ಪ್ರಿಯಾ ಸವಡಿ
ಹಾವು ಹಿಡಿಯುವುದರಲ್ಲಿ ಪುರುಷರದೇ ಪ್ರಾಬಲ್ಯ ಎನ್ನುವುದು ಈಗ ಕ್ಲೀಷೆಯ ಮಾತು. ನಾಗಿಣಿಯ ನೃತ್ಯ ಮಾಡುವುದರಲ್ಲಷ್ಟೇ ಅಲ್ಲ ಅವಳನ್ನು ಹಿಡಿಯುವುದರಲ್ಲೂ ಸೈ ಎನ್ನುತ್ತಿದ್ದಾರೆ ಕೆಲವು ವನಿತೆಯರು. ರೀಲ್ಸ್ ಲೋಕದಲ್ಲಿ ಛಾಪು ಮೂಡಿಸಿರುವ ಪ್ರಿಯಾ ಸವಡಿ ಅಂತಹವರಲ್ಲಿ ಒಬ್ಬರು.
–––
ಬೆಳ್ಳಂಬೆಳಿಗ್ಗೆ ಕಪಾಟಿನಲ್ಲಿ ಭುಸುಗುಡುತ್ತಾ ಕುಳಿತಿದ್ದ ಹಾವನ್ನು ಕಂಡು ಆ ಮನೆಯ ಜನ ಬೆಚ್ಚಿಬಿದ್ದರು. ದೌಡಾಯಿಸಿ ಹೊರಗೋಡಿ ಬಂದು, ಹಾವು ಹಿಡಿಯುವ ಮಂದಿಗೆ ಕರೆ ಮಾಡಿದರು. ಆಗ ಬಂದವರಾರು ಗೊತ್ತೇ? ಒಬ್ಬಳು ಹೆಣ್ಣುಮಗಳು! ಎಲ್ಲರೂ ನೋಡನೋಡುತ್ತಿದ್ದಂತೆಯೇ ಆಕೆ ಸಣ್ಣದೊಂದು ಕೋಲನ್ನು ಹಿಡಿದುಕೊಂಡು, ಆ ಹಾವನ್ನು ಹೇಗೋ ಮರುಳು ಮಾಡಿ, ಒಂದೇ ನಿಮಿಷದಲ್ಲಿ ಬಾಲ ಹಿಡಿದು ಚೀಲಕ್ಕೆ ತುಂಬಿಕೊಂಡು ಹೊರಟಳು! ಆ ಸುಕೋಮಲೆ ಹೀಗೆ ಧಾಡಸಿತನದಿಂದ ಹಾವನ್ನು ಅಟ್ಟಾಡಿಸಿ ಹಿಡಿಯುವುದನ್ನು ಕಂಡು ಜನ ಮೂಗಿನ ಮೇಲೆ ಬೆರಳಿಟ್ಟರು. ಅವರು ಪ್ರಿಯಾ ಸವಡಿ.
‘ಹಾಂವು ಯಾರನ್ನೂ ಕೊಲ್ಲುದಿಲ್ಲ– ಹಾಂವನ್ನೂ ಯಾರೂ ಕೊಲ್ಲಬಾರ್ದು. ನಾವ್ ಹೊಡಿಯೋದ್ ಬಿಟ್ರ ಅದು ಕಡಿಯೋದ್ ಬಿಡತೈತಿ. ಯಾರು ಹಾಂವನ್ನು ಕೊಲ್ಲತೇರಿ, ಅವರು ಪಂಚಮಿ ದಿನ ಪೂಜೆ ಮಾಡಬ್ಯಾಡರಿ. ಹಂಗ ಮಾಡಿದ್ರ ಹಾಂವಿಗೂ ಕಿಮ್ಮತ್ತ ಇರುದಿಲ್ಲ, ನಮಗೂ ಕಿಮ್ಮತ್ತ ಬರುದಿಲ್ಲ...’
ಉತ್ತರ ಕರ್ನಾಟಕದ ಖಟಕ್ ರೊಟ್ಟಿಯಷ್ಟೇ ಖಡಕ್ ಮಾತು ಪ್ರಿಯಾ ಸವಡಿ ಅವರದ್ದು. ಈ ಮಾತು ಹೇಳುವ ನೈತಿಕ ಹಕ್ಕೂ ಅವರಿಗಿದೆ. ಎರಡು ದಶಕಗಳಿಂದ ಹಾವುಗಳನ್ನು ರಕ್ಷಣೆ ಮಾಡುತ್ತಿದ್ದಾರೆ ಅವರು. ಸಾಮಾಜಿಕ ಜಾಲತಾಣಗಳಲ್ಲಿ ನಟನೆಯ ಮೂಲಕ ಗುರುತಿಸಿಕೊಂಡಿರುವ ಈ ಹೆಣ್ಣುಮಗಳದ್ದು ಪಕ್ಕಾ ಜವಾರಿ ವ್ಯಕ್ತಿತ್ವ. ಹಾವು ಹಿಡಿಯುವುದು ಅವರು ಹೆಗಲಿಗೇರಿಸಿಕೊಂಡ ಸಾಮಾಜಿಕ ಜವಾಬ್ದಾರಿ.
