಆರತಿ ಬೆಳಗುವ ಕಳಶಕ್ಕೆ ಕೈಮುಗಿದು ಗಂಭೀರದಿಂದ ಕುಂತಾಗ.. ಅಣ್ಣಂದಿರ ಕಣ್ಣಾಗ ಆರತಿ ಬೆಳಕು, ನಮ್ಮ ಕಣ್ಣಾಗ ಅವರ ಪ್ರತಿಬಿಂಬ.

ಇಷ್ಟಾದ ಮೇಲೆ, ಕೊಬ್ರಿ ಸಕ್ಕರಿಯ ಮಿಶ್ರಣ ಬಾಯಿಗೆ ಹಾಕಿ, ಹಾಲು ಕುಡ್ಯಾಕ ಕೊಡೋರು. ಅಷ್ಟಾದ್ರ ನರಕ ಚತುರ್ದಶಿಯಪೂಜೆ ಮನ್ಯಾಗ ಮುಗದಂಗ. ಮುಂದ ಅಡಗಿ ತಯಾರಿ. ಪಟಾಕಿ ಹಚ್ಚಿ ನಮ್ಮನ್ಯಾಗಿನ ಪೂಜಾ ಮುಗೀತು ಅಂತ ಸಾರುವ ಸಮಯವದು. ಮತ್ತ ಸಂಜೀಕ ಸರಭರಸರಭರ ಸದ್ದು ಮಾಡುವ ರೇಷ್ಮಿ ಅರವಿ ಹಾಕ್ಕೊಂಡು ಎಲ್ಲಾರ ಮನಿಗೆ ಸಿಹಿ, ಖಾರ ಹಂಚುವ ಕೆಲಸ. ಮತ್ತ ಪಟಾಕಿ, ಆ ನರಕಾಸುರ ಯಾವಾಗ ಸತ್ತ ಅಂತ ಗೊತ್ತಿಲ್ಲ. ಆದ್ರ ಹೊಗಿ ಹಂಚೂದು ಮಾತ್ರ ಸಾವಿರ ಸಾವಿರ ವರ್ಷಗಳಾದರೂ ನಡಕೊಂಡ ಬಂದದ.

