ADVERTISEMENT

Children's Literature: ಮಕ್ಕಳ ಸಾಹಿತ್ಯ ಲೋಕದ ‘ಆನಂದ’

ತಮ್ಮಣ್ಣ ಬೀಗಾರ
Published 4 ಅಕ್ಟೋಬರ್ 2025, 23:30 IST
Last Updated 4 ಅಕ್ಟೋಬರ್ 2025, 23:30 IST
ಆನಂದ ಪಾಟೀಲ
ಆನಂದ ಪಾಟೀಲ   
70ರ ದಶಕದ ಬಳಿಕ ಎಚ್‌.ಎಸ್. ವೆಂಕಟೇಶಮೂರ್ತಿ, ನಾ ಡಿಸೋಜ, ಆರ್.ವಿ. ಭಂಡಾರಿ ಸೇರಿದಂತೆ ಕೆಲವರು ಕನ್ನಡದಲ್ಲಿ ಮಕ್ಕಳ ಸಾಹಿತ್ಯಕ್ಕೆ ಹೊಸ ದಿಕ್ಕು ನೀಡಿದರು. ಅದೇ ಸಾಲಿಗೆ ಧಾರವಾಡದ ಆನಂದ ಪಾಟೀಲ ಕೂಡ ಸೇರುತ್ತಾರೆ. ಇವರ ಕೃತಿಗಳಿಗೆ ಸಾಕಷ್ಟು ಪ್ರಶಸ್ತಿಗಳೂ ಲಭಿಸಿವೆ.

ಮಕ್ಕಳ ಭಾವಲೋಕ ಪ್ರವೇಶಿಸಿದರೆ... ಒಂದು ರೀತಿಯ ಅನೀರ್ವಾಚನೀಯ ಆನಂದದ ಅನುಭವ ನಮ್ಮದಾಗುತ್ತದೆ. ಅಲ್ಲಿನ ಮುಗ್ಧ ಭಾವ ಚೈತನ್ಯ, ಕುತೂಹಲ, ಪ್ರೀತಿ ಎಲ್ಲವೂ ನಾವು ಬೇಡುವವೇ ಆಗಿದೆ. ‘ಮಕ್ಕಳ ಸಂಗದೊಳೆಚ್ಚರಗೊಳ್ಳಲಿ ಆನಂದದ ಆ ದಿವ್ಯಶಿಶು/ ಹಾಡಲಿ ಕುಣಿಯಲಿ ಹಾರಲಿ ಏರಲಿ  ದಿವಿಜತ್ವಕ್ಕೆ ಈ ಮನುಜ ಪಶು’ ಎಂಬುದು ಕುವೆಂಪು ಅವರ ಪದ್ಯದ ಸಾಲುಗಳು. ಇಂತಹ ದಿವ್ಯ ಶಿಶುವನ್ನು ಸದಾ ಎಚ್ಚರವಾಗಿಟ್ಟುಕೊಂಡವರು ಧಾರವಾಡದ ಆನಂದ ಪಾಟೀಲರು. ಸದಾ ಮಕ್ಕಳ ಕಣ್ಣೋಟದಲ್ಲಿ ಸೃಜನಾತ್ಮಕ ಕೃತಿಗಳನ್ನು ರಚಿಸುತ್ತ ಜೊತೆ ಜೊತೆಗೇ ಉಪನ್ಯಾಸ, ಚರ್ಚೆ, ಮಾರ್ಗದರ್ಶನ, ವಿಮರ್ಶೆ, ಪತ್ರಿಕೆ–ಹೀಗೆ ನಿರಂತರವಾಗಿ ತಮ್ಮ ಅಭಿಪ್ರಾಯಗಳ ಮೂಲಕವೇ ಕನ್ನಡ ಮಕ್ಕಳ ಸಾಹಿತ್ಯಕ್ಕೆ ಹೊಸ ಅರಿವನ್ನೂ, ಹರಿವನ್ನೂ ಹರಿಸಲು ಪ್ರಯತ್ನಿಸುತ್ತಾ ಕನ್ನಡದ ಮಕ್ಕಳ ‘ಆನಂದ’ ಆಗಿದ್ದಾರೆ.