ಪ್ರಿಯಾ ಅವರ ತಂಗಿ ಪ್ರೀತಿ ಕೂಡ ಹಾವು ಹಿಡಿಯುವುದರಲ್ಲಿ ಸಿದ್ಧಹಸ್ತರು. ಸರಸರ ಸರಿದುಹೋಗುವ ಸರ್ಪ ಕಂಡು ಊರೆಲ್ಲ ಬೆಚ್ಚಿಬಿದ್ದರೆ, ಈ ಸಹೋದರಿಯರು ದಿಲ್‌ದಾರಾಗಿ, ಅಷ್ಟೇ ಸರಳವಾಗಿ ಸೆರೆಹಿಡಿಯುತ್ತಾರೆ. ಮನೆ, ಹೊಲ– ಗದ್ದೆ, ಅಪಾರ್ಟ್‌ಮೆಂಟು, ಉದ್ಯಾನ, ದೇವಸ್ಥಾನ, ಬಾವಿ, ಕೆರೆ, ನದಿ, ಶಾಲೆ, ಕಾಲೇಜು... ಹೀಗೆ ಇವರು ಹಾವು ಹಿಡಿಯದ ಜಾಗವೇ ಇಲ್ಲ. ಮಾರುದ್ದದ ಹಾವನ್ನು ಲೀಲಾಜಾಲವಾಗಿ ಹಿಡಿದು ಕೊರಳಿಗೆ ಹಾಕಿಕೊಂಡು ‘ಪೋಸ್’ ಕೊಟ್ಟಿದ್ದೂ ಇದೆ.
ಬೆಳಗಾವಿ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಹಾವು ಕಾಣಿಸಿಕೊಂಡರೆ ಸಾಕು, ಮೊದಲು ಫೋನ್ ಕರೆ ಬರುವುದು ಈ ಸಹೋದರಿಯರಿಗೇ. ಸರೀಸೃಪ ಹಿಡಿಯುವ ಕೌಶಲ ಹೊಂದಿರುವ ಪುರುಷರು ಬಹಳಷ್ಟು ಮಂದಿ ಇದ್ದಾರೆ. ಆದರೆ, ಈ ಗಟ್ಟಿತನ ತೋರಿದ ದೇಶದ ಕೆಲವೇ ಹೆಣ್ಣುಮಕ್ಕಳ ಸಾಲಿಗೆ ಈ ‘ಸ್ನೇಕ್ ಸಿಸ್ಟರ್ಸ್’ ಕೂಡ ಸೇರಿದ್ದಾರೆ.
ಇವರು ಹಾವು ಹಿಡಿಯುವ ಕಲೆ ಕರಗತ ಮಾಡಿಕೊಂಡಿದ್ದೇ ತಂದೆ ಚಂದ್ರಶೇಖರ ಅವರಿಂದ. ಚಂದ್ರಶೇಖರ ಬಾಲ್ಯದಲ್ಲೇ ಹಾವು– ಚೇಳುಗಳ ರಕ್ಷಣೆ ಮಾಡುತ್ತಾ ಬಂದವರು. ಸೈನಿಕರಾಗಿದ್ದ ಅವರು ಅಲ್ಲಿಯೂ ಸರೀಸೃಪಗಳ ರಕ್ಷಣೆ ಮಾಡುವಲ್ಲಿ ಆಸ್ಥೆ ವಹಿಸಿದರು. ಅದೇ ಕಲೆಯನ್ನು ತಮ್ಮ ಹೆಣ್ಣುಮಕ್ಕಳಿಗೂ ಕಲಿಸಿದ್ದಾರೆ.
