ADVERTISEMENT

ಲಹರಿ: ಮುಗಿಯದ ಪುಸ್ತಕ ಪ್ರೀತಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2024, 0:24 IST
Last Updated 15 ಆಗಸ್ಟ್ 2024, 0:24 IST
<div class="paragraphs"><p>ಪುಸ್ತಕ</p></div>

ಪುಸ್ತಕ

   

ಈ ಬೆಂಗಳೂರಿನ ಜೀವನದಲ್ಲಿ ಯಾವಾಗಲೂ ಸಮಯವಿಲ್ಲ ಎಂದು ಓಡಾಡುವವರೆ ಹೆಚ್ಚು. ಈ ಧಾವಂತದ ಬದುಕಿನಲ್ಲಿ ಊಟ, ತಿಂಡಿ, ನಿದ್ದೆಗೆ ಸಮಯವಿಲ್ಲ ಎಂದು ಹಲವರು ಅವಲತ್ತುಕೊಂಡು ತಿರುಗುತ್ತಾರೆ. ಆದರೆ ಮೊನ್ನೆ ಚರ್ಚ್‌ಸ್ಟ್ರೀಟಿನಲ್ಲಿರುವ ಬುಕ್‌ವರ್ಮ್‌ ಪುಸ್ತಕ ಮಳಿಗೆಗೆ ಭೇಟಿ ನೀಡಿದ್ದೆ. ಅಲ್ಲಿಯದೊಂದು ಪ್ರಸಂಗ ನಿಮ್ಮೊಟ್ಟಿಗೆ ಹಂಚಿಕೊಳ್ಳುವೆ.

ಸೋಷಿಯಲ್‌ ಮೀಡಿಯಾದಲ್ಲಿ ಪುಸ್ತಕ ಮಳಿಗೆಯ ಬಗ್ಗೆ ಕೆಲವು ವಿಡಿಯೋ ನೋಡಿದ್ದ ನನಗೆ ಅಲ್ಲಿ ಹೋಗುವ ಆಸೆ. ಹೊರಗೆ ಜಿಟಿ ಜಿಟಿ ಮಳೆ, ಪುಸ್ತಕದ ಅಂಗಡಿಯಲ್ಲಿ ಪುಸ್ತಕದ ಘಮ. ನನಗೆ ಬೇಕಾದ ಪುಸ್ತಕ ಅಲ್ಲಿ ಎಲ್ಲಿದೆ ಎಂದು ಹುಡುಕುತ್ತಿದ್ದೆ. ಆಗ ಪುಸ್ತಕಗಳನ್ನು ನೋಡುತ್ತಾ ಒಂದಷ್ಟು ಪುಸ್ತಕಗಳನ್ನು ಕಾಲಿನ ಮೇಲೆ ಇಟ್ಟುಕೊಂಡು ಹಾಗೆ ಪುಸ್ತಕಗಳನ್ನು ಸರಿ ಮಾಡುತ್ತಿದ್ದವರನ್ನು ನೋಡಿ ‘ಸರ್‌ ಈ ಪುಸ್ತಕ ನಿಮ್ಮ ಅಂಗಡಿಯಲ್ಲಿದೆಯೇ’ ಎಂದು ಪ್ರಶ್ನಿಸಿಯೇ ಬಿಡ್ಡಿದ್ದೆ. ಅವರು ಒಮ್ಮೆ  ನನ್ನನ್ನು ನೋಡಿ ನಾನು ಇಲ್ಲಿಯವನಲ್ಲ ಎಂದರು. ನಾನು ಮಾತನಾಡದೇ ಅಲ್ಲಿಂದ ಸರಿದು ಬೇರೆಯ ಪುಸ್ತಕಗಳತ್ತ ನಡೆದೆ.

