ADVERTISEMENT

ನುಡಿ ನಮನ | ಎಚ್ಚೆಸ್ವಿ– ದೀಪ ನಂದಿತು ದೀಪದಲ್ಲಿ

ಎಂ.ಆರ್.ದತ್ತಾತ್ರಿ
Published 30 ಮೇ 2025, 23:30 IST
Last Updated 30 ಮೇ 2025, 23:30 IST
   

ಸಾಲು ಮುಗಿದು ಸಂಗೀತ ಕರಗಿ ಆರ್ದ್ರ ಭಾವಗೀತೆಯೊಂದು ಮೌನಕ್ಕೆ ಜಾರಿದಂತೆ ಕವಿ ಎಚ್ಚೆಸ್ವಿಯವರು ನಮ್ಮನ್ನು ಅಗಲಿದ್ದಾರೆ. ಅವರದೇ ‘ಗಂಧವ್ರತ’ ಕವಿತೆಯ ಅಗರುಬತ್ತಿಯಂತೆ ನಿರಂತರವಾಗಿ ಉರಿಯುತ್ತ ಸಾಹಿತ್ಯವನ್ನು ವ್ರತದಂತೆ ಸ್ವೀಕರಿಸಿ, ಆಯುಷ್ಯ ಸವೆಸಿ ನಡೆದಿದ್ದಾರೆ. ಹೋದ ತಿಂಗಳ ತನಕವೂ, ಹಾಸಿಗೆಯಿಂದ ಏಳಲಾಗದಾಗಲೂ, ಕ್ಯಾನ್ಸರ್‌ನಿಂದ ಕೃಶವಾದ ದೇಹದ ಅಸಾಧ್ಯ ಭಾದೆಯಲ್ಲೂ, ಕಾವ್ಯದ ಮಾತುಗಳನ್ನಾಡಿದರೆ ಅವರ ಮುಖವು ಅರಳುತ್ತಿತ್ತು, ಕಣ್ಣುಗಳಲ್ಲಿ ಬೆಳಕು ಹೊಮ್ಮುತ್ತಿತ್ತು. ನೋವಿನ ಅರೆಪ್ರಜ್ಞೆಯಲ್ಲೂ ಕವಿತೆ ಓದಲು ಹಂಬಲಿಸುತ್ತಿದ್ದರು. ಇನ್ನೊಂದಿಷ್ಟು ಸಾನೆಟ್ಟುಗಳನ್ನು ಬರೆಯುವುದಿದೆ ಎಂದಿದ್ದರು. ಅವರ ಅನುಭವದ ಪುತಿನರನ್ನು ಮತ್ತಷ್ಟು ಬರೆಯಬೇಕೆಂದಿದ್ದರು. ಮೊಮ್ಮಗನ ಇಂಗ್ಲಿಷ್ ಕವಿತೆಗಳಿಗೆ ಸಮಾನಾಂತರವಾಗಿ ಕನ್ನಡ ಕವಿತೆಗಳನ್ನು ಬರೆದು ಒಂದೇ ಪುಸ್ತಕದಲ್ಲಿ ಅಕ್ಕಪಕ್ಕ ಪುಟಗಳಲ್ಲಿ ಪ್ರಕಟಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಗಂಧವ್ರತ ಬಾಳು ಅವರದ್ದು. ಲೇಖನಿಯನ್ನು ಕೈಯಲ್ಲಿ ಹಿಡಿಯಲಾಗದ ಸ್ಥಿತಿಯಲ್ಲೂ ಕಾವ್ಯ ಧ್ಯಾನವು ಅವರನ್ನು ಆವರಿಸಿಕೊಂಡಿತ್ತು. ಒಬ್ಬ ಕವಿಯು ತನ್ನ ಜೀವನದ ಪ್ರತಿಕ್ಷಣವೂ ಕವಿಯಾಗೇ ಇರುವುದು ಹೇಗೆ ಎನ್ನುವುದನ್ನು ಬಾಳಿ ತೋರಿಸಿಕೊಟ್ಟು ನಡೆದವರು ಅವರು.

