ಈಗ ತಮ್ಮನ ಮನೆಯಲ್ಲಿರುವ ಅಮ್ಮ ತಮ್ಮ ದೀರ್ಘ ಅನುಭವದಿಂದ ತಾವೇ ರೂಪಿಸಿಕೊಂಡ ಜಾಣತನದ ಜೀವನ ವಿಧಾನದಿಂದ ತೊಂಬತ್ತರ ಗಡಿ ಮುಟ್ಟುತ್ತಿದ್ದಾರೆ. ಕಾಲ ರಾಯನಿಗೂ ಸವಾಲು ಹಾಕಿ ಹವಣಿಸುವ ಇಚ್ಛಾಶಕ್ತಿ, ಆಸರೆಗೋಲನ್ನೂ ಒಮ್ಮೊಮ್ಮೆ ಮೂಲೆಗೆ ತಳ್ಳಿ ಹೇಗೋ ದಬಾಯಿಸಿಕೊಂಡು ನಡೆದೇ ಬಿಡುತ್ತದೆ ಆ ಹಿರಿಯ ಜೀವ.
ತುಳಸೀಕಟ್ಟೆಯವರೆಗೂ ತಪ್ಪು ಹೆಜ್ಜೆಗಳನಿಡುವ ಕಂದನಂತೆ ತಟ್ಟಾಡುತ್ತ ನಡೆದೇ ಬಿಡುತ್ತಾರೆ. ಅಲ್ಲಿ ಪ್ರಾರ್ಥನೆ ಸಲ್ಲಿಸಿ ಹಿಂತಿರುಗಿ ಈ ದೊಡ್ಡ ಮಗು ದೇವರ ಮನೆಗೆ ಬಂದು ನಮಿಸಿ ತಮ್ಮ ಕೋಣೆಗೆ ಹಿಂತಿರುಗುತ್ತಾರೆ. ಅಲ್ಲೇ ಎಲ್ಲೋ ಮೂಲೆಯಲ್ಲಿರುವ ಆಸರೆಗೋಲು ಭಲಾ ಮುದುಕಿ! ಎಂದು ಅಚ್ಚರಿಯಿಂದ ನೋಡುತ್ತಿದ್ದಂತೆ ಅನಿಸುತ್ತದೆ, ಬಿದ್ದರೆ ತುಂಬ ಕಷ್ಟ! ಎಂದು ಸಾವಿರ ಸಲ ಮನೆಯವರೆಲ್ಲರೂ ಹೇಳಿದರೂ ಯಾರ ಮಾತಿಗೂ ಕ್ಯಾರೆ ಎನ್ನುವುದಿಲ್ಲ.
ಆದರೂ ಅಮ್ಮ ಮನುಷ್ಯರು! ಕಾಲನ ಶಕ್ತಿ ಅಪಾರ, ಅಪರಂಪಾರ! ಅವರ ಮೆದುಳಿಗೆ ಕೈಯಿಟ್ಟು ನೆನಪಿನ ಶಕ್ತಿಯನ್ನೆಲ್ಲಾ ಹೀರಿಬಿಟ್ಟಿದ್ದಾನೆ, ಮರೆವಿನ ಸುಳಿಯಲಿ ಸಿಕ್ಕು ಸಂಕಟಪಡುವ ತಾಯಿಯನ್ನು ನೋಡಿ ನಾನೂ ಸಂಕಟಪಟ್ಟಿದ್ದೇನೆ.
ಒಮ್ಮೊಮ್ಮೆ ಇದೇ ಕಾರಣದಿಂದ ಮನೆಯವರನ್ನೆಲ್ಲಾ ಕಿರಿಕಿರಿಗೆ ನೂಕಿ, ತಮ್ಮದೇನೂ ಇದರಲ್ಲಿ ಪಾತ್ರವೇ ಇಲ್ಲವೆಂಬಂತೆ ಅಮಾಯಕ ನಗೆ ಚೆಲ್ಲುತ್ತಾರೆ. ಮರೆವಿನಲಿ ಅರಿವಿಲ್ಲದೆ ನಡೆದು ಹೋದ ಘಟನೆಗಳು! ಅಚ್ಚರಿ ಎಂದರೆ ತಮ್ಮ ಜೀವನದ ಅತ್ಯಂತ ಹಳೆಯ ಘಟನೆಗಳನ್ನೆಲ್ಲಾ ಒಂದಿಷ್ಟೂ ಬಿಡದೆ ಸ್ವಾರಸ್ಯವಾಗಿ ಬಣ್ಣಿಸುವ ಅಮ್ಮನಿಗೆ ಈಗ ಹೇಳಿದ್ದು ಮುಂದಿನ ಕ್ಷಣದಲ್ಲೇ ನೆನಪಿರುವುದಿಲ್ಲ.
