ADVERTISEMENT

ಆಳವಾದ ಅಧ್ಯಯನ, ನೇರ ಬರವಣಿಗೆಯ ವಿಮರ್ಶಕ ಜಿ.ಎಸ್‌. ಆಮೂರ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 14:26 IST
Last Updated 28 ಸೆಪ್ಟೆಂಬರ್ 2020, 14:26 IST
ಧಾರವಾಡದಿಂದ 2017ರ ಜೂನ್ 23ರಂದು ಬೆಂಗಳೂರಿಗೆ ಹೊರಟ ಪ್ರೊ. ಜಿ.ಎಸ್.ಆಮೂರ ಅವರಿಗೆ ಬೀಳ್ಕೊಡುವ ಮುನ್ನ ಭೇಟಿಯಾದ ಧಾರವಾಡದ ಸಾಹಿತ್ಯ ವಲಯ ಭೇಟಿ ಮಾಡಿ ಶುಭಕೋರಿದರು. (ಕುಳಿತವರಲ್ಲಿ) ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ. ಚೆನ್ನವೀರ ಕಣವಿ, ಡಾ. ಗಿರಡ್ಡಿ ಗೋವಿಂದರಾಜ. ಡಾ. ಜಿ.ಎನ್.ದೇವಿ, (ನಿಂತವರಲ್ಲಿ) ಡಾ. ರಮಾಕಾಂತ ಜೋಶಿ, ರಮೇಶ ಪರ್ವತೀಕರ, ಎಸ್‌.ಎನ್.ದೇಶಪಾಂಡೆ, ಶಶಿಧರ ತೋಡ್ಕರ್, ಹ.ವೆಂ.ಕಾಖಂಡಕಿ, ರಾಘವೇಂದ್ರ ಪಾಟೀಲ, ಡಾ. ಮಲ್ಲಿಕಾರ್ಜುನ ಹಿರೇಮಠ, ಸಮೀರ ಜೋಶಿ, ಡಾ. ವೀಣಾ ಶಾಂತೇಶ್ವರ, ಸುರೇಖಾ ದೇವಿ ಹಾಗೂ ಇತರರು ಇದ್ದಾರೆ.
ಧಾರವಾಡದಿಂದ 2017ರ ಜೂನ್ 23ರಂದು ಬೆಂಗಳೂರಿಗೆ ಹೊರಟ ಪ್ರೊ. ಜಿ.ಎಸ್.ಆಮೂರ ಅವರಿಗೆ ಬೀಳ್ಕೊಡುವ ಮುನ್ನ ಭೇಟಿಯಾದ ಧಾರವಾಡದ ಸಾಹಿತ್ಯ ವಲಯ ಭೇಟಿ ಮಾಡಿ ಶುಭಕೋರಿದರು. (ಕುಳಿತವರಲ್ಲಿ) ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ. ಚೆನ್ನವೀರ ಕಣವಿ, ಡಾ. ಗಿರಡ್ಡಿ ಗೋವಿಂದರಾಜ. ಡಾ. ಜಿ.ಎನ್.ದೇವಿ, (ನಿಂತವರಲ್ಲಿ) ಡಾ. ರಮಾಕಾಂತ ಜೋಶಿ, ರಮೇಶ ಪರ್ವತೀಕರ, ಎಸ್‌.ಎನ್.ದೇಶಪಾಂಡೆ, ಶಶಿಧರ ತೋಡ್ಕರ್, ಹ.ವೆಂ.ಕಾಖಂಡಕಿ, ರಾಘವೇಂದ್ರ ಪಾಟೀಲ, ಡಾ. ಮಲ್ಲಿಕಾರ್ಜುನ ಹಿರೇಮಠ, ಸಮೀರ ಜೋಶಿ, ಡಾ. ವೀಣಾ ಶಾಂತೇಶ್ವರ, ಸುರೇಖಾ ದೇವಿ ಹಾಗೂ ಇತರರು ಇದ್ದಾರೆ.   

