ADVERTISEMENT

ನಾವು ಬೆಂಗಳೂರು ಬಂಧುಗಳು

ಅಬ್ದುಲ್ ರಹಿಮಾನ್
Published 6 ಏಪ್ರಿಲ್ 2024, 23:30 IST
Last Updated 6 ಏಪ್ರಿಲ್ 2024, 23:30 IST
ಸರ್ವಜನಾಂಗದ ಶಾಂತಿಯ ತೋಟದಲ್ಲಿ ನಾವು...
ಸರ್ವಜನಾಂಗದ ಶಾಂತಿಯ ತೋಟದಲ್ಲಿ ನಾವು...   

‘ಓದಿಗಾಗಿ ಬೆಂಗಳೂರಿಗೆ ಬಂದೆ. ಇಲ್ಲಿನ ಜನ, ಸ್ಥಳ ಎಲ್ಲವೂ ಹೊಸದು. ಕಾಲೇಜು, ಪಿ.ಜಿ ವಾತಾವರಣ ಹಿಂಸೆ ಎನಿಸುತ್ತಿತ್ತು. ಒಂಟಿತನದಿಂದ ಮಾನಸಿಕವಾಗಿ ಜರ್ಜರಿತನಾಗಿದ್ದೆ. ವಿ ಪ್ಲೇ ಬೆಂಗಳೂರು ಎನ್ನುವ ಗುಂಪಿನ ಬಗ್ಗೆ ಸ್ನೇಹಿತೆಯಿಂದ ತಿಳಿದುಕೊಂಡು ಅಲ್ಲಿಗೆ ಹೋದೆ. ಅಲ್ಲಿ ಹಲವರ ಪರಿಚಯವಾಯಿತು. ಬೇರೆ ಪಿ.ಜಿ ಹುಡುಕಲು ಸಹಾಯ ಮಾಡಿದರು. ಈಗ ಬೆಂಗಳೂರು ಸ್ವಂತ ಊರಿನಂತಾಗಿದೆ. ಕನ್ನಡ ನನ್ನ ಭಾಷೆಯಾಗಿದೆ. ಹೊಸ ಭರವಸೆ ಮೂಡಿದೆ’– ಹೀಗೆ ಖುಷಿಯಿಂದಲೇ ಮಾತನಾಡುತ್ತಿದ್ದರು ಮಹಾರಾಷ್ಟ್ರದ ನಾಸಿಕ್‌ನ ಪರಿಮಳ್. ಅವರ ಮಾತು ಇನ್ನೂ ಮುಗಿದಿರಲೇ ಇಲ್ಲ. ಅಷ್ಟರಲ್ಲಿ ಬಿಹಾರದ ಔರಂಗಾಬಾದ್‌ನ ಸತ್ಯಶೀಲ್‌ ಅವರು ಏನನ್ನೋ ಹೇಳುವ ಉತ್ಸಾಹ ತೋರಿಸಿದರು.

‘ನಾನೂ ಕೂಡ ಆಸೆಗಣ್ಣಿನಿಂದ ಬೆಂಗಳೂರಿಗೆ ಕಾಲಿಟ್ಟವನು. ಕೆಲವೇ ದಿನಗಳಲ್ಲಿ ಲಾಕ್‌ಡೌನ್‌ ಆಯಿತು. ಕಾಂಕ್ರಿಟ್ ಕಾಡಲ್ಲಿ ಒಂಟಿಯಾದೆ. ಲಾಕ್‌ಡೌನ್‌ ಬಳಿಕ ಏಕತಾನತೆ ನಿವಾರಿಸಿಕೊಳ್ಳಲು ಏನಾದರೂ ಮಾಡಬೇಕು ಎನ್ನುವಾಗ ವಿ ಪ್ಲೇ ತಂಡ ಸಿಕ್ಕಿತು. ಕುಸಿದಿದ್ದ ನನ್ನಲ್ಲಿ ಹೊಸ ಭರವಸೆ ಮೂಡಿತು. ಈಗ ನನ್ನ ಕುಟುಂಬದಂತೆ ದೊಡ್ಡ ತಂಡವೇ ಇದೆ. ಅಪಘಾತವಾಗಿ ಆಸ್ಪತ್ರೆಯಲ್ಲಿದ್ದಾಗಲೂ ನನ್ನ ಜತೆಗೆ ನಿಂತಿದ್ದು ಇಲ್ಲಿನ ಸ್ನೇಹಿತರು’ ಇಷ್ಟು ಹೇಳುವ ಹೊತ್ತಿಗೆ ಸತ್ಯಶೀಲ್ ಕಣ್ಣಲ್ಲಿ ನೀರಿತ್ತು.

