ಬೇಗಂ ಪರ್ವೀನ್ ಸುಲ್ತಾನಾ ಹೆಸರು ಕೇಳಿದ ತಕ್ಷಣ ‘ಕೇಳಿಸುವುದು’ ಅವರ ಧ್ವನಿಯ ತಾರಕ, ಹಾಡಿನ ತನ್ಮಯತೆ, ಶುದ್ಧತೆ ಮತ್ತು ವೈವಿಧ್ಯತೆ. ರಾಗದ ಲಯದಲ್ಲಿ ಸರಾಗವಾಗಿ ಚಲಿಸುತ್ತಾ ನಿಧಾನಗತಿಯ ಧ್ಯಾನದಿಂದ ಕ್ಷಣಾರ್ಧದಲ್ಲಿ ಸ್ಪೋಟಗೊಂಡು ಭೋರ್ಗರೆವ ಜಲಪಾತದಂತೆ ಕೇಳುಗರನ್ನು ಸಂಪೂರ್ಣವಾಗಿ ಆವರಿಸಿಕೊಂಡುಬಿಡುವ ಮಾಂತ್ರಿಕತೆ. ‘ಹಾಡುವುದೇ ನನಗೆ ಪಾರ್ಥನೆ’ ಎಂದು ನಂಬಿಕೊಂಡ ಅವರು, ಶಾಸ್ತ್ರೀಯ ಖಯಾಲ್ ಆಗಿರಲಿ, ಭಜನೆಯಾಗಲೀ ಅಥವಾ ಕಾವ್ಯಾತ್ಮಕ ಠುಮ್ರಿಯಾಗಿರಲಿ ಆಧುನಿಕ ಹಿಂದೂಸ್ತಾನಿ ಸಂಗೀತದ ಅಭಿಷಿಕ್ತ ಸಾಮ್ರಾಜ್ಞಿ.
ಬೇಗಂ ಪರ್ವೀನ್ ಸುಲ್ತಾನಾ ಅವರಿಗೆ ‘ದಕ್ಷಿಣ ಭಾರತದಲ್ಲಿ ಸಂಗೀತವನ್ನು ದೇವರನ್ನು ಆರಾಧಿಸುವಷ್ಟೇ ತೀವ್ರವಾಗಿ ಪ್ರೀತಿಸುತ್ತಾರೆ’ ಎನ್ನುವ ಮೆಚ್ಚುಗೆ. ಉತ್ತಮ ಗುಣಮಟ್ಟದ ರಸಾಸ್ವಾದನೆಯ ಪ್ರೇಕ್ಷಕರಿದ್ದರೆ ಅವರಿಗಾಗಿ ಹೃದಯತುಂಬಿ ಹಾಡುವ ಗೀಳು. ಭೂಮಿಜಾ ಸಂಸ್ಥೆ ಮಾ.15 ರಂದು ಏರ್ಪಡಿಸಿದ್ದ ಹೋಳಿ ಸಂಗೀತ ಕಛೇರಿಗಾಗಿ ಬೆಂಗಳೂರಿಗೆ ಬಂದಿದ್ದ ಅವರು ‘ಭಾನುವಾರದ ಪುರವಣಿ’ ಜೊತೆಗೆ
ಮಾತನಾಡಿದ್ದಾರೆ.
ನೀವು ಹನ್ನೆರಡನೇ ವಯಸ್ಸಿನಿಂದ ಸಾರ್ವಜನಿಕ ಕಛೇರಿ ನೀಡುತ್ತಿದ್ದೀರಿ. ಈಗ 74ನೆ ವಯಸ್ಸಿನಲ್ಲೂ ಅಷ್ಟೇ ಉತ್ಸಾಹದಲ್ಲಿದ್ದೀರಿ. ಯಾವುದೇ ಪ್ರದರ್ಶನ ಕಲೆಯ ಮೇಲೆ ವಯಸ್ಸು ಪ್ರಭಾವ ಬೀರುವುದಿಲ್ಲವೇ?
