ADVERTISEMENT

ಮುಸ್ಸಂಜೆ ಬದುಕಿನ ಮೂಕ ಮರ್ಮರ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 19:30 IST
Last Updated 14 ಸೆಪ್ಟೆಂಬರ್ 2019, 19:30 IST
ಕಲೆ: ಶಿಲ್ಪಾ ಕಬ್ಬಿಣಕಂತಿ
ಕಲೆ: ಶಿಲ್ಪಾ ಕಬ್ಬಿಣಕಂತಿ   

ಇಷ್ಟು ವರ್ಷಗಳ ನನ್ನ ನಿರ್ವಾಹಕ ವೃತ್ತಿಯಲ್ಲಿ‌ ಇಂಥದೊಂದು ಪಾಠವನ್ನು ನಾನುಇದುವರೆಗೆ ಕಲಿತಿರಲಿಲ್ಲ. ಇಂಥ ತಪರಾಕಿಯೊಂದನ್ನು ಯಾವತ್ತೂ ತಿಂದಿರಲಿಲ್ಲ. ಕೆಲಸಕ್ಕೆ ಸೇರಿದಾಗಿನಿಂದ ಇದುವರೆಗೆ ಪ್ರಯಾಣಿಕರೊಂದಿಗೆ ಚಿಲ್ಲರೆಗಾಗಿಯೋ ನಿಲುಗಡೆಯ ಕಾರಣಕ್ಕೋ ಬೇರಿನ್ನಾವುದೋ ಕಾರಣಕ್ಕಾಗಿಯೋ ವಾದ–ವಿವಾದಗಳಾಗಿವೆ, ಬೈದಾಟಗಳಾಗಿವೆ, ಬೆದರಿಕೆಗಳಾಗಿವೆ, ಎಳೆದಾಟಗಳೂ ಆಗಿವೆ. ಆದರೆ ಇದಾವುದನ್ನೂ ಮಾಡದೇ ಇವೆಲ್ಲವುಗಳನ್ನೂ ಮೀರಿಸುವಂತೆ ಬಹುದೀರ್ಘ ಕಾಲದವರೆಗೆ ಉಳಿಯುವಂಥ ಬರೆಯೊಂದನ್ನು ಹಿರಿಯಜ್ಜನೊಬ್ಬ ನನ್ನೆದೆಗೆ ಎಳೆದು ಹೋದ ಕಥೆಯಿದು.

ಮೊನ್ನೆ ದಿನ, ದೊರಕದ ಹಬ್ಬದ ರಜೆಯ ನಿರಾಶೆ ನಡುವೆಯೂ ಜನಸೇವೆಯೇ ಜನಾರ್ದನನ ಸೇವೆಯೆಂಬ ಸ್ವಯಂ ಸಮಾಧಾನದೊಂದಿಗೆ ಕರ್ತವ್ಯ ನಿರ್ವಹಿಸುತ್ತ ಧರ್ಮಸ್ಥಳದಿಂದ ಹುಬ್ಬಳ್ಳಿಗೆ ಬರುತ್ತಿದ್ದೆ. ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಅಂಕೋಲಾ ಬಿಟ್ಟ ನಮ್ಮ ಬಸ್ಸು ಬಾಳೆಗುಳಿ ಕ್ರಾಸ್‌ನ ತಿರುವಿನಲ್ಲಿ ಹೊರಳುತ್ತಿದ್ದಾಗ ಬಿಳಿಯಂಗಿ-ಪಂಚೆ ತೊಟ್ಟು ಕೈಲೊಂದು ಪುಟ್ಟ ಚೀಲವನ್ನು ಹಿಡಿದುಕೊಂಡ ಹಿರಿಯರೊಬ್ಬರು ಕೈ ತೋರಿದರು. ಬಸ್ಸು ನಿಂತ ತಕ್ಷಣ ಹತ್ತಿಕೊಂಡರವರು.

