ADVERTISEMENT

ಕ.ವೆಂ. ರಾಜಗೋಪಾಲ ಜನ್ಮ ಶತಮಾನೋತ್ಸವ: ಮೌಲ್ಯಗಳ ಪ್ರತಿರೂಪದ ಸಾರ್ಥಕ ಬದುಕು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 23:30 IST
Last Updated 13 ಡಿಸೆಂಬರ್ 2025, 23:30 IST
   

ಆಧುನಿಕ ಕನ್ನಡ ಸಾಹಿತ್ಯ, ರಂಗಭೂಮಿ ಮತ್ತು ವೈಚಾರಿಕ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿದವರು ಪ್ರೊ. ಕ.ವೆಂ. ರಾಜಗೋಪಾಲ (ಕ.ವೆಂ.). ಅವರ ಜನ್ಮ ಶತಮಾನೋತ್ಸವದ (1924-2024) ಈ ಸಂದರ್ಭವು, ನಾಡು ಕಂಡ ಅಪರೂಪದ ‘ಸೇತುಬಂಧ’ ವ್ಯಕ್ತಿತ್ವವೊಂದನ್ನು ಮರುನೆನಪಿಸಿಕೊಳ್ಳುವ, ಮರುಮೌಲ್ಯಮಾಪನ ಮಾಡುವ ಸಮಯವಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕಟ್ಟೆಪುರ ಎಂಬ ಪುಟ್ಟ ಹಳ್ಳಿಯೊಂದರಿಂದ ಬಂದು, ಬೆಂಗಳೂರಿನ ಬೌದ್ಧಿಕ ವಲಯದಲ್ಲಿ ಹೊಸ ಆಲೋಚನೆಗಳ ಕಿಡಿ ಹೊತ್ತಿಸಿದ ಕ.ವೆಂ. ಅವರ ಬದುಕು ಇಂದಿನ ಪೀಳಿಗೆಗೆ ಒಂದು ತೆರೆದ ಪುಸ್ತಕವಿದ್ದಂತೆ.

ಹಳೆಯ ಮೌಲ್ಯಗಳ ಗಟ್ಟಿತನವನ್ನು ಕಳೆದುಕೊಳ್ಳದೆ, ಹೊಸ ಕಾಲದ ವೈಚಾರಿಕತೆಯನ್ನು ಮೈಗೂಡಿಸಿಕೊಂಡಿದ್ದ ಕ.ವೆಂ., ನವೋದಯದ ಆದರ್ಶ ಮತ್ತು ನವ್ಯದ ಬೌದ್ಧಿಕತೆಗಳ ನಡುವಿನ ಕೊಂಡಿಯಾಗಿದ್ದರು. ಕೇವಲ ಬರಹಗಾರರಾಗಿ ಉಳಿಯದೆ, ಬದುಕಿನುದ್ದಕ್ಕೂ ಮಾನವೀಯ ಮೌಲ್ಯಗಳನ್ನು ಉಸಿರಾಡಿದರು.

ವೈಚಾರಿಕ ಪಲ್ಲಟ: ಬಲದಿಂದ ಎಡಕ್ಕೆ

ADVERTISEMENT

ಕ.ವೆಂ. ರಾಜಗೋಪಾಲ ಅವರ ಬದುಕಿನ ಅತ್ಯಂತ ವಿಸ್ಮಯಕಾರಿ ಮತ್ತು ಗಮನಾರ್ಹ ಸಂಗತಿಯೆಂದರೆ ಅವರಲ್ಲಾದ ವೈಚಾರಿಕ ಬದಲಾವಣೆ. ಸ್ವಾತಂತ್ರ‍್ಯ ಪೂರ್ವದಲ್ಲಿ ದೇಶಭಕ್ತಿಯ ಕಿಚ್ಚಿನೊಂದಿಗೆ ಬದುಕನ್ನು ಆರಂಭಿಸಿದ ಅವರು, ಯೌವನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಚಾರಕರಾಗಿದ್ದರು. ಆದರೆ, ಗಾಂಧೀಜಿ ಹತ್ಯೆಯ ನಂತರದ ಪ್ರಕ್ಷುಬ್ಧ ದಿನಗಳಲ್ಲಿ ಅವರು ಸೆರೆಮನೆವಾಸವನ್ನೂ ಅನುಭವಿಸಬೇಕಾಯಿತು. ಆ ಜೈಲಿನ ಏಕಾಂತ ಮತ್ತು ಅಲ್ಲಿನ ಆಳವಾದ ಓದು ಅವರ ಅಂತರಂಗವನ್ನು ಕಲಕಿತು, ಹೊಸದೊಂದು ಜಗತ್ತಿನ ಕಡೆಗೆ ಅವರ ಕಣ್ಣು ತೆರೆಸಿತು.

