ಕಡ್ಲೆಪುರಿ ಕಟ್ಟಲು ಹೇಳಿ ಪಕ್ಕಕ್ಕೆ ಹೊರಳಿದರೆ, ಫಕ್ಕನೆ ಗಮನ ಸೆಳೆದದ್ದು ಗೋಡೆಯ ಕಪಾಟಿನಲ್ಲಿ ಒಪ್ಪವಾಗಿ ಜೋಡಿಸಿಟ್ಟಿದ್ದ ಪುಸ್ತಕಗಳ ಸಾಲು. ಅರೆ! ಕಡ್ಲೆಪುರಿಗೂ ಪುಸ್ತಕಕ್ಕೂ ಎಲ್ಲಿಂದೆಲ್ಲಿಯ ನಂಟು ಎಂದು ಹುಬ್ಬೇರಿಸಿದ್ದನ್ನು ಕಂಡು ಮುಗುಳ್ನಕ್ಕರು ಅಂಗಡಿಯ ಮಾಲೀಕ ಪ್ರಭಾಕರ. ಕಡ್ಲೆಪುರಿ ಕಟ್ಟುತ್ತಲೇ ಅವರ ಪುಸ್ತಕದ ನಂಟನ್ನು ಹೇಳುತ್ತಾ ಹೋದರು.
ಬೆಂಗಳೂರಿನ ಶ್ರೀನಿವಾಸ ನಗರದ ಬ್ಯಾಂಕ್ ಕಾಲೊನಿಯಲ್ಲಿರುವ ಆ ಪುಟ್ಟ ಕಡ್ಲೆಪುರಿ ಅಂಗಡಿಯಲ್ಲಿ ನಿತ್ಯ ಸಾಹಿತ್ಯದ ಕಲರವ. ಕುವೆಂಪು, ಕೆ.ಶಿವರಾಮ ಕಾರಂತ, ತ.ರಾ.ಸು., ಎಸ್.ಎಲ್.ಭೈರಪ್ಪ, ಕೆ.ಟಿ.ಗಟ್ಟಿ, ಯಂಡಮೂರಿ ವೀರೇಂದ್ರನಾಥ್ ಸೇರಿದಂತೆ ಹತ್ತಾರು ಸಾಹಿತಿಗಳ ಪುಸ್ತಕ ವಿತರಣೆಯ ಭರಾಟೆ. ಬಗೆಬಗೆಯ ಕಡ್ಲೆಪುರಿ, ಕುರುಕಲು ತಿನಿಸುಗಳು ತಿಂಡಿಪ್ರಿಯರ ನಾಲಗೆ ರುಚಿಯನ್ನು ತಣಿಸಿದರೆ, ಅಲ್ಲಿರುವ ಸಾಹಿತ್ಯದ ‘ತಿನಿಸು’ ಅವರ ಬೌದ್ಧಿಕ ಹಸಿವನ್ನು ನೀಗಿಸುತ್ತದೆ.
ಕಾಲೇಜು ದಿನಗಳಲ್ಲಿ ಮಗ ದಾರಿ ತಪ್ಪಿ ತಮ್ಮಿಂದ ದೂರ ಸರಿಯುತ್ತಿದ್ದಾನೆ ಎಂದು ಮನೆಯವರು ಅಂದುಕೊಳ್ಳುತ್ತಿದ್ದಾಗಲೇ ಆ ಯುವಕನ ಕೈಗೆ ಸಿಕ್ಕಿದ್ದು ಭೈರಪ್ಪನವರ ‘ದೂರ ಸರಿದರು’ ಕಾದಂಬರಿ. ಪತಿಯನ್ನು ಕಳೆದುಕೊಂಡ ದುಃಖ ಮರೆಯಲು ತಾಯಿಗೆ ಆಸರೆಯಾಗಿದ್ದ ಪುಸ್ತಕಗಳು ಅದಾಗಲೆ ಮಗನನ್ನೂ ಆವರಿಸಿಕೊಂಡಾಗಿತ್ತು. ಆದರೆ ಆವರೆಗೆ ಓದಿದ್ದ ಯಾವ ಪುಸ್ತಕವೂ ಮಾಡದಷ್ಟು ಮೋಡಿಯನ್ನು ಅದೊಂದು ಕೃತಿ ಆತನ ಮೇಲೆ ಮಾಡಿಬಿಟ್ಟಿತ್ತು. ಎಷ್ಟರಮಟ್ಟಿಗೆಂದರೆ, ಅಲ್ಲಿಂದೀಚೆಗೆ ಆಪ್ತೇಷ್ಟರ ಮದುವೆಗೆಲ್ಲ ಆತ ಉಡುಗೊರೆಯಾಗಿ ಕೊಡುತ್ತಾ ಹೋದದ್ದು ಅದೇ ಪುಸ್ತಕವನ್ನು. ಬದುಕಿನ ಪಯಣದಲ್ಲಿ ಜೊತೆಯಾಗಲು ಹೊರಟ ನವಜೋಡಿಗೆ ‘ದೂರ ಸರಿದರು’ ಹೆಸರಿನ ಪುಸ್ತಕ ಕೊಡುವುದೇ ಎಂದು ಸ್ನೇಹಿತರು ಕಾಲೆಳೆದದ್ದರಿಂದ ಈಚೆಗಷ್ಟೇ ತಮ್ಮ ಆ ರೂಢಿಯನ್ನು ನಿಲ್ಲಿಸಿದ್ದಾರೆ 54 ರ ಹರೆಯದ ಪ್ರಭಾಕರ.
