ADVERTISEMENT

ಹೆಣ್ಣಿನ ಮೇಲಾಗುವ ಅತ್ಯಾಚಾರ: ಕಾನೂನಿನ ಬಲೆಯಲ್ಲೇ ತೂತು!

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 19:30 IST
Last Updated 10 ಅಕ್ಟೋಬರ್ 2020, 19:30 IST
ಮಗಳು ಸುಟ್ಟು ಬೂದಿಯಾಗಿದ್ದು ಆಗಿದೆ, ಬದುಕು ಕ್ರೂರಿಯಾಗಿದೆ. ಮುಸುಕಿನ ಹಿಂದಿನ ಕಣ್ಣೀರಿನ ತಾಪ ಕಾನೂನಿನ ಕಣ್ಣಿಗೆ ಕಾಣದಾಗಿದೆ
ಮಗಳು ಸುಟ್ಟು ಬೂದಿಯಾಗಿದ್ದು ಆಗಿದೆ, ಬದುಕು ಕ್ರೂರಿಯಾಗಿದೆ. ಮುಸುಕಿನ ಹಿಂದಿನ ಕಣ್ಣೀರಿನ ತಾಪ ಕಾನೂನಿನ ಕಣ್ಣಿಗೆ ಕಾಣದಾಗಿದೆ   

ಭಾರತದ ಯಾವುದೇ ಹೆಣ್ಣಿನ ಮೇಲಾಗುವ ಅತ್ಯಾಚಾರದಂತಹ ಪ್ರಕರಣಗಳು ಕಾನೂನಿನ ಪರಿಣಾಮಕಾರಿ ಅನುಷ್ಠಾನದ ಕೊರತೆ ಮತ್ತು ತಾಂತ್ರಿಕ ತೊಡಕುಗಳ ಕಾರಣಗಳ ಮೇಲೆ ನ್ಯಾಯಾಲಯದಲ್ಲಿ ಬಿದ್ದುಹೋಗುತ್ತವೆ. ಯಾಕೆ ಹೀಗೆ? ಇದಕ್ಕೆ ಏನು ಪರಿಹಾರ?

***

2012 ರಲ್ಲಿ ಹರಿಯಾಣದ ಓ.ಪಿ.ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯವು ‘Diversity, Discrimination and Social Exclusion in India and the US’ ಎಂಬ ವಿಷಯದ ಕುರಿತು ಅಂತರರಾಷ್ಟ್ರೀಯ ವಿಚಾರಸಂಕಿರಣವನ್ನು ಏರ್ಪಡಿಸಿತ್ತು. ಈ ವಿಚಾರಸಂಕಿರಣದಲ್ಲಿ ನವದೆಹಲಿಯ ‘ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ದಲಿತ್ ಸ್ಟಡೀಸ್‌’ನ ಸಂಶೋಧಕರೊಬ್ಬರು ನಾವೆಲ್ಲ ಆತಂಕ ಮತ್ತು ಗಾಬರಿಪಡಲೇಬೇಕಾದ ವಿಚಾರವೊಂದನ್ನು ಅಲ್ಲಿ ಮಂಡಿಸಿದ್ದರು: ‘ಠಾಕೂರ್ ಸಮುದಾಯದವರ ಸಂಖ್ಯೆ ಹೆಚ್ಚಾಗಿರುವ ಉತ್ತರ ಭಾರತದ ಬಹುತೇಕ ರಾಜ್ಯಗಳ ಹಳ್ಳಿಗಳಲ್ಲಿ ದಲಿತ ಹೆಣ್ಣುಮಕ್ಕಳೊಂದಿಗಿನ ತಮ್ಮ ಅನೈತಿಕ ಸಂಬಂಧ ಮತ್ತು ಅತ್ಯಾಚಾರದ ಸಂಗತಿಗಳನ್ನು ಠಾಕೂರರು ಸಂಜೆಯ ಹರಟೆಕಟ್ಟೆಗಳಲ್ಲಿ ಪೈಪೋಟಿಗೆ ಬಿದ್ದವರಂತೆ ತಮ್ಮತಮ್ಮಲ್ಲಿಯೇ ಹಂಚಿಕೊಳ್ಳುತ್ತಾರೆ. ದಲಿತ ಹೆಣ್ಣನ್ನು ಲೈಂಗಿಕವಾಗಿ ಶೋಷಿಸುವ ಅನಧಿಕೃತ ಸಾರ್ವಜನಿಕ ಸಮ್ಮತಿ ತಮಗೆ ದಕ್ಕಿಯೇಬಿಟ್ಟಿರುವ ವಿಕೃತ ಖುಷಿಯನ್ನು ಅಲ್ಲಿನ ಹರಟೆಕಟ್ಟೆಗಳಲ್ಲಿ, ಠಾಕೂರರ ಮೀಸೆಯ ಕೆಳಗಿನ ವಿಕೃತ ನಗುವಿನಲ್ಲಿ ಹೇರಳವಾಗಿ ಕಾಣಬಹುದು.’

