ADVERTISEMENT

ನನ್ನಪ್ಪ ಹೀರೊ ಕಂ ಬೆಸ್ಟ್ ಫ್ರೆಂಡ್: ನಟಿ ಮಯೂರಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 17:45 IST
Last Updated 15 ಜೂನ್ 2019, 17:45 IST
ತಂದೆ ಪ್ರಕಾಶ್ ಕ್ಯಾತರಿ ಜತೆ ನಟಿ ಮಯೂರಿ.
ತಂದೆ ಪ್ರಕಾಶ್ ಕ್ಯಾತರಿ ಜತೆ ನಟಿ ಮಯೂರಿ.   

ನಮ್ಮಪ್ಪ ನನ್ನ ಪಾಲಿನ ಸಾರ್ವಕಾಲಿಕ ಹೀರೊ ಹಾಗೂ ಬೆಸ್ಟ್ ಫ್ರೆಂಡ್. ಅತ್ಯಂತ ಸಾಂಪ್ರದಾಯಿಕವಾಗಿ ನನ್ನನ್ನು ಬೆಳೆಸಿದ ಅವರು ಎಂದಿಗೂ ಹೊಡೆದವರಲ್ಲ. ನಾನು ಮಾಡುತ್ತಿದ್ದ ತರ್ಲೆಗಳಿಗೆ ಹೆಚ್ಚು ಕೋಪ ಬಂದಾಗ, ‘ಪಿಂಕಿ’ ಎಂದು ದುರುಗುಟ್ಟಿ ನೋಡುತ್ತಿದ್ದರು. ಅಷ್ಟಕ್ಕೇ ಮೂರು ತಾಸು ಅಳುತ್ತಿದ್ದ ನನ್ನನ್ನು, ದಿನವಿಡೀ ಮುದ್ದುಮಾಡಿ ಸಮಾಧಾನಪಡಿಸುತ್ತಿದ್ದರು.ಪದವಿ ಓದುತ್ತಿದ್ದಾ ಗಧಾರಾವಾಹಿಯ ಆಡಿಷನ್‌ನಲ್ಲಿ ಸೆಲೆಕ್ಟ್ ಆದಾಗ ಅಮ್ಮ ಸಂಭ್ರಮಿಸಿದ್ದರು. ಆದರೆ, ಓದುವಾಗಲೇ ನಟನೆ ಬೇಡ ಎಂದು ಬುದ್ಧಿವಾದ ಹೇಳಿದ್ದ ಅಪ್ಪ, ಕಡೆಗೆ ನನ್ನ ಬಣ್ಣದ ಬದುಕಿಗೆ ಬೆಂಗಾವಲಾಗಿ ನಿಂತರು. ಶೂಟಿಂಗ್ ನಿಮಿತ್ತ ಹೊರಗಡೆ ಹೋದರೆ, ಮನೆಗೆ ಬಂದು ಸೇರುವ ಹೊತ್ತಿಗೆ ಅಪ್ಪನ ನಂಬರ್‌ನಿಂದ ಕನಿಷ್ಠ ಐದು ಕಾಲ್‌ ಬಂದಿರುತ್ತಿದ್ದವು. ಅವರ ಕರೆಗಳು ಒಮ್ಮೆಯೂ ನನಗೆ ಸಿಟ್ಟು ತರಿಸಿಲ್ಲ. ಯಾಕೆಂದರೆ, ನನ್ನೆಲ್ಲಾ ಕಷ್ಟ–ಸುಖಗಳನ್ನು ಹಂಚಿಕೊಳ್ಳಲು ನನಗಿದ್ದ ಬೆಸ್ಟ್ ಫ್ರೆಂಡ್ ಅವರೊಬ್ಬರೇ.