ನಾನು ಇದನ್ನು ದೇವರ ಕೃಪೆ ಎಂದೇ ಭಾವಿಸುತ್ತೇನೆ. ಅದಕ್ಕಾಗಿ ವಂದನೆ ಸಲ್ಲಿಸಲು ನನ್ನಲ್ಲಿ ಮಾತುಗಳೇ ಇಲ್ಲ. ಸಂಗೀತವೇ ನನ್ನ ಪ್ರಾರ್ಥನೆ. ದೇವರು ನಮಗೆ ಪ್ರತಿಭೆಯನ್ನು ನೀಡಿದರೆ ನಾವು ಅದನ್ನು ಬಳಸಿಕೊಳ್ಳಬೇಕು, ಪೋಷಿಸಬೇಕು. ಸತತ ಅಭ್ಯಾಸವೇ ಕಲಾವಿದರನ್ನು ಪರಿಪೂರ್ಣತೆಯತ್ತ ಕೊಂಡೊಯ್ಯುತ್ತದೆ. ಒಮ್ಮೆ ನಾನು ತಂಬೂರಿ ಹಿಡಿದು ಅಭ್ಯಾಸಕ್ಕೆ ಕೂತೆನೆಂದರೆ ಬೇರೆಯೇ ಲೋಕಕ್ಕೆ ಹೋಗಿಬಿಡುತ್ತೇನೆ. ಅದೇ ಸಾಧನೆ. ಸಂಗೀತದ ಶುದ್ಧತೆಯನ್ನು ಕಾಪಾಡಿಕೊಳ್ಳಲು ನಿರಂತರ ಅಭ್ಯಾಸ ಅಗತ್ಯ. ಅದು ನಿಮ್ಮ ಫಿಕ್ಸೆಡ್ ಡೆಪಾಸಿಟ್ ಥರ. ಅಗತ್ಯವಿದ್ದಾಗ ಅದರಿಂದ ಡ್ರಾ ಮಾಡಿಕೊಳ್ಳಬಹುದು. ರಿಯಾಜ್ ಮಾಡುವಾಗಲೂ ನಾನು ಬೇಡಿಕೊಳ್ಳುವುದೊಂದೇ; ದೇವರೇ ನನ್ನ ಮಾನ ಉಳಿಸು- (ಮೇರೇ ಇಜ್ಜತ್ ರಖನಾ). ಹಾಗೆ ಸಂಪೂರ್ಣ ಶರಣಾಗತಿಯಲ್ಲೇ ಸಾಧನೆಯ ಸತ್ವ ಇದೆ.
ಹಾಗಿದ್ದೂ ಯಾಕೆ ನೀವು ಪ್ರತೀ ಕಛೇರಿಯೂ ಒಂದು ಸವಾಲು ಎನ್ನುತ್ತೀರಿ?
ಹೌದು. ಪ್ರತೀ ಕಛೇರಿಯೂ ಒಂದು ಸವಾಲೇ. ನನಗೆ ವಿದ್ಯೆ ಧಾರೆ ಎರೆದ ಗುರುಗಳು, ನನಗಾಗಿ ತನ್ನ ಬದುಕನ್ನೇ ಮೀಸಲಿಟ್ಟ ತಾಯಿ, ನಾನು ನಂಬುವ ದೇವರು ಎಲ್ಲವೂ ನನ್ನ ಸಾಧನೆಯ ಹಿಂದಿರುವ ಶಕ್ತಿಗಳು. ಅವರೆಲ್ಲರೂ ‘ಹೋಗು ಹಾಡು’ ಎಂದು ಆಶೀರ್ವದಿಸಿರುವುದರಿಂದ ನಾನು ಈ ಮಟ್ಟ ತಲುಪಿದ್ದೇನೆ. ಅವರಿಗೆ ಕೆಟ್ಟ ಹೆಸರು ತರಬಾರದಲ್ಲವೇ? ಉತ್ತಮ ಗುರು ಸಿಗುವುದು ಎಷ್ಟು ದುರ್ಲಭವೋ ಅಷ್ಟೇ ದುರ್ಲಭ ಉತ್ತಮ ಶಿಷ್ಯರು ಸಿಗುವುದು. ಆ ವಿಷಯದಲ್ಲಿ ನಾನು ಬಹಳ ಅದೃಷ್ಟವಂತೆ.