ADVERTISEMENT

ಮನುಷ್ಯರು ಮಾತ್ರ ಎಸಗಬಹುದಾದ ಈ ಹೊಸಬಗೆಯ ವಿಕೃತಿ ಕಂಡು ಬೆಚ್ಚಿದ್ದು ದಕ್ಷಿಣಭಾರತದ ನಾವು ಕೆಲವರಷ್ಟೆ. ಎಲ್ಲರಲ್ಲೂ ತೀವ್ರ ಚರ್ಚೆಯನ್ನು ಹುಟ್ಟುಹಾಕಬೇಕಾಗಿದ್ದ ಸಂಶೋಧಕರೊಬ್ಬರ ಈ ಮಾತುಗಳನ್ನು ಆ ದಿನ ಇಂಡಿಯಾನ ಯೂನಿವರ್ಸಿಟಿಯ ಪ್ರೊ.ಕೆವಿನ್ ಬ್ರೌನ್ ಅವರು ಅಮೆರಿಕದ ಕಪ್ಪು ವರ್ಣೀಯರು ತಮ್ಮ ಚರ್ಮದ ಬಣ್ಣ ಬದಲಿಸಿಕೊಳ್ಳಲು ಹಾತೊರೆಯುತ್ತಿರುವ ಸ್ಕಿನ್‍ಬ್ಲೀಚಿಂಗ್ ಕುರಿತು ಮಂಡಿಸಿದ ಉಪನ್ಯಾಸವೊಂದು ನುಂಗಿಹಾಕಿತ್ತು.

ದೆಹಲಿಯ ನಿರ್ಭಯಾ ಮತ್ತು ಈಚಿನ ತೆಲಂಗಾಣದ ಅತ್ಯಾಚಾರ ಪ್ರಕರಣವೊಂದರಲ್ಲಿ ಕಾಣಿಸದ ‘ಜಾತಿ’ ಉತ್ತರಪ್ರದೇಶದ ಹಾಥರಸ್‍ನ ಮನೀಷಾ ಪ್ರಕರಣದಲ್ಲಿ ಮುನ್ನೆಲೆಗೆ ಬರಲು ಮೇಲಿನ ಮಾತುಗಳು ನಮ್ಮ ನೆರವಿಗೆ ಬರಬಹುದು. ಇಂದಿಗೂ ನಗರಪ್ರದೇಶಗಳಲ್ಲಿ ಜಾತಿಯೆಂಬುದು ಅತ್ಯಂತ ಸಂಕೀರ್ಣ ವಿಚಾರ. ಆದರೆ ಭಾರತದ ಹಳ್ಳಿಗಳು ಇವತ್ತಿಗೂ ಜಾತಿಯ ಬಿಲಗಳೇ. ಇಂಥ ಜಾತಿಕೂಪಗಳಲ್ಲಿ ವರದಿಯಾಗುವ ಮತ್ತು ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಪ್ರಕರಣಗಳಿಗಿಂತ ಹತ್ತುಪಟ್ಟು ಹೆಚ್ಚಿನ ಪ್ರಕರಣಗಳು ಯಾವ ಠಾಣೆಯಲ್ಲೂ ದಾಖಲಾಗದೆ, ಸಣ್ಣದೊಂದು ಸದ್ದೂ ಆಗದೆ ಮುಚ್ಚಿಹೋಗುತ್ತವೆ. ಇಷ್ಟರಮೇಲೂ ಸದ್ದುಮಾಡುವ ಉತ್ತರಭಾರತದ ರೇಪ್ ಕೇಸುಗಳನ್ನು ಅಲ್ಲಿಯ ಖಾಪ್‌ ಪಂಚಾಯತ್‍ಗಳ ಖೂಳರು ಉಸಿರಾಡಲೂ ಬಿಡದಂತೆ ಕತ್ತುಹಿಚುಕಿ ಕೊಂದುಬಿಡುತ್ತಾರೆ. ಇದು ಭಾರತ!

ಭಾರತದ ಯಾವುದೇ ಹೆಣ್ಣಿನ ಮೇಲಾಗುವ ಅತ್ಯಾಚಾರ ಪ್ರಕರಣಗಳು ಕಾನೂನಿನ ಪರಿಣಾಮಕಾರಿ ಅನುಷ್ಠಾನದ ಕೊರತೆ ಮತ್ತು ತಾಂತ್ರಿಕ ತೊಡಕುಗಳ ಕಾರಣಗಳ ಮೇಲೆ ನ್ಯಾಯಾಲಯದಲ್ಲಿ ಹೇಗೆ ಬಿದ್ದುಹೋಗುತ್ತವೆ ಎಂಬುದನ್ನು ಹೇಳಲೆಂದೇ ಈ ಬರಹ.

