ADVERTISEMENT

ಪ್ರತಿಮಾ ರಾಜಕೀಯಕ್ಕೆ ಅಧ್ಯಯನದ ಕನ್ನಡಿ

ವರುಣ ಹೆಗಡೆ
Published 6 ಮೇ 2023, 21:59 IST
Last Updated 6 ಮೇ 2023, 21:59 IST
ಕರ್ನಾಟಕ ರಕ್ಷಣಾ ವೇದಿಕೆ ನಿರ್ಮಿಸಿರುವ ರಾಜ್‌ಕುಮಾರ್ ಪ್ರತಿಮೆ
ಕರ್ನಾಟಕ ರಕ್ಷಣಾ ವೇದಿಕೆ ನಿರ್ಮಿಸಿರುವ ರಾಜ್‌ಕುಮಾರ್ ಪ್ರತಿಮೆ   
ಸಾರಾಂಶ

ಬಸವಣ್ಣ, ಬುದ್ಧ, ಗಾಂಧೀಜಿ, ಮದರ್ ತೆರೇಸಾ, ಅಂಬೇಡ್ಕರ್, ಕೆಂಪೇಗೌಡ, ಎ.ಪಿ.ಜೆ.ಅಬ್ದುಲ್ ಕಲಾಂ, ರಾಜ್‌ಕುಮಾರ್... ಹೀಗೆ ಸಮಾಜದ ಮೇಲೆ ಅಚ್ಚಳಿಯದ ಪ್ರಭಾವ ಬೀರಿದವರು ಈ ನಗರದಲ್ಲಿದ್ದಾರೆ. ಅವರ ಪ್ರತಿಮೆಗಳಿಗೆ ಕಲಾವಿದರು ಜೀವ ತುಂಬುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಒಂದು ‘ಪ್ರತಿಮಾ ರಾಜಕಾರಣ’ವು ಸಾಂಸ್ಕೃತಿಕ ವಲಯದಲ್ಲಿ ವ್ಯಾಪಕವಾಗಿರುವುದು ಸ್ಪಷ್ಟ. ‘ಇಂಡಿಯನ್ ಫೌಂಡೇಷನ್ ಫಾರ್ ದಿ ಆರ್ಟ್ಸ್‌’ ಆಸಕ್ತಿಕರವಾದ ಸಂಶೋಧನೆಯೊಂದನ್ನು ಈ ನಿಟ್ಟಿನಲ್ಲಿ ನಡೆಸಿದೆ.

ರಾಜಧಾನಿ ಬೆಂಗಳೂರಿನಲ್ಲಿ ‌ಅಗಲಿದ ಮಹಾನುಭಾವರಿಗೆ ಜೀವ ತುಂಬುವ ಕೆಲಸ ಕೆಲ ವರ್ಷಗಳಿಂದ ಭರದಿಂದ ಸಾಗಿದೆ. ಸಾಂಸ್ಕೃತಿಕ ರಾಜಕಾರಣದಿಂದಾಗಿ ಈ ನಗರವು ‘ಪ್ರತಿಮೆಗಳ ರಾಜಧಾನಿ’ಯಾಗಿಯೂ ಮಾರ್ಪಾಡಾಗುತ್ತಿದೆ. ಮರೆಯಾದ ಮಹಾಪುರುಷರು ಎಲ್ಲೆಡೆ ರಾರಾಜಿಸುತ್ತಿದ್ದಾರೆ. ಯಾರು ಯಾರು ಯಾವ ಯಾವ ಕಾಲಕ್ಕೆ ಹೇಗೆಲ್ಲ ರಾರಾಜಿಸುತ್ತಾರೆ ಎನ್ನುವುದು ಆಸಕ್ತಿಕರ.