ರೂಢಿಯಂತೆ ನಾನು, ಎಲ್ಲಿಗೆ ಎಂದು ಕೇಳಲಾಗಿ, ಮಾಸ್ತಿಕಟ್ಟಾಗೆ ಇಳಿಯಬೇಕೆಂದು ಅಜ್ಜ ಹೇಳಿದರು.ಆದರೆ, ನಮ್ಮ ಬಸ್ಸು ನಿಯಮಿತ ನಿಲುಗಡೆಯದ್ದಾಗಿದ್ದು ಮಾಸ್ತಿಕಟ್ಟಾಗೆ ನಿಲ್ಲಲಾರದ ವಿಷಯ ಹೇಳಿದೆನಷ್ಟೆ. ಅಜ್ಜ ವ್ಯಗ್ರರಾಗಿ ‘ಏನು ಇಷ್ಟು ಬೇಗ ಹೊಟ್ಟೆ ತುಂಬಿತಾ ಸರ್ಕಾರಕ್ಕೆ’ ಎಂದು ಪ್ರಶ್ನೆಯ ಬಾಣ ಬಿಟ್ಟರು.

ADVERTISEMENT

ಆದರೆ, ನಾನು ವಾಸ್ತವ ಅಂಶವನ್ನು ತಿಳಿಸುತ್ತ ‘ನಮ್ಮದು ನಿಯಮಿತ ನಿಲುಗಡೆಯ ಬಸ್ಸಾದ ಕಾರಣ ಆ ಊರಿಗೆ ನಿಲುಗಡೆ ಇರುವುದಿಲ್ಲ. ಹಿಂದೆಯೇ ಕಾರವಾರ-ಹುಬ್ಬಳ್ಳಿ ಬಸ್ಸು ಬರುತ್ತಿದೆ. ಅದಕ್ಕೆ ಹತ್ತಿಕೊಳ್ಳಿ, ಅವರು ಖಂಡಿತ ನಿಲ್ಲಿಸುತ್ತಾರೆ’ ಎಂದು ತಿಳಿಸಲು ಹೋದೆ. ಇದಾವುದನ್ನೂ ಕೇಳಿಸಿಕೊಳ್ಳುವ ಸಹನೆಯಾಗಲಿ, ತಾಳ್ಮೆಯಾಗಲಿ ಇಲ್ಲದ ಆ ಹಿರಿಯರು ‘ನಾನು ಮಾಸ್ತಿಯಮ್ಮನ ದೇವಸ್ಥಾನಕ್ಕೆ ಹೋಗಬೇಕು. ಆದರೆ, ಯಾರೂ ನಿಲುಗಡೆ ಕೊಡುತ್ತಿಲ್ಲ. ನಿಮಗೆ ನನ್ನ ಕಷ್ಟ ಅರಿವಾಗದು. ನಿಮ್ಮ ಬಸ್ಸಿಗೆ ಹತ್ತಿದೆನಲ್ಲ ನನಗೆ ನಾನೇ ಹೊಡಕೋತೀನಿ’ ಅಂತಂದವರೇ ಒಮ್ಮಿಂದೊಮ್ಮೆಲೆ ತಮ್ಮ ಕಪಾಳಕ್ಕೆ ಹೊಡೆದುಕೊಳ್ಳಲು ಪ್ರಾರಂಭಿಸಿದರು!

