ADVERTISEMENT

ಕುವೆಂಪು ಪದ ಸೃಷ್ಟಿ: ಐಕಿಲ್‍ಸೋನೆ

ಜಿ.ಕೃಷ್ಣಪ್ಪ
Published 25 ಮೇ 2025, 0:22 IST
Last Updated 25 ಮೇ 2025, 0:22 IST
<div class="paragraphs"><p>ಕುವೆಂಪು </p></div>

ಕುವೆಂಪು

   

ಐಕಿಲ್‍ಸೋನೆ

ಐಕಿಲ್‍ಸೋನೆ (ನಾ). ಹಿಮ ವೃಷ್ಟಿ

ADVERTISEMENT

ಹೇಮಂತ ಋತುವಿನಲ್ಲಿಯ ಮಂಜಿನ ವೃಷ್ಟಿಯನ್ನು ಕುವೆಂಪು ‘ಐಕಿಲ್‍ಸೋನೆ’ ಎಂದು ಕರೆದು ಹೀಗೆ ವರ್ಣಿಸಿದ್ದಾರೆ:

ನೊರೆಯೆ ಇಬ್ಬನಿಯಾಯ್ತೊ ತಾನೆಂಬ

ಕಡಲಾಗೆ ದಟ್ಟಿತೈಕಿಲ್ ಸೋನೆ. 

ಚಿತ್ತಫಣಿ

ಚಂದ್ರನಖಿ ತನ್ನ ಕಿವಿ ಮೂಗನ್ನು ಲಕ್ಷ್ಮಣನಿಂದ ಕೆತ್ತಿಸಿಕೊಂಡು ಬಂದು ಅಣ್ಣ ರಾವಣನ ಬಳಿ ದೂರುವಳು. ಆಗ ರಾವಣನು ತಂಗಿಗೆ ನೀಡುವ ಆಶ್ವಾಸನೆಯಲ್ಲಿ, ಕುವೆಂಪು ‘ಚಿತ್ತಸರ್ಪ’ ಪದದಿಂದ ಅವನ ಮನ ಕೆರಳಿದ್ದನ್ನು ಹೀಗೆ ಚಿತ್ರಿಸಿದ್ದಾರೆ:

‘ಸೋದರಿ, ಸತ್ತನೆಂದೆ ತಿಳಿ

ಈ ನಿನ್ನ ವದನ ವಲ್ಮೀಕಮಂ ಕಿಳ್ತೆನ್ನ

ಚಿತ್ತಫಣಿಯಂ ಕೆರಳ್ಚಿದಾತನ್’

ಬಿಂಕದುರಿ

ಬಿಂಕದುರಿ (ಗು). ಸೊಕ್ಕಿನ ಉರಿ

ಉದಯ ಸಮಯದಲ್ಲಿ ಅರ್ಜುನನು ಪದ್ಮಾಸನದಲ್ಲಿ ಧ್ಯಾನಸ್ಥನಾಗಿ ಕುಳಿತಿದ್ದನು. ಆ ಮನ್ಮಥ ಸಮನಾದ ಪುರುಷ ಮೂರ್ತಿಯನ್ನು ಕಂಡು ಪುರುಷ ವೇಷದ ಚಿತ್ರಾಂಗದೆಯ ಹೃದಯದಲ್ಲಿ ಪ್ರಣಯದ ಮೊದಲ ಆಕರ್ಷಣೆ ಮೊಳೆಯಿತು.

ಅವಳನ್ನು ನೋಡಿದ ಅರ್ಜುನನು ‘ಎಲೆ ತರುಣ ವೀರನೇ ನೀನು ಯಾರು?’ ಎಂದು ಪ್ರಶ್ನಿಸಿ, ‘ನುಡಿ, ಅಂಜದಿರು’ ಎಂದು ಹೇಳುವನು. ‘ಅಂಜದಿರು’ ಎಂಬ ನುಡಿ ಕಿಡಿಸೂಸಲು ಭುಗಿಲ್ಲೆಂದ ಬಿಂಕದುರಿ ಆ ವೀರನಾರಿಯ ಮನದಲ್ಲಿ ಹೊರಹೊಮ್ಮಿತು.

ಅವಳಲ್ಲಿದ್ದ ಜಂಬ, ಸೊಕ್ಕು ಜ್ವಲಿಸಿದುದನ್ನು ಕುವೆಂಪು ಅವರು ‘ಬಿಂಕದುರಿ’ ಪದರೂಪಿಸಿ ಅಭಿವ್ಯಕ್ತಿಸಿದ್ದಾರೆ.

‘... ನುಡಿ, ಅಂಜದಿರು; ನಾವು ಮುನಿವ ಮುನಿವರರಲ್ಲ!’

‘ಅಂಜದಿರು’ ಎಂಬ ನುಡಿ ಕಿಡಿಸೂಸೆ, ಬಿಂಕದುರಿ

ಮಸಗಿದುದು ಭುಗಿಲೆಂದು ವೀರ ನಾರಿಯ ಮನದಿ.’

ತೀಕ್ಷ್ಣದಕ್ಷಿ

ತೀಕ್ಷ್ಣದಕ್ಷಿ (ನಾ). ತೀವ್ರ ದೃಷ್ಟಿಯ ಕಣ್ಣು

ಚಿತ್ರಕೂಟದಲ್ಲಿ ರಾಮಸೀತೆ ಲಕ್ಷ್ಮಣರು ಸುತ್ತಾಡುತ್ತಿರುವಾಗ ಉಗ್ರಧ್ವನಿ ಕೇಳುವರು. ರಾಮನ ಸೂಚನೆಯಂತೆ ಲಕ್ಷ್ಮಣನು ಒಂದು ಮರ ಹತ್ತಿ ಅದರ ಶಿರದ ಗೋಪುರದಲ್ಲಿ ನಿಂತು ನೋಡುವನು. ಆ ನೋಟವನ್ನು ಕುವೆಂಪು ಗರುಡನ ಚುರುಕಾದ ಕಣ್ಣಿನ ಉಪಮಾನದಲ್ಲಿ ಹೀಗೆ ಬಣ್ಣಿಸಿರುವರು:

‘ಪಕ್ಷಿರಾಜನ ತೀಕ್ಷ್ಣದಕ್ಷಿಯೋಲ್

ನೋಡಿದನು ಕಣ್ಣಟ್ಟಿ ದಿಗ್ದೇಶಮಂ’ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.