ಬೆಂಗಳೂರಿನ ಸಿಂಗಲ್ ಪೇರೆಂಟ್ ವಾರಿಜಾ(ಹೆಸರು ಬದಲಿಸಲಾಗಿದೆ) ಅವರದು ಬೇರೆಯೇ ಕತೆ. ಇವರು 31 ವರ್ಷಕ್ಕೆ ಪತಿಯಿಂದ ದೂರವಾದರು. ಮಡಿಲಲ್ಲಿ ಆರು ವರ್ಷದ ಮಗನಿದ್ದ. ಆತನಿಗಾಗಿ ನಿತ್ಯ ಕೋರ್ಟ್‌ಗೆ ಅಲೆದಾಡಬೇಕಾಗಿತ್ತು. ಒಂಟಿ ಜೀವನ, ಮಾನಸಿಕ ತೊಳಲಾಟ, ಕಾನೂನು ಸಮರದಿಂದಾಗಿ ಜೀವನವೇ ಸಾಕಾಗಿ ಹೋಗಿತ್ತು. ಅವರ ಬದುಕಲ್ಲಿ ಹೊಸ ಆಸೆ ಚಿಗುರೊಡೆಯುವಂತೆ ಮಾಡಿದ್ದು ಇದೇ ವಿ ಪ್ಲೇ ತಂಡ.

ADVERTISEMENT

ಬೆಂಗಳೂರಿನ ಇಬ್ಬರು ಯುವಕರ ವಿಭಿನ್ನ ಆಲೋಚನೆಯಿಂದ ರೂಪುಗೊಂಡ ‘ವಿ ಪ್ಲೇ ಬೆಂಗಳೂರು’ ತಂಡವು ಹೆಮ್ಮೆಪಟ್ಟುಕೊಳ್ಳುವ ಇಂತಹ ಹತ್ತಾರು ನಿದರ್ಶನಗಳಿಗೆ ಸಾಕ್ಷಿಯಾಗಿದೆ. ಕುಟುಂಬ, ಸ್ನೇಹಿತರನ್ನು ಬಿಟ್ಟು, ದೇಶದ ಹಲವು ಭಾಗಗಳಿಂದ ಕನಸುಗಳನ್ನು ಹೊತ್ತು ಬರಿಗೈಯಲ್ಲಿ ಬೆಂಗಳೂರಿಗೆ ಬಂದ ಹಲವರಿಗೆ ಈ ‘ಕಮ್ಯೂನಿಟಿ’ ಬದುಕಲು ಸ್ಫೂರ್ತಿ ತುಂಬಿದೆ. ಮರುಭೂಮಿಯ ಓಯಸಿಸ್‌ನಂತೆ ಹಲವರ ಪಾಲಿಗೆ ನೆಮ್ಮದಿಯ ತಾಣವಾಗಿದೆ.

ನಾನಲ್ಲ, ನಾವು

ವಾಸ್ತುಶಿಲ್ಪಿಗಳಾದ ಬೆಂಗಳೂರಿನ ಅನಘಾ ಮಂಜುನಾಥ್ ಹಾಗೂ ಪ್ರಜ್ವಲ್ ತಲೆಯಲ್ಲಿ ಎರಡು ವರ್ಷದ ಹಿಂದೆ ಹುಟ್ಟಿದ ಯೋಚನೆಯಿದು. ಬೆಂಗಳೂರಿನಲ್ಲಿ ಒಬ್ಬಂಟಿಯಾಗಿರುವ, ಸ್ನೇಹಕ್ಕಾಗಿ ಹಂಬಲಿಸುವ, ಜನರೊಂದಿಗೆ ಬೆರೆಯಬಯಸುವ, ಜನರ ಸಾಂಗತ್ಯ ಬಯಸುವವರಿಗಾಗಿ ಹುಟ್ಟಿದ್ದೆ ‘ವಿ ಪ್ಲೇ ಬೆಂಗಳೂರು’.

