ಕೆಂಗೊಡಲಿ
ಕೆಂಗೊಡಲಿ (ನಾ). (ರಕ್ತದಿಂದ) ಕೆಂಪಾದ ಕೊಡಲಿ.ರಾಮ ಸೀತೆ ಮತ್ತು ಅವನ ಸಹೋದರರು ವಿವಾಹವಾದ ಕನ್ನೆಯರೊಡನೆ ದೊಡ್ಡ ಮೆರವಣಿಗೆಯಲ್ಲಿ ರಾಜಮಾರ್ಗದಲ್ಲಿ ಸಾಗುತ್ತಿದ್ದರು. ಆಗ ಅವರ ಎದುರು ಪರಶುರಾಮ ಬಂದನು. ಅವನ ಭಯಂಕರತೆಯನ್ನು ಕುವೆಂಪು ಅವರು ‘ಕೆಂಗೊಡಲಿ’ ಪದದಿಂದ ಹೀಗೆ ಬಣ್ಣಿಸಿದ್ದಾರೆ:
‘ಭೀಷ್ಮತೆವೆತ್ತು
ರಂಜಿಸಿತು ಹೆಗಲಿನೊಳ್ ಕೆಂಗೊಡಲಿ.’
ಕೌಟವಿ
ಕೌಟವಿ (ನಾ). (ಆಲಂ). ಬರಿದಾಗು; ಶೂನ್ಯವಾಗು.
ಸೀತೆಯನ್ನು ಹುಡುಕಲು ಹೊರಟ ಸಂಶೊಧನಾ ಕೋವಿದರಾದ ವಾನರರು - ಸೂರ್ಯನ ಕಿರಣಗಳ ಜೊತೆಗೂಡಿ, ಕಣ್ಣಿಗೆ ಕಾಡು ಬರಿದಾಗುವಂತೆ ತಡವಿದರು- ಎಂಬ ಚಿತ್ರಣದಲ್ಲಿ ‘ಕೌಟವಿ’ ಪದವನ್ನು ಆಲಂಕಾರಿಕವಾಗಿ ಹೀಗೆ ಪ್ರಯೋಗಿಸಿದ್ದಾರೆ:
‘ಆ ಕೀಶ
ಸಂಶೋಧನಾ ಕೋವಿದರ್! ತಡವಿದರಹಸ್ಪತಿಯ
ಕದಿರಾಳ್ಗಳಂ ಕೂಡಿ ಪಗಲನೆತ್ತೆತ್ತಲುಂ,
ಕೌಟವಿಯಾಗೆ ಕಣ್ಗಟವಿ’
ಮರುಸರೋವರ
ಮರುಸರೋವರ (ನಾ). ಬಿಸಿಲುಗುದುರೆ; ಮರೀಚಿಕೆ
ಸುಗ್ರೀವನಿಗೆ ಮಹಾವಾನರ ಮೈಂದನು ತನ್ನ ಪಡೆಯು ಮರಳುಗಾಡಿನಲ್ಲಿ ಸಿಕ್ಕು ತೊಳಲಾಡಿದ್ದನ್ನು ಹೇಳುವನು. ಅದು ಅವರಿಗೆ ಅಲ್ಲಿ ಉಂಟುಮಾಡಿದ ಬಿಸಿಲುಗುದುರೆಯನ್ನು ಕುವೆಂಪು ‘ಮರುಸರೋವರ’ ಎಂದು ಕರೆದು ಹೀಗೆ ಬಣ್ಣಿಸಿದ್ದಾರೆ:
‘ಕಣ್ ಮೋಹಿಸಿತು ಮನೋಹರಂ ಮರುಸರೋವರಂ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.