ADVERTISEMENT

'ಪ್ರಜಾವಾಣಿ’ ವರ್ಷದ ಸಾಧಕಿ: ಕ್ಯಾನ್ಸರ್‌ಗೆ ಕ್ಯಾರೇ ಅನ್ನದ ಕಲಾವತಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 6:03 IST
Last Updated 1 ಜನವರಿ 2022, 6:03 IST
ಕಲಾವತಿ ಎಸ್‌.ಜೇಮ್ಸ್‌
ಕಲಾವತಿ ಎಸ್‌.ಜೇಮ್ಸ್‌   

ಬಿಬಿಎಂಪಿಯ ಕಿರಿಯ ಆರೋಗ್ಯ ಸಹಾಯಕಿ ಕಲಾವತಿ ಎಸ್‌. ಜೇಮ್ಸ್‌ ಕರ್ತವ್ಯನಿಷ್ಠೆಯಲ್ಲಿ ಸದಾ ಒಂದು ಹೆಜ್ಜೆ ಮುಂದೆ. ಸ್ತನದ ಕ್ಯಾನ್ಸರ್‌ ಜೊತೆಗೆಒಂದು ದಶಕವಿಡೀ ಸೆಣಸಾಡಿದ ಇವರು ಈಗ ಈ ಮಾರಕ ಕಾಯಿಲೆಯನ್ನೇ ಗೆದ್ದಿದ್ದಾರೆ.

1997ರಲ್ಲಿ ತಾತ್ಕಾಲಿಕ ನೆಲೆಯಲ್ಲಿ ಬಿಬಿಎಂಪಿ ಕೆಲಸಕ್ಕೆ ಸೇರಿದ್ದ ಕಲಾವತಿ ವಿಭೂತಿ‍ಪುರದಲ್ಲಿ ಐದು ವರ್ಷ ಕ್ಷೇತ್ರಕಾರ್ಯದಲ್ಲಿ ತೊಡಗಿದ್ದರು. 2002ರಿಂದ 2010ರವರೆಗೆ ಹಲಸೂರು ರೆಫರಲ್‌ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.ಸ್ತನ ಕ್ಯಾನ್ಸರ್‌ ಇರುವ ಬಗ್ಗೆ 2010ರ ಜನವರಿ ಅಂತ್ಯದಲ್ಲಿ ಅವರಿಗೆ ಸುಳಿವು ಸಿಕ್ಕಿತ್ತು. ನಂತರ ಶಸ್ತ್ರಚಿಕಿತ್ಸೆಗೆ ಒಳಗಾದರು. ಸುದೀರ್ಘ ಕಾಲ ಕೀಮೋಥೆರಪಿ ಹಾಗೂ ರೇಡಿಯೇಷನ್‌ ಥೆರಪಿಗೆ ಒಡ್ಡಿಕೊಳ್ಳುವಾಗಲೂ ಒಡಲ ನೋವನ್ನು ನುಂಗಿ ಹಸನ್ಮುಖಿಯಾಗಿಯೇ ಜನರ ಕೆಲಸ ಮಾಡಿಕೊಟ್ಟವರು. ಚಿಕಿತ್ಸೆಗೆ ಅಲ್ಪಾವಧಿ ರಜೆಯನ್ನು ಮಾತ್ರ ಪಡೆದು ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು.

ಸುದೀರ್ಘ ಕಾಲ ಚಿಕಿತ್ಸೆಗೆ ಒಡ್ಡಿಕೊಂಡಿದ್ಡರಿಂದ ಅವರು ಮಧುಮೇಹದಿಂದಲೂ ಬಳಲ ಬೇಕಾಯಿತು. ಆಸ್ತಮಾ ಕೂಡಾ ಆಗಾಗ ಬಾಧಿಸುತ್ತಿತ್ತು. ಅನಾರೋಗ್ಯ ಲೆಕ್ಕಿಸದೇ ಕೋವಿಡ್‌ ನಂತಹ ಇಕ್ಕಟ್ಟಿನ ಸಂದರ್ಭದಲ್ಲೂ ಕರ್ತವ್ಯಕ್ಕೆ ಚ್ಯುತಿ ಆಗದಂತೆ ನೋಡಿಕೊಂಡರು. ಕಾಯಿಲೆ ಜೊತೆಗಿನ ಹೋರಾಟ, ಕರ್ತವ್ಯದ ಜಂಜಡಗಳ ನಡುವೆಯೂ ಒಬ್ಬಳೇ ಮಗಳಿಗೆ ಎಂಜಿನಿಯರಿಂಗ್‌ ಶಿಕ್ಷಣ ಕೊಡಿಸಿದ್ದಾರೆ. ನಗರದ ದಾಸಪ್ಪ ಆಸ್ಪತ್ರೆ ಪ್ರಾಂಗಣದಲ್ಲಿರುವ ಬಿಬಿಎಂಪಿ ಆರೋಗ್ಯ ವಿಭಾಗದ ಕಚೇರಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.

ADVERTISEMENT

‘ನಾನು ಯಾವತ್ತೂ ಅನಾರೋಗ್ಯದ ಬಗ್ಗೆ ತಲೆ ಕೆಡಿಸಿಕೊಂಡವಳೇ ಅಲ್ಲ. ಈಗಲೂ ಜನರಿಗೆ ಏನಾದರೂ ನೆರವಾಗಲು ಸಾಧ್ಯವಾದರೆ, ಅದರಲ್ಲೇ ಸಾರ್ಥಕತೆ ಕಂಡುಕೊಳ್ಳುತ್ತೇನೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಕಲಾವತಿ.

ಹೆಸರು: ಕಲಾವತಿ
ವೃತ್ತಿ: ಆರೋಗ್ಯ ಸಹಾಯಕಿ
ಸಾಧನೆ: ಸ್ತನ ಕ್ಯಾನ್ಸರ್ ನಡುವೆಯೂ ಕರ್ತವ್ಯ ಪ್ರಜ್ಞೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.