ಜೈಲುವಾಸದ ಅನಂತರದ ದಿನಗಳಲ್ಲಿ ಕ.ವೆಂ. ಸಂಪೂರ್ಣವಾಗಿ ಬದಲಾದರು. ಬಲಪಂಥೀಯ ಒಲವಿನಿಂದ ಹೊರಬಂದು, ಶೋಷಿತರ ಪರ ದನಿಯೆತ್ತುವ ಮಾಕ್ಸ್‌ವಾದಿ (ಎಡಪಂಥೀಯ) ಚಿಂತನೆಯತ್ತ ಹೊರಳಿದರು. ಆದರೆ ಅವರು ಎಂದಿಗೂ ಸಿದ್ಧಾಂತಗಳ ದಾಸರಾಗಲಿಲ್ಲ; ಸಿದ್ಧಾಂತಕ್ಕಿಂತ ಮನುಷ್ಯತ್ವ ದೊಡ್ಡದು ಎಂಬುದನ್ನು ತಮ್ಮ ನಡವಳಿಕೆಯಲ್ಲಿ ತೋರಿಸಿಕೊಟ್ಟರು. ಒಮ್ಮೆ ಗೋಕರ್ಣ ಪ್ರವಾಸದ ವೇಳೆ, ಅಲ್ಲಿನ ದೇವಾಲಯದಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದಾಗ, ಅಲ್ಲಿನ ಅರ್ಚಕರೊಂದಿಗೆ ವಾದಕ್ಕಿಳಿದು, ಆ ವಿದ್ಯಾರ್ಥಿಗಳ ಹಕ್ಕನ್ನು ಪ್ರತಿಪಾದಿಸಿ ಒಳಗೆ ಕರೆದೊಯ್ದ ಘಟನೆ ಅವರಲ್ಲಿನ ಮಾನವತಾವಾದಿ ಎಚ್ಚರಗೊಂಡಿದ್ದಕ್ಕೆ ಸಾಕ್ಷಿಯಾಗಿತ್ತು.

ಕ.ವೆಂ. ಅವರ ಸಾಹಿತ್ಯ ಕೃಷಿ ವೈವಿಧ್ಯಮಯವಾದುದು. ಗೋಪಾಲಕೃಷ್ಣ ಅಡಿಗರ ನೇತೃತ್ವದ ನವ್ಯ ಸಾಹಿತ್ಯ ಚಳವಳಿ ಉತ್ತುಂಗದಲ್ಲಿದ್ದಾಗ, ಕ.ವೆಂ. ಅವರು ‘ಅಂಜೂರ’, ‘ನದಿಯ ಮೇಲಿನ ಗಾಳಿ’ಯಂತಹ ಕವನ ಸಂಕಲನಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿದರು. ಅವರ ಕವಿತೆಗಳಲ್ಲಿ ಬೌದ್ಧಿಕ ತೀವ್ರತೆಯ ಜೊತೆಗೆ ಗ್ರಾಮೀಣ ಸಂವೇದನೆಯೂ ಬೆರೆತಿತ್ತು. ‘ಕ್ಷಾರಪಾನೀಯಂ’ ನಂತಹ ಲೇಖನಗಳ ಮೂಲಕ ಅವರು ಹಳಗನ್ನಡ ಸಾಹಿತ್ಯದ ವಿಮರ್ಶೆಯಲ್ಲೂ ತಮ್ಮ ಪಾಂಡಿತ್ಯವನ್ನು ಮೆರೆದರು. ಅವರ ಸಣ್ಣಕತೆಗಳು ಅಂದಿನ ಕಾಲದ ಮಧ್ಯಮ ವರ್ಗದ ತಲ್ಲಣಗಳನ್ನು ಮತ್ತು ಭ್ರಮನಿರಸನಗಳನ್ನು ಪರಿಣಾಮಕಾರಿಯಾಗಿ ಹಿಡಿದಿಟ್ಟಿವೆ.

