ADVERTISEMENT

ಹಾಡಿಗಳ ಜೇನು ನುಡಿ ಪಠ್ಯವಾಗಿ...

ಗಣೇಶ ಅಮಿನಗಡ
Published 23 ನವೆಂಬರ್ 2019, 9:35 IST
Last Updated 23 ನವೆಂಬರ್ 2019, 9:35 IST
ಜೇನು ನುಡಿ ಪಠ್ಯ ರಚನೆಯಲ್ಲಿ ತೊಡಗಿರುವ ಜೇನು ಕುರುಬ ಸಮುದಾಯದದವರು
ಜೇನು ನುಡಿ ಪಠ್ಯ ರಚನೆಯಲ್ಲಿ ತೊಡಗಿರುವ ಜೇನು ಕುರುಬ ಸಮುದಾಯದದವರು   

ಶಾಲೆಗು ಹೋಗೊ ಬಾನೆ
ಅದು ನಂಗ ಶಾಲೆ ಕಣೆ
ಅಕ್ಷರ ಕಲಿ ಬಾನೆ
ನಂಗಲು ಭಾಷೆಲು ಕಲಿನೆ...

ಹೀಗೆ ಜೇನು ಕುರುಬರ ಮಕ್ಕಳನ್ನು ಶಾಲೆಗೆ ಸೆಳೆಯಲು, ಅವರಿಗೆ ಕಲಿಸಲು ಅವರದೇ ಭಾಷೆಯಲ್ಲಿ, ಅವರ ಸಮುದಾಯದವರೇ ರಚಿಸಿದ ಹಾಡುಗಳು ಪಠ್ಯವಾಗಲಿವೆ. ನಿಜ, ಲಿಪಿ ಇಲ್ಲದ, ಅಳಿವಿನ ಅಂಚಿನಲ್ಲಿರುವ ಜೇನು ನುಡಿಯನ್ನು ಉಳಿಸಲು ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮುಂದಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಬುಡಕಟ್ಟು ಜನಾಂಗದ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬುಡಕಟ್ಟು ಸಂಶೋಧನಾ ಸಂಸ್ಥೆ ಯೋಜನೆಯೊಂದನ್ನು ರೂಪಿಸಿದ್ದು, ನಲಿ–ಕಲಿ ರೂಪದಲ್ಲಿ ಪಠ್ಯವಾಗಿ ಬರುವ ಶೈಕ್ಷಣಿಕ ವರ್ಷದಿಂದ ಬರಲಿದೆ.

ಇದರ ಹಿಂದೆ ಎರಡು ಉದ್ದೇಶಗಳಿವೆ. ಒಂದು– ಆಡುಮಾತಿನಲ್ಲಿರುವ ಜೇನು ಕುರುಬರ ಭಾಷೆಯನ್ನು ಮುಂದಿನ ತಲೆಮಾರಿಗೆ ಉಳಿಸಲು ಸಾಹಿತ್ಯಿಕ ರೂಪ ಕೊಡಬೇಕು. ಇದಕ್ಕಾಗಿ ಪಠ್ಯವಾಗಿ ಅಳವಡಿಸುವುದು, ಇನ್ನೊಂದು; ಮಕ್ಕಳ ಪರಿಸರದ ಭಾಷೆಯಲ್ಲೇ ಕಲಿಕೆಯನ್ನು ಕಟ್ಟಿಕೊಡುವುದು. ಇದಕ್ಕಾಗಿ ಜೇನು ನುಡಿಯ ಹಾಡು, ನುಡಿಗಟ್ಟು ಮೊದಲಾದವುಗಳನ್ನು ಪಠ್ಯವಾಗಿ ಕೊಡುವುದು. ಜತೆಗೆ, ಕನ್ನಡವನ್ನು ಕಲಿಸುವಂತಾಗಬೇಕು. ಅಂದರೆ ಶೇ 50ರಷ್ಟು ಜೇನು ನುಡಿ, ಶೇ 50ರಷ್ಟು ಕನ್ನಡ ಕಲಿಸುವುದು. ಇದರಿಂದ ಭಾಷಾ ತೊಡಕನ್ನು ಶಾಲೆಗೆ ತೆರಳುವ ಜೇನು ಕುರುಬ ಚಿಣ್ಣರು ಮೀರಲಿದ್ದಾರೆ.

