ದಾರಿಯ ಅಕ್ಕಪಕ್ಕದ ಹೊಲದಲ್ಲಿ ಸಜ್ಜೆ, ತೊಗರಿ, ಜೋಳದ ತೆನೆಗಳು ವಾಲಾಡುತ್ತಿದ್ದವು. ನಡುವೆ ಪದವೊಂದು ತೇಲಿ ಬರುತ್ತಿತ್ತು.
ಬಿತ್ತಾಕೂರಿಗೆ ಮುಂದೆ ಬೀಸಾದ ಪುಟ್ಟಿಂದೆ
ಸಿತ್ತಾರದೆಣ್ಣೆ ನಡಿ ಮುಂದೆ, ಬಿತ್ತಾಕೂರಿಗೆ//
ಬಿತ್ತಾಕೂರಿಗೊಂದಿಡಿಯೋ ಮೆಲ್ಲಾಕೊಡಿಯೋ
ಚಿತ್ತುವಾರದೆಣ್ಣೆ ನಡಿ ಮುಂದೆ
ಜತ್ತಿಗೆ ತೋದೆ ಮಿಣಿ ತೋದೆ, ಬಿತ್ತಾಕೂರಿಗೆ//
ಹೊಲದ ನಡುವೆ ದಾರಿ ಮಾಡಿಕೊಂಡು ನೋಡಿದರೆ ಮಹಿಳೆಯೊಬ್ಬರು ಕಲ್ಲುಬಂಡೆಯ ಮೇಲೆ ಕುಳಿತು ಈ ಪದವನ್ನು ಗುನುಗುತ್ತಿದ್ದರು. ತಲೆಗೆ ವಲ್ಲಿಬಟ್ಟೆ, ಕೈಯಲ್ಲಿ ಹಕ್ಕಿ ಓಡಿಸುವ ಕವಣೆ. ಆ ಪದಕ್ಕೆ ಅರ್ಥ ಕೇಳಿದೆ. ಹೇಳುತ್ತಾ ಹೋದರು;
‘ಗಂಡ ಗಳೆ ಹೊಡೆಯುತ್ತಿರುತ್ತಾನೆ, ಹೆಂಡತಿಯು ಅವನ ಹಿಂದೆ ಪುಟ್ಟಿ ಕಟಿಗೊಂಡು ಬಿತ್ನೆ ಮಾಡುತ್ತಿರುತ್ತಾಳೆ. ಬಿತ್ತಾ ಹೊತ್ನಾಗೆ ಮಳೆ ಬರುತ್ತೆ. ಆಗ ಎತ್ತುಗಳ ಮಿಣಿಯೂ ತೋಯುತ್ತದೆ, ಹೆಂಡತಿಯ ನೆರಿಗೆಯೂ ತೋಯುತ್ತವೆ. ಹಾಗಾಗಿ ಕೂರಿಗೆಯನ್ನು ಮೆಲ್ಲಗೆ ಹೊಡೆಯಬೇಕೆಂದು ಹೆಂಡತಿ ಹೇಳುವ ಪದ’.
ಆಕೆ ಗಂಗಮ್ಮ, ಹೊಸಪೇಟೆ ಬಳಿಯ ಇಂಗಳಗಿಯವರು. ಮಾತು ಮುಂದುವರಿಸುತ್ತಾ ಕೂರಿಗೆ ಹೊಡೆಯುವವನು ಅರ್ಜುನ, ಬಿತ್ತನೆ ಮಾಡುವ ಹೆಣ್ಣು ದ್ರೌಪದಿ ಎಂದರು. ಪಾಂಡವರ ಕುರಿತು ಅವರು ಹೇಳಿದ್ದು ಕುತೂಹಲಕರ.
‘ದರ್ಮುರು ಎಲ್ಲಾ ಬದುಕು ಮಾಡ್ಯಾರೆ, ಬಿತ್ಯಾರ, ಎಂಟೆತ್ತಿನ ಬಂಡಿ ಹೂಡ್ಯಾರ, ಹೊಲಕೆ ಬಂದು ಯವಸಾಯ ಮಾಡ್ಯಾರ. ಪುಂಡಿ ತಪ್ಪಲು, ಕಾರೆ ತಪ್ಪಲು ತಿಂದಾರ, ಅರ್ಜುನ ದ್ರೌಪದಿಗೆ ಜ್ವಾಳದ ತೆನಿ ನೋಡು, ಸಜ್ಜಿ ತೆನಿ ನೋಡು ಅಂತ ತೋರಿಸ್ಯಾನೆ. ಅವರು ಮಾಡಿರೋದ್ನೇ ನಾವು ಮುಂದರಿಸ್ತಾ ಇರೋದು’.