ಪ್ರಯಾಣಿಕರೂ, ನಾನು ದಿಗ್ಭ್ರಮೆಗೊಳಗಾದೆವು. ಏನು ಮಾಡಬೇಕೆಂಬುದು ತೋಚದೆ ನಿಂತೆ. ಕ್ಷಣಗಳ ನಂತರ ಸಾವರಿಸಿಕೊಂಡು ಹೇಳಿದೆ, ‘ಅಜ್ಜನವರೇ, ಹಾಗೆಲ್ಲ ಮಾಡಬೇಡಿ. ತಾವು ಹಿರಿಯರು. ನೋಡಿ, ಟಿಕೆಟ್‌ ಮೆಷಿನ್‌ನಲ್ಲಿ ನಿಮ್ಮ ಊರಿನ ಟಿಕೆಟ್ ಬಾರದು. ಆದರೂ ತಾವು ಯಲ್ಲಾಪುರದ ಟಿಕೆಟ್ ಪಡೆಯುವುದಾದರೆ ನಾನು ಮಾಸ್ತಿಕಟ್ಟಾಗೆ ನಿಮ್ಮನ್ನು ಇಳಿಸಿಹೋಗಬಲ್ಲೆ’. ಈ ಪರಿಹಾರ ಸೂತ್ರ ಅವರ ಕಿವಿಗೆ ಬಿದ್ದಂತೆ ತೋರಲಿಲ್ಲ, ಹೊಡೆದುಕೊಳ್ಳುತ್ತಲೇ ಇದ್ದರು.

‘ನೀವಾದರೂ ಏನು ಮಾಡುತ್ತೀರಿ? ನಾನು ಮುದುಕ ನೋಡಿ.ನೀವೀಗ ನನ್ನನ್ನು ಹೊರದೂಡಿ ಬಾಗಿಲು ಹಾಕಿಕೊಳ್ಳಿ’ ಎಂದು ಕೂಗಾಡುತ್ತ, ಬೇರೆ ಪ್ರತಿಕ್ರಿಯೆಗಳಿಗೆ ಕಾಯದೇ ಕೆಳಗಿಳಿದರು. ‘ನಾನು ಮುದುಕ ನೋಡಿ...’ ಎನ್ನುವ ಹೊತ್ತಿಗೆ ಗದ್ಗದಿತವಾಗಿ ಹೋಗಿದ್ದ ಆ ಹಿರಿಜೀವವನ್ನು ನೋಡಲಾಗದೇ ತಲೆ ಕೆಳಗೆ ಹಾಕಿದೆ. ನನಗರಿವಿಲ್ಲದೆ ಕಣ್ಣು ಒದ್ದೆಯಾದವು. ಆದರೆ ಅವರನ್ನು ಸಮಾಧಾನ ಪಡಿಸುವುದಾಗಲಿ, ಸಮಜಾಯಿಷಿ ನೀಡುವುದಾಗಲಿ ಸಾಧ್ಯವಾಗದೇ ಎಲ್ಲರೂ ಮೂಕ ಪ್ರೇಕ್ಷಕರಾಗಿ ಹೋದೆವು‌. ನಿರ್ವಾಹವಿಲ್ಲದೆ ಬಸ್ಸು ಮಂದೆ ಸಾಗಿತು. ಆದರೆ, ಆ ಅಜ್ಜ ಎಬ್ಬಿಸಿದ ತಲ್ಲಣದ ಬೃಹದಲೆಗಳು ಮಾತ್ರ ನನ್ನೊಳಗನ್ನು ಅಸ್ತವ್ಯಸ್ತಗೊಳಿಸಿ ತತ್ತರಿಸುವಂತೆ ಮಾಡಿದವು.