ಎಚ್ಚೆಸ್ವಿಯವರ ಕಾವ್ಯವನ್ನು ಒಟ್ಟಾಗಿ ಗಮನಿಸಿದರೆ ನಮಗೆ ಎದ್ದು ಕಾಣುವ ಗುಣಾಂಶವೆಂದರೆ ಅವರ ನಿರಂತರ ಶೋಧನೆ. ಕವಿತೆಯ ವಸ್ತು, ವಿನ್ಯಾಸ, ಛಂದಸ್ಸು, ಭಾಷೆ, ದೃಶ್ಯ, ಧ್ವನಿಗಳಲ್ಲಿ ಅವರು ಸದಾ ಪ್ರಯೋಗಶೀಲರಾಗಿದ್ದರು. ಸಾಹಿತ್ಯ ಪ್ರಯೋಗಕ್ಕಾಗಿ ಹೊಸ ಮಾಧ್ಯಮಗಳನ್ನು ಹುಡುಕಿಕೊಳ್ಳಲು ಅವರಿಗೆ ಯಾವ ಸಂಕೋಚವೂ ಇರಲಿಲ್ಲ. ಭಾವಗೀತೆಗಳೆಡೆಗೆ ಮೂಗುಮುರಿಯುವ ಕಾಲದಲ್ಲಿಯೂ ಅವರು ಧೃತಿಗೆಡದೆ ಭಾವಪೂರ್ಣ ಗೀತೆಗಳನ್ನು ರಚಿಸಿ, ಹಾಡಿಸಿ ಸುಗಮಸಂಗೀತದ ಮೂಲಕ ಕನ್ನಡಿಗರ ಮನಗೆದ್ದರು. ಅವರ ಯಾವ ಕಾರ್ಯಕ್ರಮವೆಂದರೂ ಅದು ಸಾಹಿತ್ಯ ಮತ್ತು ಸಂಗೀತದ ಮೇಳವಾಗಿರುತ್ತಿತ್ತು. ಎಷ್ಟು ಸಾಹಿತಿಗಳ ಒಡನಾಟವು ಅವರಿಗಿತ್ತೋ ಅಷ್ಟೇ ಸಂಗೀತಗಾರರ ಒಡನಾಟವೂ ಅವರಿಗಿತ್ತು. ಬರಹಗಾರರು ಮತ್ತು ಹಾಡುಗಾರರನ್ನು ಅವರಂತೆ ಒಂದೇ ವೇದಿಕೆಗೆ ತಂದ ಮತ್ತೊಬ್ಬರ ಕುರಿತು ನನಗೆ ತಿಳಿಯದು. ಅದಕ್ಕೆ ಕೊನೆಯ ಸಾಕ್ಷಿ ಎನ್ನುವಂತೆ ಅವರ ಪಾರ್ಥಿವ ಶರೀರವನ್ನು ದರ್ಶನಕ್ಕಾಗಿ ರವೀಂದ್ರ ಕಲಾಕ್ಷೇತ್ರದಲ್ಲಿಟ್ಟಾಗ ಕನ್ನಡದ ಅತ್ಯುತ್ತಮ ಸುಗಮಸಂಗೀತ ಗಾಯಕರು ಹಾಡುಗಳ ಮೂಲಕ ಅವರಿಗೆ ತಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿದ್ದರು. ಕಾದಂಬರಿಕಾರನಾದ ನನಗೆ ನಾಡಿನ ಅನೇಕ ಪ್ರಸಿದ್ಧ ಸಂಗೀತಗಾರರ ಪರಿಚಯವಾದದ್ದು ಅವರ ಮನೆಯಲ್ಲೇ.

ದಿಗ್ಗಜರ ಸಮಾಗಮ... ಕವಿ ಚನ್ನವೀರ ಕಣವಿ ಜತೆ...