ಧಾರವಾಡ: ಇಂಗ್ಲಿಷ್ ಭಾಷೆಯನ್ನು ಪ್ರೀತಿಸುವ ವ್ಯಕ್ತಿಯೊಬ್ಬರುಅದ್ಭುತವಾಗಿ ಕನ್ನಡ ಸಾಹಿತ್ಯ ರಚಿಸಿದ ಉದಾಹರಣೆಗಳು ಕನ್ನಡ ಸಾಹಿತ್ಯದಲ್ಲಿ ತೀರಾ ವಿರಳ. ಎರಡೂ ಭಾಷೆಗಳಲ್ಲೂ ಆಳವಾದ ಅಧ್ಯಯನ ಹಾಗೂ ಬರವಣಿಗೆಯ ಮೂಲಕ ಸಾಹಿತ್ಯ ಲೋಕದಲ್ಲಿ ಹೆಸರಾಗಿದ್ದವರು ಗುರುರಾಜ ಶಾಮಾಚಾರ್ ಆಮೂರ.

ತರಗತಿಯಲ್ಲಿ ಕೇವಲ ಪಾಠವನ್ನಷ್ಟೇ ಮಾಡದೆ,ಪಾಠದಾಚೆಗಿನ ಹೊಸ ಸಂಗತಿಗಳನ್ನು ತಿಳಿಸುವಂತಹ ಅದ್ಭುತ ಬೋಧನಾ ಕಲೆ,ನಿರರ್ಗಳ ಮಾತು,ಏನು ಹೇಳಬೇಕೋ ಅದನ್ನು ನೇರವಾಗಿ,ಚೊಕ್ಕವಾಗಿ ಹೇಳುವ ರೀತಿ ಅವರ ವ್ಯಕ್ತಿತ್ವವಾಗಿತ್ತು.ಬರವಣಿಗೆಯಲ್ಲೂ ತಮಗೆ ಅನಿಸಿದ್ದನ್ನು ನೇರವಾಗಿ ಬರೆಯುವುದು ಅವರ ಶೈಲಿ.ತಮ್ಮ ಒಂದು ಕೃತಿಯಲ್ಲಿ, ‘ಇಲ್ಲಿ ನಾನು ಪ್ರಸ್ತಾಪಿಸಿರುವ ವಿಷಯವನ್ನು ಬಹಳಷ್ಟು ಓದುಗರು ಒಪ್ಪಿಕೊಳ್ಳುತ್ತಾರೆ ಎಂದು ನನಗನಿಸುವುದಿಲ್ಲ.ಆದರೆ, ನನಗೆ ಅನಿಸಿದ್ದನ್ನು ಬರೆದಿದ್ದೇನೆ’ ಎಂದು ಚೊಕ್ಕವಾಗಿ ಹೇಳುವ ವ್ಯಕ್ತಿತ್ವ ಅವರದ್ದಾಗಿತ್ತು.

ಗದುಗಿನ ಜಿಟಿ ಕಾಲೇಜಿನಿಂದ ಬಂದ ಆಮೂರ ಅವರು ಕರ್ನಾಟಕ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿಕೊಂಡರು.ಇದೇ ಅವಧಿಯಲ್ಲಿ ಲೇಖಕ ಶಾಂತಿನಾಥ ದೇಸಾಯಿ ಅವರೂ ಕಾಲೇಜಿಗೆ ಬಂದು ಸೇರಿಕೊಂಡಿದ್ದು ನಮ್ಮ ಅದೃಷ್ಟವೇ ಸರಿ.ಈ ಇಬ್ಬರ ಅದ್ಭುತ ಕೆಲಸ ಆಗಿನ ಇಂಗ್ಲಿಷ್‌ ವಿಭಾಗದ ಮುಖ್ಯಸ್ಥ ಎಂ.ಕೆ. ನಾಯಕ್ ಅವರಿಗೆ ಹಿಡಿಸುತ್ತಿರಲಿಲ್ಲ.ಹೀಗಾಗಿ ಆಮೂರರನ್ನು ಮಾತ್ರವಲ್ಲ,ಅವರನ್ನು ನೇಮಕ ಮಾಡಿದವರನ್ನು ನಾಯಕ್ ಅವರು ಎಂದೂ ಕ್ಷಮಿಸಲಿಲ್ಲ.ಹೀಗಾಗಿ ಅವರು ಪ್ರಾಧ್ಯಾಪಕರಾಗುವುದನ್ನು ತಡೆಹಿಡಿಯಲಾಗಿತ್ತು.ಆದರೆ, ಆಮೂರರು ತಮ್ಮ ಪ್ರತಿಭೆಯನ್ನು ತರಗತಿಯಲ್ಲಿ ತೋರಿಸುತ್ತಿದ್ದರು.