ಬಹುಶಃ ಆ ಅಜ್ಜ ನನ್ನೊಂದಿಗೆ ಜಗಳಕ್ಕೆ ನಿಂತಿದ್ದರೆ ಅಥವಾ ನನ್ನ ಕೊರಳಪಟ್ಟಿ ಹಿಡಿದು ಕೇಳಿದ್ದರೆ ನನಗೆ ಖಂಡಿತ ಇಷ್ಟು ನೋವಾಗುತ್ತಿರಲಿಲ್ಲ. ಅವರ ಸಿಟ್ಟು ನಿಲುಗಡೆ ಕೊಡದ ಸಿಬ್ಬಂದಿ ಮೇಲಷ್ಟೇ ಆಗಿರಲಿಲ್ಲ. ಆ ಕ್ಷಣದ ತಮ್ಮ ಸಮಸ್ಯೆಗೆ ಪರಿಹಾರವೂ ಮುಖ್ಯವಾಗಿರಲಿಲ್ಲ. ವೈಯಕ್ತಿಕ ಬದುಕಿನ ಹತಾಶೆಯ ಭಾರವನ್ನು ಹೊತ್ತು ಬಂದಂತಿದ್ದ ಅವರು ಹೊರಹಾಕಿದ ಸಿಟ್ಟು ತನ್ನ ಹಾಗೂ ತನ್ನಂಥವರನ್ನು ಉಪೇಕ್ಷಿಸುತ್ತಿರುವ ಒಂದಿಡೀ ವ್ಯವಸ್ಥೆಯ ಮೇಲಿನ ಆಕ್ರೋಶವಾಗಿತ್ತು. ಹಿರಿಯರನ್ನು ಉದಾಸೀನದಿಂದ ಕಾಣುತ್ತಿರುವ ನವ ಪೀಳಿಗೆಯ ಮೇಲೆ ಮಾಡಿದ ಪ್ರಹಾರವಾಗಿತ್ತು. ಆ ಅಜ್ಜ ತಮ್ಮ ಕಪಾಳಕ್ಕೆ ಹೊಡೆದುಕೊಂಡ ಅಷ್ಟೂ ಏಟುಗಳು ಬದುಕಿನ ಸಂಧ್ಯಾಕಾಲದಲ್ಲಿ ತಮ್ಮನ್ನು ಕಡೆಗಣಿಸುತ್ತ ಕಾಲಕಸ ಮಾಡಿದ ಮಕ್ಕಳ ಬೆನ್ನ ಮೇಲೆ ಬೀಸಿದ ಬಾರುಕೋಲಿನ ಏಟಾಗಿದ್ದವು. ಅವರ ಗದ್ಗದಿತ ಕಂಠದ ಆ ಹತಾಶೆಯ ನುಡಿಗಳು ಕಟುಕರೆದೆಗೆ ಎಸೆದ ಈಟಿಯಾಗಿದ್ದವು.

ಬಸ್ಸು ಅದಾವುದೋ ಸಿಟ್ಟನ್ನು ಹೇರಿಕೊಂಡಂತೆ ವೇಗ ಹೆಚ್ಚಿಸಿಕೊಂಡು ಬುಸುಗುಡುತ್ತ ಓಡಹತ್ತಿತು. ನಾನು ಯೋಚಿಸುತ್ತ ಹೋದೆ.

ಆಧುನಿಕ ಜಗತ್ತಿನಲ್ಲಿ ಕುಟುಂಬ ವ್ಯವಸ್ಥೆಯೆಂಬುದು ಇಷ್ಟೊಂದು ಶಿಥಿಲವಾಗಿ ಹೋಯಿತಾ? ನ್ಯೂಕ್ಲಿಯರ್ ಫ್ಯಾಮಿಲಿಯ ಪರಿಕಲ್ಪನೆಯ ವಿಷ ವರ್ತುಲದಲ್ಲಿ ಸಿಕ್ಕು ಹಿರಿ ಕಣವೊಂದು ಉಸಿರಾಡದಂತಾಯಿತೆ?