ADVERTISEMENT

ಎಚ್ಚೆಸ್ವಿಯವರು ತಮ್ಮ ನಿತ್ಯ ಲೋಕಗ್ರಹಿಕೆಯನ್ನು ನಿರಂತರವಾಗಿ ಕಾವ್ಯವಾಗಿ ಪರಿವರ್ತಿಸಿಕೊಂಡವರು. ಇದಕ್ಕೆ ಉದಾಹರಣೆಗಳು ಸಾಕಷ್ಟಿವೆ. ಬೇಂದ್ರೆಯವರ ಕಾವ್ಯದಂತೆ ತಮ್ಮ ಸುಖ ದುಃಖಗಳನ್ನು ವ್ಯಕ್ತಪಡಿಸುವ ಅವರ ಮಾರ್ಗ ಕಾವ್ಯವೇ ಆಗಿದ್ದಿತು. ಹದಿನೆಂಟು ವರ್ಷಗಳ ಹಿಂದೆ ಅವರ ಪತ್ನಿ ಮೃತರಾದಾಗ ಅವರ ಆಳದ ನೋವು ‘ಉತ್ತರಾಯಣ’ ಕವಿತೆಯಾಗಿ ಹೊಮ್ಮಿತ್ತು. ‘ಏಳಿ ಬಂತು ಊರು ಎಂದು ಹೇಳಲೇ ಇಲ್ಲ ನೀನು. ನನಗೂ ಮೈಮರೆವೆ / ಅರ್ಧ ಪಂಚೆ ಸುತ್ತಿಕೊಂಡು ಹೆಂಡತಿ ಹೊರಟಾಗ ಹೊರಕ್ಕೆ / ಗಂಡನಿಗಿನ್ನೂ ಮರಣಾಂತಿಕ ನಿದ್ದೆ’– ಅವರ ಒಂಟಿತನ, ಅಸಹಾಯಕತೆ ಮತ್ತು ಸಂಕಟಗಳು ಕಾವ್ಯದಲ್ಲಿ ವ್ಯಕ್ತವಾಗಿದ್ದು ಹಾಗೆ. ಆದರೆ, ಅದೇ ಕವಿತೆಯ ಮುಂದುವರೆದ ಭಾಗವಾಗಿ ಮುಂದೆ ‘ವೈದೇಹಿ’ ಕವಿತೆಯನ್ನು ಬರೆಯುವಾಗ ಮತ್ತದೇ ವಸ್ತುವನ್ನೇ ಅವರು ಉದ್ದೇಶಿಸಿದ್ದರೂ ಬರೆದ ರೀತಿ, ಮನಃಸ್ಥಿತಿ, ಕಂಡ ತತ್ತ್ವ ಎಲ್ಲವೂ ಹೊಸದಾಗಿದ್ದವು. ವಿಷಾದವನ್ನು ಮೀರಿ ಕವಿತೆಯು ನಿಂತಿತು. ಕಾಣೆಯಾದ ಸಂಗಾತಿಯನ್ನು ಕಾಲಾತೀತ ಪ್ರತಿಮೆಯಾಗಿಸಿ ಮಾನಸ ಜಲದಲ್ಲಿ ಮುಳುಗಿಸಿಕೊಳ್ಳುವ ಹಾಗೂ ಆ ಮೂಲಕ ಕೃತಿಯಾಗಿ ಉಳಿಸಿಕೊಳ್ಳುವ ಕಾವ್ಯ ಸಂವೇದಿತ ಉದ್ದೇಶ ಅವರಿಗೆ ಹೊಳೆದಿತ್ತು. ಇದು ನಿರಂತರ ಕಾವ್ಯ ಚಿಂತನೆಯ ಫಲ. ತಮ್ಮದೇ ಆತ್ಮಸಾಕ್ಷಿಯ ಕುದಿಯಲ್ಲಿ ಕಾವ್ಯವನ್ನು ಹದವಾಗಿಸುವ ಕಲೆ ಕೂಡ. ದೇಹ ಅಳಿದ ಮೇಲೂ ನಮ್ಮೊಂದಿಗೆ ಈ ಕವಿಯು ಉಳಿದುಹೋಗುವ ಬಗೆಯು ಹಾಗೆ.

