ADVERTISEMENT

ಗಾಂಧೀಜಿಗೆ ಪ್ರೇರಣೆ ಕೊಟ್ಟ ಕುದ್ಮುಲ್‌ ರಂಗರಾವ್‌ ಸೇವೆ

ಬಿ.ಎ.ವಿವೇಕ ರೈ
Published 25 ಜನವರಿ 2025, 23:30 IST
Last Updated 25 ಜನವರಿ 2025, 23:30 IST
   
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಲಿತರ ಏಳಿಗೆಗಾಗಿ ಕುದ್ಮುಲ್‌ ರಂಗರಾವ್‌ ಅವರು ಮಾಡಿದ ಕೆಲಸಗಳು, ಕೈದಿಗಳ ಪುನರ್ವಸತಿಗಾಗಿ ಮಾಡಿದ ಕಾರ್ಯಕ್ರಮಗಳು ಗಾಂಧೀಜಿ ಅವರಿಗೆ ಪ್ರೇರಣೆಯಾಗಿತ್ತು. ಗಾಂಧೀಜಿ ಮಂಗಳೂರಿಗೆ ಬಂದಿದ್ದಾಗ ಇವರು ಸ್ಥಾಪಿಸಿದ್ದ ಡಿಪ್ರೆಸ್ಡ್ ಕ್ಲಾಸ್ ಮಿಷನ್‌ಗೆ ಭೇಟಿ ನೀಡಿದ್ದರು.

ಮಹಾತ್ಮಾ ಗಾಂಧಿ 1934 ಫೆಬ್ರುವರಿ 24ರಂದು ಮಂಗಳೂರನ್ನು ಸಂದರ್ಶಿಸಿದಾಗ ಶೇಡಿಗುಡ್ಡೆಯಲ್ಲಿ ಕುದ್ಮುಲ್ ರಂಗರಾಯರು ಸ್ಥಾಪಿಸಿದ್ದ ಡಿಸಿಎಂ (ಡಿಪ್ರೆಸ್ಡ್ ಕ್ಲಾಸ್ ಮಿಷನ್ ) ಸಂಸ್ಥೆಗೆ ಭೇಟಿ ಕೊಟ್ಟರು. ಆಗ ರಂಗರಾಯರು ನಿಧನರಾಗಿ ಆರು ವರ್ಷ ಕಳೆದಿತ್ತು. ಗಾಂಧೀಜಿ ಆ ಸಂಸ್ಥೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಶಾಲಾ ಮಕ್ಕಳು ರಚಿಸಿದ ಕರಕುಶಲ ವಸ್ತುಗಳನ್ನು ಮತ್ತು ಅಂದವಾದ ಹೂದೋಟವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಸಾರ್ವಜನಿಕ ಭಾಷಣದಲ್ಲಿ ಗಾಂಧೀಜಿ ದಲಿತ ಉದ್ಧಾರಕ ಕುದ್ಮುಲ್ ರಂಗರಾಯರನ್ನು ತನ್ನ ಗುರು ಎಂದು ಘೋಷಿಸಿ ಅವರ ಸಮಾಜಮುಖಿ ಕೆಲಸಗಳಿಂದ ತಾನು ಪ್ರಭಾವಿತನಾದೆ ಎಂದು ಸಾರಿದರು.

ಸಾರಸ್ವತ ಬ್ರಾಹ್ಮಣ ಕುಟುಂಬದವರಾದ ಕುದ್ಮುಲ್ ರಂಗರಾಯರು ಆ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಚಲಿತವಿದ್ದ ಜಾತಿ ಪದ್ಧತಿ, ಅಸ್ಪೃಶ್ಯತೆ, ಜೀತ ಪದ್ಧತಿ, ಮಹಿಳೆಯರ ಶೋಷಣೆಯ ವಿರುದ್ಧ ಹೋರಾಡಿದರು. ತಮ್ಮ ಜಾತಿಯ ಮಠದ ಸ್ವಾಮಿಗಳಿಂದ ಬಹಿಷ್ಕಾರಕ್ಕೆ ಒಳಗಾದರು. ಮೇಲು ಜಾತಿಯವರ ಹಿಂಸೆ ಕಿರುಕುಳವನ್ನು ಲೆಕ್ಕಿಸದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶಿಕ್ಷಣಕ್ಕಾಗಿ ಶಾಲೆಗಳನ್ನು ತೆರೆದರು. ಭೂರಹಿತ ದಲಿತರಿಗೆ ಭೂಮಿಯನ್ನು ಹಂಚಿದರು. ಸ್ಥಳೀಯ ಸಂಸ್ಥೆಗಳಲ್ಲಿ ದಲಿತರಿಗೆ ಸದಸ್ಯರಾಗುವ ಅವಕಾಶ ಕಲ್ಪಿಸಿದರು. ಈ ಎಲ್ಲಾ ಚಟುವಟಿಕೆಗಳಿಗೆ ಕಲಶಪ್ರಾಯವಾಗಿ ಡಿಪ್ರೆಸ್ಡ್ ಕ್ಲಾಸ್ ಮಿಷನ್ ಸಂಸ್ಥೆಯನ್ನು ಸ್ಥಾಪಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಈಗಲೂ ಕರಾವಳಿಯಲ್ಲಿ ಡಿಸಿಎಂ ಸಂಸ್ಥೆ ದಲಿತರ ಬದುಕಿನ ಹಕ್ಕಿನ ಅನನ್ಯತೆಯ ಆಸರೆಯಾಗಿದೆ.

