ADVERTISEMENT

'ಪ್ರಜಾವಾಣಿ’ ವರ್ಷದ ಸಾಧಕ ಸಯ್ಯದ್ ಪಾಷಾ: ಬಂಗಾರಪೇಟೆಯ ‘ಬಂಗಾರದ ಮನುಷ್ಯ’

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 6:02 IST
Last Updated 1 ಜನವರಿ 2022, 6:02 IST
ಸಯ್ಯದ್ ಅಫ್ಸರ್ ಪಾಷಾ
ಸಯ್ಯದ್ ಅಫ್ಸರ್ ಪಾಷಾ   

ಬಲಗೈಲಿ ಮಾಡಿದ್ದು ಎಡಗೈಗೆ ಗೊತ್ತಾಗಬಾರದು ಎಂಬ ತತ್ವಕ್ಕೆ ಅಂಟಿಕೊಂಡವರುಸಯ್ಯದ್ ಅಫ್ಸರ್ ಪಾಷಾ. ಸರಳ ವ್ಯಕ್ತಿತ್ವದ ಅವರದು ಕೋಲಾರ ಜಿಲ್ಲೆಯ ಬಂಗಾರಪೇಟೆ. ಅಲ್ಲಿಯೇ ಬೆಳೆದದ್ದು, ಓದಿದ್ದು. ಅವರು ಒಂಥರಾ ಬಂಗಾರಪೇಟೆಯ ‘ಬಂಗಾರದ ಮನುಷ್ಯ’.

ವೃತ್ತಿಯಲ್ಲಿ ಅವರು ಮುಬಾರಕ್‌ ಹೋಟೆಲ್‌ ಮಾಲೀಕ. ಪ್ರವೃತ್ತಿಯಲ್ಲಿ ಸಮಾಜ ಸೇವಕ. ಬಡವರಿಗಾಗಿ ಛತ್ರ ಕಟ್ಟಿಸುತ್ತಾರೆ, ತಾವೇ ಮುಂದೆ ನಿಂತು ಉಚಿತವಾಗಿ ಮದುವೆ ಮಾಡಿಸುತ್ತಾರೆ. ಚಳಿಯಲ್ಲಿ ಮಲಗಿದವರಿಗೆ ಕಂಬಳಿ ಕೊಡುತ್ತಾರೆ. ಈ ಎಲ್ಲವನ್ನೂ ಸದ್ದಿಲ್ಲದೆ ಮಾಡುವ ಶ್ರಮಜೀವಿ.

ಹಬ್ಬವೆಂದು ಯಾರೇ ಸಹಾಯ ಕೋರಿ ಬಂದರೂ ಹಿಂದೂ– ಮುಸ್ಲಿಂ ಎಂಬ ಭೇದಭಾವ ತೋರುವುದಿಲ್ಲ. ಎಲ್ಲಾ ಜಾತಿ, ಧರ್ಮ ಮೀರಿದ ನಿಸ್ವಾರ್ಥ ಸೇವೆ ಅವರದು. ಇಂದಿಗೂ ಮೊಬೈಲ್ ಫೋನ್ ಬಳಸಲ್ಲ. ತಾವು ಗಳಿಸಿದ ಹಣದಲ್ಲಿ ಅರ್ಧದಷ್ಟು ದಾನ ಮಾಡುತ್ತಾ ಬಂದಿರುವ ಇವರು ಬಡ ವಿದ್ಯಾರ್ಥಿಗಳಿಗೆ ದಿನವೂ ಉಚಿತವಾಗಿ ಊಟ ಹಾಕುತ್ತಾರೆ. ಓದಲು ಕಾಸಿಲ್ಲ ಎಂದು ಬಂದವರಿಗೆ ಜೇಬಲ್ಲಿ ಎಷ್ಟಿರುತ್ತದೋ ಅಷ್ಟನ್ನೂ ಎತ್ತಿ ಕೊಡುವಷ್ಟು ಉದಾರಿ.

ADVERTISEMENT

ನಿತ್ಯ ಕನಿಷ್ಠ 300 ಜನರಿಗೆ ಅನ್ನದಾನ ಮಾಡುತ್ತಾರೆ. ಓದಿದ್ದು ಬರೀ ಒಂಬತ್ತನೇ ತರಗತಿ. ಕಡುಬಡತನದಿಂದ ಮುಂದೆ ಓದಲಾಗಿಲ್ಲ. ಹಾಗಾಗಿಯೇ, ತನ್ನಂತೆ ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಶಾಲೆ ಕಟ್ಟಿಸಿದ್ದಾರೆ. ತಮ್ಮ ಜೀವನ ಇರುವುದೇ ಬೇರೊಬ್ಬರಿಗೆ ಸಹಾಯ ಮಾಡಲು ಎನ್ನುವುದು ಅವರ ಒಡಲ ನುಡಿ.

‘ನನ್ನ ಜತೆ ಕೆಲಸ ಮಾಡುವವರನ್ನು ಮಕ್ಕಳಂತೆ ಅಲ್ಲದಿದ್ದರೂ ಸ್ನೇಹಿತರಂತೆ ಕಾಣುತ್ತೇನೆ’ ಎನ್ನುತ್ತಾರೆ ಅಫ್ಸರ್ ಪಾಷಾ.

ಸುದ್ದಿಗಾಗಿ ಸೇವೆ ಮಾಡಬೇಡ. ಸೇವೆ ಮಾಡಿ ಸದ್ದು ಮಾಡಬೇಡ. ಸದ್ದಿಲ್ಲದೆ ಸೇವೆ ಮಾಡು ಎಂಬ ಮದರ್ ತೆರೇಸಾ ಮಾತುಗಳಿಗೆ ಅವರು ಜೀವಂತ ನಿದರ್ಶನ.

ಹೆಸರು: ಸಯ್ಯದ್ ಅಫ್ಸರ್ ಪಾಷಾ
ಊರು: ಬಂಗಾರಪೇಟೆ
ಕ್ಷೇತ್ರ: ಸಮಾಜ ಸೇವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.