ಇಲ್ಲಿನ ಪ್ರತಿಮೆಗಳ ಬಗ್ಗೆಯೇ ‘ಇಂಡಿಯನ್ ಫೌಂಡೇಷನ್ ಫಾರ್ ದಿ ಆರ್ಟ್ಸ್‌’ ಸಂಶೋಧನೆ ನಡೆಸಿದೆ. ರವಿಕುಮಾರ್ ಕಾಶಿ, ಮಾಧುರಿ ರಾವ್ ಹಾಗೂ ಸಲೀಲಾ ವಂಕ 14 ತಿಂಗಳಲ್ಲಿ ರಾಜಧಾನಿಯ ಪ್ರತಿಮೆಗಳ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ‘ದೃಶ್ಯ ಸಂಸ್ಕೃತಿ ಮತ್ತು ಪ್ರಾದೇಶಿಕ ರಾಜಕೀಯದ ನಿರೂಪಣೆ: 1990ರ ನಂತರ ಬೆಂಗಳೂರಿನಲ್ಲಿ ಸಾರ್ವಜನಿಕ ಪ್ರತಿಮೆಗಳು ಮತ್ತು ಶಿಲ್ಪಗಳು’ ಅವರ ಸಂಶೋಧನಾ ಶೀರ್ಷಿಕೆ. ಈ ಸಂಶೋಧನೆಯಡಿ ಅವರು 700 ಪ್ರತಿಮೆಗಳನ್ನು ಗುರುತಿಸಿದ್ದಾರೆ. ಇವುಗಳಲ್ಲಿ ಅರ್ಧದಷ್ಟು ಪ್ರತಿಮೆಗಳು ಕಳೆದ 10 ವರ್ಷಗಳಲ್ಲಿಯೇ ತಲೆಯೆತ್ತಿವೆ. ಕೆಂಪೇಗೌಡ ಹಾಗೂ ರಾಜ್‌ಕುಮಾರ್ ಅವರ ಪ್ರತಿಮೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. 

ADVERTISEMENT

ಬೆಂಗಳೂರಿನಲ್ಲಿ 10–15 ವರ್ಷಗಳ ಹಿಂದೆ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ಪ್ರತಿಮೆಗಳು ಹೆಚ್ಚಾಗಿ ಕಾಣಿಸುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ವಿವಿಧ ಸಮುದಾಯಗಳ ಓಲೈಕೆಗೆ, ಸಂಘ–ಸಂಸ್ಥೆಗಳ ಒತ್ತಾಯಕ್ಕೆ ಮಣಿದು ಪ್ರತಿಮೆಗಳನ್ನು ನಿರ್ಮಿಸಲಾಗುತ್ತಿದೆ. ವಿಧಾನಸೌಧದ ಮುಂದೆ ನಿರ್ಮಾಣವಾಗಿರುವ ಬಸವಣ್ಣನ ಪ್ರತಿಮೆಯನ್ನು 2023ರ ಮಾರ್ಚ್‌ ತಿಂಗಳಲ್ಲಿ ಅನಾವರಣ ಮಾಡಲಾಗಿತ್ತು. ಇದು ಕೊನೆಯದಾಗಿ ಅನಾವರಣಗೊಂಡ ಪ್ರತಿಮೆ. ಇನ್ನೂ ಕೆಲವು ನಿರ್ಮಾಣದ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಅನಾವರಣಗೊಳ್ಳಲಿವೆ. 

ಪ್ರತಿಮೆಗಳ ಬಗ್ಗೆ ಸಂಶೋಧನೆ ನಡೆಸಿದ ಮೂವರೂ ಆರ್‌.ವಿ. ಆರ್ಕಿಟೆಕ್ಚರ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರು ಕಲೆ, ವಾಸ್ತುಶಿಲ್ಪಕ್ಕೆ ಸಂಬಂಧಿಸಿದಂತೆ ಹಲವು ಸಂಶೋಧನೆಗಳನ್ನು ನಡೆಸಿದ್ದಾರೆ. ಪ್ರತಿಮೆ ಮತ್ತು ಶಿಲ್ಪಗಳು ನಗರದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯವನ್ನೂ ಪ್ರತಿಬಿಂಬಿಸುತ್ತವೆ ಎನ್ನುವುದನ್ನು ಈ ಸಂಶೋಧನೆ ದೃಢಪಡಿಸುತ್ತದೆ. 

‘ಬೆಂಗಳೂರಿನ ಪ್ರತಿಮೆಗಳನ್ನು ದಾಖಲೀಕರಣ ಮಾಡಿದ್ದೇವೆ. ಗುರುತಿಸಲಾದ 700 ಪ್ರತಿಮೆಗಳಲ್ಲಿ 13 ಪ್ರತಿಮೆಗಳು ಮಾತ್ರ ಮಹಿಳೆಯರದ್ದಾಗಿದೆ. ಬೆಂಗಳೂರಿನಲ್ಲಿ ಇನ್ನೂ 100ರಿಂದ 150 ಪ್ರತಿಮೆಗಳು ಇರಬಹುದು. ಪ್ರತಿಮೆ ಸ್ಥಾಪಿಸಿದವರು ಯಾರು, ಸ್ಥಾಪಿಸಿದ್ದು ಯಾವಾಗ ಎನ್ನುವುದೂ ಸೇರಿ ವಿವಿಧ ಮಾಹಿತಿಗಳನ್ನೂ ದಾಖಲೀಕರಿಸಿದ್ದೇವೆ’ ಎನ್ನುತ್ತಾರೆ ದೃಶ್ಯ ಕಲಾವಿದರೂ ಆಗಿರುವ ರವಿಕುಮಾರ್ ಕಾಶಿ.