ಶಿಕ್ಷಣದ ಮೂಲಕ ಮಾತ್ರ ದಲಿತರು ಸ್ವಾವಲಂಬಿಗಳಾಗಲು ಸಾಧ್ಯ ಎಂದು ನಂಬಿದ್ದ ರಂಗರಾಯರು, 1892ರಲ್ಲಿ ಉರ್ವ ಚಿಲಿಂಬಿಯಲ್ಲಿ ಶಾಲೆ ತೆರೆದಾಗ ಮೇಲ್ಜಾತಿಯವರು ಕಿರುಕುಳ ಕೊಟ್ಟು ಅದನ್ನು ಮುಚ್ಚಿಸಿದರು. ಧೈರ್ಯಗುಂದದೆ ರಂಗರಾಯರು 1895ರಲ್ಲಿ ಮಂಗಳೂರಿನ ಬೋಳೂರಿನಲ್ಲಿ ದಲಿತ ಮಕ್ಕಳಿಗೆ ಶಾಲೆ ಆರಂಭಿಸಿದರು. ಮೇಲ್ಜಾತಿಯವರು ಆ ಶಾಲೆಯ ಹುಡುಗರನ್ನು ಥಳಿಸಿ ಅಧ್ಯಾಪಕರ ಅಂಗಿ ಹರಿದು ಶಾಲೆ ಮುಚ್ಚುವಂತೆ ಮಾಡಿದರು. ಸೋಲಿನಿಂದ ಕುಗ್ಗದೆ ರಂಗರಾಯರು ಮಂಗಳೂರಿನ ಕೋರ್ಟ್ ಗುಡ್ಡೆಯ ಕೆಳಗೆ ಸರ್ಕಾರಿ ಜಾಗದಲ್ಲಿ ಸರ್ಕಾರದ ಅನುದಾನ, ದಾನಿಗಳ ನೆರವು ಮತ್ತು ತಮ್ಮ ಹಣದಿಂದ ಕಟ್ಟಡವನ್ನು ಕಟ್ಟಿಸಿ ಶಾಲೆಯನ್ನು ನಡೆಸಿದರು. ಆ ಶಾಲೆಯಲ್ಲಿ ಶಿಕ್ಷಣದ ಜೊತೆಗೆ ನೇಯ್ಗೆ, ಟೈಲರಿಂಗ್, ರೇಷ್ಮೆ ಸಾಕಣೆ ಮುಂತಾದ ಕೌಶಲ ತರಬೇತಿಯನ್ನು ಮಕ್ಕಳಿಗೆ ಕೊಡಿಸುವ ವ್ಯವಸ್ಥೆ ಮಾಡಿದರು.