ಪಾಟೀಲರದು ವಿಶ್ವದೆಲ್ಲಡೆಯ ಮಕ್ಕಳ ಸಾಹಿತ್ಯ ಕುರಿತು ಸದಾ ಕುತೂಹಲದ ನೋಟ. ಆಕಾಶವಾಣಿಯಲ್ಲಿ ದೀರ್ಘಕಾಲ ಕೆಲಸ ಮಾಡಿ ನಿಲಯದ ನಿರ್ದೇಶಕರಾಗಿ ನಿವೃತ್ತರಾದವರು. ಅದನ್ನೇ ಅವರು ಹೇಳುತ್ತಿರುತ್ತಾರೆ... ‘ನಾನೇನು ಶಿಕ್ಷಕನಾಗಿ ಮಕ್ಕಳ ಸಂಗಡ ಇರುವವನಲ್ಲ. ಆದರೆ ಅದ್ಯಾವುದೋ ಒಳಗಿನ ಸೆಳೆತ ಹಾಗೂ ತುಡಿತದಿಂದಲೇ ಮಕ್ಕಳ ಸಾಹಿತ್ಯದಲ್ಲಿ ತೊಡಗಿಕೊಂಡಿರುವುದು’ ಎಂದು.

ಮಕ್ಕಳಿಗೆ ಇದನ್ನೇ ಇಷ್ಟನ್ನೇ ಹೇಳಬೇಕು, ಬೋಧಕವಾಗಿರಬೇಕು, ಪದ್ಯಗಳಲ್ಲಿ ಪ್ರಾಸಗಳಿರಬೇಕು ಮುಂತಾದ ಚೌಕಟ್ಟಿನಿಂದ ಕಲಾತ್ಮಕತೆ ಪಡೆಯುವಲ್ಲಿ ಹಿಂದಾಗಿ ಕನ್ನಡದ ಮಕ್ಕಳ ಸಾಹಿತ್ಯ ನಿಂತ ನೀರಾಗಿತ್ತು. ಸುಮಾರು 70ರ ದಶಕದ ನಂತರ ಎಚ್‌.ಎಸ್. ವೆಂಕಟೇಶಮೂರ್ತಿ, ನಾ ಡಿಸೋಜ, ಆರ್.ವಿ. ಭಂಡಾರಿ ಸೇರಿದಂತೆ ಅನೇಕರು ಈ ಚೌಕಟ್ಟಿನಿಂದ ಹೊರಬಂದು ಹೊಸರೀತಿಯಲ್ಲಿ ಬರೆದು ಮಕ್ಕಳ ಸಾಹಿತ್ಯಕ್ಕೆ ಹೊಸದನ್ನು ತೆರೆದರು. ಭಾಷಾಶೈಲಿ ರಚನಾ ಕ್ರಮ ವಸ್ತು ವಿನ್ಯಾಸಗಳ ಬದಲಾವಣೆಯ ಮೂಲಕ ಪ್ರಯೋಗಕ್ಕಿಳಿದರು. ಈ ಹೊಸತು ತಂದ ಪ್ರಮುಖರಲ್ಲಿ ಆನಂದರೂ ಒಬ್ಬರು.

ADVERTISEMENT

ಧಾರವಾಡ ಸೀಮೆಯ ಭಾಷೆಯಲ್ಲಿ ಬಹುತೇಕ ಮಕ್ಕಳ ಸಾಹಿತ್ಯ ರಚಿಸುತ್ತಾ ಬಂದಿದ್ದಾರೆ. ಆ ಮೂಲಕ ಪ್ರಾದೇಶಿಕ ಮಣ್ಣಿನ ಸೊಗಡು ಮಕ್ಕಳ ಸಾಹಿತ್ಯದಲ್ಲಿ ಕಾಣಿಸಿಕೊಂಡಿತು. ಈಗ ಅದು ವಿಸ್ತಾರವಾಗಿದೆ. ‘ಮಲ್ಲಿಗಿ ಹೂ ಬಿದ್ದಾವ/ ಮಾಟನ ಹೆಜ್ಜಿ ಮೂಡ್ಯಾವ’  ಎನ್ನುತ್ತಾ ಪುಟ್ಟ ಮಕ್ಕಳ ಕಣ್ಣೋಟದ ಹೆಜ್ಜೆಯನ್ನು ಸಾಕಷ್ಟು ಮೂಡಿಸುತ್ತಿರುವ ಪಾಟೀಲರು ಕಥೆ, ಪ್ರಬಂಧ ಮಾದರಿ, ಕಾದಂಬರಿ, ನಾಟಕ, ಕವನ, ಕಥನ ಕವನ ಇನ್ನೂ ಅನೇಕ ರೀತಿಯ ಪ್ರಯೋಗಗಳು ಅವರ ಸೃಜನಶೀಲ ಕೃತಿಗಳಲ್ಲಿ ದೊರೆಯುತ್ತವೆ. ಪಾಟೀಲರು ಚಿತ್ರಕಲಾವಿದರೂ ಆಗಿದ್ದು ತನ್ನ ಹಾಗೂ ಅನೇಕರ ಪುಸ್ತಕಗಳಿಗೆ ಅವರು ಚಿತ್ರ ರಚಿಸಿದ್ದಾರೆ.