ನೀವು ಅನೇಕ ಸಂದರ್ಭಗಳಲ್ಲಿ ಸಂಗೀತದ ಶುದ್ಧತೆಯ ಬಗ್ಗೆ ಮಾತಾಡಿದ್ದೀರಿ. ಸದಾ ಪುನರ್ ವ್ಯಾಖ್ಯಾನಕ್ಕೆ ಒಳಗೊಳ್ಳುತ್ತಿರುವ ಕಲೆಯಲ್ಲಿ ‘ಶುದ್ಧತೆ’ ಅಂದರೇನು?
ಭಾರತೀಯ ಸಂಗೀತದಲ್ಲಿ ಪ್ರತೀ ಸ್ವರವು ವ್ಯಾಖ್ಯಾನಗೊಂಡಿದೆ. ಹಾಡುವಾಗ ರಾಗ ತಾಳ ಸ್ಪಷ್ಟವಾಗಿದ್ದರೆ ಮಾತ್ರ ಸಂಗೀತಾಭಿವ್ಯಕ್ತಿ ಸಾಧ್ಯ. ನನ್ನ ಶ್ರೋತೃಗಳು ಕಛೇರಿಯಿಂದ ಮರಳುವಾಗ ಸಂತೋಷವಾಗಿ ಸಂಗೀತವನ್ನು ತಮ್ಮ ಎದೆಯಲ್ಲಿಟ್ಟುಕೊಂಡು ಹೋಗಬೇಕು. ನಾನೇ ಶ್ರೋತೃಗಳನ್ನು ವಂಚಿಸಿದರೆ, ಸಂಗೀತಕ್ಕೆ ಅಪಚಾರ ಮಾಡಿದರೆ ಅದು ‘ಅಶುದ್ಧ’. ಅದಕ್ಕೇ ನಾನು ಸದಾ ಹೇಳುವುದು ಕಲಾವಿದರು ಸಂಗೀತಕ್ಕೂ ಶ್ರೋತೃಗಳಿಗೂ ವಂಚಿಸಬಾರದು ಅಂಥ.
ನೀವು ಹಾಡುವುದೇ ಪಾರ್ಥನೆ ಎನ್ನುತ್ತೀರಿ, ಮತಧರ್ಮಗಳನ್ನು ಮೀರಿ ಭಜನೆಗಳನ್ನೂ ಹಾಡುತ್ತೀರಿ, ದೇವಿ ಭವಾನಿ ಹಾಡುವಾಗ ಶಕ್ತಿ ಆವರಿಸಿಕೊಳ್ಳುತ್ತದೆ ಅನ್ನುತ್ತೀರಿ, ಹಾಗಾದರೆ ನಾಸ್ತಿಕರು ಸಂಗೀತಗಾರರಾಗಬಹುದೇ?
ನನಗೆ ಗೊತ್ತಿಲ್ಲ, ನೀವು ಯಾರಾದರೂ ನಾಸ್ತಿಕ ಕಲಾವಿದರನ್ನೇ ಕೇಳಬೇಕು! ಸಂಗೀತದ ಸ್ವರಗಳನ್ನು ಗುರುಮುಖೇನ ಕಲಿಯಬೇಕು. ಪ್ರತಿ ಸ್ವರವೂ ದೈವೀಕ. ಅವುಗಳ ಜೊತೆ ವ್ಯವಹರಿಸುವುದು ಕೂಡಾ ದೈವೀಕ ಅನುಭವ. ಸರಿಯಾದ ಲಯ ತಾಳ ರಾಗ ಜ್ಞಾನವಿದ್ದಾಗ ಮಾಂತ್ರಿಕತೆ ಸೃಷ್ಟಿಯಾಗುತ್ತದೆ. ನಾನು ಹಿಂದುಸ್ತಾನಿ ಕಲಾವಿದೆ. ಬಾಲಮುರಳಿ ಕೃಷ್ಣ ಅವರು ಕರ್ನಾಟಕ ಸಂಗೀತ ಪ್ರವೀಣರು. ಅವರು ನನ್ನ ಸಂಗೀತವನ್ನು ಬಹಳ ಮೆಚ್ಚಿಕೊಂಡಿದ್ದರು. ಅವಕಾಶವಾದಾಗಲೆಲ್ಲ ನಾವು