ಮರುದಿನ ಅಮಾವಾಸೆ ಸಂಭ್ರಮ. ಲಕ್ಷ್ಮಿಪೂಜಾ ಇರೋರ ಮನ್ಯಾಗ ಲಕುಮಿಯ ಪ್ರತಿಷ್ಠಾಪನೆಗೆ ಎಲ್ಲಿಲ್ಲದ ಸಂಭ್ರಮ. ಹುಬ್ಬಳ್ಳಿ ಮಾಟದ ತಾಮ್ರದ ಕೊಡದ ಮ್ಯಾಲೆ, ಲಕ್ಷ್ಮಿ ಚಿತ್ರ ಇರುವ ಸಣ್ಣ ಬಿಂದಿಗೆಯನ್ನು ಕೂರಿಸಿ, ತೆಂಗಿನಕಾಯಿ ಇಟ್ಟು, ಲಕುಮಿಯ ಮುಖೋಟ ಕಟ್ಟಿ, ಮುತ್ತಿನ ಬಾಸಿಂಗ ಕಟ್ಟಿ, ಲಕ್ಷ್ಮಿಯ ಅಲಂಕಾರ ಮಾಡ್ತಾರ. ಬೆಳ್ಳಿಯ ಮುಖೋಟ ಇರದವರು, ಕಾಯಿಗೆ ಅರಿಷಿಣ ಸವರಿ, ಕುಂಕುಮ ಇಟ್ಟು ಲಕುಮಿಯನ್ನು ಆಹ್ವಾನಿಸ್ತಾರ. ಲಕ್ಷ್ಮಿಗೆ ಸೀರಿ ಉಡಿಸಿ, ಆರತಿಗೆ ಇಟ್ಟ ಜ್ಯೋತಿಯಿಂದಲೇ ಸಣ್ಣದೊಂದು ಕಪ್ಪು ತಯಾರಿಸಿ, ಕೆನ್ನಿಗೆ ಇಟ್ಟು ಆರತಿ ಬೆಳಗತಾರ.ಸಂಜೀಕ ಆಪ್ತರಿಗೆ ಅರಿಷಿಣ ಕುಂಕುಮ ಕೊಡೂದು, ಕೂಡಿ ಊಟ ಮಾಡೂದು. ಮಧ್ಯಾಹ್ನ ಪಗಡಿ ಆಡೂದು, ಅಂಗಡಿ, ವ್ಯಾಪಾರ ಇದ್ದೋರು, ಅಂಗಡಿಯೊಳಗೂ ಪೂಜಾ ಮಾಡಿ, ಬಾದಾಮಿ ಹಾಲು ಸಿಹಿ ಹಂಚ್ತಾರ. ರಾತ್ರಿ ಇಡೀ ಪಗಡಿ ಆಡೂದು, ಜೂಜಾಡೂದು ಅವೊತ್ತಿನ ಸಂಪ್ರದಾಯ. ಅವೊತ್ತಿನ ಸೋಲು ಗೆಲುವುಗಳಂಥ ಎಲ್ಲ ಬಾರಾಖೂನ್‌ಗಳೂಮಾಫ್‌ ಆಗ್ತಾವ. ಮರುದಿನದಿಂದ ಶುಭಲಾಭಗಳೇ ಆಗಲಿ ಅಂತ ಹೊಸ ಖಾತಾ ಶುರು ಮಾಡ್ತಾರ.ಪಾಡ್ಯ ಬಂದ್ರ ಮತ್ತೊಂದು ಖುಷಿ. ಅವೊತ್ತಿಗೆ ಮನ್ಯಾಗ ಸಣ್ಣ ಮಕ್ಕಳಿದ್ರ, ಮೂಗು, ಕಿವಿ ಚುಚ್ಚಿಸಿ, ಬಂಗಾರದ ಆಭರಣ ಹಾಕಿದ್ರ ನೋವಾಗುದಿಲ್ಲ, ಗಾಯ ಆಗೂದಿಲ್ಲ ಅಂತನೂ ಒಂದು ನಂಬಿಕಿ. ಹಂಗಾಗಿ ಆ ಕೆಲಸಗಳೆಲ್ಲ ಅವೊತ್ತೇ ಇಟ್ಕೊಂತಾರ. ಭರ್ಜರಿ ಊಟ ಮಾಡಿ, ಎಲಿ ಹಾಕ್ಕೊಂಡು ಪಡಸಾಲಿಗೆ ಮಾತಾಡ್ಕೊಂತ ಕುಂದ್ರು ಸುಖನ ಬ್ಯಾರೆ.

ಮರುದಿನ ಊರಿಂದ ಬಂದವರಿಗೆ ಬುತ್ತಿ ಕಟ್ಟಿಕೊಡುವ ಸಡಗರ. ಸ್ಟೀಲ್‌ ಡಬ್ಬಿಗೆ ರವೆಯುಂಡಿ, ಬೇಸನ್‌ ಉಂಡಿ, ಸೇಂಗಾದುಂಡಿ, ಹೆಸರುಂಡಿ, ಸಾಕಷ್ಟು ಸಂಯಮ ಇದ್ದೋರು ಗುಳ್ಳಡಕಿ ಉಂಡಿ ಕಟ್ತಾರ. ಚಕ್ಕುಲಿ, ಅವಲಕ್ಕಿ, ಕರದೊಡಿ, ಕೋಡುಬಳೆ, ಶಂಕರ್‌ಪೋಳಿ, ಕರಜಿಕಾಯಿ ಇವಿಷ್ಟೂ ತಿನ್ನಾಕ ಬ್ಯಾರೆ, ಕಟ್ಟಾಕ ಬ್ಯಾರೆ ಮಾಡಿಟ್ಟಿರ್ತಾರ. ಎಲ್ಲ ಹಂಚೂದು ದೊಡ್ಡ ಹಬ್ಬನ.