ರಂಗಭೂಮಿ: ಬ್ರೆಕ್ಟ್ ಮತ್ತು ಪ್ರಯೋಗಶೀಲತೆ

ಕನ್ನಡ ರಂಗಭೂಮಿಗೆ ಕ.ವೆಂ. ಅವರ ಕೊಡುಗೆ ಅಪಾರ. ಪಾಶ್ಚಾತ್ಯ ರಂಗಭೂಮಿಯ ದಿಗ್ಗಜ ಬರ್ಟೋಲ್ಟ್ ಬ್ರೆಕ್ಟ್ ನ ‘ಎಪಿಕ್ ಥಿಯೇಟರ್’ ತಂತ್ರಗಳನ್ನು ಕನ್ನಡಕ್ಕೆ ಪರಿಚಯಿಸಿದವರಲ್ಲಿ ಇವರು ಪ್ರಮುಖರು. ‘ಅತ್ತೆಯ ಕಾಂಚಿ’ (ಬ್ರೆಕ್ಟ್ ನ ನಾಟಕದ ಅನುವಾದ) ಇದಕ್ಕೊಂದು ಉದಾಹರಣೆ. ಅವರ ‘ಕಲ್ಯಾಣದ ಕೊನೆಯ ದಿನಗಳು’ ನಾಟಕವು ಶರಣ ಚಳವಳಿಯ ಅಂತಃಸಂಘರ್ಷಗಳನ್ನು ಮತ್ತು ಬಿಜ್ಜಳನ ಆಳ್ವಿಕೆಯಲ್ಲಾದ ಪಲ್ಲಟಗಳನ್ನು ಮಾರ್ಮಿಕವಾಗಿ ಚಿತ್ರಿಸಿದೆ. ಹಾಗೆಯೇ ‘ಭಗತ್ ಸಿಂಗ್ ವಿಚಾರಣೆ’ ಮತ್ತು ‘ವಿಚಾರಣೆ’ (ಗಾಂಧಿ ಕುರಿತ) ನಾಟಕಗಳು ರಂಗಭೂಮಿಯಲ್ಲಿ ವೈಚಾರಿಕ ಸಂಚಲನ ಮೂಡಿಸಿದವು. ‘ಕನ್ನಡ ರಂಗಭೂಮಿಯ ಶೋಧದಲ್ಲಿ’ ಎಂಬ ಅವರ ಕೃತಿ ರಂಗಭೂಮಿಯ ಇತಿಹಾಸವನ್ನು ದಾಖಲಿಸುವ ಮಹತ್ವದ ಪ್ರಯತ್ನವಾಗಿದೆ.

ಕ.ವೆಂ. ಗಂಭೀರ ಸಂಶೋಧಕರೂ ಆಗಿದ್ದರು. ‘ಯಕ್ಷಗಾನವು ಬೌದ್ಧಮತದ ಮೂಲದಿಂದ ಬಂದಿರಬಹುದು’ ಎಂಬ ಅವರ ಸಂಶೋಧನಾತ್ಮಕ ವಾದವು (‘ಬೌದ್ಧ ಮತದಲ್ಲಿ ಯಕ್ಷಕಲೆ’) ವಿದ್ವಾಂಸರ ವಲಯದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿತ್ತು. ಇದು ಸಾಂಪ್ರದಾಯಿಕ ನಂಬಿಕೆಗಳಿಗೆ ವಿರುದ್ಧವಾಗಿದ್ದರೂ, ಅವರು ತಮ್ಮ ವಾದವನ್ನು ಮಂಡಿಸಿದ ರೀತಿ ಅವರ ಬೌದ್ಧಿಕ ಧೈರ್ಯವನ್ನು ತೋರಿಸುತ್ತದೆ. ಹಾಗೆಯೇ ‘ಒಕ್ಕಲಿಗರ ಆಚರಣೆಗಳು’ಮತ್ತು ‘ಗಂಗರ ಇತಿಹಾಸ’ದ ಕುರಿತಾದ ಅವರ ಅಧ್ಯಯನಗಳು ಸಮಾಜಶಾಸ್ತ್ರೀಯ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿವೆ.

ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನ ಪ್ರಾಂಶುಪಾಲರಾಗಿ ಮತ್ತು ನಂತರ ಬೆಂಗಳೂರು ವಿಶ್ವವಿದ್ಯಾಲಯದ ನೃತ್ಯ, ನಾಟಕ ಮತ್ತು ಸಂಗೀತ ವಿಭಾಗದ ನಿರ್ದೇಶಕರಾಗಿ ಕೆಲಸ ಮಾಡಿದರು. ಅವರು ವಿದ್ಯಾರ್ಥಿಗಳ ಪಾಲಿಗೆ ಕೇವಲ ಮೇಷ್ಟ್ರಾಗಿರದೆ ಮಾರ್ಗದರ್ಶಕರಾಗಿದ್ದರು. ಕೆ.ವಿ ನಾರಾಯಣ, ಎಚ್.ಎಸ್. ರಾಘವೇಂದ್ರರಾವ್, ಸಿ. ವೀರಣ್ಣ, ಚಿ. ಶ್ರೀನಿವಾಸ ರಾಜು ಮುಂತಾದವರಿಗೆ ಮೊದಲು ಅಭಿನಯಕ್ಕೆ ಬಣ್ಣ ಅಚ್ಚಿದರು. ಟಿ.ಪಿ. ಕೈಲಾಸಂ ಅವರ ‘ಪರ್ಪಸ್‌’ ನಾಟಕದ ಪ್ರತಿಯನ್ನು ನಾಶವಾಗದಂತೆ ಕಾಪಾಡಿ, ಅದನ್ನು ಮುಂದಿನ ಪೀಳಿಗೆಗೆ ಉಳಿಸಿಕೊಟ್ಟ ಶ್ರೇಯಸ್ಸು ಇವರದ್ದು.

ಅವರ ಸರಳತೆ ಎಂಥವರನ್ನೂ ಬೆರಗುಗೊಳಿಸುವಂತಿತ್ತು. ಹೊರಗಿನ ಆಡಂಬರಕ್ಕೆ ಜೋತುಬೀಳದ ಅವರು, ಸ್ವತಃ ಟೈಲರಿಂಗ್ ಕಲಿತಿದ್ದರು ಮತ್ತು ರಂಗಭೂಮಿಗೆ ಬೇಕಾದ ಬಟ್ಟೆಗಳನ್ನು ತಾವೇ ಹೊಲಿದುಕೊಳ್ಳುತ್ತಿದ್ದರು. ತರಗತಿಯಲ್ಲಿ ಅಶಿಸ್ತಿನಿಂದ ವರ್ತಿಸುತ್ತಿದ್ದ ವಿದ್ಯಾರ್ಥಿಗಳನ್ನು ಪ್ರೀತಿಯಿಂದಲೇ ತಿದ್ದುತ್ತಿದ್ದರು. ಅಷ್ಟೇ ಅಲ್ಲ, ಆರ್ಥಿಕವಾಗಿ ಕಷ್ಟದಲ್ಲಿದ್ದ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ತಾವೇ ಶುಲ್ಕ ಕಟ್ಟಿ ಓದಿಸಿದ ಉದಾಹರಣೆಗಳೂ ಇವೆ.