ಇಲ್ಲೇ ಇಟ್ಟಿದ್ದೆ, ಎಲ್ಲಿ ಹೋಯಿತು? ದಿನವಿಡೀ ಇದೇ ಮಂತ್ರ, ಬಿ.ಪಿ ಮಾತ್ರೆ ತಗೊಂಡೆನಾ? ಇಲ್ಲವಾ? ಶುಗರ್ ಮಾತ್ರೆ ತಗೊಂಡೆನೊ ಇಲ್ಲವೋ? ಎಂದು ಸದಾ ಅದಕ್ಕೆ, ಇದಕ್ಕೆ ಎಂತೆಂಥದಕ್ಕೋ ತಡಕಾಡುತ್ತಾರೆ. ಎಲ್ಲೋ ಇಟ್ಟು ಸದಾ ಮರೆತು ತಿರು ತಿರುಗಿ ಅದದನ್ನೇ ಹುಡುಕುತ್ತಾ ಸದಾ ಪ್ರಶ್ನಾರ್ಥಕ ಭಾವದಲ್ಲಿ ಮುಖವಿಟ್ಟುಕೊಂಡು ಮಗುವಿನಂತಾಡುವ ಅಮ್ಮನ ಮುಖವನ್ನು ಬೊಗಸೆಯಲ್ಲಿ ಹಿಡಿದು ‘ಹೀಗೆ ಹೇಗಾದಿರಿ? ಅಮ್ಮಾ’ ಎಂದು ಮುದ್ದಿಸಬೇಕೆನಿಸುತ್ತದೆ. ಹಾಗೇ ಕಣ್ಣುಗಳು ಹನಿಗೂಡುತ್ತವೆ!
ಮರೆವು ಹೇಗಾದರಿರಲಿ, ಅವರ ಓದುವ ಶಕ್ತಿ ಈ ವಯಸ್ಸಿನಲ್ಲಿ ಅನ್ಯಾದೃಶವಾದುದು. ಕಣ್ಣುಗಳಲ್ಲಿ ಇನ್ನೂ ಆರದ ಜ್ಯೋತಿಯಿದೆ, ಓದುವ ಹಂಬಲವಿದೆ. ತೊಂಬತ್ತರ ಹರೆಯದಲ್ಲಿ ಇದೇನು ಈ ಅಮ್ಮನ ಅರಿವಿನ ಹಂಬಲ! ಎಂದೆಲ್ಲ ನನಗೆ ಕುತೂಹಲ.
ದೈನಿಕ, ಪಾಕ್ಷಿಕ, ಮಾಸಿಕ, ವಾರ್ಷಿಕ ಯಾವುದಾದರೂ ಸರಿ. ಕಣ್ಣುಗಳಿಗೆ ಕನ್ನಡಕವಿಲ್ಲದೆ ನಿರಂತರ ವಾಚಕಿಯಾಗುವ ಅಮ್ಮನ ಪರಿ ಅಚ್ಚರಿ ಮೂಡಿಸುತ್ತದೆ. ಒಂದಿಷ್ಟು ವರ್ಷಗಳ ಕೆಳಗೆ ಕನ್ನಡಕ ಹಾಕುತ್ತಿದ್ದವರು ಈಗ ಅದರ ಹಂಗನ್ನೂ ತೊರೆದಿದ್ದಾರೆ. ಓದುವುದೇ ಕಾಯಕ, ಅದೇ ಅವರ ಒಂಟಿತನ ನೀಗಿಸಿರುವ ಎಡೆಬಿಡದ ಸಂಗಾತಿ. ಸದಾ ಅವರ ಮಂಚದ ಮೇಲೆ ತಮ್ಮ ಪಕ್ಕದಲ್ಲೇ ಒಪ್ಪ ಓರಣವಾಗಿ ಜೋಡಿಸಿರುವ ಪುಸ್ತಕಗಳು, ಪತ್ರಿಕೆಗಳನ್ನು ಕಾಣಬಹುದು.