‘ನಾವು ಚಿಕ್ಕವರಿದ್ದಾಗ ಅಪ್ಪ ಹಾವು ಹಿಡಿಯುವುದನ್ನು ನೋಡುವಾಗಲೇ ನಮಗೂ ಅವುಗಳ ಬಗ್ಗೆ ಸೆಳೆತ ಶುರುವಾಯಿತು. ಕೆಲವು ಹಾವು ಕಚ್ಚುವುದಿಲ್ಲ, ಕಚ್ಚಿದರೂ ವಿಷ ಏರುವುದಿಲ್ಲ ಎಂಬುದನ್ನು ಜನರಿಗೆ ಅರ್ಥ ಮಾಡಿಸುತ್ತಿದ್ದರು. ಅಣ್ಣನ ಕೊರಳಿಗೆ ಹಾವು ಸುತ್ತಿ ಜನರ ಮುಂದೆ ನಿಲ್ಲಿಸುತ್ತಿದ್ದರು. ಅಣ್ಣ ಅಕಾಲಿಕವಾಗಿ ನಿಧನವಾದಾಗ ಹಾವನ್ನು ನಮ್ಮ ಕೊರಳಿಗೆ ಸುತ್ತಿಕೊಂಡೆವು. ನಾನು 8ನೇ ತರಗತಿಯಲ್ಲಿ ಇದ್ದಾಗಲೇ ನಾಗರಹಾವು ಹಿಡಿದೆ. ತಂಗಿ 7ನೇ ತರಗತಿಯಲ್ಲಿ ಇದ್ದಾಗ ಕೇರೆಹಾವು ಹಿಡಿದಳು. ಅಲ್ಲಿಂದೀಚೆಗೆ ಜನರೇ ಗುರುತಿಸಿ ಕರೆಯಲು ಶುರು ಮಾಡಿದರು. ಮೂವರೂ ಸೇರಿ ಇದುವರೆಗೆ 5,000ಕ್ಕೂ ಹೆಚ್ಚು ಹಾವುಗಳನ್ನು ರಕ್ಷಣೆ ಮಾಡಿದ್ದೇವೆ’ ಎಂದರು ಪ್ರಿಯಾ.
‘ಹಾವು ಹಿಡಿದರೆ ಎಷ್ಟು ದುಡ್ಡು ಕೊಡಬೇಕು ಎಂದು ಕೆಲವರು ಕೇಳುತ್ತಾರೆ. ಅಚ್ಚರಿ ಆಗುತ್ತದೆ. ಇದನ್ನು ಸಮಾಜದ ಕೆಲಸ ಅಥವಾ ಹವ್ಯಾಸ ಎಂದು ಮಾಡುತ್ತಿದ್ದೇವೆ. ಜನರಿಂದ ಹಾವಿಗೆ, ಹಾವಿನಿಂದ ಜನರಿಗೆ ಅಪಾಯ ಆಗಬಾರದು ಎಂಬುದೊಂದೇ ಉದ್ದೇಶ. ಹಿಡಿದ ಬಳಿಕ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡುತ್ತೇವೆ. ಅದಕ್ಕೆ ಆಹಾರ, ನೀರು ಸಿಗುವಂಥ ಸ್ಥಳಕ್ಕೆ ಹೋಗಿ ಬಿಡುತ್ತೇವೆ’ ಎಂದರು.
ಈ ಸಹೋದರಿಯರು ಬೆಳೆದಂತೆ ಹಾವುಗಳ ಬಗೆಗಿನ ಕುತೂಹಲವೂ ಬೆಳೆಯಿತು. ಗೂಗಲ್‌ನಲ್ಲಿ ಒಂದಷ್ಟು ಹುಡುಕಿದರು, ಪ್ರಯೋಗಾಲಯಗಳಿಗೆ ಭೇಟಿ ನೀಡಿದರು, ಅನುಭವಿಗಳಿಂದ ಮಾಹಿತಿ ಕಲೆಹಾಕಿದರು. ಹಾವಿನ ಬಣ್ಣ, ಗುಣ, ಪ್ರಭೇದ, ಜಾತಿ, ಆಹಾರ ಪದ್ಧತಿ, ವಿಷದ ಸಾಧ್ಯತೆ, ಆವಾಸಸ್ಥಾನ, ಕಚ್ಚಿದಾಗ ಪಡೆಯಬೇಕಾದ ಪ್ರಾಥಮಿಕ ಚಿಕಿತ್ಸೆ... ಹೀಗೆ ಎಲ್ಲ ಆಯಾಮಗಳನ್ನೂ ಕರಗತ ಮಾಡಿಕೊಂಡರು.
