ಕುವೆಂಪು
ಕೃಪಾಕೇತು
ಕೃಪಾಕೇತು (ನಾ). ಕರುಣೆಯ ಕಿರಣ
ರಾಮ ಸೀತೆ ಲಕ್ಷ್ಮಣರನ್ನು ಹುಡುಕಿ ಕರೆತರಲು ಭರತನು ಹೊರಟಾಗ ಅವನ ಜೊತೆ ತಾಯಂದಿರು ಹೋಗುವರು. ರಾಮಚಂದ್ರನು ಕೌಸಲ್ಯೆ, ಸುಮಿತ್ರೆಯರಿಗೆ ವಂದಿಸುವನು. ದೂರದಲ್ಲಿ ಪಶ್ಚಾತ್ತಾಪದಿಂದ ತಲೆಬಾಗಿ ನಿಂತಿದ್ದ ಕೈಕೆಯನ್ನು ಕರುಣಿ ರಾಮ ನೋಡುವನು. ಅವನ ಉನ್ನತ ಆದರ್ಶ ವ್ಯಕ್ತಿತ್ವವನ್ನು ಚಿತ್ರಿಸುತ್ತ ಕುವೆಂಪು ಅವನನ್ನು ಕರುಣೆಯಿಂದ ಕೂಡಿದ ಬೆಳಕಿನ ಕಿರಣ ‘ಕೃಪಾಕೇತು’ ಎಂದು ಕರೆದು ಹೀಗೆ ರೇಖಿಸಿದ್ದಾರೆ:
‘ಪಾಪಿಯಂ ಬೆಂಬಿಡದೆ
ಹಿಂಬಾಲಿಸಟ್ಟಿ ಹಿಡಿಯುವ ಕೃಪಾಕೇತುವೋಲ್
ಮುಟ್ಟಿ ಹಿಡಿದನು ಪಾದಯುಗ್ಮಮಂ’
ಹೆಗ್ಗಣ್ಣು
ಹೆಗ್ಗಣ್ಣು (ನಾ). ದೊಡ್ಡದಾದ ಕಣ್ಣು; ವಿಶಾಲವಾದ ಅಕ್ಷಿ
ದಂಡಕಾರಣ್ಯದಲ್ಲಿ ರಾಮಸೀತೆ ಲಕ್ಷ್ಮಣರಿಗೆ ಎದುರಾದ ವಿರಾಧ ರಾಕ್ಷಸನನ್ನು ಬಣ್ಣಿಸುವಾಗ ಹೆಗ್ಗಣ್ಣು, ಹೆಬ್ಬಾಯಿ, ಹೇರೊಡಲು ನುಡಿಗಳನ್ನು ಪ್ರಯೋಗಿಸಿದ್ದಾರೆ.
‘ಬಂದುದಯ್
ಹೆಗ್ಗಣ್ಣ ಹೆಬ್ಬಾಯ ಹೇರೊಡಲ ರಕ್ಕಸನ
ಬೀಭತ್ಸ ಛಾಯೆಯ ಭೀಮಭೀತಿ!’
ಮಿಣಿಯೇಣಿ
ಮಿಣಿಯೇಣಿ (ನಾ). ಚರ್ಮದಿಂದ ಮಾಡಿದ ಏಣಿ.
ಚಂದ್ರನಖಿಯು ಅಣ್ಣ ರಾವಣನಿಗೆ ಸೀತೆಯನ್ನು ಅಪಹರಿಸಲು ಉಪದೇಶಿಸುವಳು. ಅದನ್ನು ಕೇಳಿದ ಅವನ ಆಗಿನ ದುಷ್ಟ ಆಲೋಚನೆಯನ್ನು ಚಿತ್ರಿಸುವಾಗ ಕುವೆಂಪು ಅವರು ‘ಮಿಣಿಯೇಣಿ’ ಪದವನ್ನು ಹೀಗೆ ಪ್ರಯೋಗಿಸಿದ್ದಾರೆ:
‘ಲಭಿಸಿದುದು ರಾವಣನ
ಸಹಜಕಾಮದ ಕಪಿಗೆ ರಾಜಕಾರಣ ಫಣಿಯ
ಮಿಣಿಯೇಣಿ.’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.