ಕುಟುಂಬದ ಸ್ಥಿತಿ ತೀರಾ ಹದಗೆಟ್ಟಾಗಲೂ ಅದನ್ನು ನಮ್ಮೆದುರು ತೋರಿಸಿಕೊಳ್ಳುತ್ತಿರಲಿಲ್ಲ. ಎಲ್ಲವನ್ನೂ ಮುಗುಳ್ನಗೆಯಿಂದಲೇ ಎದುರಿಸುತ್ತಿದ್ದ ಅಪ್ಪ, ಮುಂದೆ ನಮಗೆ ಒಳ್ಳೆಯ ದಿನಗಳು ಕಾದಿವೆ. ಅದಕ್ಕಾಗಿಯೇ ಈ ಕಷ್ಟಗಳು ಬರುತ್ತಿವೆ ಎಂದು ಹುರಿದುಂಬಿಸುತ್ತ ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಹೇಗೆ ಮೆಟ್ಟಿ ನಿಲ್ಲಬೇಕು ಎಂಬುದನ್ನು ತೋರಿಸಿಕೊಟ್ಟರು. ನಾಲ್ಕು ವರ್ಷದ ಹಿಂದೆ ನಿಧನರಾದ ಅವರು ಕಡೆಯದಾಗಿ ಹೇಳಿದ್ದ ‘ಏನ್ ಚಿಂತಿ ಮಾಡ್ಬೇಡ ಪಿಂಕಿ, ಎಲ್ಲಾ ಚಲೋ ಆಗ್ತದೆ’ ಎಂಬ ಮಾತು ಈಗಲೂ ಕಿವಿಯಲ್ಲಿ ಗುಂಯ್‌ಗುಡುತ್ತಿದೆ. ಅಪ್ಪನ ಆಶೀರ್ವಾದವೇ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.
ಅಪ್ಪಾ I love you and miss you a lot...

***

ADVERTISEMENT

ಅಪ್ಪ ನನ್ನ ಪಾಲಿನ ದೇವರು

ನಮ್ಮಪ್ಪನದು (ಎಂ.ಆರ್.ನಾರಾಯಣಪ್ಪ) ವರ್ಣರಂಜಿತ ಬದುಕು. ನನ್ನ ಪಾಲಿಗೆ ಆತ್ಮೀಯ ಸ್ನೇಹಿತ ಹಾಗೂ ಗುರು ಆಗಿದ್ದ ಅವರು, ನನ್ನ ಬದುಕು ರೂಪಿಸಿದ ದೇವರು. ಆ ಕಾಲದಲ್ಲೇ ಎಸ್‌ಎಸ್‌ಎಲ್‌ಸಿ ಓದಿದ್ದ ಅವರು, ಪ್ರಗತಿಪರ ಕೃಷಿ ಜತೆಗೆ ತೆಂಗು ವ್ಯಾಪಾರದಲ್ಲೂ ಹೆಸರುವಾಸಿಯಾಗಿದ್ದರು. ಸರ್ಕಾರಿ ಕೆಲಸ ಮನೆಗೆ ಹುಡುಕಿಕೊಂಡು ಬಂದರೂ ಹೋಗದೆ ಕೃಷಿಯಲ್ಲೇ ಬದುಕು ಕಟ್ಟಿಕೊಂಡಿದ್ದರು. ನಾಟಕಾಭಿನಯದಲ್ಲಿ ಅಪ್ಪನದು ಎತ್ತಿದ ಕೈ. ಕುರುಕ್ಷೇತ್ರ ನಾಟಕದಲ್ಲಿ ದುರ್ಯೋಧನನ ಪಾತ್ರ ಮಾಡಿದ್ದ ಅವರ ಡೈಲಾಗ್‌ಗಳು ಈಗಲೂ ನನಗೆ ನೆನಪಿವೆ. ಸಿನಿಮಾ ಬಗ್ಗೆಯೂ ಆಸಕ್ತಿ ಹೊಂದಿದ್ದ ಅವರು, ಊರಿನ ಟೆಂಟ್‌ಗೆ ಮಕ್ಕಳನ್ನೂ ಕರೆದುಕೊಂಡು ಹೋಗುತ್ತಿದ್ದರು