ADVERTISEMENT
ಕಮ್ಮಟದಲ್ಲಿ ಜೇನುಕುರುಬರ ಹಾಡುಗಳನ್ನು ಹಾಡುತ್ತಿರುವ ಜೇನು ಕುರುಬ ಸಮುದಾಯದದವರು

ಸಮಸ್ಯೆ ಏನೆಂದರೆ, ಹಾಡಿಯಲ್ಲಿದ್ದಾಗ ಜೇನು ನುಡಿಯಲ್ಲಿ ಮಾತನಾಡುವ ಮಕ್ಕಳು, ಶಾಲೆಗೆ ಪ್ರವೇಶ ಪಡೆದ ಕೂಡಲೇ ಕನ್ನಡ ಕಲಿಯಬೇಕು. ಇದರಿಂದ ಸಮಸ್ಯೆಯಾಗಿ ಶಾಲೆ ತೊರೆಯುವವರೇ ಹೆಚ್ಚು. ಜತೆಗೆ, ಬಡತನ, ಅರಿವಿನ ಕೊರತೆ, ವಲಸೆ, ಶಿಕ್ಷಣ ಪಡೆಯಲು ಪೂರಕ ವಾತಾವರಣ ಇಲ್ಲದಿರುವುದು, ಗಣಿತ, ವಿಜ್ಞಾನದಂಥ ವಿಷಯ ಕಂಡು ಭಯಗೊಂಡು ಶಾಲೆ ತೊರೆಯುವ ಮಕ್ಕಳೇ ಹೆಚ್ಚು. ಹೀಗೆ ಶಾಲೆ ಬಿಡುವ ಮಕ್ಕಳನ್ನು ಹಿಡಿದಿಡಲು ಅವರ ಭಾಷೆಯಲ್ಲಿಯೇ ಕಲಿಸಲು ಬಡುಕಟ್ಟು ಸಂಶೋಧನಾ ಸಂಸ್ಥೆ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಕುವೆಂಪುನಗರದಲ್ಲಿರುವ ಸಂಶೋಧನಾ ಸಂಸ್ಥೆಯಲ್ಲಿ ಈಗಾಗಲೇ ಸಭೆ, ಕಮ್ಮಟಗಳು ನಡೆದಿವೆ.

ಒಂದನೇ ತರಗತಿಯಲ್ಲಿ ವರ್ಣಮಾಲೆ, ಕಾಗುಣಿತ ಕಲಿಸುವುದು, ಎರಡನೇ ತರಗತಿಯಲ್ಲಿ ಮುಂದುವರಿದ ಕಾಗುಣಿತ ಕಲಿಕ, ಒತ್ತಕ್ಷರ, ಗುಣಿತಾಕ್ಷರಗಳನ್ನು ಕಲಿಸುವ ಉದ್ದೇಶವಿದೆ. ಇದಕ್ಕಾಗಿ ಆಲಿಸುವುದು, ಮಾತನಾಡುವುದು, ಓದುವುದು ಹಾಗೂ ಬರೆಯುವುದು ಎನ್ನುವ ಸೂತ್ರಗಳನ್ನು ಅಳವಡಿಸಲಾಗುವುದು. ಆಲಿಸುವುದರಲ್ಲಿ ಹಾಡು, ಕಥೆ, ಸಂಭಾಷಣೆ ಒಳಗೊಂಡಿದ್ದರೆ ಮಾತನಾಡುವುದರಲ್ಲಿ ಜೇನು ನುಡಿಯೊಂದಿಗೆ ಕನ್ನಡ ಮಾತನಾಡುವುದನ್ನು ಅಭ್ಯಾಸ ಮಾಡಿಸಲಾಗುವುದು. ಏಕೆಂದರೆ, ‘ಹಾಡಿಯಲ್ಲಿ ನಮ್ಮದೇ ಭಾಷೆಯಲ್ಲಿ ಮಾತಾಡ್ತೇವೆ. ಹೀಗಾಗಿ ಶೇ ಹತ್ತರಷ್ಟೂ ಕನ್ನಡ ಗೊತ್ತಿರಲ್ಲ. ಇದರಿಂದ ಐದನೇ ತರಗತಿಯಲ್ಲಿದ್ದರೂ ನಮ್ಮ ಮಕ್ಕಳಿಗೆ ಕನ್ನಡ ಓದಲು ಬರುವುದಿಲ್ಲ’ ಎನ್ನುವ ವಾಸ್ತವ ಬಿಚ್ಚಿಡುತ್ತಾರೆ ಕಮ್ಮಟದಲ್ಲಿ ಭಾಗವಹಿಸಿರುವ ಪಿರಿಯಾಪಟ್ಟಣ ತಾಲ್ಲೂಕಿನ ಮರಳಕಟ್ಟೆ ಹಾಡಿಯ ಮಧುಕುಮಾರ್.