‘ಬೆಂಗಳೂರಿನಲ್ಲಿ ರಾಜ್‌ಕುಮಾರ್ ಅವರ ಪ್ರತಿಮೆಗಳು 80ಕ್ಕಿಂತ ಅಧಿಕ ಇವೆ. ಅಂಬೇಡ್ಕರ್‌ ಅವರದ್ದು 60ಕ್ಕಿಂತ ಹೆಚ್ಚು. ಗಾಂಧೀಜಿ ಅವರ ಪ್ರತಿಮೆಗಳು ಇತ್ತೀಚೆಗೆ ನಿರ್ಮಾಣವಾಗಿಲ್ಲ. ಬಹುತೇಕ ಪ್ರತಿಮೆಗಳಲ್ಲಿ ಕಲಾವಿದರ ಹೆಸರನ್ನೂ ನಮೂದಿಸಿಲ್ಲ. ಕೆಲವು ರಾಜಕೀಯ ಪ್ರೇರಿತವಾಗಿ ನಿರ್ಮಿತವಾದರೆ, ಕೆಲವು ಜನರ ಅಭಿಮಾನದಿಂದ ತಲೆಯೆತ್ತಿವೆ’ ಎಂಬುದು ಅವರ ವಿಶ್ಲೇಷಣೆ.

‘ಕೆಂಪೇಗೌಡ, ವಿವೇಕಾನಂದರ ಪ್ರತಿಮೆಗಳನ್ನು ಹೆಚ್ಚಾಗಿ ನಿರ್ಮಿಸಲಾಗುತ್ತಿದೆ. ಅಮರ ಸೇನಾನಿಗಳ ಪ್ರತಿಮೆಯನ್ನೂ ನಿರ್ಮಾಣ ಮಾಡಲಾಗುತ್ತಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪ್ರತಿಮೆಗಳೂ ಉದ್ಯಾನಗಳಲ್ಲಿ ಕಾಣಸಿಗುತ್ತವೆ. ರಾಜ್‌ಕುಮಾರ್ ಅವರ ಪ್ರತಿಮೆಗಳು ಇರುವ ಕಡೆ ಪುನೀತ್‌ ರಾಜ್‌ಕುಮಾರ್ ಅವರ ಪ್ರತಿಮೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ’ ಎಂದು ಅವರು ಹೇಳುತ್ತಾರೆ. 

ಇದೇ 12ರಿಂದ 14ರವರೆಗೆ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ರಂಗೋಲಿ ಮೆಟ್ರೊ ಆರ್ಟ್ ಸೆಂಟರ್‌ನಲ್ಲಿ ‘ಇಂಡಿಯನ್ ಫೌಂಡೇಷನ್ ಫಾರ್ ದಿ ಆರ್ಟ್ಸ್‌’ ಸಂಶೋಧನಾ ಯೋಜನೆಯ ಬಗ್ಗೆ ಛಾಯಾಚಿತ್ರ ಪ್ರದರ್ಶನ ಹಮ್ಮಿಕೊಂಡಿದೆ. ಪ್ರತಿಮೆಗಳ ಬಗ್ಗೆ ಜಾಗೃತಿಯನ್ನೂ ಮೂಡಿಸಲಾಗುತ್ತದೆ. ಮೊದಲ ದಿನ ಸಂಜೆ 4ರಿಂದ 7 ಗಂಟೆ, ಎರಡು ಹಾಗೂ ಮೂರನೇ ದಿನ ಬೆಳಿಗ್ಗೆ 11ರಿಂದ ಸಂಜೆ 6ರವರೆಗೆ ಪ್ರದರ್ಶನ ಇರಲಿದೆ. 
ವಿಧಾನಸೌಧದ ಮುಂದೆ ನಿರ್ಮಿಸಿರುವ ಕೆಂಪೇಗೌಡ ಪ್ರತಿಮೆ
ರವಿಕುಮಾರ್ ಕಾಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.