ಕಾವ್ಯದ ಓದಿನ ಸುಖದಲ್ಲಿ ಎಚ್ಚೆಸ್ವಿ

ಎಚ್ಚೆಸ್ವಿಯವರ ಬದುಕಿನ ದೊಡ್ಡ ವಿಶೇಷವೆಂದರೆ ಅವರು ತಮ್ಮ ಹಿರಿಯರು, ಸಮಕಾಲೀನರು, ಮತ್ತು ಕಿರಿಯರೊಂದಿಗೆ ಬೆರೆತ ಬಗೆ. ಪುತಿನ, ಯು.ಆರ್. ಅನಂತಮೂರ್ತಿ, ಗೋಪಾಲಕೃಷ್ಣ ಅಡಿಗ, ಜಿ.ಎಸ್. ಶಿವರುದ್ರಪ್ಪ ಮುಂತಾದ ಹಿರಿಯರೊಂದಿಗೆ ಅವರಿಗೆ ಆತ್ಮೀಯ ಅನುಸಂಧಾನವಿದ್ದಂತೆ ತಮ್ಮ ತಲೆಮಾರಿನ ಕಿರಿಯರೊಂದಿಗೂ ಅವರಿಗೆ ಸಾಹಿತ್ಯ ಸಂಹವನ ಸಾಧ್ಯವಿತ್ತು. ಆ ಕಾರಣಕ್ಕೇನೇ ಅವರಿಗೆ ‘ಅಮೆರಿಕದಲ್ಲಿ ಬಿಲ್ಲುಹಬ್ಬ’ ಬಗೆಯ ವಿಶೇಷ ಕವಿತೆಯನ್ನು ಬರೆಯಲು ಆಯಿತು. ಆ ಕವಿತೆಯಲ್ಲಿ ಮಧುರೆಗೆ ಹೊರಟುನಿಂತ ಗೋಪಾಲನ ಸಂಭ್ರಮವನ್ನು ಕಂಡು ಗೋಪ ಚಿಂತಾಕ್ರಾಂತನಾಗುತ್ತಾನೆ. ಆದರೆ ಗೋಪಾಲನಿಗೆ ಮಧುರೆಯ ಆಕರ್ಷಣೆಯನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. ಎಚ್ಚೆಸ್ವಿ ಈ ಕವಿತೆಯನ್ನು ಕನಸನ್ನು ಬೆನ್ನತ್ತಿ ಅಮೆರಿಕಕ್ಕೆ ತೆರಳುವ ಯುವಜನತೆಯ ಅಂತರಂಗವನ್ನು ಶೋಧಿಸಲು ಬರೆದಿದ್ದಾರೆ. ಒಬ್ಬರ ಹಿಂದೆ ಒಬ್ಬರು ಅಮೆರಿಕಕ್ಕೆ ತೆರಳುವಾಗ ಬೃಂದಾವನದಲ್ಲಿ ಕೈಕಾಲು ಬಿದ್ದವರಷ್ಟೆ ಉಳಿಯುವರೇನೋ ಎನ್ನುವ ಭಯವು ಕಾಡುತ್ತದೆ. ಈ ಕವಿತೆಯ ವಿಶೇಷವೆಂದರೆ ಇಲ್ಲೆಲ್ಲೂ ಅವರು ಯಾರನ್ನೂ ಅಪರಾಧಿಯಾಗಿಸಲು ಹೋಗಿಲ್ಲ. ವಲಸೆ ಕುರಿತಾದ ಅವರ ಈ ಅಂತಃಕರಣ ನಿಲುವೇ ನನ್ನನ್ನು ಅವರೆಡೆಗೆ ಸೆಳೆಯಿತು. ಒಂದು ಕವಿತೆಯಿಂದ ಪ್ರಾರಂಭವಾದ ನಮ್ಮ ಸ್ನೇಹವು ಕೊನೆಯತನಕ ಉಳಿಯಿತು.

ಪುರಾಣದ ವಸ್ತುವನ್ನು ಸಮಕಾಲೀನವಾಗಿಸುವುದು ಎಚ್ಚೆಸ್ವಿಯವರ ವಿಶೇಷವಾಗಿತ್ತು. ಅದಕ್ಕೆ ಮತ್ತೊಂದು ಉದಾಹರಣೆಯಾಗಿ ಅವರ ‘ಶಿಶಿರಪಾಡು’ ಕವಿತೆಯನ್ನು ನೋಡಿ. ಆ ಕವಿತೆಯಲ್ಲಿ ಕವಿ ವಾಲ್ಮೀಕಿಯು ಸೀತೆಯ ದುಃಖಕ್ಕೆ ತತ್ತರಿಸಿಹೋಗುತ್ತಾನೆ. ಶ್ರೀರಾಮಪಟ್ಟಾಭಿಷೇಕದ ನಂತರ ಕೃತಿ ಮುಗಿಸಿದ ತೃಪ್ತಿಯಲ್ಲಿರುವ ವಾಲ್ಮೀಕಿಗೆ ಬಿಕ್ಕಳಿಸುವ ಸೀತೆಯು ಎದುರಾಗುತ್ತಾಳೆ. ‘ರಾಮನಿರುವನಕ ರಾಮಾಯಣವು ಮುಗಿಯುವುದೆ? ಅಂತೆ ಸೀತೆಯ ಚಿಂತೆ ಸಾಯುವನಕ’ ಸೀತೆಯ ದುಃಖಕ್ಕೆ ವಾಲ್ಮೀಕಿ ತತ್ತರಿಸುತ್ತಾನೆ, ಹಾಗೆಯೇ ಕವಿ ಎಚ್ಚೆಸ್ವಿ. ಅದೇ ಬಗೆಯಲ್ಲಿ, ಬುದ್ಧನು ತನ್ನ ಜ್ಞಾನೋದಯದ ತರುವಾಯ ಕಪಿಲವಸ್ತುವಿಗೆ ಮೊದಲಬಾರಿಗೆ ಬಂದಾಗ ಮತ್ತು ಪತ್ನಿ ಯಶೋಧರೆಯು ಮುಖಾಮುಖಿಯಾದಾಗ ಬುದ್ಧನಿಗಿಂತಲೂ ಆಳದಲ್ಲಿ ಪರಿತಪಿಸುವವರು ಕವಿ ಎಚ್ಚೆಸ್ವಿ. ಪಾತ್ರ ಒಂದನ್ನ ಆಳದ ಅಂತಃಕರಣದಲ್ಲಿ ನೋಡಬಲ್ಲ ಕವಿಗೆ ಮಾತ್ರ ಈ ಬಗೆಯ ದುಃಖದ ಅಭಿವ್ಯಕ್ತಿ ಸಾಧ್ಯ. ಎಚ್ಚೆಸ್ವಿಗೆ ಆ ಬಗೆಯ ಅಂತಃಕರಣವಿತ್ತು.