ಇನ್ನು ಅಮ್ಮನ ಹಲ್ಲುಗಳ ಬಗ್ಗೆ ಹೇಳಬೇಕೆಂದರೆ, ಕೆಲವು ವರ್ಷಗಳ ಹಿಂದೆಯೇ ಒಂದೊಂದೇ ಅವರೊಂದಿಗೆ ಜಗಳವಾಡಿಕೊಂಡು ಕೊಡಬಾರದ ನೋವು ಕೊಟ್ಟು ಕೆಲವು ಬಿದ್ದು ಹೋದರೆ, ಕೆಲವನ್ನು ಡಾಕ್ಟರೇ ತಮ್ಮ ಇಕ್ಕುಳದಿಂದ ಕಿತ್ತೆಸೆದು, ಹಲ್ಲಿನ ಸೆಟ್ಟು ಕರುಣಿಸಿದ್ದಾರೆ. ಅದು ಈಗ ಅವರ ಬಾಯಿಯನ್ನು ಅಲಂಕರಿಸಿದೆ.
ಅಮ್ಮ ಒಂದು ಕಾಲದಲ್ಲಿ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಈಗಲೂ ಸ್ವಲ್ಪ ಉಬ್ಬಿಸಿ ‘ಅಮ್ಮಾ ನಿಮ್ಮ ಇಷ್ಟದ ಹಾಡು ಹಾಡಿ’ ಎಂದರೆ ನಡುಗುವ ಸ್ವರದಲ್ಲೇ ‘ಕರೆಯೇ ಕೋಗಿಲೆ ಮಾಧವನಾ, ಕಾತರ ತುಂಬಿದ ಈ ನಯನಾ, ಕಾಣಲು ಕಾದಿದೆ ಪ್ರಿಯತಮನಾ...’ ಗಾನಧಾರೆ ಹೊನಲಾಗಿ ಹರಿಯುತ್ತದೆ. ಈಗಲೂ ಆ ದನಿಯ ಬನಿ ಅಚ್ಚರಿಗೊಳಿಸುತ್ತದೆ. ಅವರ ಜೀವನಪ್ರೀತಿಗೆ ತಲೆಬಾಗಿ ನಮಿಸಬೇಕೆನಿಸುತ್ತದೆ.
ಯಾವುದೋ ಕಾಲದಲ್ಲಿ ಅವರೂ ಎರಡು ಕತೆ ಬರೆದು ಅವು ಪ್ರಕಟವಾಗಿದ್ದವಂತೆ. ಅಮ್ಮನ ಆ ಕಲೆ ನನ್ನೊಳಗೆ ಇಳಿದು ಜೀವಂತವಾಗಿದೆ.
‘ಅಡುಗೆ ಮನೆಯಿಂದ ಬಿಡುಗಡೆ ಸಿಕ್ಕಿದ್ದರೆ ನೀವು ದೊಡ್ಡ ಲೇಖಕಿಯಾಗಿರುತ್ತಿದ್ದಿರಿ ಅಮ್ಮಾ’ ಎಂದು ಮನದಲ್ಲೇ ಅಂದುಕೊಂಡು ಸುಮ್ಮನೆ ಕೆಣಕುತ್ತೇನೆ ಖುಷಿಗೆ– ‘ಅಮ್ಮ ನೀನೇಕೆ ಹೆಚ್ಚು ಬರೆಯಲಿಲ್ಲ?’ ಅಂತ. ‘ಬರೆಯುವುದೇನು ಮಣ್ಣು! ಹೆರುವುದೇ ಆಯ್ತು ಒಂದಾದ ಮೇಲೆ ಒಂದು, ಹೆರದಿದ್ದರೆ ಈ ಪ್ರಶ್ನೆ ಕೇಳಲೂ ನೀನಿರುತ್ತಿರಲಿಲ್ಲ’ ಎಂದಾಗ ನಾಚುತ್ತೇನೆ.
ಎಲ್ಲ ಇದ್ದರೂ ಒಮ್ಮೊಮ್ಮೆ ಅನಾಥ ಭಾವ! ಅಪ್ಪ ಅವರನ್ನು ತೊರೆದ ನಂತರ ಅವರು ಹೆಚ್ಚೂ ಕಡಿಮೆ ಏಕಾಂಗಿಯೇ. ಗಂಡ ಒಮ್ಮೊಮ್ಮೆ ಶೋಷಣೆಗೆ ಕಾರಣನಾದರೂ ಹಿಂದೂ ಸಮಾಜದ ಪರಿಕಲ್ಪನೆಯಲ್ಲಿ ಗಂಡನಿರುವವರೆಗೂ ಎಂಥದೋ ಗತ್ತು- ಕಿಮ್ಮತ್ತು ಹೆಣ್ಣಿಗೆ ಎಂಬ ಕಲ್ಪನೆಗಳನ್ನೂ ಜನಮನದಲ್ಲಿ ಈ ಸಮಾಜ ಬೇರೂರಿಸಿಬಿಟ್ಟಿರುವುದು ನಿಜ.