ಅದ್ಭುತವಾಗಿ ಪಾಠ ಮಾಡುತ್ತಿದ್ದ ಶಾಂತಿನಾಥ ದೇಸಾಯಿ ಅವರನ್ನು ಕಂಡರೆ ಪ್ರೀತಿಸುವ,ಆಮೂರರನ್ನು ಕಂಡರೆ ಗೌರವಿಸುವ ಹಾಗೂ ಮತ್ತೊಬ್ಬ ಶಿಕ್ಷಕ ಶಂಕರ ಮೊಕಾಶಿ ಪುಣೇಕರನ್ನು ಕಣ್ತುಂಬಿಕೊಳ್ಳುವ ಬಯಕೆ ಎಲ್ಲ ವಿದ್ಯಾರ್ಥಿಗಳಲ್ಲೂ ಇತ್ತು.ಇಂಥ ಶಿಕ್ಷಕರ ಬಳಿ ನಾವು ಕಲಿತಿದ್ದೇವೆ ಎಂಬ ಹೆಮ್ಮೆ ನಮ್ಮದು.

ಇದೇ ಅವಧಿಯಲ್ಲಿ ಔರಂಗಾಬಾದ್‌ನ ಮರಾಠವಾಡ ವಿಶ್ವವಿದ್ಯಾಲಯದಿಂದ ಬಂದ ಆಹ್ವಾನವನ್ನು ಅವರು ತಿರಸ್ಕರಿಸಲಿಲ್ಲ.ಅಲ್ಲಿ ಬಹಳಷ್ಟು ಅವಕಾಶಗಳನ್ನು ಪಡೆಯುವುದರ ಜತೆಗೆ,ಉತ್ತಮ ಸ್ಥಾನಗಳನ್ನು ಅಲಂಕರಿಸಿದರು.ಮೂರು ಬಾರಿ ಪ್ರಭಾರ ಕುಲಪತಿಯೂ ಆಗಿದ್ದರು.ನಿವೃತ್ತಿಯವರೆಗೆ ಔರಂಗಾಬಾದ್‌ನಲ್ಲಿದ್ದರೂ ಕನ್ನಡ ಪ್ರೀತಿಯನ್ನು ಅವರು ಮರೆತಿರಲಿಲ್ಲ.

ಯಾವುದೇ ಒಂದು ವಿಷಯವನ್ನು ಹಿಡಿದರೆ ಅದು ಪೂರ್ಣಗೊಳ್ಳುವವರೆಗೂ ಮತ್ತೊಂದು ಕೆಲಸವನ್ನು ಆಮೂರರು ತೆಗೆದುಕೊಳ್ಳುತ್ತಿರಲಿಲ್ಲ.ಹೀಗಾಗಿ ಯೇ ದ.ರಾ. ಬೇಂದ್ರೆ ಅವರ ಸಂಪೂರ್ಣ ಸಾಹಿತ್ಯವನ್ನು ಅಧ್ಯಯನ ಮಾಡಿ ಬರೆದ ‘ಭುವನದ ಭಾಗ್ಯ’,ಬೇಂದ್ರೆ ಕುರಿತ ಇತರ ಕೃತಿಗಳಿಗಿಂತಲೂ ವಿಶಿಷ್ಟವಾಗಿ ನಿಲ್ಲುತ್ತದೆ.ಅದರಂತೆಯೇ ತಮಗೆ ಶಿಕ್ಷಕರಾಗಿದ್ದ ಶ್ರೀರಂಗರ ನಾಟಕಗಳ ಕುರಿತು ಅಧ್ಯಯನ ನಡೆಸಿ ಸಮಗ್ರವಾಗಿ ಸಿಗುವಂತೆ ಪುಸ್ತಕ ಹೊರತಂದರು.ಅಚ್ಚರಿ ಎಂದರೆ,ಕುವೆಂಪು ಅವರ ಕುರಿತು ಪ್ರೊ.ಆಮೂರ ಅವರು ಬರೆಯುತ್ತಾರೆ ಎಂದು ಯಾರಿಗೂ ಅನಿಸಿರಲಿಲ್ಲ.ಕೆಲವೇ ವರ್ಷಗಳ ಹಿಂದೆ ಕುವೆಂಪು ಅವರ ಸಮಗ್ರ ಸಾಹಿತ್ಯ ಕುರಿತ ಅವರ ವಿಮರ್ಶಾ ಕೃತಿ ಬಹಳಷ್ಟು ಪ್ರಶಂಸೆಗೆ ಪಾತ್ರವಾಯಿತು.ಆದರೆ, ತಮಗೆ ಶಿಕ್ಷಕರಾಗಿದ್ದ ವಿ.ಕೃ. ಗೋಕಾಕರ ಕುರಿತು ಯಾವುದೇ ಪುಸ್ತಕವನ್ನು ಯಾಕೆ ಬರೆಯಲಿಲ್ಲ ಎಂಬ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ.