ಅಭಿನವ ಸಂಸ್ಥೆ ಆನಂದ ಪಾಟೀಲರ ಸಂಪಾದಕತ್ವದಲ್ಲಿ ‘ಮೇವುಂಡಿ ಮಲ್ಲಾರಿ ಮಕ್ಕಳ ಕಾದಂಬರಿ ಸುಗ್ಗಿ’ ಮಾಲಿಕೆಯಲ್ಲಿ ವಿವಿಧ ಲೇಖಕರಿಂದ ಹತ್ತು ಕಾದಂಬರಿಗಳನ್ನು ಪ್ರಕಟಿಸಿದೆ. ಈ ಮಾಲಿಕೆಯಲ್ಲಿ ಪ್ರಕಟವಾದ ಪಾಟೀಲರ ‘ಪುಟ್ಟಾರಿ ಆನೆ ಪುಟ್ ಪುಟ್’ 383 ಪುಟಗಳಷ್ಟು ದೀರ್ಘವಾದ ಮಕ್ಕಳ ಕಾದಂಬರಿ. ಇದರಲ್ಲಿ ಒಂದು ಪುಟ್ಟ ಆಟಿಕೆ ಆನೆಯೊಂದಿಗೆ ಮಗುವಿನ ಸಂಬಂಧ, ಸಂಭಾಷಣೆ, ಆಶಯಗಳ ವಿನಿಮಯ ಎಲ್ಲಾ ಬೆರಗನ್ನು ಉಂಟುಮಾಡುತ್ತದೆ. ಹುಡುಕಾಟ, ಕಳೆದುಕೊಂಡ ವೇದನೆ, ಅಗಲುವಿಕೆಯ ಅನಿವಾರ್ಯತೆಗಳೆಲ್ಲ ಓದುತ್ತಾ ನಮಗೆ ದಾಟುತ್ತವೆ. ‘ಪುಟ್ಟನ ಹಾವು ಹುತ್ತ ಬಿಟ್ಟು ಹೊರ ಬಂತು’ ಕೃತಿಯಲ್ಲಿ ಮಕ್ಕಳ ಹುಡುಗಾಟಿಕೆ ಕಂಡರೆ ‘ಮೋಪ್ಯಾನ ಮ್ಯಾಪು ಪರಮಪದ ಸೋಪಾನ ಪಟ’ ಕಾದಂಬರಿಯಲ್ಲಿ ಆರ್ಥಿಕ ಬಿಕ್ಕಟ್ಟು ತರುವ ಸವಾಲುಗಳನ್ನು ಮಕ್ಕಳು ಎದುರಿಸುವ ರೀತಿ ಕಾಣಬಹುದು. ಪಾಟೀಲರ ‘ಡಂಡಂ ಊರಿಗೆ ಡಿಂಡಿಂ ಗಾಡಿ’ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಬಂದಿದೆ. ಇವರ ಸಮಗ್ರ ಸಾಹಿತ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ 2014ರ ಬಾಲ ಸಾಹಿತ್ಯ ಪುರಸ್ಕಾರ ನೀಡಿದೆ.