ADVERTISEMENT

ಮತ್ತೆ ಮತ್ತೆ ಅದೇ ವ್ಯಕ್ತಿಯನ್ನು ಗಮನಿಸುತ್ತಿದ್ದೆ. ಅವರು ಒಂದು ಕುರ್ಚಿಯ ಮೇಲೆ ಕುಳಿತು ಒಂದೊಂದೆ ಪುಸ್ತಕಗಳನ್ನು ಕೂಲಂಕುಷವಾಗಿ ನೋಡುತ್ತಾ ಹಾಗೆ ಕಾಲ ಮೇಲೆ ಒಂದಷ್ಟು ಪುಸ್ತಕಗಳನ್ನು ಎತ್ತಿಟ್ಟರೆ ಮತ್ತೆ ಒಂದಷ್ಟನ್ನು ಸರಿಯಾಗಿ ಪುಸ್ತಕಗಳ ಸಾಲಿನಲ್ಲಿ ಎತ್ತಿಡುತ್ತಿದ್ದರು. ಅವರು ನೋಡುತ್ತಿದ್ದ ಪುಸ್ತಕದ ಬಗ್ಗೆ ಗೊತ್ತಿದ್ದ ನನಗೆ ಸೀದಾ ಹೋಗಿ ‘ಸರ್‌ ಈ ಪುಸ್ತಕ ಹೀಗೆ’ ಅಂತಾ ಹೇಳಿ ಮಾತನ್ನೇನೋ ಪ್ರಾರಂಭಿಸಿ ನಿಂತಿದ್ದೆ. ಯಾವ ಲೇಖಕರು ಇಷ್ಟಾ, ಯಾವ ರೀತಿ ಪುಸ್ತಕವನ್ನು ಓದುತ್ತೀರಾ ಎಂದೆಲ್ಲಾ ಮಾತನಾಡುತ್ತಾ ಹರಟೆ ಹೊಡೆಯುವಾಗ, ನನಗೆ ಬೇಕಾದ ಪುಸ್ತಕವನ್ನೂ ಅವರೇ ತಿಳಿಸಿಕೊಟ್ಟಿದ್ದರು. ನನಗೋ ಪುಸ್ತಕ ಸಿಕ್ಕ ಖುಷಿ.

ಆಗ ಅವರ ಗೆಳೆಯ ಬಂದು ಅವರನ್ನು ಮಾತನಾಡಿಸಿ ‘ಹೊರಡೋದಾ’ ಎಂದು ಕೇಳೊದಕ್ಕೂ ಸರಿಯಾಗಿತ್ತು. ಅವರು ಒಂದು ಪ್ರಶ್ನೆಯನ್ನು ನನ್ನಲ್ಲಿ ಕೇಳುತ್ತಿದ್ರು  ಈ ಕನ್ನಡಕವನ್ನು ನೋಡಿದ್ರೆ ಗೊತ್ತಾಗಲ್ವಾ ಅಂತಾ ಸಣ್ಣ ನಗುವನ್ನು ನೀಡಿ ಸುಮ್ಮನಾದ್ರು. ಈಗಾಗಲೇ ಅವರು ಪುಸ್ತಕವನ್ನು ಓದುತ್ತಾರೆ ಎಂದು ತಿಳಿದಿದ್ದೆ. ಹಾಗೆ ಮಾತನಾಡುತ್ತಾ ಅವರ ಬಗ್ಗೆ ಕೇಳಿದೆ ಅಲ್ಲೇ ಇದ್ದ ಅವರ ಗೆಳೆಯ ತನ್ನ ಗೆಳೆಯನ ಪುಸ್ತಕದ ‍ಪ್ರೇಮವನ್ನು ನಮ್ಮ ಮುಂದೆ ಹಾಗೆ ತೆರೆದಿಟ್ಟರು.

ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿ ಒಂದು ಅಥವಾ ಎರಡು ಸಾವಿರದಷ್ಟು ಹಣವನ್ನು ವ್ಯಯಿಸಿ ಪುಸ್ತಕವನ್ನು ಕೊಂಡುಹೋಗುತ್ತಾರೆ. ಇದು ಪ್ರತೀ ತಿಂಗಳು ನಡೆಯುವ ಘಟನೆ. ನಿವೃತ್ತಿಯ ನಂತರ ಮನೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸಕ್ಕೆ ಮತ್ತಷ್ಟು ಖರೀದಿಸುತ್ತಾರೆ. ಆದರೆ ಇವರ ಪತ್ನಿ ಪುಸ್ತಕಗಳನ್ನು ತೆಗೆದುಕೊಂಡು ಹೋದಾಗ ಮತ್ತೆ ಯಾಕೆ ಪುಸ್ತಕಗಳನ್ನು ತಂದ್ರಿ ಅಂತ ಪ್ರತೀ ಬಾರಿ ಕೇಳುತ್ತಾಳೆ ಎಂದು ಪುಸ್ತಕವನ್ನು ಪತ್ನಿಗೆ ತಿಳಿಯದಂತೆ ಮನೆಗೆ ಸಾಗಿಸುವ ಇವರು ಪುಸ್ತಕ ಪ್ರೀತಿಯನ್ನು ಮೆರೆಯುತ್ತಾರೆ.  ಓದಲು ಸಮಯವಿಲ್ಲ ಎಂದು ಸಬೂಬು ಹೇಳುವ ನಮಗೆ ಇಂಥವರ ಭೇಟಿ ಆಗಾಗ ಆಗುತ್ತಿರಬೇಕು ಎಂದೆನಿಸಿತು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.