ಭಾರತೀಯ ದಂಡ ಸಂಹಿತೆಯ ಕಲಂ 375ರ ಅಡಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ಪ್ರಕರಣ ದಾಖಲಿಸಲು ತನ್ನ ಮೇಲೆ ಅತ್ಯಾಚಾರವಾಗಿದೆಯೆಂಬ ಹೆಣ್ಣೊಬ್ಬಳ ಮೌಖಿಕ ಹೇಳಿಕೆಯೊಂದು ಸಾಕು. ನೊಂದಹೆಣ್ಣಿನ ಮೌಖಿಕ ಹೇಳಿಕೆಯನ್ನು ದೂರು ಎಂದು ಪರಿಗಣಿಸಿ ಅದರ ಆಧಾರದ ಮೇಲೆಯೇ ಪೊಲೀಸರು ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ರೂಪಿಸುತ್ತಾರೆ. ಅತ್ಯಾಚಾರಕ್ಕೊಳಗಾದ ಹೆಣ್ಣೇ ಪೊಲೀಸ್ ಠಾಣೆಗೆ ಬಂದು ದೂರು ನೀಡಲಾಗದಷ್ಟು ಕ್ರೌರ್ಯಕ್ಕೀಡಾಗಿದ್ದರೆ ಖುದ್ದು ಪೊಲೀಸರೇ ಮಾಹಿತಿ ತಿಳಿದ ಕೂಡಲೇ ಆಕೆ ಇರುವಲ್ಲಿಗೆ ತೆರಳಿ ದೂರನ್ನು ಪಡೆಯಬೇಕು. ಅತ್ಯಾಚಾರದಂತಹ ಅಪರಾಧಿಕ ಕೃತ್ಯದಲ್ಲಿ ಹೆಣ್ಣೆ ಸದಾ ಬಲಿಪಶು ಆಗುವುದರಿಂದ ಪೊಲೀಸ್ ಜ್ಯೂರಿಸ್ಡಿಕ್ಷನ್ (ಪೊಲೀಸ್ ಠಾಣೆಯ ಅಧಿಕಾರ ವ್ಯಾಪ್ತಿ) ಹೆಸರಿನಡಿ ಆಕೆಯನ್ನು ಠಾಣೆಯಿಂದ ಠಾಣೆಗೆ ಅಲೆಸದೆ ಸುಲಭ ಸಂಪರ್ಕಕ್ಕೆ ಸಿಗಬಹುದಾದ ಯಾವುದಾದರೂ ಪೊಲೀಸ್ ಠಾಣೆಯು ಜೀರೊ ಎಫ್‌ಐಆರ್‌ನಡಿ ದೂರು ದಾಖಲಿಸಿಕೊಳ್ಳಬೇಕು. ಇದಾದ ನಂತರ ಜೀರೊ ಎಫ್‌ಐಆರ್‌ ರೂಪಿಸಿದ ಪೊಲೀಸ್ ಠಾಣೆಯೇ ಕೃತ್ಯ ಎಸಗಲ್ಪಟ್ಟ ಸ್ಥಳವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಗೆ ಸದರಿ ಪ್ರಕರಣದ ಕಡತವನ್ನು ವರ್ಗಾಯಿಸಬೇಕು.

1995ರಲ್ಲಿ ಸರ್ವೋಚ್ಚ ನ್ಯಾಯಾಲಯವು ‘ಡೆಲ್ಲಿ ಡೊಮೆಸ್ಟಿಕ್ ವರ್ಕಿಂಗ್ ವಿಮೆನ್ ಅಸೋಸಿಯೇಶನ್ ವಿರುದ್ಧ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ ಐದು ಮಾರ್ಗಸೂಚಿಗಳನ್ನು ನೀಡಿತು:

lಅತ್ಯಾಚಾರಕ್ಕೆ ಸಂಬಂಧಿಸಿದ ದೂರು ನೀಡುವ ಆರಂಭಿಕ ಕ್ಷಣದಿಂದಲೇ ಸರ್ಕಾರವು ದೌರ್ಜನ್ಯಕ್ಕೆ ತುತ್ತಾದ ಹೆಣ್ಣಿನ ನೆರವಿಗೆ ನಿಲ್ಲಲು ವಕೀಲರನ್ನು ನೇಮಿಸಬೇಕು;

lಪೊಲೀಸ್ ಠಾಣೆಯ ಎಲ್ಲಾ ಹಂತದ ವಿಚಾರಣೆಗಳಲ್ಲಿ ಈ ವಕೀಲರೇ ಆಕೆಯನ್ನು ಪ್ರತಿನಿಧಿಸಬೇಕು;

lಪ್ರತೀ ಪೊಲೀಸ್ ಠಾಣೆಯ ನೋಟಿಸ್ ಬೋರ್ಡಿನಲ್ಲಿ ಅತ್ಯಾಚಾರದ ಪ್ರಕರಣಗಳಿಗೆ ತುರ್ತುನೆರವಿಗೆ ಧಾವಿಸುವ ನ್ಯಾಯವಾದಿಗಳದೊಂದು ಪಟ್ಟಿಯನ್ನು ಎಲ್ಲರಿಗೂ ಕಾಣುವಂತೆ ಲಗತ್ತಿಸಬೇಕು;

lಪೊಲೀಸ್ ಠಾಣೆಯಲ್ಲಾಗಲಿ, ವೈದ್ಯಕೀಯ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಾಗಲಿ ಆಕೆಯ ಮುತುವರ್ಜಿಯನ್ನು ಮಹಿಳಾ ಸಿಬ್ಬಂದಿಯೇ ಮಾಡತಕ್ಕದ್ದು;

lಆಕೆಯ ಹೆಸರು, ವಿಳಾಸ, ಗುರುತು, ಮಾಹಿತಿಗಳನ್ನು ಯಾವ ಕಾರಣಕ್ಕೂ ದೂರು ದಾಖಲಿಸಿಕೊಂಡ ಪೊಲೀಸರಾಗಲಿ, ಚಿಕಿತ್ಸೆ ನೀಡಿದ ವೈದ್ಯರಾಗಲಿ ಬಹಿರಂಗಪಡಿಸುವಂತಿಲ್ಲ.

