ADVERTISEMENT

'ಪ್ರಜಾವಾಣಿ’ ವರ್ಷದ ಸಾಧಕ: ಪ್ರಚಾರ ಬಯಸದ ದಾನಿ ಧರ್ಮೇಶ್

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 6:01 IST
Last Updated 1 ಜನವರಿ 2022, 6:01 IST
ಎಸ್.ಆರ್. ಧರ್ಮೇಶ್
ಎಸ್.ಆರ್. ಧರ್ಮೇಶ್   

ಶಾಲಾ ಮಕ್ಕಳಿಗೆ ಇಷ್ಟದ ಬಟ್ಟೆ ಕೊಡಿಸುವ ಮೂಲಕ ಜನಮನ ಸೆಳೆದವರು ಎಸ್.ಆರ್. ಧರ್ಮೇಶ್. ಅವರು ಪ್ರಚಾರ ಬಯಸದ ದಾನಿ. ಪ್ರಸ್ತುತ ಕೋಲಾರ ತಾಲ್ಲೂಕಿನ ವಕ್ಕಲೇರಿ ಸಮೀಪದ ಸೀಗಹಳ್ಳಿ ಶಾಲೆಯಲ್ಲಿ ಶಿಕ್ಷಕ. ಅವರ ಸಂಬಳದಲ್ಲಿ ಪ್ರತಿ ತಿಂಗಳೂ ಸಮಾಜ ಸೇವೆಗೆ ₹ 10 ಸಾವಿರ ಮೀಸಲಿಡುತ್ತಾರೆ.

ದಾನಿಗಳು ನಿಗದಿತ ಸಂಖ್ಯೆಯ ವಿದ್ಯಾರ್ಥಿಗಳಿಗೆ ಕಡಿಮೆ ದರದ ಬಟ್ಟೆ ವಿತರಿಸುವುದು ಸರ್ವೇಸಾಮಾನ್ಯ. ಆದರೆ, ಧರ್ಮೇಶ್‌ ಮಕ್ಕಳನ್ನೇ ಗುಂಪು ಗುಂಪಾಗಿ ಅಂಗಡಿಗೆ ಕರೆದೊಯ್ಯುತ್ತಾರೆ. ದರದ ಮಿತಿ ಇಲ್ಲದೆ ಅವರಿಗೆ ಇಷ್ಟವಾದ ಉಡುಪು ಆರಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಾಗಲಷ್ಟೇ ಅವರ ಮನಸ್ಸಿಗೆ ಸಮಾಧಾನ.

ಕಲಿಕಾ ಸಾಮಗ್ರಿಗಳನ್ನೂ ಖರೀದಿಸಿಮಕ್ಕಳಿಗೆ ನೀಡುತ್ತಾರೆ. ಹುಟ್ಟೂರಾದ ಜಂಗಮ ಗುರ್ಜೇನಹಳ್ಳಿಯಿಂದ ಶಾಲೆಗೆ ಹೋಗುವ ಮಾರ್ಗಮಧ್ಯೆ ಸಿಗುವ ಮಕ್ಕಳಿಗೆ ಚಾಕೊಲೇಟ್‌, ಬಿಸ್ಕತ್ ಪ್ಯಾಕ್ ನೀಡುವುದು ಅವರ ನಿತ್ಯದ ಹವ್ಯಾಸ.

ADVERTISEMENT

ಶಿಕ್ಷಣವೇ ಶಕ್ತಿ ಎಂದು ನಂಬಿರುವ ಅವರು ಪ್ರತಿವರ್ಷ ಗ್ರಾಮೀಣ ಶಾಲೆಗಳಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುತ್ತಾರೆ. ಈವರೆಗೆ 300ಕ್ಕೂ ಹೆಚ್ಚು ನೇತ್ರ ರೋಗಿಗಳಿಗೆ ಸ್ವಂತ ಖರ್ಚಿನಿಂದ ಶಸ್ತ್ರಚಿಕಿತ್ಸೆ ಮಾಡಿಸಿ ಕನ್ನಡಕ ಕೊಡಿಸಿದ್ದಾರೆ. ಹೆಣ್ಣುಮಕ್ಕಳಿಗೆ ಹೊಲಿಗೆ ತರಬೇತಿ ಕೊಡಿಸುತ್ತಿದ್ದಾರೆ. ಕಲಾವಿದರನ್ನು ಗುರುತಿಸಿ ಸನ್ಮಾನಿಸುತ್ತಿದ್ದಾರೆ. ಅವರ ಸೇವೆಯು ಪರಿಸರ ಸಂರಕ್ಷಣಾ ಕ್ಷೇತ್ರಕ್ಕೂ ವಿಸ್ತರಿಸಿದೆ.

ಅವರ ಸಮಾಜ ಸೇವೆಗೆ ಕುಟುಂಬದ ಸದಸ್ಯರು ಬೆನ್ನೆಲುಬಾಗಿ ನಿಂತಿದ್ದಾರೆ. ಯಾರಾದರೂ ಅವರ ಸೇವೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರೆ ಮುಜುಗರಪಟ್ಟುಕೊಳ್ಳುವ ದೊಡ್ಡತನ ಅವರದು.

ಹೆಸರು: ಎಸ್.ಆರ್. ಧರ್ಮೇಶ್
ವೃತ್ತಿ: ಶಿಕ್ಷಕ
ಸಾಧನೆ: ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ಪ್ರೋತ್ಸಾಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.