ಕುವೆಂಪು
ಕೋದಂಡ ಚಂದ್ರ
ಕೋದಂಡ ಚಂದ್ರ (ನಾ). ಬಿಲ್ಲಿನಾಕಾರದ ಚಂದ್ರ
ಕುವೆಂಪು ಅವರು ಯಜ್ಞ ಪುರುಷನ ಕೈಯಲ್ಲಿಯ ಚಿನ್ನದ ಪಾತ್ರೆಯಲ್ಲಿರುವ ಸುಪಾಯಸ ರಸವನ್ನು – ಕೋದಂಡ ಚಂದ್ರನಲ್ಲಿ ಹೊನ್ನ ಬೆಳುದಿಂಗಳ ಜಲ ಹೊಳೆಯುವಂತೆ ತಳತಳಿಸಿ ನಲಿದು ಕುಣಿಯುತ್ತಿತ್ತು ಎಂದು ವರ್ಣಿಸಿದ್ದಾರೆ. ಅರ್ಧಚಂದ್ರನನ್ನು ಬಿಲ್ಲಿಗೆ ಹೋಲಿಸಿ ಅದರಲ್ಲಿ ಹೊನ್ನ ಬೆಳದಿಂಗಳ ಜಲ ಹೊಳೆಯುವಂತೆ ಪಾಯಸ ಹೊಳೆಯುತ್ತಿತ್ತು ಎನ್ನುವುದು ಕವಿ ಪ್ರತಿಭೆಯಿಂದ ಹೊಮ್ಮಿ ಬಂದ ತಳತಳಿಸುವ ಉಪಮಾನಲಂಕಾರ. ಜೊತೆಗೆ ಅದು ಕೋದಂಡ ರಾಮಚಂದ್ರನ ಉದಯವನ್ನು ಧ್ವನಿಸುತ್ತದೆ.
ಮಿಸುಪ ಮಿಸುನಿಯ ಪಾತ್ರೆಯಲಿ ಸುಪಾಯಸ ರಸಂ,
ಕೋದಂಡ ಚಂದ್ರನಲಿ ಪೊನ್ನಜನ್ನದ ಜಲಂ
ಪೊಳೆವಂತೆ, ತಳತಳ ನಲಿದು ಕುಣಿಯೆ.
ರೂಕ್ಷಜ್ವಾಲೆ
ಕುವೆಂಪು ಅವರು ‘ಭೈರವನಾರಿ’ ಕವನದಲ್ಲಿ ರಣರಂಗದಲ್ಲಿ ರೌದ್ರವನ್ನು ತೋರುತ್ತ, ತಾಂಡವನೃತ್ಯ ಗೈಯುವ ಶಂಕರನಾರಿಯನ್ನು ಚಿತ್ರಿಸಿದ್ದಾರೆ. ಅವಳ ಕಂಠದಲ್ಲಿ ಭಯವನ್ನುಂಟು ಮಾಡುವ ‘ನರಶಿರಮಾಲೆ’ ಇದ್ದರೆ, ಕೈಯಲ್ಲಿ ಹೊಳೆಯುವ ‘ರೂಕ್ಷಜ್ವಾಲೆ’ಯಿದೆ ಎಂದು ಬಣ್ಣಿಸಿದ್ದಾರೆ. ಜ್ವಾಲೆ ಧಗಧಗಿಸಿ ಉರಿಯುವ ಬೆಂಕಿಯ ನಾಲಗೆ. ಅದನ್ನು ಇನ್ನೂ ತೀವ್ರವಾಗಿಸಲು ಅದಕ್ಕೆ ಪೂರಕವಾಗಿ ‘ರೂಕ್ಷ’ ಪದ ಬಳಸಿದ್ದಾರೆ. ತೀಕ್ಷ್ಣಕ್ರೂರವಾದುದು ರೂಕ್ಷ. ಕವಿಯು ರೂಪಿಸಿರುವ ‘ರೂಕ್ಷಜ್ವಾಲೆ’ ಪದ ಬೆಂಕಿಯ ನಾಲಗೆಯನ್ನು ಇನ್ನೂ ಕ್ರೂರವಾಗಿ ತೀಕ್ಷ್ಣಗೊಳಿಸಿದೆ.
‘ಕಂಠದೊಳಂಜಿಪ ನರಶಿರಮಾಲೆ!
ಕರದಲಿ ರಂಜಿಪ ರೂಕ್ಷಜ್ವಾಲೆ!