ಪಾಟೀಲರು ಮಕ್ಕಳ ಸಾಹಿತ್ಯ ವಿಭಾಗದಲ್ಲಿ ಕನ್ನಡದಲ್ಲಿ ಯಾರೂ ಮಾಡದಷ್ಟು ವಿಮರ್ಶಾ ಸಂಶೋಧನಾ ಬರಹಗಳನ್ನು ಪ್ರಕಟಿಸಿದ್ದಾರೆ. ಅಕಾಡೆಮಿ, ಪುಸ್ತಕ ಪ್ರಾಧಿಕಾರ, ಹಂಪಿಯ ಕನ್ನಡ ವಿಶ್ವವಿದ್ಯಾಲಯ, ಕನ್ನಡ ಸಾಹಿತ್ಯ ಪರಿಷತ್ತುಗಳಿಗೂ ಮಕ್ಕಳ ಸಾಹಿತ್ಯ ಕುರಿತು ಒಳನೋಟದ ವಿಸ್ತಾರವಾದ ಬರೆಹಗಳನ್ನು ಬರೆದುಕೊಟ್ಟಿದ್ದಾರೆ. ಅಲರು, ಮುಗುಳು, ಪಾಶ್ಚಾತ್ಯ ಮಕ್ಕಳ ಸಾಹಿತ್ಯ ನನ್ನ ಓದು, ಮಕ್ಕಳ ಸಾಹಿತ್ಯ ಮತ್ತೆ ಮತ್ತೆ ಅನುಸಂಧಾನ ಮುಂತಾದವೆಲ್ಲ ವಿಮರ್ಶಾ ಗ್ರಂಥಗಳು. ಈ ಕೃತಿಗಳಲ್ಲಿ ವಿವಿಧ ಭಾಷೆ ಹಾಗೂ ನೆಲದ ಭಾಷೆಯ ಮಕ್ಕಳ ಸಾಹಿತ್ಯ ಮಾದರಿಗಳ ವಿಶ್ಲೇಷಣೆಗಳಿವೆ. ಪಾಶ್ಚಾತ್ಯ ಲೇಖಕರ ಸಾಹಿತ್ಯ ಪರಿಚಯಿಸಿದ್ದು ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುವವರಿಗೆ ವಿದೇಶಿ ದೃಷ್ಟಿಕೋನ ಪರಿಚಯಿಸಿದೆ. ಮಕ್ಕಳ ಸಾಹಿತ್ಯ ಎನ್ನುವ ಕೃತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ್ದು, ಇದರಲ್ಲಿ ನವೋದಯ ಕಾಲದಿಂದ ಮಕ್ಕಳ ಸಾಹಿತ್ಯ ರಚನೆಯಲ್ಲಾದ ಪಲ್ಲಟಗಳನ್ನು ಪ್ರಮುಖ ಕವಿಗಳ ಕವಿತೆಗಳೊಂದಿಗೆ ವಿಶ್ಲೇಷಿಸಿದ್ದಾರೆ. ಆಕಾಶವಾಣಿಯ ಮೂಲಕವೂ ಮಕ್ಕಳಿಗಾಗಿ ವಿಶಿಷ್ಟ ಕಾರ್ಯಕ್ರಮಗಳ ಕೊಡುಗೆ ನೀಡಿದ್ದಾರೆ. ಸಂಧ್ಯಾ ಗೆಳೆಯಯರ ಬಳಗ ಕಟ್ಟಿ ರವಿ ಹೀರೆಮಠ, ಬಸು ಬೇವಿನಗಿಡದ, ರಾಜಶೇಖರ ಕುಕ್ಕುಂದ ಮುಂತಾದ ಅನೇಕರ ಜೊತೆಗೂಡಿ ಪುತ್ತೂರಿನಿಂದ ಮಹಾರಾಷ್ಟ್ರದ ಅಕ್ಕಲಕೋಟೆಯವರೆಗೂ ರಾಜ್ಯದ ಉದ್ದಗಲಕ್ಕೂ ಸಂಧ್ಯಾ ಕಾವ್ಯೋತ್ಸವ ಇಪ್ಪತ್ತೈದು ವರ್ಷ ಮಾಡಿದ್ದು ಬರೆದರೆ ದೊಡ್ಡ ಪುಸ್ತಕವಾಗುವಷ್ಟು ಸಂಗತಿಗಳಿವೆ.