ಕೊನೆಯ ಎರಡು ಮಾರ್ಗಸೂಚಿಗಳನ್ನು ಪೊಲೀಸರು ಮತ್ತು ವೈದ್ಯರು ಪಾಲಿಸುವುದನ್ನು ನಾವೆಲ್ಲ ಬಲ್ಲೆವು; ಆದರೆ, ಮೊದಲ ಮೂರು ಮಾರ್ಗಸೂಚಿಗಳ ಅನುಷ್ಠಾನದ ಕುರಿತು ಎಲ್ಲೂ ಸಣ್ಣದೊಂದು ಚರ್ಚೆಯೂ ನಡೆದಿಲ್ಲ. ಈ ಕುರಿತು ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಮೌನ ತಾಳಿದೆ.

ದೆಹಲಿಯ ನಿರ್ಭಯಾ ಪ್ರಕರಣಕ್ಕೂ ಮುನ್ನ ಐಪಿಸಿ ಕಲಂ 375ರ ಅಡಿ ಅತ್ಯಾಚಾರದ ಸಾಬೀತಿಗಾಗಿ ಹೆಣ್ಣಿನ ಯೋನಿ, ಗುದದ್ವಾರ ಅಥವಾ ಬಾಯಿಯೊಳಗೆ ಶಿಶ್ನಪ್ರವೇಶವು ವೈದ್ಯಕೀಯ ಪರೀಕ್ಷೆಯಡಿ ನಿರ್ಣಾಯಕ ಅಂಶವಾಗಿತ್ತು. ಆದರೆ, 2013ರಲ್ಲಿ ಜಸ್ಟೀಸ್ ಜೆ.ಎಸ್.ವರ್ಮಾ ಆಯೋಗವು ಕೇಂದ್ರ ಸರ್ಕಾರಕ್ಕೆ ನೀಡಿದ ವರದಿಯಲ್ಲಿ ಯೋನಿ, ಗುದದ್ವಾರ ಅಥವಾ ಬಾಯಿಯೊಳಗೆ ಶಿಶ್ನಪ್ರವೇಶವಾಗಿಲ್ಲ ಎಂಬ ಕಾರಣದ ಮೇಲೆ ಹೆಣ್ಣಿನ ಮೇಲೆ ಅತ್ಯಾಚಾರವೇ ನಡೆದಿಲ್ಲ ಎಂಬ ನಿಲುವಿಗೆ ನ್ಯಾಯಾಲಯವು ಬರುವಂತಿಲ್ಲ ಎಂದು ಹೇಳಿತು. ಜೊತೆಗೆ ಅತ್ಯಾಚಾರವೇ ನಡೆದಿಲ್ಲ ಎಂಬ ವೈದ್ಯಕೀಯ ವರದಿಗಳನ್ನು ನಿರಾಕರಿಸುವ ಅಧಿಕಾರ ನ್ಯಾಯಾಲಯಕ್ಕಿದೆ ಎಂಬ ವಾದವನ್ನು ವರ್ಮಾ ಆಯೋಗವು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಹೆಣ್ಣೊಬ್ಬಳ ಮೇಲಿನ ಅತ್ಯಾಚಾರ ಮತ್ತು ದಲಿತರ ಮೇಲಿನ ದೌರ್ಜನ್ಯಗಳು ಆರೋಪಿಗಳಿಗೆ ಜಾಮೀನು ನೀಡಲಾಗದ ಪ್ರಕರಣಗಳಾಗಿರುವುದರಿಂದ ಪೊಲೀಸರು ಪ್ರಭಾವಿಗಳ ಹಣದಾಸೆಗೆ, ರಾಜಕಾರಣಿಗಳ ಹಸ್ತಕ್ಷೇಪದಿಂದಾಗಿ ದೌರ್ಜನ್ಯಕ್ಕೆ ತುತ್ತಾದವರ ಮೇಲೆಯೇ ಕೌಂಟರ್ ಕೇಸುಗಳೆಂಬ ಹೊಸ ಅಸ್ತ್ರಗಳನ್ನು ವ್ಯಾಪಕವಾಗಿ ಬಳಸುತ್ತಿರುವ ವಿದ್ಯಮಾನಗಳು ಈಗ ಎಗ್ಗಿಲ್ಲದೆ ನಡೆಯುತ್ತಿವೆ.