ಊರಿನಲ್ಲಿ ದನಗಳ ಜಾತ್ರೆ ನಡೆದಾಗ ಅಲ್ಲಿ ಬಿದ್ದಿರುತ್ತಿದ್ದ ಸಗಣಿಯನ್ನು ಸಂಗ್ರಹಿಸುವ ಕೆಲಸ ಸೇರಿದಂತೆ, ತೋಟದ ಕೆಲಸಗಳನ್ನು ಮಾಡಿಸುತ್ತಿದ್ದರು. ತೆಂಗಿನ ಮರ ಹತ್ತುವುದು, ಸೈಕಲ್, ಬೈಕ್ ಹಾಗೂ ಕಾರು ಓಡಿಸುವುದನ್ನು ನಾನು ಕಲಿತಿದ್ದು ನಮ್ಮಪ್ಪನಿಂದಲೇ. ನಮ್ಮಪ್ಪ ಎಷ್ಟು ಪ್ರೀತಿಸುತ್ತಿದ್ದರೋ, ತಪ್ಪು ಮಾಡಿದಾಗ ಹಾಗೆಯೇ ದಂಡಿಸುತ್ತಿದ್ದರು. ಒಮ್ಮೆ ನಾನು ಮತ್ತು ನಮ್ಮಣ್ಣ ಮನೆಯವರಿಗೆ ಗೊತ್ತಾಗದಂತೆ ಸಿನಿಮಾಗೆ ಹೋಗಿದ್ದೆವು. ಅಪ್ಪನಿಗೆ ಹೇಗೊ ಗೊತ್ತಾಗಿ ಆ ದಿನ ಊಟವಿಲ್ಲದೆ ಹೊರಗಡೆ ನಿಲ್ಲಿಸಿದ್ದರು.ನಮ್ಮಪ್ಪ ನನಗಷ್ಟೇ ಅಲ್ಲದೆ, ನಮ್ಮೂರಿನ ಎಲ್ಲಾ ಹುಡುಗರಿಗೆ ರೋಲ್ ಮಾಡೆಲ್ ಆಗಿದ್ದರು. ಅವರು ಬದುಕಿರುವವರೆಗೂ, ‘ಜೀವನದಲ್ಲಿ ನಿರ್ದಿಷ್ಟ ಗುರಿ ಜತೆಗೆ, ಅದನ್ನು ಸಾಧಿಸಲು ಶ್ರದ್ಧೆ ಇರಬೇಕು. ನಿನ್ನಿಂದ ಜನರಿಗೆ ಒಳ್ಳೆಯದು ಮಾಡುವುದಕ್ಕೆ ಆಗದಿದ್ದರೂ ಪರವಾಗಿಲ್ಲ. ಆದರೆ, ಯಾರಿಗೂ ಕೆಟ್ಟದ್ದು ಮಾಡಬೇಡ’ ಎಂದು ಯಾವಾಗಲೂ ಬುದ್ಧಿಮಾತು ಹೇಳುತ್ತಿದ್ದರು.

