ADVERTISEMENT

ಕುವೆಂಪು ಪದಸೃಷ್ಟಿ: ವರ್ಣಶಿಲ್ಪರ್ಷಿ

ಜಿ.ಕೃಷ್ಣಪ್ಪ
Published 16 ಫೆಬ್ರುವರಿ 2025, 0:27 IST
Last Updated 16 ಫೆಬ್ರುವರಿ 2025, 0:27 IST
<div class="paragraphs"><p>ಕುವೆಂಪು</p></div>

ಕುವೆಂಪು

   

ವರ್ಣಶಿಲ್ಪರ್ಷಿ

ವರ್ಣಶಿಲ್ಪಿ ಎಂದರೆ ವರ್ಣಚಿತ್ರಕಾರ. ಕುವೆಂಪು ಅವರು ಮೈಸೂರಿನ ದಸರಾ ಪ್ರದರ್ಶನದಲ್ಲಿ ನಡೆದ ರೋರಿಕ್ ಚಿತ್ರಕಲಾ ಪ್ರದರ್ಶನಕ್ಕೆ ಹೋಗಿದ್ದರು. ಆ ಅದ್ಭುತ ವರ್ಣಚಿತ್ರಗಳನ್ನು ನೋಡಲು ಪ್ರತಿದಿನ ಹೋಗಿ ಆ ರಸ ಸೃಷ್ಟಿಗಳಲ್ಲಿ ಲೀನವಾಗಿ ಹೋಗುತ್ತಿದ್ದರು. ಆ ಆನಂದವನ್ನು ‘ನಿನ್ನ ಹೃದಯ ಸಂದರ್ಶನಕ್ಕೆ. ರಸಕಲಾ ಸಂಕೇತದ ಆ ದಿವ್ಯ ದರ್ಶನಕ್ಕೆ ಸಮಹೃದಯನಾದ ನಾನು ಬರುತ್ತಿದ್ದೆ’ ಎಂದು ಒಂದು ವರ್ಷದ ನಂತರ ನೆನೆದುಕೊಳ್ಳುತ್ತ ಕವನ ರಚಿಸಿದರು.

ರಷ್ಯಾದ ನಿಕೋಲಾಸ್ ರೋರಿಕ್ ಹಿಮಾಲಯ ವಾಸಿಯಾಗಿದ್ದು, ಅವರು ಕಂಡ ಆ ಪರ್ವತದ ಭೂಮಾನುಭೂತಿಯನ್ನು ವರ್ಣಗಳಲ್ಲಿ ಕಡೆದಿಟ್ಟಿದ್ದರು. ಅದನ್ನು ನೋಡಿದ ಕುವೆಂಪು ‘ಆಹ, ಏನು ಕಲೆ ನಿನ್ನದಯ್: ವಿಶ್ವತಾ ಸಂಸ್ಪರ್ಶಿ, ಮೇಣ್ ಬ್ರಹ್ಮದರ್ಶಿ!’ ಎಂದು ಕಾವ್ಯ ರಚಿಸಿದರು. ಅವರಿಗೆ ರೋರಿಕ್ ಋಷಿಯಾಗಿ ಕಂಡರು. ಆ ಭಾವದಲ್ಲಿ ‘ವರ್ಣಶಿಲ್ಪರ್ಷಿ’ ಪದ ರಚಿಸಿ ಹೀಗೆ ಬಣ್ಣಿಸಿದರು :

ADVERTISEMENT

‘ಬಗೆಗೆ ಪೊತ್ತಿತೊ ನಿನ್ನ

ಅಂದಿನ ಚಿತ್ರಪ್ರದರ್ಶನದ ದರ್ಶನಂ,

ರೋರಿಕ್, ವಿದೇಶೀಯ ಹೇ ವರ್ಣಶಿಲ್ಪರ್ಷಿ!’

ಮಮತಾಫಣಿ

ಕುವೆಂಪು ಅವರು ‘ಮಮತಾಫಣಿ’ ಪದ ರಚಿಸಿ ನನ್ನದು ಎಂಬ ಅಹಂ, ಸ್ವಾರ್ಥಪರತೆಯನ್ನು ಸರ್ಪಕ್ಕೆ ಹೋಲಿಸಿದ್ದಾರೆ. ಅವರು ಅಹಂಕಾರ ಅಳಿಯುವ ತನಕ ತುಳಿ ಎಂದು ಶ್ರೀಗುರು ಚರಣವನ್ನು ಧ್ಯಾನಿಸಿದ್ದಾರೆ.

ಗೋವಿಂದನು ಕಾಳಿಯ ಸರ್ಪವನ್ನು ತುಳಿತುಳಿದು ನಾಶಮಾಡಿದ. ಹಾಗೆ ಶ್ರೀಗುರುವೆ ನನ್ನನ್ನು ತುಳಿ, ನನ್ನಲ್ಲಿರುವಷ್ಟು ವಿಷ ವಾಂತಿಯಾಗಲಿ, ನನ್ನ ಅಂತಃಕರಣದಲ್ಲಿಯ ನನ್ನದು ಎಂಬ ಅಭಿಮಾನದ ಸ್ವಾರ್ಥಪರವಾದ ಮಮತೆಯ ಸರ್ಪ ನಾಶವಾಗಿ, ಅಮೃತದ ಮರಣ ಬರಲಿ ಎಂದು ಪ್ರಾರ್ಥಿಸಿದ್ದಾರೆ. ಆ ಅಮೃತ ಮರಣವೆಂದರೆ ‘ನನ್ನ ಸತ್ತದೆಲ್ಲ ಸತ್ತು/ನಿನ್ನ ಸೊತ್ತು ಉಳಿಯಲಿ’ ಎಂಬ ಅಹಂಭಾವ ರಹಿತ ಸ್ಥಿತಿ. ಆಧ್ಯಾತ್ಮದ ಉನ್ನತ ನೆಲೆ.

‘ಹೆಡೆಹೆಡೆಗಳನೆಡೆಬಿಡದೆಯೆ

ಕಾಳೀಯನ ತುಳಿದಂದದಿ

ಗೋವಿಂದನ ಚರಣ

ತನ್ನನಿತೂ ವಿಷ ವಮನದಿ

ನನ್ನಂತಃಕರಣ

ಮಮತಾಫಣಿ ಲಯಹೊಂದುತೆ

ಬರಲಮೃತದ ಮರಣ!’

(ಶ್ರೀ ಗುರು ಚರಣಕೆ – ಅಗ್ನಿಹಂಸ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.