ಅತ್ಯಾಚಾರದ ದೂರು ಬಂದ ಕೂಡಲೇ ಪೊಲೀಸರು ಎಫ್‌ಐಆರ್ ರೂಪಿಸಿ, ದೌರ್ಜನ್ಯಕ್ಕೆ ತುತ್ತಾದ ಹೆಣ್ಣನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ಇದೇ ಹೊತ್ತಿಗೆ ಪೊಲೀಸರು ಕೃತ್ಯ ನಡೆದ ಸ್ಥಳ ಪರಿಶೀಲನೆ (ಮಹಜರ್) ಮಾಡಿ ದೂರಿನ ಸತ್ಯಾಸತ್ಯತೆಯನ್ನು ಅರಿಯುವ ಪ್ರಯತ್ನ ಮಾಡಬೇಕು. ಈ ಹಂತದಲ್ಲಿ ವೈದ್ಯರು ನೀಡುವ ತಾತ್ಕಾಲಿಕ ವರದಿ ಪೊಲೀಸರಲ್ಲಿ ಗೊಂದಲವನ್ನು ಸೃಷ್ಟಿಸಬಹುದು. ಅತ್ಯಾಚಾರದ ಖಚಿತತೆಯ ಬಗ್ಗೆ ಆ ವೈದ್ಯಕೀಯ ವರದಿಯಲ್ಲಿ ಸ್ಪಷ್ಟತೆ ಇಲ್ಲದಿದ್ದರೂ ಆರೋಪಿಯನ್ನು ಪೊಲೀಸರು ಬಂಧಿಸಲೇಬೇಕು. ಆರೋಪಿಯ ಬಂಧನದ ನಂತರ ಆತನನ್ನು ಲೈಂಗಿಕ ಸಾಮರ್ಥ್ಯದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ಆದರೆ ನ್ಯಾಯಾಲಯವು ತನ್ನ ತೀರ್ಪಿಗೆ ಬಹುಮುಖ್ಯ ಸಾಕ್ಷ್ಯವೆನ್ನುವಂತೆ ವೈದ್ಯರ ಅಂತಿಮ ವರದಿಯನ್ನು ಪರಿಗಣಿಸುತ್ತದೆಯೇ ಹೊರತು ತಾತ್ಕಾಲಿಕ ವರದಿಯನ್ನಲ್ಲ. ಈ ಎಲ್ಲಾ ಹಂತಗಳ ನಂತರ ಪೊಲೀಸರು ಅರವತ್ತು ದಿನಗಳ ಅವಧಿಯಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿಯನ್ನು ಸಲ್ಲಿಸಲೇಬೇಕು.

ಆರೋಪಪಟ್ಟಿ ಸಲ್ಲಿಕೆಗೆ ನೀಡಲಾಗಿರುವ ಎರಡು ತಿಂಗಳ ಕಾಲಾವಧಿ ಇಡೀ ಪ್ರಕರಣವನ್ನು ಬುಡಮೇಲು ಮಾಡಬಹುದು. ಆರೋಪಿಗಳು ಪ್ರಭಾವಿಗಳಾಗಿದ್ದೂ ಹಣ ಬಲದೊಂದಿಗೆ, ರಾಜಕಾರಣದ ಬಲವೂ ಸಿಕ್ಕಿಬಿಟ್ಟರೆ ಪೊಲೀಸರು ಐಪಿಸಿ ಕಲಂ 375ರ ಅಡಿ ದಾಖಲಿಸಬೇಕಾದ ಪ್ರಕರಣವನ್ನು ಕಲಂ 354, 354ಎ, 354ಬಿ ಅಡಿ ದಾಖಲಿಸಿ ಅವರಿಗೆ ಸುಲಭವಾಗಿ ಜಾಮೀನು ಸಿಗುವಂತೆ ಮಾಡಬಹುದು. ಈ ಕಲಂಗಳು ಕೂಡಾ ಹೆಣ್ಣಿನ ಮೇಲಿನ ಲೈಂಗಿಕ ಕಿರುಕುಳ ಮತ್ತು ಹೆಣ್ಣನ್ನು ವಿವಸ್ತ್ರಗೊಳಿಸಿದ್ದಕ್ಕೆ ಇರುವ ಶಿಕ್ಷೆಯ ಕುರಿತು ವಿವೇಚನೆ ನೀಡುತ್ತವೆಯಾದರೂ ಅತ್ಯಾಚಾರಕ್ಕಿರುವ ಶಿಕ್ಷೆಯ ತೀವ್ರತೆ ಇಲ್ಲಿ ಕಾಣುವುದಿಲ್ಲ. ಕಲಂ 375ರ ಅಡಿ ಅಪರಾಧ ಸಾಬೀತಾಗುವ ಆರೋಪಿಗಳಿಗೆ ಕಲಂ 376ರ ಅಡಿ ಕನಿಷ್ಠ ಏಳು ವರ್ಷಗಳು ಮತ್ತು ಗರಿಷ್ಠ ಹತ್ತು ವರ್ಷ ಅಥವಾ ಆಜೀವ ಕಾರಾವಾಸದ ಶಿಕ್ಷೆ ವಿಧಿಸಬಹುದು. ಆದರೆ, ಮೇಲಿನ ಮಿಕ್ಕ ಕಲಂಗಳಡಿ ದಾಖಲಾಗುವ ಪ್ರಕರಣಗಳಿಗೆ ಕನಿಷ್ಠ ಒಂದು ವರ್ಷ ಹಾಗೂ ಗರಿಷ್ಠ ಮೂರು ವರ್ಷಗಳವರೆಗಿನ ಶಿಕ್ಷೆಯನ್ನು ಮಾತ್ರ ನೀಡಬಹುದು. ಹೀಗಾಗಿಯೇ ಪೊಲೀಸರು ಪ್ರಭಾವಿಗಳ ಒತ್ತಡಕ್ಕೆ ಮಣಿದು ಜಾಮೀನು ನೀಡಲಾಗದ ಅತ್ಯಾಚಾರದಂತಹ ಪ್ರಕರಣಗಳನ್ನು ಅದೇ ಕೃತ್ಯವನ್ನು ಹೋಲುವ ಜಾಮೀನು ನೀಡಲಾಗುವ ದುರ್ಬಲ ಕಲಂಗಳಡಿ ಎಫ್‌ಐಆರ್ ಮತ್ತು ಆರೋಪಪಟ್ಟಿಗಳನ್ನು ಸಿದ್ಧಮಾಡುತ್ತಾರೆ.