ಎಚ್ಚೆಸ್ವಿ

ಬೆಂಗಳೂರಿನಲ್ಲಿ ‘ಅಭ್ಯಾಸ’ ಎನ್ನುವ ಸಾಹಿತ್ಯಾಸಕ್ತರ ಗುಂಪಿನೊಂದಿಗೆ ಅವರು ಬೆರೆತದ್ದು ಮತ್ತು ಗುರುವಾಗಿ ಹೊಸತಲೆಮಾರಿನ ಆಸಕ್ತ ಓದುಗರಿಗೆ ಮತ್ತು ಹವ್ಯಾಸಿ ಬರಹಗಾರರಿಗೆ ಕನ್ನಡ ಪರಂಪರೆಯನ್ನು ಕಲಿಸಿದ್ದು ಅವರ ದೊಡ್ಡತನ. ಗುಂಪಿನಲ್ಲಿದ್ದವರಲ್ಲಿ ಬಹುಪಾಲು ಐಟಿ ವೃತ್ತಿಯನ್ನು ಮಾಡುವವರು. ಆದರೆ ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದವರು. ಎಚ್ಚೆಸ್ವಿಯವರ ಕೃಪೆಯಿಂದಾಗಿ ಪಂಪ, ರನ್ನ, ಲಕ್ಷ್ಮೀಶ, ಕುಮಾರವ್ಯಾಸ ಮುಂತಾದ ಪೂರ್ವಸೂರಿಗಳ ಪರಿಚಯವು ಕ್ರಮಬದ್ಧವಾಗಿ ನಡೆಯಿತು. ಒಬ್ಬ ಸಾಹಿತ್ಯ ಶಿಕ್ಷಕನಾಗಿ ಅವರಿಗಿದ್ದ ನಿಷ್ಠೆಯ ಫಲವದು.

ನಮ್ಮ ಅರಿವು ಮತ್ತು ಕಾವ್ಯಾನುಭವಗಳನ್ನು ಹಿಗ್ಗಿಸಿ ಎಚ್.ಎಸ್. ವೆಂಕಟೇಶಮೂರ್ತಿ ನಮ್ಮನ್ನಗಲಿದ್ದಾರೆ. ನಮಗೆ ಕಾವ್ಯ ಚಿಂತನೆಯನ್ನು ಕಲಿಸಿದ್ದಾರೆ. ಗಂಧವ್ರತರಾಗುವುದು ಹೇಗೆಂಬುದನ್ನು ಖುದ್ದು ಬದುಕಿ ತೋರಿಸಿಕೊಟ್ಟಿದ್ದಾರೆ. ನಮ್ಮೆದೆಗಳಲ್ಲಿ ಕಾವ್ಯ ದೀಪವನ್ನು ಬೆಳಗಿ ತಾವು ತಮ್ಮ ಬುದ್ಧಚರಣದ ಸಾಲುಗಳಂತೆ ದೀಪದಲ್ಲಿ ದೀಪವಾಗಿ ಹೊಸ ಆಯಾಮಕ್ಕೆ ಜಾರಿದ್ದಾರೆ. ಕನ್ನಡ ಸಾಹಿತ್ಯಲೋಕವು ಸದಾಕಾಲ ನೆನಪಿಡುವ ಕವಿ ಇವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.