ಅರ್ಜುನ ನೇಗಿಲು ಹೊಡೆದು, ದ್ರೌಪದಿ ಅಕ್ಕಡಿ ಸಾಲು ಬಿತ್ತನೆ ಮಾಡುತ್ತಾ ಬೆರಕೆ ಸೊಪ್ಪಿನ ಸಾರು ಮಾಡಿಕೊಂಡು ಧರ್ಮರಾಯ, ಭೀಮ, ನಕುಲ-ಸಹದೇವರೆಲ್ಲಾ ಹೊಲದಲ್ಲಿ ಊಟ ಮಾಡುವುದನ್ನು ನೆನೆಸಿಕೊಂಡು ಮನಸ್ಸು ಉಲ್ಲಸಿತ
ವಾಯಿತು.
ಮಾತಾಡುತ್ತಲೇ ಅಣ್ಣೆ ಸೊಪ್ಪು, ಅಲಸಂದೆ ತಪರನ್ನು ಕಿತ್ತು ಮಡಿಲಿಗೆ ಸೇರಿಸಿದರು. ತೊಗರಿ ಕಾಯನ್ನು ಕಿತ್ತು ಬಿಡಿಸಿ ‘ಇನ್ನೂ ಬಲಿತಿಲ್ಲ, ಎಳೆ ಸಿಬುರು’ ಎನ್ನುತ್ತಾ ಮುಂದುವರಿದು ಜೋಳದ ದಂಟಿನ ಬಳಿ ನಿಂತು ‘ಜ್ವಾಳದ ಬೆಳಸೆ ತಿಂದೀರಾ’ ಪ್ರಶ್ನೆ ಹಾಕಿದರು.
‘ಇಲ್ಲ, ನಮ್ಮ ಕಡೆ ರಾಗಿ ಬೆಳಸೆ ತಿನ್ನುತ್ತಾರೆ’ ಎನ್ನುವ ವಾಕ್ಯ ಮುಗಿಯುವ ಮೊದಲೇ ನಾಲ್ಕಾರು ಎಳೆಯ ತೆನೆಗಳನ್ನು ಸೆಳೆದುಕೊಂಡರು. ಸೌದೆಪುಳ್ಳೆಯ ಬೆಂಕಿ ಮಾಡಿ ಸುಟ್ಟು ಕಾಳು ಉದುರಿಸಿದರು. ಬೆಚ್ಚಗಿನ ಕಾಳನ್ನು ಅಗಿದು ತಿನ್ನುತ್ತಿದ್ದರೆ ಬಾಯಿತುಂಬಾ ಹಾಲು ಒಸರುತ್ತಿತ್ತು. ದೇಸಿ ಜೋಳವಾದರೆ ಹಸಿ ತೆನೆಯನ್ನೇ ತಿನ್ನಬಹುದು, ಹೈಬ್ರಿಡ್ ಜೋಳ ಅಷ್ಟು ರುಚಿ ಇರುವುದಿಲ್ಲ ಎನ್ನುತ್ತಾ ಜಗಿಯತೊಡಗಿದರು. ಕಟವಾಯಿಗಳಲ್ಲಿ ಜೋಳದ ಹಾಲು ಇಳಿಯತೊಡಗಿತು.
ಹಾಗೇ ಒಂದು ನೆನಪಿನ ಲಹರಿ ಬಿಚ್ಚಿದರು.
ಸಣ್ಣವರಿದ್ದಾಗ ಮನೆಯಲ್ಲಿ ದವಸ ಧಾನ್ಯಗಳಿಗೆ ಕೊರತೆ. ಸ್ವಂತ ಜಮೀನಿಲ್ಲ. ಇತರೆಯವರ ಹೊಲಗಳು ಕಟಾವಾದ ಬಳಿಕ ಬಿದ್ದಿರುವ ಸಜ್ಜೆ, ಜೋಳದ ತೆನೆಗಳನ್ನು ಆರಿಸಿಕೊಂಡು ಬಂದು ಕಾಳು ತೆಗೆದು ಊಟ ಮಾಡುತ್ತಿದ್ದರು. ಹಾಗೆ ತಂದ ಕಾಳುಗಳು ಹಲವು ತಿಂಗಳವರೆಗೆ ಇವರ ಹೊಟ್ಟೆ ತುಂಬಿಸುತ್ತಿದ್ದವು. ಈಗಲೂ ಎಲ್ಲಾದರೂ ತೆನೆಗಳು ಬಿದ್ದಿದ್ದರೆ ಆರಿಸಿ ಮಡಿಲಿಗೆ ಹಾಕಿಕೊಳ್ಳುತ್ತಾರೆ.