‘ಕಾಲೇಜು ಮುಗಿಸಿದ ಬಳಿಕ ನನ್ನ ಸ್ನೇಹಿತರಲ್ಲಿ ಕೆಲವರು ಉನ್ನತ ಶಿಕ್ಷಣಕ್ಕಾಗಿ ಬೇರೆಡೆ ಹೋದರು. ಮದುವೆಯಾಗಿ ಕೆಲವರು ಚದುರಿದರು. ಸ್ನೇಹಿತರ ಬಳಗ ದೂರಾವಾಯಿತು. ಜೊತೆಯಲ್ಲಿ ಕೆಲಸ ಮಾಡುವವರಿಂದ ಗೆಳೆತನ ಸಿಗಲಿಲ್ಲ. ಕೋವಿಡ್ ಬಳಿಕ ಬದುಕಿನ ಚಿತ್ರಣವೇ ಬದಲಾಯಿತು. ಮಾನಸಿಕ ನೆಮ್ಮದಿ ಕಳೆದುಕೊಂಡ ಹಲವರು ಸಿಕ್ಕರು. ಭಾಷೆ, ಸಂಸ್ಕೃತಿಯ ಕಾರಣಕ್ಕೆ ಒಂಟಿಯಾದವರೂ ಇದ್ದರು. ಅಂಥವರಿಗೆಲ್ಲಾ ವೇದಿಕೆ ಸಿದ್ಧಪಡಿಸಿದರೆ ಹೇಗೆ ಅಂದುಕೊಂಡಾಗ ಆರಂಭವಾಗಿದ್ದೇ ವಿ ಪ್ಲೇ ಬೆಂಗಳೂರು. ನನಗೆ ಸಾಥ್‌ ನೀಡಿದ್ದು ಸಹೋದ್ಯೋಗಿ ಪ್ರಜ್ವಲ್’ ಎನ್ನುತ್ತಾರೆ ಅನಘಾ.

‘ಬೆಂಗಳೂರಿನಲ್ಲಿ ನಿಮಗೆ ಹೊಸ ಸ್ನೇಹಿತರು ಬೇಕೇ? ಹಾಗಿದ್ದರೆ ನಮ್ಮನ್ನು ಸಂಪರ್ಕಿಸಿ’ ಎಂದು ಸೋಶಿಯಲ್ ಮಿಡಿಯಾ ಪೋಸ್ಟ್ ಹಾಕಿದೆ. ಮೊದಲಿಗೆ ಪ್ರತಿಕ್ರಿಯೆ ನೀರಸವಾಗಿತ್ತು. ನಿಧಾನಕ್ಕೆ ಪ್ರತಿಕ್ರಿಯೆ ಬರತೊಡಗಿದವು. ವಾರಾಂತ್ಯದಲ್ಲಿ ಭೇಟಿಯಾಗುವುದರಿಂದ ಹಾಗೂ ಯಾವುದೇ ಪ್ರವೇಶ ಶುಲ್ಕ ಇರದಿರುವುದರಿಂದ ನಮಗೆ ನಿಭಾಯಿಸಲಾಗದಷ್ಟು ಮಂದಿ ಬರತೊಡಗಿದರು. ಬರುವವರ ಸಂಖ್ಯೆ ನಿಯಂತ್ರಿಸಲು ನೋಂದಣಿ ವ್ಯವಸ್ಥೆ ಆರಂಭಿಸಿದೆವು. ಶುಕ್ರವಾರ ಸಂಜೆ ಇನ್‌ಸ್ಟಾಗ್ರಾಂ ಮೂಲಕ ನೋಂದಣಿ ಮಾಡಿಸಿಕೊಳ್ಳುತ್ತೇವೆ. ಕೆಲವೇ ನಿಮಿಷಗಳಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ನೋಂದಾಯಿಸುತ್ತಾರೆ. ಮೊದಲ 200 ಮಂದಿಗಷ್ಟೇ ಅವಕಾಶ ಕೊಡುತ್ತೇವೆ. ಇನ್‌ಸ್ಟಾಗ್ರಾಮ್‌ನಲ್ಲಿ ನಮ್ಮ ಪೇಜ್‌ ಈಗ ಲಕ್ಷ ಫಾಲೋವರ್ಸ್‌ ದಾಟಿದೆ’ ಎಂದು ಅನಘಾ ಹೆಮ್ಮೆಯಿಂದ ಹೇಳಿದರು.