ಕುಳದ ಕಲಿ
‘ಕುಳ’ವೆಂದರೆ ನೇಗಿಲುಗಳ ಬಾಯಿಗೆ ತೊಡಿಸುವ ಕಬ್ಬಿಣದ ಪಟ್ಟಿ’. ಹೊಲವನ್ನು ನೇಗಿಲಿನಿಂದ ಉತ್ತು, ಬೆಳೆ ತೆಗೆದು ನಾಡಿನ ಜನಕ್ಕೆ ನೀಡುವ ರೈತನನ್ನುದ್ದೇಶಿಸಿ ಕುವೆಂಪು ಅವರು ‘ಕುಳದ ಕಲಿಗೆ’ ಕವನ ರಚಿಸಿದ್ದಾರೆ. ‘ಕುಳದ ಕಲಿ’ ಅವರು ರಚಿಸಿರುವ ಪದ. ಅದರಲ್ಲಿ ರೈತನನ್ನು ನಾಡಿನ ಹಣೆಬರಹ ಬರೆಯುವವನೆಂದಿದ್ದಾರೆ. ಅವನನ್ನು ‘ಹೊಲದ ನಾಂದಿ’ ಎಂದು ಕರೆದಿದ್ದಾರೆ. ಅದು ಬೇಸಾಯ ಕಲ್ಪನೆಯ ನಾಂದಿ ಪುರುಷ ಎಂಬ ಅರಿವು. ಅವನ ಸತ್ಯ, ಶಾಂತಿ, ಅಹಿಂಸಾ ಜೀವನ ರೀತಿಯನ್ನು ಕಂಡು ‘ನೆಲದ ಗಾಂಧಿ’ ಎಂದು ವಿಶೇಷ ಪದದಲ್ಲಿ ಚಿತ್ರಿಸುತ್ತ, ‘ನೀನೆ ರಾಷ್ಟ್ರ ಶಕ್ತಿ’ ಎಂದು ಬಣ್ಣಿಸಿದ್ದಾರೆ.
ಬರಿಯ ಉಳುವ ಕುಳದ ಗೆರೆಯೆ?
ನಾಡ ಹಣೆಯ ಬರೆಹ ಬರೆವೆ!
ಹೊಲದ ಗಾಂಧಿ, ನೆಲದ ನಾಂದಿ
ನೀನೆ ರಾಷ್ಟ್ರಶಕ್ತಿ. (ಕುಳದ ಕಲಿಗೆ- ಪ್ರೇತ-ಕ್ಯೂ)
ಕುವೆಂಪು ಅವರು ‘ಹಾಡು ನೇಗಿಲಯೋಗಿ’ ಕವನದಲ್ಲಿ ರೈತನು ತನ್ನ ಮುದಕ್ಕಾಗಿ ಹಾಡುತ್ತ ಹೊಲ ಉಳುತ್ತಾನೆ. ಆಗ ಆಚಾರಿ ಹದಗೆಂಪಾಗಿ ಕಾಯಿಸಿ ತಟ್ಟಿದ ಕುಳಹರಿತವಾಗಿದ್ದು ಹೊಲದ ಹೃದಯಕ್ಕೆ ತಾಗುತ್ತದೆ. ಆಗ ಹೊಲದ ದಯೆಯಿಂದ ರಾಗಿ ಚಿಮ್ಮಿ ಹೊಮ್ಮುವುದು ಎಂದು ರೈತ, ಹಾಡು, ಕುಳ, ಹೊಲ, ರಾಗಿಯನ್ನು ಒಂದಾಗಿಸಿ ಬೌದ್ಧಿಕ ಸೌಂದರ್ಯದಲ್ಲಿ ಅನನ್ಯವಾಗಿ ಹೀಗೆ ಬಣ್ಣಿಸಿದ್ದಾರೆ.
ಹಾಡು ನೇಗಿಲಯೋಗಿ;
ಹಾಡೆ ಹದಗೆಂಪಾಗಿ
ಹಲದ ಕುಳ ಹರಿತಾಗಿ
ಹೊಲದ ಹೃದಯಕೆ ತಾಗಿ
ದಯೆ ಚಿಮ್ಮುವುದು ರಾಗಿ;
ಹಾಡು, ನೇಗಿಲಯೋಗಿ!
(ಹಾಡು ನೇಗಿಲಯೋಗಿ – ಪ್ರೇತ-ಕ್ಯೂ)
ಕುವೆಂಪು ಅವರು ‘ನೇಗಿಲಯೋಗಿ’ ಕವನದಲ್ಲಿ ನೇಗಿಲ ಕುಳದಲ್ಲಿ ಕರ್ಮ-ಕರ್ತವ್ಯ ಅಡಗಿದೆ. ರೈತ ನೆಲ ಉತ್ತು ಬಿತ್ತಿ ಬೆಳೆದರೆ ಮಾತ್ರ ರಾಗಿ, ಜೋಳ, ಭತ್ತ ಆಹಾರ ಸಮೃದ್ಧಿಯಿಂದ ಜನರ ಬದುಕು ಉತ್ತಮವಾಗುವುದು. ಅದು ಧರ್ಮಚಿಂತನೆಗೆ ಅಸ್ತಿಭಾರ. ಎಂಬ ಅರಿವಿನಲ್ಲಿ ಹೀಗೆ ಹೇಳಿದ್ದಾರೆ:
ನೇಗಿಲ ಕುಳದೊಳಡಗಿದೆ ಕರ್ಮ;
ನೇಗಿಲ ಮೇಲೆಯೆ ನಿಂತಿದೆ ಧರ್ಮ. (ಕೊಳಲು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.