ಈಗ ಗುಡ್ಡದ ಅಂಚಿನಲ್ಲಿರುವ ಎರಡೆಕರೆ ಪರಂಬೋಕು ಜಮೀನು ಗೆಯ್ಮೆ ಮಾಡುತ್ತಿದ್ದಾರೆ. ಈ ವರ್ಷ ಬಿಳಿ ಜೋಳ, ತೊಗರಿ ಮುಖ್ಯ ಬೆಳೆ. ಸಾಲುಗಳಿಗೆ ತೊಗರಿ, ನವಣೆ, ಸಜ್ಜೆ, ಅಲಸಂದೆ ಹಾಕಿದ್ದರು. ಅಲ್ಲಲ್ಲಿ ಬೆಂಡೆ, ಮೂಲಂಗಿ, ಟೊಮೆಟೊ ಸಹ. ನವಣೆ, ಸಜ್ಜೆ ತೆನೆಗಳು ಹಣ್ಣಾಗಿದ್ದವು. ದಪ್ಪ ತೆನೆಗಳನ್ನು ಉಗುರಿನಲ್ಲಿ ಚಿವುಟಿ ಮಂಕರಿಗೆ ಹಾಕಿಕೊಂಡರು. ಇವು ಬಿತ್ತನೆಗೆ.
ಇವರ ಹೊಲ ಕಟಾವಾದ ನಂತರ ಬಿದ್ದಿರುವ ಗರಿ, ಎಲೆ, ದಂಟು ಮುಂತಾದ ಉಳಿಕೆಯನ್ನು ಕುರಿಗಾರರು ಮೇಯಿಸುತ್ತಾರೆ. ಅದಕ್ಕೆ ಪ್ರತಿಯಾಗಿ ಇಂತಿಷ್ಟು ಗೊಬ್ಬರವನ್ನು ಕೊಡಬೇಕು. ಕುರಿಗಳು ಪಿಚ್ಚಿಗೆ ಹಾಕಿ ಗೊಬ್ಬರವೂ ಆಯಿತು, ಕುರಿಗಾರರು ಕೊಡುವ ಗೊಬ್ಬರವನ್ನು ಹೊಲಕ್ಕೆ ಚೆಲ್ಲಿದರೆ ಫಲವತ್ತಾಯಿತು ಎಂದು ತಮ್ಮ ಗೊಬ್ಬರದ ‘ಎಕನಾಮಿಕ್ಸ್’ ವಿವರಿಸಿದರು.
ಬಿಸಿಲು ಹೆಚ್ಚಾಗಿದ್ದರಿಂದ ಮರದಡಿಗೆ ನಡೆದೆವು. ಮಾತು ಅವರ ಬದುಕಿನತ್ತ ತಿರುಗಿತು. ಗಂಗಮ್ಮ ಮಾದಿಗ ಸಮುದಾಯಕ್ಕೆ ಸೇರಿದವರು. ಹುಟ್ಟಿದ್ದು ಇಂಗಳಗಿ. ಬಾಲ್ಯ ಕಳೆದಿದ್ದು ಅಜ್ಜನ ಊರಾದ ಬಳ್ಳಾರಿ ಬಳಿಯ ಸುಲ್ತಾನಪುರ. ಒಂಬತ್ತನೇ ವರ್ಷಕ್ಕೆ ಮದುವೆ ಮಾಡಿಬಿಡುತ್ತಾರೆ. ಅದು ಮನೆಯ ಸಂಪ್ರದಾಯವನ್ನು ಮುಂದುವರಿಸಲು. ಸಂಪ್ರದಾಯವನ್ನು ಅರ್ಥಮಾಡಿಕೊಳ್ಳುವ ವಯಸ್ಸಿಗೆ ಸಮಯ ಮೀರಿತ್ತು. ಮೂರು ಗಂಡು ಮಕ್ಕಳಾದವು. ಕೂಲಿ ಮಾಡುತ್ತಾ, ಮಕ್ಕಳನ್ನು ಸಲಹುತ್ತಾ ಬದುಕು ಸವೆಸಿದರು. ಮೂವರಿಗೂ ಮದುವೆ ಮಾಡಿದ್ದಾರೆ. ಮಕ್ಕಳಿಗೆ ಅಮ್ಮನ ಹಿನ್ನೆಲೆ, ಅನುಭವಿಸಿದ ಕಷ್ಟಗಳೆಲ್ಲಾ ಗೊತ್ತು. ಇತ್ತೀಚೆಗೆ ಹೊಸ ಮನೆ ಕಟ್ಟಿದ್ದಾರೆ. ಎಲ್ಲರೂ ಒಟ್ಟಿಗೇ ಇದ್ದಾರೆ.