ಅಪ್ಪಟ ಜಾತ್ಯತೀತ ಬದುಕು

ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದರೂ, ಕ.ವೆಂ. ಅವರು ಜಾತಿ-ಮತಗಳ ಸಂಕೋಲೆಯನ್ನು ಕಳಚಿ ಹಾಕಿ ಬದುಕಿದರು. ದಲಿತ ಕವಿ ಸಿದ್ಧಲಿಂಗಯ್ಯನವರಿಗೆ ತಮ್ಮ ಕೆಂಗೇರಿಯ ಮನೆಯನ್ನು ಬಾಡಿಗೆಗೆ ನೀಡಿ, ಅವರಿಂದ ಬಾಡಿಗೆ ಹಣವನ್ನೂ ಪಡೆಯದೆ, ಅವರ ಸಾಹಿತ್ಯ ಕೃಷಿಗೆ ಬೆನ್ನೆಲುಬಾಗಿ ನಿಂತರು. ತಮ್ಮ ಮಗಳು ಅಂತರ್ಜಾತಿ ವಿವಾಹವಾಗಲು ನಿರ್ಧರಿಸಿದಾಗ, ಅದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುವ ಮೂಲಕ, ತಾವು ನಂಬಿದ ಜಾತ್ಯತೀತ ತತ್ವವನ್ನು ತಮ್ಮ ಬದುಕಿನಲ್ಲಿ ಪಾಲಿಸಿ ತೋರಿಸಿದರು. ತಮ್ಮ ಪತ್ನಿಯೊಂದಿಗಿನ ಭಿನ್ನಾಭಿಪ್ರಾಯವನ್ನೂ, ‘ನನಗೆ ನೀತಿ ಮುಖ್ಯ, ಅವಳಿಗೆ ರೀತಿ (ಸಂಪ್ರದಾಯ) ಮುಖ್ಯ’ ಎಂದು ತಾತ್ವಿಕವಾಗಿ ವಿಶ್ಲೇಷಿಸುತ್ತಿದ್ದ ಅವರ ಪ್ರಬುದ್ಧತೆ ಅಸಾಮಾನ್ಯವಾದುದು.

ಶತಮಾನೋತ್ಸವದ ಈ ಸಂದರ್ಭದಲ್ಲಿ, ಪ್ರಚಾರದ ಹಪಾಹಪಿಯಿಲ್ಲದೆ, ಅಧಿಕಾರದ ಆಸೆಯಿಲ್ಲದೆ, ನಂಬಿದ ಮೌಲ್ಯಗಳಿಗಾಗಿ ನಿಷ್ಠುರವಾಗಿ ಬದುಕಿದ ಕ.ವೆಂ. ರಾಜಗೋಪಾಲ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಸಾಂಸ್ಕೃತಿಕ ಕರ್ತವ್ಯವಾಗಿದೆ. ಅವರ ಬದುಕು ಇಂದಿನ ಪೀಳಿಗೆಗೆ ‘ಮಾನವೀಯತೆ’ಯ ಪಾಠಶಾಲೆಯಂತಿದೆ.

ಇವರ ಶತಮಾನೋತ್ಸವನ್ನು ಕರ್ನಾಟಕ ಸರ್ಕಾರ ತನ್ನ ನಾಟಕ ಅಕಾಡೆಮಿಯ ಮತ್ತು ಕ.ವೆಂ ಜನ್ಮಶತಮಾನೋತ್ಸವ ಸಮಿತಿ ವರ್ಷ ಪೂರ್ತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅರ್ಥಪೂರ್ಣ. ಇದು ಅವರ ಸಾಂಸ್ಕೃತಿಕ ಕಲಾವಂತಿಕೆಗೆ ನೀಡಿದ ಮನ್ನಣೆ. ಈ ಸಂದರ್ಭದಲ್ಲಿ ಅವರ ಸಾಹಿತ್ಯ ಮತ್ತು ಚಿಂತನೆಗಳನ್ನು ಮುಂದಿನ ತಲೆಮಾರಿಗೆ ದಾಟಿಸುವುದು ಅವರಿಗೆ ಸಲ್ಲಿಸಬಹುದಾದ ನಿಜವಾದ ಗೌರವವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.