ಎಂ.ಎನ್. ನಾಗರಾಜ, ಪೊಲೀಸ್ ಕಮಿಷನರ್

***

ಭವಿಷ್ಯವಾಣಿ ನಿಜವಾಯ್ತು: ನಟ ಶರಣ್

ನಾನು ನಟನಾಗಬೇಕೆಂಬುದು ನಮ್ಮಪ್ಪನ ಹೆಬ್ಬಯಕೆ. ನಟನೆ ಜತೆಗೆ, ನಾಟಕ ಕಂಪೆನಿಗಳನ್ನು ನಡೆಸುತ್ತಾ ಬದುಕು ಸಾಗಿಸುತ್ತಿದ್ದ ಅಪ್ಪ, ನನ್ನನ್ನು ಸಿನಿಮಾ ಪರದೆಯಲ್ಲಿ ನೋಡಬೇಕೆಂದು ಕನಸು ಕಂಡವರು. ಆದರೆ, ಅವರ ಕನಸಿಗೆ ವ್ಯತಿರಿಕ್ತವಾದ ಹಾದಿ ನನ್ನದಾಗಿತ್ತು. ಅವರ ಬಯಕೆಗೆ ಒಮ್ಮೆಯೂ ನಾನು ಸ್ಪಂದಿಸಿರಲಿಲ್ಲ. ಚೆನ್ನಾಗಿ ಓದಿ ಅರಣ್ಯಾಧಿಕಾರಿ ಆಗುವುದು ಸೇರಿದಂತೆ, ಹಲವು ಗುರಿಗಳು ನನ್ನ ತಲೆಯಲ್ಲಿದ್ದವು. ಆದರೆ, ಅಪ್ಪನ ಆಸೆ ಎಂದಿಗೂ ಬದಲಾಗಲೇ ಇಲ್ಲ. ಇದೇ ವಿಷಯಕ್ಕೆ ಒಮ್ಮೆ ಅವರೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ಹೋದೆ. ಆಗ ಅವರು, ‘ನೀ ಎಲ್ಲೇ ಹೋದ್ರೂ, ಏನೇ ಮಾಡಿದ್ರೂ ಕಡೆಗೆ ಒಬ್ಬ ನಟ ಆಗ್ತೀಯಾ’ ಎಂದು ಹೇಳಿದ್ದರು. ನೂರೆಂಟು ಗುರಿಗಳ ಬೆನ್ನತ್ತಿದ ನನಗೆ ಅವುಗಳ ಪೈಕಿ ಒಂದನ್ನೂ ತಲುಪಲಾಗಲಿಲ್ಲ. ಕಡೆಗೆ, ನನ್ನ ಕೈ ಹಿಡಿದಿದ್ದು ನಟನೆಯೇ. ಕಡೆಗೂ ಅಪ್ಪನ ಭವಿಷ್ಯವಾಣಿ ನಿಜವಾಯ್ತು. ಅವರ ಆಶೀರ್ವಾದವೇ ನನ್ನನ್ನು ಇಂದು ಈ ಮಟ್ಟಕ್ಕೆ ಬೆಳೆಸಿದೆ.

ನಾನು ಆರಂಭದಿಂದಲೂ ತುಂಟ. ಅದಕ್ಕಾಗಿ, ಅಪ್ಪನ ಕೈಯಿಂದ ಲೆಕ್ಕವಿಲ್ಲದಷ್ಟು ಒದೆಗಳನ್ನು ತಿಂದಿರುವೆ. ಆದರೂ, ಅಪ್ಪ ಕರುಣಾಮಯಿ. ತಪ್ಪು ಮಾಡಿದಾಗ ದಂಡಿಸಿದರೂ, ಪ್ರೀತಿ ವಿಷಯದಲ್ಲಿ ಅವರನ್ನು ಮೀರಿಸುವವರಿಲ್ಲ. ಶ್ರಮಜೀವಿಯಾಗಿದ್ದ ಅವರು, ಬದುಕಿಗಾಗಿ ಅನುಭವಿಸಿರುವ ಕಷ್ಟಗಳು ಅಷ್ಟಿಷ್ಟಲ್ಲ. ಅವರ ಕಷ್ಟದ ದಿನಗಳು, ನನಗೆ ಬದುಕಿನ ದೊಡ್ಡ ಪಾಠ ಕಲಿಸಿವೆ. ‘ವ್ಯರ್ಥ ಮಾಡುವಷ್ಟು ಸಮಯವನ್ನು ದೇವರು ಯಾರಿಗೂ ಕೊಟ್ಟಿಲ್ಲ. ನಿನಗೆ ಕೊಟ್ಟಿರುವ ಈ ಅಮೂಲ್ಯ ಸಮಯವನ್ನು ಪೋಲು ಮಾಡಬೇಡ’ ಎನ್ನುವ ಆವರ ಮಾತೇ ನನ್ನ ಚಲನಶೀಲತೆಗೆ ಪ್ರೇರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.