ನೆತ್ತರು- ಬೆವರು ಬಸಿದು ಹೆತ್ತು- ಹೊತ್ತು, ಸಾಕಿ-ಸಲಹಿ ಬೆಳೆಸಿದ ತಾಯಿ- ತಂದೆಯರು ರಟ್ಟೆಯ ಕಸುವು ತೀರಿ ಕೈಕಾಲು ನಿಂತ ಹೊತ್ತಿಗೆ ತಮ್ಮ ಮಕ್ಕಳಿಗೆ ಭಾರವೆನಿಸುವುದಿದೆಯಲ್ಲ! ಅಂಥ ಸ್ಥಿತಿ ಯಾವ ವೈರಿಗೂ ಬರಬಾರದು. ಯಾವ ಮಗನಿಗೆ ತನ್ನಪ್ಪ ಬಾಲ್ಯದಲ್ಲಿ ಸೂಪರ್ ಮ್ಯಾನ್ ಎನಿಸಿದ್ದನೋ, ಅದೇ ಅಪ್ಪನೀಗ ಅದೇ ಮಗನಿಗೆ ಅಪ್ರಯೋಜಕನೆನಿಸುವುದು. ಯಾವ ತಾಯಿಯ ಸೆರಗನ್ನು ಹಿಡಿದು ಓಡಾಡುತ್ತ ತಮ್ಮೆಲ್ಲ ಬೇಕುಗಳನ್ನು ಪೂರೈಸಿಕೊಂಡರೋ ಆ ಪುತ್ರರತ್ನರಿಗೆ ಅದೇ ತಾಯಿಗೊಂದು ಸೀರೆಯೂ ಖರ್ಚಿನ ಬಾಬತ್ತುಎನಿಸುವುದಿದೆಯಲ್ಲ ಇದಕ್ಕಿಂತ ಕೃತಘ್ನತೆ ಇನ್ನೇನಿದ್ದೀತು ?

ಇಲ್ಲಿ ಯಾರನ್ನು ದೂರುವುದು? ಹಿರಿಯರ ಪರ ಕಾನೂನುಗಳೇನೋ ಇವೆ. ಆದರೆ, ಇದು ಕಾನೂನಿನಿಂದ ಸರಿಪಡಿಸಬಹುದಾದ ಸಮಸ್ಯೆಯಾ?ಒಂದಷ್ಟು ಅಕ್ಕರೆ, ಒಂದಷ್ಟು ಗೌರವ, ಒಂದಷ್ಟು ಕಾಳಜಿ, ಬೆನ್ನು ಕೊಡದೇ ನಿಭಾಯಿಸಬೇಕಾದ ಒಂದಷ್ಟು ಜವಾಬ್ದಾರಿ ಇವೆಲ್ಲ ತುಂಬ ದುಬಾರಿಯಾದವೇ?

ನಾವು ನಮ್ಮ ಹಿರಿಯರ ಮೇಲೆ ಈಗ ಎಸಗುತ್ತಿರುವ ದೌರ್ಜನ್ಯವಾಗಲೀ ಅಥವಾ ತೋರುತ್ತಿರುವ ಪ್ರೀತಿಯಾಗಲಿ ನಾವು ಇಡುತ್ತಿರುವ ಇಡುಗಂಟೆಂಬ ಅರಿವು ಬಹುಶಃ ನಮಗಿಲ್ಲ. ಮುಂದೊಮ್ಮೆ ನಾವು ಅದೇ ಜಾಗದಲ್ಲಿ ನಿಂತಾಗ ಬಡ್ಡಿಯೊಂದಿಗೆ ಅಸಲೂ ನಮ್ಮ ಮಕ್ಕಳಿಂದ ನಮಗೆ ಬಂದೀತೆಂಬ ಪರಿಕಲ್ಪನೆ ಬಂದಿರಲಾರದು. ಏಕೆಂದರೆ ನಮ್ಮ ಸಂಸ್ಕಾರಗಳನ್ನೇ ನೋಡಿ ಬೆಳೆದ ನಮ್ಮ ಮಕ್ಕಳು ನಮಗೂ ಅದನ್ನೇ ಕಾಣಿಕೆಯಾಗಿ ನೀಡದಿರಲಾರರು.

ಹೀಗೇ ಯೋಚನೆಗಳ ಹುಚ್ಚು ಹೊಳೆಯ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಲೇ ಇದ್ದೇನೆ.

ಪ್ರವಾಹ ಮಾತ್ರ ಇಳಿಯುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.