ಅಷ್ಟೇ ಆಗಿದ್ದರೆ ಅವರ ಕಡ್ಲೆಪುರಿ ಅಂಗಡಿ ವಿಶಿಷ್ಟ ಎನಿಸುತ್ತಿರಲಿಲ್ಲ. ಓದಿನಿಂದ ತಮಗೆ ಸಿಗುವ ರಸಾನುಭವವನ್ನು ಇತರರಿಗೂ ಉಣಬಡಿಸುವ ಅಭಿಲಾಷೆ ಅವರದು. ಅದಕ್ಕಾಗಿ ಅವರು, ತಮಗೆಂದು ಕೊಂಡು ತಂದ ಪುಸ್ತಕಗಳನ್ನು ಕಡ್ಲೆಪುರಿ ಕೊಳ್ಳಲು ಬಂದವರಿಗೂ ಉಚಿತವಾಗಿ ಕೊಟ್ಟರು. ಅದರಿಂದ ಕಂಡುಕೊಂಡ ಜೀವನಾನುಭವವನ್ನು ತಮ್ಮ ಅಕ್ಷರಲೋಕದ ಬಳಗದೊಂದಿಗೆ ಹಂಚಿಕೊಳ್ಳುತ್ತಾ ಬಂದರು. ಹಾಗೆ ಪುಸ್ತಕ ಪಡೆದುಹೋದವರಲ್ಲಿ ಹಲವರು ಮತ್ತೆ ಬಂದರು. ಪುಸ್ತಕದ ಜೊತೆಯಲ್ಲಿ ಕಡ್ಲೆಪುರಿಯನ್ನೂ ಕೊಂಡರು. ಕಡ್ಲೆಪುರಿಗಾಗಿ ಬಂದವರು ಪುಸ್ತಕದ ರುಚಿ ಹತ್ತಿಸಿಕೊಂಡರು. ಆದರೆ ಕೆಲವರು ಮಾತ್ರ ಪುಸ್ತಕದೊಟ್ಟಿಗೆ ನಾಪತ್ತೆಯಾದರು! ಆದರೂ ಪ್ರಭಾಕರ ಅವರ ಉತ್ಸಾಹ ಮಾತ್ರ ಕುಗ್ಗಲಿಲ್ಲ. ‘ಕಡ್ಲೆಪುರಿಯಲ್ಲಿ ಒಂದು ರೂಪಾಯಿ ಬಿಡುವುದಿಲ್ಲ, ಪುಸ್ತಕಕ್ಕಾಗಿ ಒಂದು ರೂಪಾಯಿ ಪಡೆಯುವುದಿಲ್ಲ’ ಎಂಬ ಸೂತ್ರದೊಂದಿಗೆ ಅವರ ಅಕ್ಷರ ದಾಸೋಹದ ಕಾಯಕ ನಿರಂತರವಾಗಿ ಮುಂದುವರಿದಿದೆ. ಕನ್ನಡದ ಹಲವು ಧೀಮಂತರ ಕೃತಿಗಳು ಅವರ ಕಪಾಟು ಸೇರಿದವು. ಆದರೆ, ಆಗಿದ್ದು ಒಂದೇ ಬದಲಾವಣೆ. ಆಸಕ್ತರು ಕೃತಿಯ ಬೆಲೆಯನ್ನು ಠೇವಣಿಯಾಗಿಟ್ಟು ಅದನ್ನು ಪಡೆಯಬೇಕು. ಹಿಂದಿರುಗಿಸಿದ ನಂತರ ಅಷ್ಟೂ ಹಣ ವಾಪಸ್ ಪಡೆಯಬಹುದು. ಅಲ್ಲಿಗೆ ಅವರು ಆ ಪುಸ್ತಕವನ್ನು ಉಚಿತವಾಗಿ ಓದಿದಂತೆ, ವಾಪಸ್ ಬಾರದಿದ್ದರೆ ಆ ಪುಸ್ತಕ ಮಾರಾಟವಾದಂತೆ! ಆಗಲೂ ಪ್ರಭಾಕರ ಖುಷಿ ಪಡುತ್ತಾರೆ.