ಅನಘಾ ಮಂಜುನಾಥ್ ಹಾಗೂ ಪ್ರಜ್ವಲ್

ಹೊಸ ಸ್ನೇಹಿತರು.. ಆಟ.. ಖುಷಿ..

ಭಾನುವಾರ ಕಬ್ಬನ್‌ ಪಾರ್ಕ್‌ನಲ್ಲಿ ಸೇರುವ ಈ ತಂಡಕ್ಕೆ ದೇಶದ ವಿವಿಧ ಭಾಗಗಳ, ವಿಭಿನ್ನ ಸಂಸ್ಕೃತಿ ಹಾಗೂ ಭಾಷೆಗಳ ಜನ ಬರುತ್ತಾರೆ. ಪರಸ್ಪರ ಪರಿಚಯ ಮಾಡಿಕೊಳ್ಳುತ್ತಾರೆ. ಬಂದವರನ್ನು ತಂಡಗಳಾಗಿ ವಿಭಜಿಸಿ ವಿವಿಧ ಒಳಾಂಗಣ ಆಟಗಳನ್ನು ಆಡಿಸುತ್ತಾರೆ. ನೃತ್ಯ, ಸಂಗೀತ, ಹಾಡು, ಕವನ, ಚಿತ್ರಕಲೆ, ಅಭಿನಯ, ಬೆಂಕಿ ಇಲ್ಲದೆ ಅಡುಗೆ ತಯಾರಿಕೆ, ಪಾಟ್‌ ಲಕ್, ಟ್ರೆಷರ್ ಹಂಟ್– ಹೀಗೆ ಹಲವು ಬಗೆಯ ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ. ಭಾಷೆ, ಪ್ರಾದೇಶಿಕತೆ, ವರ್ಗ, ಲಿಂಗ, ವಯಸ್ಸು, ಧರ್ಮದ ಹಂಗಿಲ್ಲದೆ ಬೆರೆಯುತ್ತಾರೆ. ಅಪರಿಚಿತರಾಗಿ ಬಂದವರು ಸ್ನೇಹಿತರಾಗಿ ಹಿಂದಿರುಗುತ್ತಾರೆ. ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ರಚಿಸಿಕೊಂಡು ಸಂಪರ್ಕದಲ್ಲಿರುತ್ತಾರೆ.

ವಿ ಪ್ಲೇನಲ್ಲಿ ಆಯಾ ಕಾರ್ಯಕ್ರಮಕ್ಕೆ ತಗಲುವ ಖರ್ಚನ್ನು ಎಲ್ಲರೂ ಹಂಚಿಕೊಳ್ಳುತ್ತಾರೆ. ಮೊಬೈಲ್, ಅಂತಸ್ತು, ಇತ್ಯಾದಿಗಳನ್ನು ಬದಿಗಿಟ್ಟು ಸಂಭ್ರಮಿಸುತ್ತಾರೆ. ಆಗಾಗ್ಗೆ ಪ್ರವಾಸಕ್ಕೂ ಹೋಗುತ್ತಾರೆ. ನೊಂದವರಿಗೆ ಹೆಗಲಾಗುತ್ತಾರೆ. ಸಂಭ್ರಮದಲ್ಲಿ ಜೊತೆಯಾಗುತ್ತಾರೆ. ಗರ್ಭಕಂಠದ ಕ್ಯಾನ್ಸರ್, ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿಯೂ ನಡೆದಿದೆ. ಹಲವರ ಬದುಕಿಗೆ ಸ್ಫೂರ್ತಿ ಸಿಕ್ಕಿದೆ. ವ್ಯಕ್ತಿತ್ವ ವಿಕಸನಕ್ಕೆ ವೇದಿಕೆಯಾಗಿದೆ. ಕತ್ತಲ ಬದುಕಿಗೆ ಮಿಂಚುಹುಳುವಿನಂತಿದೆ ಈ ತಂಡ.