ಸಣ್ಣ ವಯಸ್ಸಿಗೆ ಮದುವೆಯಾದಾಗ ಕುಹಕದ ಮಾತುಗಳು ಬಂದಿದ್ದವು. ಕೂಲಿ ಹೋದಾಗ, ಹಬ್ಬ-ಹುಣ್ಣಿಮೆಗಳಲ್ಲಿ ಬೆನ್ನ ಹಿಂದೆ ನೂರಾರು ಮಾತುಗಳನ್ನು ಕೇಳಿದ್ದಾರೆ. ‘ಹೆರಿಗೆಯಾದ 16 ದಿವಸಕ್ಕೇ ಕೆಲಸಕ್ಕೆ ಹೋದ ಜೀವ ನಂದು, ಈ ಊರಲ್ಲಿ ನಾನು ಗಂಡಸಿನ ಥರ ಬ್ಯಾಸಾಯ ಹೊಡೆದಿವ್ನಿ, ಬಾರುಕೋಲು ಹೆಗಲ ಮೇಲೆ ಹಾಕ್ಯಂಡು ಬಂದ್ರೆ ಯಾರೂ ಕಿಮುಕ್ ಅಂತಿರ‍್ಲಿಲ್ಲ . . ’ ಎನ್ನುವ ಹೊತ್ತಿಗೆ ಮಗ ಬುತ್ತಿ ತಂದ. ರಾಗಿ ಮುದ್ದೆ ಸೊಪ್ಪಿನ ಸಾರು ಊಟ ಮಾಡುತ್ತಾ ‘ಪುಂಡೆ ಪಲ್ಯಕ್ಕೆ ಅಲಸಂದೆ ಕಾಳು ಹಾಕಿ ಬಸೀಬೇಕು. ಅವಾಗ ಸಾರು ರುಸಿ ಬರುತ್ತೆ. ಈಗ ಗ್ಯಾಸ್ ಮ್ಯಾಲೆ ಕುಕ್ಕರ್ ಇಕ್ಕಿ ಕುರ್ ಅನಿಸುತ್ತಾರೆ’ ಎಂದು ಬೇಸರಿಸಿಕೊಂಡರು.
ಈ ವರ್ಷ ಒಳ್ಳೆ ಮಳೆ ಆಗಿದೆ, ಕೈತುಂಬಾ ಬೆಳೆ ಎಂದು ಮಾತು ಮುಂದುವರಿಸಿ ‘ಎಷ್ಟೇ ಬೆಳೆ ಆಗ್ಲಿ ಒಂದು ಕಾಳು ಮಾರಾಟ ಮಾಡದಿಲ್ಲ. ಮುಂದಲ ವರ್ಸ ಮಳೆ ಕೈಕೊಟ್ರೆ . . .’ ಎನ್ನುತ್ತಾ ಜೋರಾಗಿ ಆಕಳಿಸಿ ಕೈಯನ್ನು ತಲದಸಿ ಇಟ್ಟುಕೊಂಡು ಮಲಗಿಯೇಬಿಟ್ಟರು.
ಅವರೊಂದಿಗಿನ ಮಾತುಕತೆಯಲ್ಲಿ ಎಲ್ಲವೂ ಅರ್ಥವಾಗಿತ್ತು. ಆದರೆ ‘ಸಾಂಪ್ರದಾಯಿಕ ಮದುವೆ’ ಎಂಬುದೇ ಸ್ವಲ್ಪ ಗೊಂದಲ. ದಾರಿಯಲ್ಲಿ ಒಬ್ಬರನ್ನು ಕೇಳಿದಾಗ ‘ದೇವದಾಸಿ ಬಿಡುವುದಕ್ಕೆ ನಮ್ಮ ಕಡೆ ಹಾಗೆ ಕರೆಯುತ್ತಾರೆ’ ಎಂದರು.
ಬೆಳಗಿನಿಂದ ನಡೆದ ಮಾತುಕತೆಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳುತ್ತಾ ಹೋದೆ. ಬಿಂದುಗಳೆಲ್ಲಾ ಜೋಡಣೆಯಾಗಿ ಗಂಗಮ್ಮನ ಬದುಕಿನ ಒಂದು ಸ್ಪಷ್ಟ ರೂಪ ಕಣ್ಮುಂದೆ ಬಂದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.