ಅಂದಹಾಗೆ, ಕನ್ನಡ ಸಾಹಿತ್ಯದ ಸೊಗಡಿಗೆ ಮಾರುಹೋಗಿರುವ ಪ್ರಭಾಕರ ಮೂಲತಃ ತಮಿಳುನಾಡಿನವರು.
ಓದುಗರ ಸಂಖ್ಯೆ ತಗ್ಗಿಲ್ಲ...
ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವುದನ್ನು ಪ್ರಭಾಕರ ಅವರು ಸುತರಾಂ ಒಪ್ಪುವುದಿಲ್ಲ. ‘ನೆನ್ನೆ ಒಂದೇ ದಿನ ಹತ್ತು ಪುಸ್ತಕಗಳನ್ನು ಪಡೆದು ಹೋಗಿದ್ದಾರೆ ನೋಡಿ’ ಎಂದು ಲೆಕ್ಕ ತೋರಿಸುತ್ತಾರೆ.
‘ಹಿಂದೆ ಓದುವವರ ಸಂಖ್ಯೆ ಹೆಚ್ಚಾಗಿದ್ದರೂ ಖರೀದಿ ಸಾಮರ್ಥ್ಯ ಇರಲಿಲ್ಲ. ಈಗ ಓದುತ್ತಾರೋ ಇಲ್ಲವೋ ಪುಸ್ತಕ ಕೊಳ್ಳುವ ಸಾಮರ್ಥ್ಯವಂತೂ ಜನರಲ್ಲಿದೆ. ನಾನು ಕೊಂಡು ತಂದ ‘ಆವರಣ’ದ ಅರವತ್ತು ಪ್ರತಿಗಳಲ್ಲಿ ಈಗ ಹತ್ತು ಮಾತ್ರ ನನ್ನ ಬಳಿ ಇವೆ. ಅಂದರೆ ಇನ್ನುಳಿದವು ಪರೋಕ್ಷವಾಗಿ ಮಾರಾಟವಾದಂತೆಯೇ ಅಲ್ಲವೇ’ ಎನ್ನುತ್ತಾರೆ ಅವರು.
ಓದುವವರ ಸಂಖ್ಯೆ ಹೆಚ್ಚಿಸುವ ಗುರಿಯೊಂದಿಗೆ ಪುಸ್ತಕ ವಿತರಣೆಯ ಕಾಯಕದಲ್ಲಿ ಮುಂದೆ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳುವ ಮಹದಾಸೆ ಅವರಿಗಿದೆ. ‘ಪುಸ್ತಕದಿಂದ ದುಡ್ಡು ಮಾಡಬೇಕೆಂಬ ಹಂಬಲವಿಲ್ಲ. ಆದರೆ ದೊಡ್ಡ ಮಟ್ಟದಲ್ಲಿ ಈ ಕಾರ್ಯ ಮಾಡಿದಾಗ ಹಣ ತಾನೇತಾನಾಗಿ ಬರುತ್ತದೆ. ಅದರಿಂದ ಜೀವನವೂ ನಡೆಯುತ್ತದೆ ಸಾಹಿತ್ಯ ಪ್ರೀತಿ ಹಂಚಿದ ಖುಷಿಯೂ ಸಿಗುತ್ತದೆ’ ಎನ್ನುವ ವಿಶ್ವಾಸ ಅವರದು. ಸಾಹಿತ್ಯ ಕೃತಿಗಳ ಸಾರವನ್ನು ಆಡಿಯೊ ರೂಪದಲ್ಲಿ ಕೇಳಬಯಸುವವರಿಗಾಗಿ ಸಮಾನಾಸಕ್ತರನ್ನು ಒಳಗೊಂಡ ‘ಕಥಾಸಂಗಮ’ ಎಂಬ ಅವರ ವಾಟ್ಸ್‌ಆ್ಯಪ್ ಬಳಗವೂ ಸಕ್ರಿಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.