ಒಂದೇ ತೋಟದ ಹೂವುಗಳು

2023ರಲ್ಲಿ ಬಾಲೇಶ್ವರ ರೈಲು ದುರಂತವಾಗಿದ್ದರಿಂದ, ಹಲವು ಮಂದಿ ಊರಿಗೆ ಹೋಗಲು ಕಾಯ್ದಿರಿಸಿದ್ದ ರೈಲು ಟಿಕೆಟ್‌ಗಳು ರದ್ದಾಗಿದ್ದವು. ಅದೇ ವೇಳೆ ದೀಪಾವಳಿ ಬಂದಿತ್ತು. ಕುಟುಂಬದ ಜೊತೆ ಹಬ್ಬ ಮಾಡಲಾಗದ ಬೇಸರವನ್ನು ಇಲ್ಲವಾಗಿಸಲು ಎಲ್ಲರೂ ಒಂದೆಡೆ ಸೇರಿದೆವು. ಬಂದವರು ಅವರ ಊರಿನ ತಿಂಡಿ–ತಿನಿಸು ತಯಾರಿಸಿ ತಂದಿದ್ದರು. ಇಡ್ಲಿ–ಚಟ್ನಿ, ಛೋಲೆ ಭಟೂರೆ, ಪರೋಟ, ದಾಲ್–ಧೋಕ್ಲ.. ಹೀಗೆ ವಿವಿಧ ಭಾಗಗಳ ಆಹಾರವನ್ನು ಹಂಚಿಕೊಂಡು ತಿಂದೆವು. ಅವರ ಸಂಸ್ಕೃತಿಯಲ್ಲಿನ ಹಬ್ಬ ಆಚರಣೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಉತ್ತರ–ದಕ್ಷಿಣದ ಭೇದವಿಲ್ಲದೇ ಸ್ವಂತಮನೆಯಲ್ಲೇ ದೀಪಾವಳಿ ಆಚರಿಸಿದಷ್ಟು ಖುಷಿ. ಇಲ್ಲಿಗೆ ಬಂದವರು ಫ್ಲ್ಯಾಟ್‌ಮೇಟ್‌ಗಳಾಗಿದ್ದಾರೆ. ಸುಮಾರು 70 ಮಂದಿಗೆ ಕೆಲಸ ಸಿಕ್ಕಿದೆ. ಸಂಗಾತಿಗಳನ್ನು ಹುಡುಕಿಕೊಂಡು ಮದುವೆ ಆದವರೂ ಇದ್ದಾರೆ. ಇವೆಲ್ಲವನ್ನೂ ಪ್ರಜ್ವಲ್‌ ಒಂದೇ ಉಸಿರಿಗೆ ಹೇಳಿದರು.

ಕೇಕ್ ಮೀಟ್‌ ಅಪ್
ಗಿಫ್ಟ್‌ ಬಾಕ್ಸ್‌ಗಳ ಆರ್ಡರ್ ತೆಗೆದುಕೊಳ್ಳುವ ಸಣ್ಣದೊಂದು ಸ್ಟಾರ್ಟಪ್ ನನ್ನದು. ವಿ ಪ್ಲೇಗೆ ಬಂದ ಬಳಿಕ ಹೆಚ್ಚಿನ ಜನರ ಪರಿಚಯವಾಯಿತು. ನನ್ನ ಬ್ಯುಸಿನೆಸ್ ಬಗ್ಗೆ ಅಲ್ಲಿದ್ದವರಿಗೆ ಹೇಳಿದೆ. ಈ ತಂಡದಿಂದ ಪರಿಚಯವಾದವರಿಂದಲೇ ನನಗೆ ಲಕ್ಷಾಂತರ ಮೌಲ್ಯದ ಆರ್ಡರ್ ಸಿಕ್ಕಿತು.
–ಮಯೂರಿ ಜಿಂದಾಲಿಯಾ, ಅಸ್ಸಾಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.