ತಮ್ಮ... ಅವನೊಂದು ಬೃಹತ್ ಆಲದ ಮರ. ಅದರ ಆಸರೆಗೆ ಬಂದವರು ನೂರಾರು ಜನ. ಯಾರೋ ಎಲ್ಲಿಂದಲೋ ನೆಲೆಗಾಣದೆ ಬರುವವರಿಲ್ಲಿ ನೆಮ್ಮದಿ ಕಂಡು ತಮ್ಮ ಜೀವನ ವಿಧಾನ ರೂಪಿಸಿಕೊಂಡು ಬದುಕುವ ಕಲೆ ಕಲಿತುಕೊಂಡು ಮದುವೆಯಾಗಿ ಮಕ್ಕಳು ಮಾಡಿಕೊಂಡು ಸ್ವತಂತ್ರವಾಗಿ ಬಾಳುತ್ತಿದ್ದಾರೆ. ಜನಗಳನ್ನು ಪ್ರೀತಿಸಲೆಂದೇ ಹುಟ್ಟಿದವನು ಅವನು. ಅಮ್ಮನೀಗ ಅವನ ಆಸರೆಯಲಿ ಸುರಕ್ಷಿತ! ಈ ಬೃಹತ್ ಬೆಂಗಳೂರಿನಲ್ಲಿ ಅವರೊಂದು ತುದಿ ನಾನೊಂದು ತುದಿಯಲ್ಲಿ ವಾಸ! ನಾನೇನೇ ಮಾಡುತ್ತಿದ್ದರೂ ಅಮ್ಮನ ನೆನಪು ಬಿಟ್ಟೂಬಿಡದೆ ಕಾಡಿಸಲಾರಂಭಿಸಿದಾಗ ನಾಲ್ಕಾರು ಬಟ್ಟೆಗಳನ್ನು ಬ್ಯಾಗಿಗೆ ತುರುಕಿ ಹೋಗಲೇಬೇಕೆಂದು ನನ್ನವರಿಗೆ ಹೇಳಿ ಹೊರಟೇಬಿಡುತ್ತೇನೆ.
ಅದ್ಯಾವ ಶುಭ ಮುಹೂರ್ತದಲ್ಲಿ ಅಡಿಗಲ್ಲು ಹಾಕಿದರೋ ಆ ಕೆಂಪೇಗೌಡರು. ಈ ಬೆಂಗಳೂರು ಬೃಹದಾಕಾರವಾಗಿ ಇನ್ನೂ ಬೆಳೆ ಬೆಳೆಯುತ್ತಲೇ ಇದೆ... ಈ ಜನಸಂದಣಿ, ಟ್ರಾಫಿಕ್ಕು ನೆನೆಸಿಕೊಂಡರೆ ಎಂಥದ್ದೂ ಬೇಡಪ್ಪ, ಮನೆಯಲ್ಲಿರೋಣ ಅನ್ನಿಸುತ್ತೆ. ಆದರೆ, ಅಮ್ಮನ ವಿಷಯದಲ್ಲಿ ಅಂಥ ನಿರ್ಧಾರ, ನಿಧಾನಗಳಿಗೆ ಅವಕಾಶವೇ ಇಲ್ಲ. ಅದು ನಿರಂತರವಾಗಿರುವ ಕರುಳ ಸೆಳೆತ. ಬರುತ್ತೇನೆ ಎಂದು ಹೇಳಿಬಿಟ್ಟರೆ ಚಾತಕಪಕ್ಷಿಯ ಹಾಗೆ ಕಾಯುತ್ತಾರೆ.
ನಾನು, ನನ್ನಕ್ಕ, ಇತರ ಮಕ್ಕಳು, ಸೊಸೆಯರೂ ಆಗಾಗ ಬಂದರೆ ಅವರಿಗೆ ತೃಪ್ತಿ. ನಾನು ಎರಡು ದಿನ ಇದ್ದು ಹೊರಟರೆ ಆ ಜೀವಕ್ಕೆ ಸಮಾಧಾನ. ಒಂದು ಹೊತ್ತಿನಲ್ಲಿ ಎಚ್ಚರವಾಗಿ ಒಂಟಿಯಾಗಿ ನಿದ್ದೆ ಬಾರದೆ ಹೊರಳಾಡುವ ಅವರು ನಾನು ಪಕ್ಕದಲ್ಲಿ ಮಲಗಿದ ರಾತ್ರಿ ಕಳೆದು ಬೆಳಗಾಗುತ್ತಿದ್ದಂತೆ ನಗುತ್ತ ಕಣ್ತುಂಬ ನಿದ್ದೆ ಮಾಡಿದೆ ರಾತ್ರಿ ಎಂದು ಹೇಳುವಾಗ ನನ್ನ ಕಣ್ಣುಗಳು ನನಗರಿಯದಂತೆ ತೇವವಾಗುತ್ತವೆ.