ಇನ್ನು ‘ನ್ಯಾಯದೇವತೆ’ಯ ಅಂಗಳಕ್ಕೆ ಬಂದರೆ ಇಲ್ಲೂ ಆತಂಕ ಮತ್ತು ವ್ಯಾಕುಲದ ಮುಳ್ಳುಗಳು ಕೋರ್ಟಿನ ಮೊದಲ ಮೆಟ್ಟಿಲಿನಲ್ಲೇ ನೊಂದಹೆಣ್ಣಿನ ಅಂಗಾಲಿಗೆ ಚುಚ್ಚುತ್ತವೆ. ಆರೋಪಿಯ ಪರ ನ್ಯಾಯಾಲಯದಲ್ಲಿ ಒಬ್ಬನೇ ವಕೀಲ ಕೊನೆಯ ಕ್ಷಣದ ತನಕ ಬಡಿದಾಡಿದರೆ, ದೌರ್ಜನ್ಯಕ್ಕೆ ತುತ್ತಾದ ಹೆಣ್ಣಿನ ಪರ ನಿಲ್ಲಬೇಕಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಎರಡು ವರ್ಷಕ್ಕೊಬ್ಬರು ಬದಲಾಗುತ್ತಾರೆ; ನ್ಯಾಯಾಧೀಶರು ಕೂಡ. ಇದರಿಂದಾಗಿ ಅತ್ಯಾಚಾರದಂತಹ ಪ್ರಕರಣಗಳ ಮೇಲಿನ ವಿಚಾರಣೆಯ ಒಟ್ಟು ಸ್ವರೂಪವು ನ್ಯಾಯಾಲಯಗಳಲ್ಲಿ ತನ್ನ ಅರ್ಥವನ್ನು ಕಳೆದುಕೊಂಡಿದೆ. ಒಂದು ನಿರ್ದಿಷ್ಟ ಕಾಲಮಿತಿಯೊಳಗೆ ಅತ್ಯಾಚಾರದ ಪ್ರಕರಣಗಳನ್ನು ಶೀಘ್ರ ಇತ್ಯರ್ಥಮಾಡುವ ರಿಸ್ಕಿಗೆ ಸುಪ್ರೀಂ ಕೋರ್ಟ್ ಇನ್ನಾದರೂ ಕೈಹಾಕಬೇಕಿದೆ.

‘ರಫೀಕ್ ವಿರುದ್ಧ ಉತ್ತರಪ್ರದೇಶ ರಾಜ್ಯ’ ಪ್ರಕರಣದಲ್ಲಿ ಜಸ್ಟೀಸ್ ಕೃಷ್ಣ ಅಯ್ಯರ್, ‘ಕೊಲೆಗಾರ ದೇಹವನ್ನು ಕೊಂದರೆ, ಅತ್ಯಾಚಾರಿ ಹೆಣ್ಣಿನ ಆತ್ಮವನ್ನೇ ಕೊಲ್ಲುತ್ತಾನೆ’ ಎಂದು ತಮ್ಮ ತೀರ್ಪಿನ ಕೊನೆಯ ಸಾಲಿನಲ್ಲಿ ಬರೆದಿರುವುದು ಅತ್ಯಾಚಾರದಂತಹ ಕೃತ್ಯ, ಇತರ ಅಪರಾಧಿಕ ಕೃತ್ಯಗಳಿಗಿಂತ ತೀರಾ ಭಿನ್ನ ಎಂಬುದನ್ನು ಹೇಳುತ್ತದೆ. ‘ಮೊಹಮ್ಮದ್ ಹಬೀಬ್ ವಿರುದ್ಧ ದೆಹಲಿ ರಾಜ್ಯ’ ಪ್ರಕರಣದಲ್ಲಿ ಅತ್ಯಾಚಾರ ಎಸಗುವ ಪ್ರಯತ್ನದಲ್ಲಿ ಅತ್ಯಾಚಾರವೆಸಗದೆ ಆರೋಪಿಯು ಬಾಲಕಿಯೊಬ್ಬಳ ಮೇಲೆ ಎರಗಿ ಆಕೆಯ ದೇಹದ ಅನೇಕ ಕಡೆಗಳಲ್ಲಿ ಹಲ್ಲಿನಿಂದ ಕಚ್ಚಿ ತೀವ್ರವಾಗಿ ಗಾಯಗೊಳಿಸಿದ್ದ. ದೆಹಲಿ ಉಚ್ಚ ನ್ಯಾಯಾಲಯವು ಆರೋಪಿಗೆ ವೈದ್ಯಕೀಯ ವರದಿಯ ಆಧಾರದ ಮೇಲೆ ಗಾಯಗೊಳಿಸಿದ್ದಕ್ಕಷ್ಟೆ ಶಿಕ್ಷಿಸಿ, ಅತ್ಯಾಚಾರದ ಆರೋಪದಿಂದ ಮುಕ್ತಗೊಳಿಸಿತ್ತು. ಈ ತೀರ್ಪಿನ ವಿರುದ್ಧ ಮುಂದೆ ಮೇಲ್ಮನವಿ ಆಲಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿತು.

