ಕುವೆಂಪು
ಗುದ್ದುಮಳಿ
ಗುದ್ದುಮಳಿ (ನಾ). ತುಮುಲ
ರಾಮಚಂದ್ರನು ಸುಗ್ರೀವ ಮತ್ತು ವಿಭೀಷಣರ ಸಹಾಯದಿಂದ ರಾವಣನ ಮೇಲೆ ವಿಜಯ ಸಾಧಿಸುವನು. ಅನಂತರ ಅವನ ಆಜ್ಞೆಯಂತೆ ವಿಭೀಷಣನು ಅಲಂಕೃತಳಾದ ಸೀತೆಯನ್ನು ಒಬ್ಬಳೇ ರಾಮನ ಬಳಿಗೆ ಹೋಗಲು ತಿಳಿಸುವನು. ಆ ಮಾತೆಯ ದರ್ಶನಾಕಾಂಕ್ಷಿಗಳಾಗಿ ವಾನರರು ಮುನ್ನುಗ್ಗುವರು. ಆಗ ವಿಭೀಷಣನ ಅಪ್ಪಣೆಯಂತೆ ಬೆತ್ತ ಹಿಡಿದವರು ಆ ಸೈನಿಕರನ್ನು ಹಿಂದಕ್ಕೆ ತಳ್ಳುವರು.
ಆಗ ಆದ ಗದ್ದಲ ತುಮುಲವನ್ನು ಕುವೆಂಪು ಅವರು ‘ಗುದ್ದುಮಳಿ’ ಎಂಬ ನುಡಿ ರೂಪಿಸಿ ಗದ್ದಲ ವಾತಾವರಣವನ್ನು ಹಿಡಿದಿಟ್ಟಿದ್ದಾರೆ. ಅದು ಮಳೆ ಗಾಳಿ ಮಸೆವ ಸಮುದ್ರದ ಸದ್ದಾಗಿತ್ತು ಎಂದು ರೂಪಕದಲ್ಲಿ ಚಿತ್ರಿಸಿದ್ದಾರೆ.
ಗಾಳೀ ಮಸೆವಂಬುಧಿಯ
ಸದ್ದೆದ್ದುದೈ ಗುದ್ದುಮಳಿ ಗದ್ದಲಂ.
ಬೆಂಕೆವೆಟ್ಟು
ಬೆಂಕೆವೆಟ್ಟು (ನಾ). ಕುದಿಯುತ್ತಿರುವ ಲಾವಾರಸವನ್ನು ಉಗುಳುವ ಬೆಟ್ಟ; ಅಗ್ನಿ ಪರ್ವತ.
[ಬೆಂಕೆ + ಬೆಟ್ಟು (<ಬೆಟ್ಟ)]
ರಾವಣನನ್ನು ಸಂಹರಿಸಲು ನಿಶ್ಚಯಿಸಿದ ರಾಮಚಂದ್ರನು ಕೋದಂಡವನ್ನು ಹಿಡಿದನು. ಬೆನ್ನಿನ ಬತ್ತಳಿಕೆಗೆ ಕೈ ಹಾಕಿದನು. ಆಗ ಉಂಟಾದ ಪ್ರಕೃತಿಯ ವಿಕೋಪವನ್ನು ಕವಿ ಚಿತ್ರಿಸುತ್ತ ‘ಅಗ್ನಿ ಪರ್ವತ’ವನ್ನು ‘ಬೆಂಕೆವೆಟ್ಟು’ ಎಂಬ ಹೊಸ ಕನ್ನಡ ಪದದಿಂದ ಬಣ್ಣಿಸಿದ್ದಾರೆ.
ಸುಯ್ದುದು ಲಯಂ
ನಡುಗೆ ಗಿರಿ ಸಂಕುಲಂ, ಕದಡಿದುವು ಕಡಲುಗಳ್.
ಬೆಂಕೆವೆಟ್ಟುಗಳೋಕರಿಸಿದುವು ಭಯಂಕರ
ಯುಗಾಂತರ ದ್ರಾವಾಗ್ನಿಯಂ.
ಮರಸುಕೂರು
ಮರಸುಕೂರು (ಕ್ರಿ). ಕಾಡಿನಲ್ಲಿ ಪ್ರಾಣಿಗಳನ್ನು ಬೇಟೆಯಾಡಲು ಮರದ ಮೇಲೆ ಕಟ್ಟಿರುವ ಮರಸಿನ ಮೇಲೆ ಕುಳಿತುಕೊಳ್ಳು.
ಮರಸು (ನಾ). 1. ಬೇಟೆಯಲ್ಲಿ ಪ್ರಾಣಿಗಳನ್ನು ಹಿಡಿಯಲು ಹೊಂಚುಹಾಕಿ ಕುಳಿತು ಕೊಳ್ಳುವುದಕ್ಕಾಗಿ ಕಟ್ಟಿರುವ ಮರೆ.
2. ಪ್ರಾಣಿಗಳನ್ನು ಹಿಡಿಯಲು ಮರೆಯಲ್ಲಿ ಅಡಗಿಕೊಂಡು ಮಾಡುವ ಬೇಟೆ; ಮರಸುಬೇಟೆ
ವಾಲಿಯನ್ನು ದ್ವಂದ್ವಯುದ್ಧಕ್ಕೆ ಕರೆಯಲು ಸುಗ್ರೀವನು ರಾಮಲಕ್ಷ್ಮಣರೊಡನೆ ಕಿಷ್ಕಿಂಧೆಗೆ ಹೋಗುವನು. ಆ ಕಾಡಿನಲ್ಲಿ ವಾಲಿಯು ಬರುವುದನ್ನು ಕಾಯುತ್ತ ರಾಮಲಕ್ಷ್ಮಣರು ಮೌನದಿಂದ ನಿಟ್ಟಿಸುತ್ತ ಕುಳಿತರು. ಅವರು ಕುಳಿತ ರೀತಿಯನ್ನು ಕುವೆಂಪು ಅವರು ತಮ್ಮ ಕಾಡಿನ ಬೇಟೆಯ ಅನುಭವದೊಡನೆ ‘ಪಳುಮರೆಯೊಳಡಿ ಪಣ್ಮರಕೆ ಮರಸುಕೂತವರಂತೆ’ ಎಂದು ಚಿತ್ರಿಸಿದ್ದಾರೆ.
ಅವರು ಕುಳಿತ ರೀತಿ ‘ಪ್ರಾಣಿಗಳನ್ನು ಹಿಡಿಯಲು ಮರೆಯಲ್ಲಿ ಅಡಗಿಕೊಂಡು ಮಾಡುವ ಬೇಟೆ’ಯಂತಿದೆ. ಅದು ಮರಸುಬೇಟೆ. ಹೀಗೆ ಕವಿಯ ಬೇಟೆಯ ಅನುಭವ ನುಡಿ ಕನ್ನಡ ಕಾವ್ಯದಲ್ಲಿ ಹೊಸತಾಗಿ ಸೇರ್ಪಡೆಯಾಗಿದೆ.
ಪಳುಮರೆಯೊಳಡಗಿ, ಪಣ್ಮರಕೆ
ಮರಸು ಕೂತವರಂತೆ, ಮೋನದಿಂದೆಳ್ಚರಿಂ
ರಾಮಾದಿಗಳ್ ನಿಟ್ಟಿಸಿರೆ ಕಾದು ಕಾತರಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.