ADVERTISEMENT

ಕುದ್ಮುಲ್ ರಂಗರಾಯರು ತಮ್ಮ ಭಾವ ಉಳ್ಳಾಲ ರಘುನಾಥಯ್ಯನವರ ಜೊತೆಗೆ 1897ರಲ್ಲಿ ಮಂಗಳೂರಿನ ಕೊಡಿಯಾಲಬೈಲ್‌ನಲ್ಲಿ ಡಿಪ್ರೆಸ್ಡ್ ಕ್ಲಾಸ್ ಮಿಷನ್‌ನ್ನು ಸ್ಥಾಪಿಸಿದರು. ಡಿಸಿಎಂ ಮೂಲಕ ದಲಿತ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಶಾಲೆಗಳ ಜೊತೆಗೆ ಹಾಸ್ಟೆಲ್‌ಗಳನ್ನು ತೆರೆದರು. ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಿದ ಮೊದಲ ದಾಖಲೆ ಇದು. ಈ ಡಿಸಿಎಂ ಹಾಸ್ಟೆಲ್‌ಗಳಲ್ಲಿ ಎಲ್ಲಾ ಧರ್ಮಗಳ ಪ್ರಾರ್ಥನೆಗಳನ್ನು ಹೇಳಿಕೊಟ್ಟರು. ಗಾಯತ್ರಿ ಮಂತ್ರ, ಕುರಾನ್‌ನ ಒಂದು ಭಾಗ ಮತ್ತು ಕ್ರೈಸ್ತ ಧರ್ಮದ ಕೀರ್ತನೆಯನ್ನು ಮಕ್ಕಳಿಗೆ ಬೋಧಿಸಿದರು. ಶೇಡಿಗುಡ್ಡೆಯಲ್ಲಿ ದಲಿತ ಹುಡುಗಿಯರಿಗೆ ವಸತಿ ಶಾಲೆಯನ್ನು ತೆರೆದು ಅದರಲ್ಲಿ ಕೌಶಲ ಅಭಿವೃದ್ಧಿಗೆ ಅವಕಾಶ ಕಲ್ಪಿಸಿದರು.

ರಂಗರಾಯರು ಕೊರಗರು ಮತ್ತು ಇತರ ದಲಿತ ಸಮುದಾಯದವರಿಗೆ ಸರ್ಕಾರಿ ಭೂಮಿಯನ್ನು ಮತ್ತು ದಾನಿಗಳಿಂದ ಪಡೆದ ಭೂಮಿಯನ್ನು ಹಂಚಿದರು. ಮಂಗಳೂರಿನ ಬಿಜೈ ಕಾಪಿಕಾಡು, ದಡ್ಡಲಕಾಡು ಮುಂತಾದ ಕಡೆಗಳಲ್ಲಿ ಭೂಮಾಲೀಕರಿಂದ ಹಣಕೊಟ್ಟು ಭೂಮಿಯನ್ನು ಪಡೆದುಕೊಂಡು ದಲಿತರಿಗೆ ಹಂಚಿದರು. ಜೊತೆಗೆ ಅವರಿಗೆ ಮನೆಕಟ್ಟಲು ಧನಸಹಾಯ ಮಾಡಿದರು. ಈ ರೀತಿಯ ಭೂದಾನ ಕಾಯಕವನ್ನು ಉಡುಪಿ ಪರಿಸರದ ಪ್ರದೇಶಕ್ಕೂ ವಿಸ್ತರಿಸಿದರು. ಮಂಗಳೂರು ನಗರ ಪರಿಸರದ ಅನೇಕ ಜಾಗಗಳಲ್ಲಿ ಈಗ ಇರುವ ದಲಿತರ ಕಾಲೊನಿಗಳು ಕುದ್ಮುಲ್ ರಂಗರಾಯರು ವಿತರಣೆ ಮಾಡಿದ ಸ್ಥಳಗಳು.

ರಂಗರಾಯರು 1888ರಲ್ಲಿ ಮೊದಲ ಬಾರಿ ಮಂಗಳೂರಿನ ಡಿಸ್ಟ್ರಿಕ್ಟ್ ಬೋರ್ಡ್ ಮತ್ತು ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸದಸ್ಯರು ಆಗುವ ಅವಕಾಶ ಕಲ್ಪಿಸಿದರು. ಡಿಸ್ಟ್ರಿಕ್ಟ್ ಬೋರ್ಡ್‌ಗೆ ಅಂಗಾರ ಮಾಸ್ತರ್ ಮತ್ತು ಮುನ್ಸಿಪಲ್ ಕೌನ್ಸಿಲ್‌ಗೆ ಗೋವಿಂದ ಮಾಸ್ತರ್ ನೇಮಕಗೊಂಡರು.