ಹೆಣ್ಣೊಬ್ಬಳು ವೇಶ್ಯೆಯಾಗಿದ್ದು ಆಕೆಯ ನಡತೆಯ ಕಾರಣದ ಮೇಲೆ ಅವಳ ಮೇಲಾದ ಅತ್ಯಾಚಾರವನ್ನು ಯಾವುದೇ ಕಾರಣಕ್ಕೂ ‘ಹಗುರವಾಗಿ’ ಪರಿಗಣಿಸುವಂತಿಲ್ಲ ಎಂದು ದೇಶದ ಎಲ್ಲ ಕೆಳನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ‘ಪಂಜಾಬ್ ರಾಜ್ಯದ ವಿರುದ್ಧ ಗುರ್ಮಿತ್ ಸಿಂಗ್’ ಪ್ರಕರಣದಲ್ಲಿ ಕಿವಿಮಾತು ಹೇಳಿದೆ.

1979ರ ‘ತುಕಾರಾಮ್ ವಿರುದ್ಧ ಮಹಾರಾಷ್ಟ್ರ ರಾಜ್ಯ (ಮಥುರಾ ಅತ್ಯಾಚಾರ ಪ್ರಕರಣ)’ ಪ್ರಕರಣದಲ್ಲಿ ‘ತನ್ನ ಮೇಲೆ ಅತ್ಯಾಚಾರವಾಗುವ ಸಂದರ್ಭದಲ್ಲಿ ಹದಿನಾರರ ಬಾಲಕಿ ಅತ್ತು ಕೂಗಿ ಕಿರುಚಿಕೊಳ್ಳದಿರುವುದು ಮತ್ತು ಆಕೆಯ ಮೈಮೇಲೆ ಸಣ್ಣದೊಂದು ತರಚು ಗಾಯವೂ ಆಗದಿರುವುದು ಅತ್ಯಾಚಾರವೆನ್ನಿಸಿಕೊಳ್ಳುವುದಿಲ್ಲ’ ಎಂದು ತೀರ್ಮಾನಿಸಿ ಆಕೆಯ ಮೇಲೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಎಸಗಿದ ಇಬ್ಬರು ಪೊಲೀಸರನ್ನು ನಿರ್ದೋಷಿಗಳೆಂದು ಪರಿಗಣಿಸಿ ಸುಪ್ರೀಂ ಕೋರ್ಟ್ ಖುಲಾಸೆ ಮಾಡಿತು. ಲೈಂಗಿಕ ಕೃತ್ಯಕ್ಕೆ ಆರೋಪಿಗಳೊಂದಿಗೆ ದೂರುದಾರಳು ಸಹಕರಿಸಿರಬಹುದಾದ ಸಂಶಯದ ಲಾಭವನ್ನು ಸುಪ್ರೀಂ ಕೋರ್ಟ್ ನೇರ ಆರೋಪಿಗಳಿಗೆ ನೀಡಿತು. ಸದರಿ ಪ್ರಕರಣದ ತೀರ್ಪನ್ನು ಖಂಡಿಸಿ ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿಗಳು ಹಾಗೂ ಕಾನೂನು ಪ್ರಾಧ್ಯಾಪಕರಾದ ಉಪೇಂದ್ರ ಬಕ್ಷಿ, ರಘುನಾಥ್ ಕೇಲ್ಕರ್, ಲೋತಿಕಾ ಸರ್ಕಾರ್ ಮುಖ್ಯ ನ್ಯಾಯಮೂರ್ತಿಯವರಿಗೆ ಪತ್ರ ಬರೆದರು. ಮುಖ್ಯ ನ್ಯಾಯಮೂರ್ತಿಯವರು ತೀರ್ಪು ಮರುಪರಿಶೀಲಿಸಿದ್ದಲ್ಲದೆ, ಅತ್ಯಾಚಾರಕ್ಕೆ ಸಂಬಂಧಿಸಿದ 1983ರ ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆಗೆ ಹತ್ತಾರು ತಿದ್ದುಪಡಿ ರೂಪದ ಸರ್ಜರಿಗಳಾಗುವಂತೆ ನೋಡಿಕೊಂಡರು. ಸುಪ್ರೀಂ ಕೋರ್ಟ್ ಕೂಡ ದಿಕ್ಕುತಪ್ಪಬಲ್ಲದು ಎಂಬುದನ್ನು ದೇಶಕ್ಕೆ ದೊಡ್ಡಮಟ್ಟದಲ್ಲಿ ತೋರಿದ ಪ್ರಕರಣವಿದು.

ಎಲ್ಲೋ ಅಲ್ಲೊಂದು ಇಲ್ಲೊಂದು ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ಆಗಿರಬಹುದು. ಆದರೆ, ಕಾನೂನಿನ ಬಲೆಯಲ್ಲಿ ಹತ್ತಾರು ತೂತುಗಳು. ತಪ್ಪಿತಸ್ಥರು ಸುಲಭವಾಗಿ ಜಾರಿಕೊಂಡು ಹೋಗಲು ದಾರಿಗಳು ಹಲವಾರು. ಒಬ್ಬೊಬ್ಬ ಅಪರಾಧಿ ಶಿಕ್ಷೆಯಿಂದ ತಪ್ಪಿಸಿಕೊಂಡಾಗಲೂ ಹಳ್ಳಿಯ ಹಟ್ಟಿಗಳಲ್ಲಿ ನೋವಿನ ನಿಟ್ಟುಸಿರು.