‘ಧೈರ್ಯ ಹಾವು ಹಿಡಿಯಲು ಬೇಕಾದ ಮುಖ್ಯ ಗುಣ. ಹಾವು ಕಚ್ಚಿ ಸತ್ತವರಿಗಿಂತ, ಕಚ್ಚಿದ ಭಯಕ್ಕೆ ಸತ್ತವರೇ ಹೆಚ್ಚು. ಬಹುಪಾಲು ಹಾವುಗಳು ವಿಷಕಾರಿ ಅಲ್ಲ. ಇಂಥ ವಿಷಯಗಳನ್ನು ರೈತರಿಗೆ ತಿಳಿಸಿಕೊಡುವುದು ಅಗತ್ಯ. ಒಂದು ವೇಳೆ ಹಾವು ಕಚ್ಚಿದರೂ ಅದು ಯಾವ ಜಾತಿಯ ಹಾವು, ಅಪಾಯಕಾರಿಯೋ ಅಲ್ಲವೋ ಎಂಬುದು ಗೊತ್ತಿರಬೇಕು. ಇಲ್ಲದಿದ್ದರೆ ವಿನಾಕಾರಣ ಹಾವನ್ನು ಕೊಲ್ಲುತ್ತಾರೆ, ಭಯದಿಂದ ಪ್ರಾಣಕ್ಕೂ ಕಂಟಕ ತಂದುಕೊಳ್ಳುತ್ತಾರೆ’ ಎನ್ನುತ್ತಾರೆ ಪ್ರಿಯಾ.
‘ಅಕ್ಕ ಈಗ ಸಿನಿಮಾದಲ್ಲಿ ಕ್ರಿಯಾಶೀಲಳಾಗಿದ್ದಾಳೆ. ಹೆಚ್ಚು ಕರೆಗಳು ನನಗೇ ಬರುತ್ತಿವೆ. ನಾನು ಕೂಡ ‘ಶೂಟಿಂಗ್’ ಕ್ರೀಡೆಯಲ್ಲಿ ರಾಷ್ಟ್ರಮಟ್ಟದ ಪ್ರತಿನಿಧಿ ಆಗಿದ್ದೇನೆ. ಹಾವು ಹಿಡಿಯಲು ಹೆಚ್ಚು ಸಮಯ ಸಿಗುತ್ತಿಲ್ಲ. ಊರಲ್ಲಿ ಇದ್ದರೆ ಯಾವಾಗ ಕರೆದರೂ ಓಡಿ ಹೋಗುತ್ತೇನೆ. ಹಾವನ್ನು ರಕ್ಷಿಸಿದ ಖುಷಿಯೊಂದೇ ನನಗೆ ಸಾಕು’ ಎಂಬುದು ಪ್ರೀತಿ ಅವರ ಮಾತು.
ಹಾವುಗಳ ಬಗ್ಗೆ ಸಿನಿಮಾ, ಧಾರಾವಾಹಿಗಳ ಮೂಲಕ ಬಹಳಷ್ಟು ಭ್ರಮೆ ಬಿತ್ತಲಾಗಿದೆ. ಧಾರ್ಮಿಕವಾಗಿಯೂ ಹಾವು ದೊಡ್ಡ ‘ವಿಲನ್’ ಆಗಿದೆ. ಇದರ ‘ದೋಷ’ ಬಿಡಿಸುವುದಕ್ಕಾಗಿಯೇ ದೊಡ್ಡದೊಡ್ಡ ದೇವಸ್ಥಾನಗಳಿವೆ. ಹಾವಿನ ದ್ವೇಷ 12 ವರ್ಷ ಎಂದೆಲ್ಲ ಬಿಂಬಿಸಿದ್ದಾರೆ. ಇದು ಅವರವರ ನಂಬಿಕೆಗೆ ಬಿಟ್ಟ ವಿಚಾರ. ಆದರೆ, ಹಾವು ಹಾಲು ಕುಡಿಯುವುದಿಲ್ಲ, ದ್ವೇಷ ಸಾಧಿಸುವುದಿಲ್ಲ, ನಾಗಿಣಿಯಾಗಿ ಕುಣಿಯುವುದಿಲ್ಲ, ನಾಗಮಣಿ, ನಾಗಲೋಕಗಳೂ ಇಲ್ಲ, ಪುಂಗಿ ಊದಿದರೆ ತಲೆಯಾಡಿಸುವುದೂ ಇಲ್ಲ. ಇದನ್ನೆಲ್ಲ ಜನ ಅರ್ಥ ಮಾಡಿಕೊಳ್ಳಬೇಕು. ಸಂಪತ್ತಿನ ಕಾವಲು ಕಾಯುತ್ತಿದೆ ಎಂಬ ಮೌಢ್ಯದಿಂದ ಹಾವನ್ನು ಬಲಿ ಪಡೆಯುವವರೂ ಇದ್ದಾರೆ. ಹಾವಿಗೆ ಬೇಕಾಗಿರುವುದು ಇಲಿ, ಮೊಲ, ಹಲ್ಲಿ, ಕಪ್ಪೆ, ಕೋಳಿಯಂತಹ ಆಹಾರವಷ್ಟೇ ಎನ್ನುವುದು ಅವರ ಕಳಕಳಿ.
ಪ್ರಿಯಾ ಸವಡಿ
ಪ್ರಿಯಾ ಸವಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.