ಬಹುಮುಖ್ಯವಾಗಿ ಎರಡು ಆನ್‌ಲೈನ್ ತ್ರೈಮಾಸಿಕ ಪತ್ರಿಕೆಗಳನ್ನು ಕನ್ನಡ ಹಾಗೂ ಇಂಗ್ಲಿಷಿನಲ್ಲಿ 32 ವರ್ಷಗಳಿಂದಲೂ ಸತತವಾಗಿ ಒಬ್ಬರೇ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಇದರಲ್ಲಿ ಅನುವಾದ, ವಿಮರ್ಶೆ, ಸಂಶೋಧನೆ, ಪರಿಚಯ, ಸುದ್ದಿ ಹೀಗೆ ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಎಲ್ಲ ಸಂಗತಿಗಳನ್ನು ಬರೆಯುತ್ತಾರೆ. ಇಲ್ಲಿ ರಾಜ್ಯ ದೇಶವಷ್ಟೇ ಅಲ್ಲದೆ ವಿಶ್ವದ ನಾನಾ ಭಾಗಗಳ ಸಾಹಿತಿಗಳ ವಿಶ್ಲೇಷಣೆ ಪರಿಚಯವಿರುತ್ತದೆ. ಇಂತಹ ಒಂದು ಪತ್ರಿಕೆ ಮಕ್ಕಳ ಸಾಹಿತ್ಯಕ್ಕೆ ಬರುತ್ತಿರುವುದು, ಒಬ್ಬರೇ ನಿರ್ವಹಿಸುತ್ತಿರುವುದೂ ಆದ  ಮತ್ತೊಂದು ನಿದರ್ಶನ ಇರಲಾರದು ಎನಿಸುತ್ತದೆ.

ಮಕ್ಕಳ ಸಾಹಿತ್ಯದಲ್ಲಿ ತೊಡಗುವವರು ನೆರೆಯ ವಿವಿಧ ಭಾಷೆಗಳಲ್ಲಿ ಆಗುತ್ತಿರುವ ಪ್ರಯೋಗ, ಅಧ್ಯಯನ ಮಾಡುತ್ತಿರಬೇಕು. ಮಕ್ಕಳಿಗಾಗಿ ಎಂದು ಬರೆಯದೆ ತನ್ನೊಳಗಿನ ಮಗುತನ ತಾನಾಗಿ ಅನಾವರಣಗೊಳ್ಳಬೇಕು. ಭಾಷೆ ಮತ್ತು ರಚನಾ ಕ್ರಮಗಳನ್ನು ಅನುಕರಣೆ ಮಾಡದೆ ಸ್ವಂತಿಕೆ ಮೈಗೂಡಿಸಿಕೊಳ್ಳಬೇಕು. ಪೂರ್ವಗ್ರಹದಿಂದ ಹೊರಬಂದು ಮಕ್ಕಳ ಸಾಹಿತ್ಯ ರಚನೆಯೆಲ್ಲಾಗುತ್ತಿರುವ ಪ್ರಯೋಗಗಳನ್ನು ಸಂಶೋಧಕರು ಗಮನಿಸಬೇಕು ಎಂಬ ಕಾಳಜಿ ಆನಂದ ಪಾಟೀಲರ  ಆಶಯ. ಸದಾ ಅಧ್ಯಯನ ಮತ್ತು ಬರೆಹವನ್ನೇ ವ್ರತವಾಗಿಸಿಕೊಂಡಿರುವ ಇವರು ಯುವಕರನ್ನು ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಕಾಳಜಿ ಆಪ್ತವಾದದ್ದು. ಪಾಟೀಲರ ಮಾದರಿಯಂತೆ ಸಮಾನಮನಸ್ಕರೆಲ್ಲ ಸೇರಿಕೊಂಡು ಆಗಾಗ ಚರ್ಚೆ, ವಿಚಾರಗೋಷ್ಠಿಗಳನ್ನು ಯಾವ ಪ್ರಚಾರದ ಹಂಗೂ ಇಲ್ಲದೆ ಮಾಡುತ್ತಲೇ ಇರುವ ಶಕ್ತಿ ಹೆಚ್ಚಾಗಲಿ. ⇒

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.