ಹಿಂಗ ಐದು ದಿನ ಕಳದೇ ಹೋಗ್ತಿದ್ವು. ಈಗ ನೀರು ತುಂಬಾಕ ಪಾತ್ರಿ ಹುಡುಕಬೇಕು. ಎಲ್ಲಾರೂ ಪ್ಯುರಿಫೈರ್‌ ಅಡಿಗೆ ಲೋಟ ತುಂಬಸ್ಕೊಳ್ಳೋರೆ, ಶವರ್‌ ಕೆಳಗ ನಿಂತು ನೀರಾಗ ಮೈ ತೊಯಸ್ಕೊಳ್ಳೂದೆ. ಬ್ರಾಹ್ಮಿ ಮುಹೂರ್ತದಾಗ ಏಳೂದಲ್ಲ, ಮಲಗೂವಂಥ ಸಮಯ ನಮಗ ಬಂದದ.

ಹಬ್ಬದ ಸಂಭ್ರಮ ಶುರು ಆಗಿರೂದು, ಡಿಸ್ಕೌಂಟ್‌ ಸೇಲ್‌ನಾಗ, ಆನ್‌ಲೈನ್‌ ಖರೀದಿಯೊಳಗ, ಹಬ್ಬದೂಟ ಯಾವ ಹೋಟೆಲ್‌ನಾಗ ಛೊಲೊ ಅದ ಹುಡುಕೂದ್ರೊಳಗ, ಕುರುಕಲು ತಿನಿಸು ನಮ್ಮೂರಿನ ಹೆಸರಿರುವ ಅಂಗಡಿಯಿಂದ ತಂದ್ರಾಯ್ತು. ಸಂಜೀಕ ಒಂದಷ್ಟು ಹಣತಿಯಂಥ ಲೈಟುಗಳನ್ನು, ಮೇಣದಬತ್ತಿಗಳನ್ನು ಹಚ್ಚಿ, ಆಕಾಶಬುಟ್ಟಿಯ ಬೆಳಕಿನ ಮಿಣಮಿಣದೊಳಗ ಒಂದಷ್ಟು ಪಟಾಕಿ ಡಂ ಅನಿಸಿ, ಒಟಿಟಿಯೊಳಗ ಸಿನಿಮಾ ನೋಡಿ ಮಲಗೆದ್ರ ಮತ್ತದೇ ಜೀವನ. ಅದೇ ದಿನಚರಿ...

ಹಬ್ಬದ ಆಚರಣೆಗಳು ಬದಲಾದವು. ಆದರ ಹಬ್ಬದ ಆಶಯ ಬದಲಾಗಬಾರದು ಅಲ್ಲ. ನಾವು ಮಣ್ಣಿನ ಪಣತಿಗೆ ಮೇಣ ಸವರಿ, ಎಣ್ಣೆ ಸೋರದಂತೆ, ಬತ್ತಿ ಹೊಸೆದು, ದೀಪ ಶಾಂತವಾಗಿ ಬೆಳಗುವಂತೆ ನೋಡ್ಕೋತೀವಲ್ಲ.. ಹಂಗ...ನಮ್ಮ ಜೀವದ್ರವ್ಯ ಜೀವನಪ್ರೀತಿ ಮಣ್ಣಿನ ದೇಹದಿಂದ ಸೋರಿಹೋಗದಂತೆ ನೋಡ್ಕೊಬೇಕು. ಅದಕ್ಕ ಒಂದಿಷ್ಟು ಜೀವನಪ್ರೀತಿಯ ವ್ಯಾಕ್ಸ್‌ ಬಳೀಬೇಕು. ಪ್ರೀತಿ ಪ್ರೇಮದ ಎಣ್ಣೆಯನ್ನೇ ಸುರಿಯಬೇಕು. ಬಾಂಧವ್ಯಗಳನ್ನು ಬತ್ತಿಯಂತೆ ಹೊಸೆದು, ಬಾಳು ಬೆಳಗುವಂತೆ ಮಾಡಿಕೊಳ್ಳಬೇಕು. ಇಷ್ಟು ಮಾಡಬಹುದಲ್ಲ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.