ಕುದ್ಮುಲ್‌ ರಂಗರಾವ್‌ ಸಮಾಧಿ

ಮಹಿಳೆಯರ ಸಬಲೀಕರಣದ ಅಂಗವಾಗಿ‌ ರಂಗರಾಯರು ವಿಧವಾ ವಿವಾಹ, ಅಂತರ್ ಜಾತಿ ವಿವಾಹಗಳನ್ನು ನಡೆಸಿದರು. ವಿಧವೆಯರ ಶಿಕ್ಷಣಕ್ಕೆ ಮಹತ್ವ ಕೊಟ್ಟರು; ನಿರ್ಗತಿಕ ಮಹಿಳೆಯರ ಪುನರ್ವಸತಿಗಾಗಿ ಅನಾಥಾಶ್ರಮಗಳನ್ನು ಸ್ಥಾಪಿಸಿದರು. ಗಂಡನಿಂದ ಪರಿತ್ಯಕ್ತರಾದ ಹೆಂಗಸರ ಮದುವೆಗೆ ವ್ಯವಸ್ಥೆ ಮಾಡುತ್ತಿದ್ದರು. ದೇವದಾಸಿ ಪದ್ಧತಿಯ ವಿರುದ್ಧ ಆಂದೋಲನವನ್ನು ಆರಂಭಿಸಿ, ಕರಪತ್ರಗಳ ಮೂಲಕ ಭಾಷಣಗಳ ಮೂಲಕ ಆ ಅನಿಷ್ಟ ಪದ್ಧತಿಯನ್ನು ಖಂಡಿಸಿದರು.

ರಂಗರಾಯರು ಕೈದಿಗಳ ಪುನರ್ವಸತಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿದರು. ಅವರು ಜೈಲಿಗೆ ಭೇಟಿ ಕೊಟ್ಟು ಕೈದಿಗಳ ಬದುಕನ್ನು ಉತ್ತಮಪಡಿಸಲು ಮತ್ತು ಅವರಿಗೆ ಸಮಾಜದಲ್ಲಿ ಒಳ್ಳೆಯ ಸ್ಥಾನ ಕಲ್ಪಿಸಲು ನೀತಿಬೋಧೆ ಮಾಡುತ್ತಿದ್ದರು, ಅವರ ಪರಿವರ್ತನೆಯ ಬದುಕಿಗೆ ನೆರವನ್ನು ನೀಡುತ್ತಿದ್ದರು.

ಕುದ್ಮುಲ್ ರಂಗರಾವ್ ಅವರು ಒಮ್ಮೆ ಹೇಳಿದ ಈ ಮಾತುಗಳನ್ನು ಮಂಗಳೂರು ನಂದಿಗುಡ್ಡೆಯ ಬ್ರಹ್ಮ ಸಮಾಜದ ಆವರಣದ ಒಳಗಿನ ಅವರ ಸಮಾಧಿಯಲ್ಲಿ ದಾಖಲಿಸಲಾಗಿದೆ: 'ನನ್ನ ಶಾಲೆಯಲ್ಲಿ ಕಲಿತ ಒಬ್ಬ ದಲಿತ ಜನಾಂಗದ ಹುಡುಗ ಸ‌ರ್ಕಾರಿ ನೌಕರಿಗೆ ಸೇರಿ, ನಮ್ಮೂರ ರಸ್ತೆಯಲ್ಲಿ ಕಾರಿನಲ್ಲಿ ಓಡಾಡಬೇಕು. ಆಗ ಎದ್ದ ಧೂಳು ನನ್ನ ತಲೆಗೆ ತಾಗಿದರೆ ನನ್ನ ಜನ್ಮ ಸಾರ್ಥಕ.'

ಕುದ್ಮುಲ್ ರಂಗರಾಯರು ಮಾಡಿದ ಸಾಮಾಜಿಕ ಸುಧಾರಣೆಗಳು ಹಿಂದಿನ ದಕ್ಷಿಣ ಕನ್ನಡ ಜಿಲ್ಲೆಗೆ ಪರಿಮಿತ ಆಗಿದ್ದರೂ ಅದರ ಪ್ರತಿಫಲನಗಳು ಮಹಾತ್ಮಾ ಗಾಂಧಿಯವರ ಸಾಮಾಜಿಕ ಚಟುವಟಿಕೆಗಳಿಗೆ ಕೂಡಾ ಪ್ರೇರಣೆಯನ್ನು ಕೊಟ್ಟಿವೆ. ಕರ್ನಾಟಕದ ಈ ಪ್ರಾತಃಸ್ಮರಣೀಯ ಸಾಮಾಜಿಕ ಸುಧಾರಕರನ್ನು ಸಮಗ್ರ ಕರ್ನಾಟಕ ಯೋಗ್ಯ ರೀತಿಯಲ್ಲಿ ಸ್ಮರಿಸುವ ಕೆಲಸ ಆಗಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.