ಈಗಲೂ ಪತ್ರಿಕೆಗಳಲ್ಲಿ ಸರಸ್ವತಿಯೋ, ಲಕ್ಷ್ಮಿಯೋ, ಪಾರ್ವತಿಯ ವೇಷ ಧರಿಸಿದ ಚೆಂದದ ಮಾಡೆಲ್‌ಗಳ ಬಣ್ಣದ ಚಿತ್ರ ಕಾಣಿಸಿದರೆ ಅದನ್ನು ಕತ್ತರಿಯಲ್ಲಿ ಕತ್ತರಿಸಿ ತಮ್ಮ ಗೋಡೆ ಬೀರುವಿನ ಮೇಲೆ ಗಮ್ ಹಾಕಿ ಅಂಟಿಸುವ ಗೀಳು ಬಿಟ್ಟಿಲ್ಲ. ಅವರ ಬೀರು ತುಂಬ ಗಣಪ, ಶಿವ, ಪಾರ್ವತಿ, ಲಕ್ಷ್ಮಿ– ನಾರಾಯಣ, ರಾಧಾ– ಕೃಷ್ಣ ಎಲ್ಲರ ಚಿತ್ರಗಳೂ ತುಂಬಿಹೋಗಿವೆ. ಮೊನ್ನೆ ಮೊನ್ನೆ ನಾನೆರಡು ಕತ್ತರಿಸಿ ಕೊಟ್ಟೆ.
‘ನೋಡು, ಅದು ಯಾರೋ ಹೆಣ್ಣುಮಗಳು ಎಷ್ಟು ಚಂದ ಇದಾಳೆ. ಅವಳು ವೇಷ ಹಾಕಿಕೊಂಡಿದ್ದಾಳೆ. ನಾವದನ್ನು ಕತ್ತರಿಸಿ ಅಂಟಿಸಿ ಕೈಮುಗಿಯುತ್ತೇವೆ. ಅವಳ ಪುಣ್ಯ ನೋಡು ಅವಳ ಪುಣ್ಯ ನೋಡು’ ಎಂದು ಹತ್ತಾರು ಸಲ ಅವತ್ತೆಲ್ಲಾ ಅದೇ ಪುನರಾವರ್ತನೆ ಮಾಡುತ್ತಲೇ ಇರುತ್ತಾರೆ. ಇಲ್ಲೆಲ್ಲಾ ಅವರ ಆತ್ಮದ ಸಿರಿಯನ್ನು ನಾನು ಕಾಣುತ್ತೇನೆ.
ಅಮ್ಮನ ಹೊಳಪು ಮಾಸದ ಮುಖ ಈಗಲೂ ಲಕ್ಷಣವಾಗಿಯೇ ಇದೆ. ಕಣ್ಣುಗಳು ದೊಡ್ಡ ಸಂಸಾರ ನಿಭಾಯಿಸಿದ ನೋವುಂಡ ನೂರೆಂಟು ಕತೆ ಹೇಳುತ್ತವೆ. ಮನೆಗೆ ಎಂಥ ಹೊತ್ತಿನಲ್ಲೂ ಬರುತ್ತಿದ್ದ ಸಾವಿರಾರು ಜನರಿಗೆ ರುಚಿಕರ ಊಟ ಬಡಿಸಿ ತೃಪ್ತಿ ನೀಡಿದ ಕೈಗಳೆರಡೂ ಈಗ ಸೋತಿವೆ. ಹೆಗಲುಗಳು ನೋವಿನಿಂದ ಕುಸಿದಿವೆ. ಕಾಲುಗಳೂ ಸದಾ ಜೀವಕ್ಕೆ ನೋವಿನ ಬಾನವನ್ನು ಉಣ್ಣಿಸುತ್ತವೆ. ಆದರೂ ಯಾವುದೋ ಸನಾತನ ದೈವ ಶ್ರದ್ಧೆ, ಆತ್ಮಶಕ್ತಿ ಅವರ ಚೇತನವನ್ನು ನಡೆಸುತ್ತಿದೆ. ಅಮ್ಮ ಶತಾಯುಷಿಯಾಗಲಿ ಎನಿಸುತ್ತದೆ. ಬಹುಶಃ ಎಲ್ಲರಿಗೂ ತಮ್ಮ ಅಮ್ಮನ ಬಗ್ಗೆ ಹೀಗೇ ಅನಿಸುತ್ತಿರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.