‘ವಲಸೆ ಕಾರ್ಮಿಕರಾಗಿರುವ ಜೇನು ಕುರುಬರು ತಮ್ಮೊಂದಿಗೆ ಮಕ್ಕಳನ್ನೂ ಕರೆದೊಯ್ಯುತ್ತಾರೆ. ಹೀಗಾಗಿ ಶಾಲೆ ಬಿಡುವ ಮಕ್ಕಳ ಮನವೊಲಿಸಿ ಶಾಲೆಗೆ ಕರೆತರುವುದೇ ಸಾಹಸ. ಒತ್ತಾಯದಿಂದ ಕೂರಿಸಿ, ಕನ್ನಡ ಕಲಿಸುವಾಗ ಅಳಲು ಶುರು ಮಾಡುತ್ತವೆ. ಒಂದನೇ ತರಗತಿ ಮುಗಿಯಲು ಬಂದರೂ ಸ್ಲೇಟು ಹಿಡಿಯಲ್ಲ, ಬಳಪ ಮುಟ್ಟಲ್ಲ. ಅವರ ಪಾಡಿಗೆ ಅವರನ್ನು ಬಿಡಬೇಕು. ಇದಕ್ಕಾಗಿ ಅವರ ಭಾಷೆಯಲ್ಲೇ ಕಲಿಸಲು ಆರಂಭಿಸಿದರೆ ಖುಷಿಯಾಗಿ ಕಲಿಯುತ್ತಾರೆ‘ ಎನ್ನುವ ಅನುಭವ ಎಚ್‌.ಡಿ.ಕೋಟೆ ತಾಲ್ಲೂಕಿನ ಬಸವನಗಿರಿ ಹಾಡಿ ಆಶ್ರಮಶಾಲೆಯ ಶಿಕ್ಷಕ ಕುಮಾರ್ ಅವರದು.

ಪ್ರಾಥಮಿಕ ಹಂತದ ಶಿಕ್ಷಣ ಸರಿಯಾಗಿ ಸಿಗಬೇಕು. ಹತ್ತನೇ ತರಗತಿಯಲ್ಲಿದ್ದಾಗಲೂ ಮಗ್ಗಿ ಹೇಳಲು ಬರುತ್ತಿರಲಿಲ್ಲ ಎನ್ನುವ ನೋವು ಕಮ್ಮಟದಲ್ಲಿರುವ ವಿನು ಅವರದು.