ಭೇಟಿಯಾಗುತ್ತಿದ್ದೆವು, ಸಂಗೀತದ ಬಗ್ಗೆ ಗಂಟೆಗಟ್ಟಲೆ ಚರ್ಚಿಸುತ್ತಿದ್ದೆವು. ಇಂತಹ ಸಂಗತಿಗಳನ್ನೆಲ್ಲ ಸಾಧಾರಣ ಅಂತ ನಾನು ಅಂದುಕೊಳ್ಳುವುದಿಲ್ಲ. ನನಗೆ ಸಂಗೀತ ಅಲೌಕಿಕ ಅನುಭವ, ಪಾರ್ಥನೆ, ಸಾಧನೆ. ಅದು ಎಲ್ಲ ಲೌಕಿಕ ಅನುಭವಗಳನ್ನು ಮೀರಿದ್ದು. ಅದಲ್ಲದೆ ಅರೆ ಮನಸ್ಸಿನಿಂದ ಬೇಕಾಬಿಟ್ಟಿಯಾಗಿ, ಅಂಗಚೇಷ್ಟೆಗಳನ್ನು ಮಾಡುತ್ತಾ ಹಾಡುವುದು, ಪಕ್ಕವಾದ್ಯದವರನ್ನು ಕಡೆಗಣಿಸುತ್ತಾ ಹಾಡುವುದು... ಇವೆಲ್ಲ ಸರಿಯಲ್ಲ.
ಒಂದು ಸಂದರ್ಭದಲ್ಲಿ ನೀವು ಹಿಪ್‌ಹಾಪ್ ಹೇಳಿದ್ದೀರಿ, ಪಾಪ್ ಸಂಗೀತವನ್ನೂ ಕೇಳುತ್ತೀರಿ....
ಹೌದು, ಅವರು ತಾಳ ರಿದಮ್ ಹಿಡಿದು ಮಾಡುವ ಪ್ರಯತ್ನಗಳು ನನಗಿಷ್ಟ. ಲೋಕದಲ್ಲಿ ಎಲ್ಲಾ ಸಂಗೀತದ ಮೂಲ ಏಳು ಸ್ವರಗಳೇ... ಯಾವುದೇ ಪ್ರಯತ್ನದಲ್ಲಿ ಪ್ರಾಮಾಣಿಕತೆ ಇರಬೇಕು ಅಷ್ಟೇ.
ಒಂದು ಸಂದರ್ಶನದಲ್ಲಿ ಪಂಡಿತ್ ಅರವಿಂದ ಪಾರಿಖ್ ಅವರು ನಿಮಗೆ ‘ದೇವಿ ಭವಾನಿ ಹಾಡುತ್ತೀರಾ, ನಿಮಗೆ ಮೂಡ್ ಇದ್ದರೆ...’ ಅಂದಾಗ ನೀವು ‘ನಾನು ಹಾಡಲು ತೊಡಗಿದರೆ ಮೂಡ್ ತಾನಾಗಿ ಬರುತ್ತದೆ’ ಎಂದಿರಿ. ಅದಕ್ಕೆ ಅವರು ‘ನೀವು ಭವಾನಿಯೂ ಹೌದು ದಯಾನಿಯೂ ಹೌದು’ ಅಂದರು....
(ನಗುತ್ತಾ) ಹೌದು... ಎಂಥ ಒಳ್ಳೆ ಕಾಂಪ್ಲಿಮೆಂಟ್ ಅದು! ನನ್ನ ಹಾಡುಗಾರಿಕೆ ಕೇಳಲು ಅಭಿಜ್ಞರು ಮಾತ್ರವಲ್ಲ, ಎಂದಿಗೂ ಶಾಸ್ತ್ರೀಯ ಸಂಗೀತ ಕೇಳದೇ ಇರುವಂತಹವರೂ ಬಂದು ಸಂಗೀತದ ರಸಾನುಭವ ಪಡೆಯಬೇಕು ಎನ್ನುವುದೇ ನನ್ನ ಗುರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.