ಹೆಚ್ಚುತ್ತಲೇ ಇವೆ ಪ್ರಕರಣ

ಇನ್ನುದಲಿತ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ 2019ರ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ(ಎನ್‌ಸಿಆರ್‌ಬಿ) ನೀಡಿರುವ ಅಂಕಿ-ಅಂಶಗಳನ್ನು ನೋಡಿದರೆ, ನಿಜಕ್ಕೂ ಆತಂಕವಾಗುತ್ತದೆ. ಭಾರತದಲ್ಲಿ ಪ್ರತಿನಿತ್ಯ 10 ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವಾಗುತ್ತದೆ. ಕಳೆದ ವರ್ಷ ಉತ್ತರಪ್ರದೇಶದಲ್ಲಿ 11,829, ರಾಜಸ್ಥಾನದಲ್ಲಿ 6,794 ಮತ್ತು ಬಿಹಾರದಲ್ಲಿ 6,544 ಅತ್ಯಾಚಾರಗಳಾಗಿವೆ. ಒಟ್ಟಾರೆ ದೇಶದಾದ್ಯಂತ ಹೆಣ್ಣಿನ ಮೇಲೆ 4,05,861 ಅಪರಾಧಗಳು ನಡೆದರೆ ಅದರಲ್ಲಿ ಅತ್ಯಾಚಾರಗಳ ಸಂಖ್ಯೆ 45,935.

ದಲಿತ ಹೆಣ್ಣಿನ ಮೇಲೆ ಅತ್ಯಾಚಾರವಾದಾಗ, ಎಫ್‌ಐಆರ್ ರೂಪಿಸಿದ ಮೇಲೆ ಕೋರ್ಟಿಗೆ ಚಾರ್ಜ್‌ಶೀಟ್‌ ಸಲ್ಲಿಕೆಯ ನಂತರ ಹಾಗೂ ತೀರ್ಪು ನೀಡುವ ಸಂದರ್ಭದಲ್ಲಿ -ಒಟ್ಟು ಮೂರು ಕಂತುಗಳಲ್ಲಿ ಆಕೆಗೆ ಪರಿಹಾರ ನೀಡಬೇಕೆಂದು 1989ರ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು (ದೌರ್ಜನ್ಯಗಳ ತಡೆ) ಕಾಯ್ದೆಯು ಹೇಳುತ್ತದೆ.

ಸಮಾಜ ಕಲ್ಯಾಣ ಇಲಾಖೆಯಿಂದ ಮೊದಲೆರಡು ಹಂತಗಳ ಪರಿಹಾರ ಪಡೆಯುವಷ್ಟರಲ್ಲಿ ದೌರ್ಜನ್ಯಕ್ಕೆ ತುತ್ತಾದ ಹೆಣ್ಣಿಗೆ ಬದುಕು ನರಕ ಅನ್ನಿಸಿಬಿಟ್ಟಿರುತ್ತದೆ. ದಲಿತರ ಮೇಲಿನ ದೌರ್ಜನ್ಯಗಳ ವಿಚಾರಣೆಗೆಂದೇ ರಚಿಸಲಾಗಿದ್ದ ವಿಶೇಷ ನ್ಯಾಯಾಲಯಗಳು 2016ರಲ್ಲಿ 195 ಇದ್ದರೆ, 2018ಕ್ಕೆ ಬರುವಷ್ಟರಲ್ಲಿ 157ಕ್ಕೆ ಇಳಿದಿವೆ. ಅತ್ಯಾಚಾರವನ್ನೂ ಒಳಗೊಂಡಂತೆ ದಲಿತರ ಮೇಲೆ ಎಸಗಲಾಗುವ ಅನೇಕ ಬಗೆಯ ಅಪರಾಧಗಳಲ್ಲಿ ಶೇಕಡ 94ರಷ್ಟು ಪ್ರಕರಣಗಳು ‘ಲೀಗಲ್ ಪೆಂಡೆನ್ಸಿ’ ಹೆಸರಿನಲ್ಲಿ ಕಡತದೊಳಗೆ ದೂಳು ತಿನ್ನುತ್ತಿವೆ. ಇದರಲ್ಲಿ ಉತ್ತರಪ್ರದೇಶದ ಪಾಲು ಶೇಕಡ 95. ಒಟ್ಟಾರೆ ಕಳೆದ ವರ್ಷ ದೇಶದಾದ್ಯಂತ ದಲಿತರ ಮೇಲೆ ಎಸಗಲಾದ ಎಲ್ಲ ಬಗೆಯ ದೌರ್ಜನ್ಯದ ಪ್ರಕರಣಗಳಿಗೆ ಶೇಕಡ ಐದರಷ್ಟೂ ಶಿಕ್ಷೆಯಾಗಿಲ್ಲವೆಂದರೆ ಈ ದೇಶ ದಲಿತ ಹೆಣ್ಣುಮಕ್ಕಳಿಗಿರಲಿ, ಯಾವ ಹೆಣ್ಣುಮಕ್ಕಳ ಪಾಲಿಗೂ ಇಲ್ಲವೆನಿಸಿಬಿಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.