ಪಿರಿಯಾಪಟ್ಟಣ ತಾಲ್ಲೂಕಿನ ರಾಣಿಗೇಲ್‌ ಹಾಡಿಯ ಮುತ್ತು ಅವರು, ‘ಆಗ ಕುರುಬ ಅಂದ್ರೆ ಬೇಸರ ಆಗ್ತಿತ್ತು. ಈಗ ಎಲ್ಲರ ಇನಿಷಿಯಲ್‌ ಜೆ.ಬಿ ಅಂತಲೇ ಶುರುವಾಗುತ್ತದೆ. ಜೆ.ಬಿ ಅಂದರೆ ಜೇನು ಕುರುಬ ಅಂತ. ಹಾಗಂದ್ರೆ ಹೆಮ್ಮೆ ಆಗ್ತದೆ. ಅಂಗನವಾಡಿಗೆ ಹೋಗುವ ಅಣ್ಣನ ಮಗ ದಿವಿನನಿಗೆ ನಮ್ಮ ಭಾಷೆಯಲ್ಲೇ ಪುಸ್ತಕ ಬತ್ತದೆ, ತಗೊಂಡು ಬಾ ಅಂತ ಹೇಳಿಕಳಿಸಿದ್ದೆ. ಸಂಜೆ ಬಂದು ಅಯ್ಯ, ಪದಗಳು ಬಂದಿಲ್ಲ ಅಂದ. ಬತ್ತವೆ. ಹೋಗ್ತಾ ಇರು ಬಿಡಬೇಡ‘ ಎಂದಿದ್ದನ್ನು ಸ್ಮರಿಸಿದರು. ಹೀಗೆ ನಮ್ಮ ಮಕ್ಕಳಿಗೆ ನಮ್ಮ ಭಾಷೆಯಲ್ಲಿಯೇ ಕಲಿಸುವ ಪಠ್ಯವಾಗಿ ಬಂದರೆ... ಕಾಯುತ್ತಿದ್ದೇವೆ ಎಂದು ಮಾತು ಮುಗಿಸಿದರು ಮುತ್ತು.

ಕಲಿಕೆಯ ವಾತಾವರಣ ಸೃಷ್ಟಿಸಲು ಪಠ್ಯ...
ಜೇನು ಕುರುಬ ಮಕ್ಕಳು ಶಾಲೆ ಬಿಡಬಾರದು, ಶಾಲೆಯಿಂದ ಹೊರಗುಳಿಯಬಾರದು ಎನ್ನುವ ಉದ್ದೇಶದಿಂದ ನಮ್ಮ ಸಂಶೋಧನಾ ಸಂಸ್ಥೆಯಿಂದ ಜೇನು ಕುರುಬರ ಭಾಷೆಯಲ್ಲಿಯೇ ಪಠ್ಯ ರಚಿಸಲು ಯೋಜಿಸಿದ್ದೆವು. ಇದನ್ನು ರಾಜ್ಯದಲ್ಲಿರುವ ಪಠ್ಯಕ್ರಮ ಹಾಗೂ ಕಲಿಕಾ ವಿಧಾನ ಅನುಸರಿಸಿ ರಚಿಸಲಾಗುತ್ತಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ಪ್ರೊ.ಟಿ.ಟಿ.ಬಸವನಗೌಡ.

ಟಿ.ಟಿ.ಬಸವನಗೌಡ

ಶಾಲೆಗೆ ಪ್ರೀತಿಯಿಂದ ಬರಬೇಕು, ಆಸಕ್ತಿಯಿಂದ ಕಲಿಕೆಯ ವಾತಾವರಣ ಮೂಡಿಸಲು ಅವರ ಭಾಷೆಯಲ್ಲಿಯೇ ಕಲಿಸಲು ಮುಂದಾಗಿದ್ದೇವೆ. ಇದಕ್ಕಾಗಿ ಸಂಪನ್ಮೂಲ ವ್ಯಕ್ತಿಯಾಗಿ ಕೆಂಡಗಣ್ಣಸ್ವಾಮಿ, ಜೇನು ಕುರುಬ ಸಮುದಾಯದ ವಿನು, ನಾಗೆಂದ್ರ, ಶಿವು, ಮಾರ, ರಾಮಕೃಷ್ಣ, ರಮೇಶ್, ನಮ್ಮ ಸಿಬ್ಬಂದಿ ಡಾ.ಗೀತಾ ಕೈಜೋಡಿಸಿದ್ದಾರೆ ಎಂದು ಮಾಹಿತಿ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.