ಅವರು ಎಂದಿಗೂ ಭಾವನಾತ್ಮಕವಾಗಿ ಕೃತಿಗಳನ್ನು ರಚಿಸುತ್ತಿರಲಿಲ್ಲ.ಅವರ ಪ್ರತಿ ಸಾಹಿತ್ಯದಲ್ಲೂ ಅಧ್ಯಯನ ಶಿಸ್ತು ಎದ್ದು ಕಾಣುತ್ತಿತ್ತು.ಅವರ ಆಸಕ್ತಿ ಕವಿತೆಯೇ ಆದರೂ ಕಾದಂಬರಿ,ಕಥಾ ಸಾಹಿತ್ಯ ಹೀಗೆ ಹಲವು ಪ್ರಕಾರಗಳ ಕುರಿತು ಬರೆದರು.ಇವೆಲ್ಲವನ್ನೂ ಕಂಡಾಗ ಅವರ ಅದ್ಭುತ ಅಧ್ಯಯನ ಶಕ್ತಿ ಊಹೆಗೂ ನಿಲುಕದ್ದು.

ಮಾತಿನ ಪ್ರೀತಿಯುಳ್ಳ ಪ್ರೊ.ಆಮೂರ ಅವರು ಗಂಟೆಗಟ್ಟಲೆ ಹರಟುತ್ತಿದ್ದರು.ಅವರ ಮಾತು ವಿಷಯ ಕೇಂದ್ರಿತವಾಗಿರುತ್ತಿತ್ತೇ ಹೊರತು,ಎಂದಿಗೂ ವ್ಯಕ್ತಿಗತವಾಗಿರುತ್ತಿರಲಿಲ್ಲ.ವ್ಯವಹಾರದಲ್ಲಿ ಆಮೂರರದ್ದು ಅದೇ ಶಿಸ್ತು.ಪ್ರಕಾಶಕರೊಂದಿಗಿನ ವ್ಯವಹಾರ ಮತ್ತು ಕೌಟುಂಬಿಕ ವ್ಯವಹಾರದಲ್ಲೂ ಅವರದ್ದು ಅದೇ ಶಿಸ್ತು.ಮಕ್ಕಳು ದೊಡ್ಡವರಾದ ಕೂಡಲೇ ಮದುವೆ ಮಾಡಿ ಸ್ವತಂತ್ರವಾಗಿರುವಂತೆ ಸೂಚಿಸಿದ್ದರು.ಇಳಿವಯಸ್ಸಿನಲ್ಲಿ ಪತ್ನಿ ಶಾಂತಾ ಅವರೊಂದಿಗೆ ಧಾರವಾಡದ ಕಲ್ಯಾಣ ನಗರದ ಮನೆಯಲ್ಲಿರುತ್ತಿದ್ದರು.

ವಿಜ್ಞಾನ ವಿಷಯದಲ್ಲಿ ರ‍್ಯಾಂಕ್ ಪಡೆದಿದ್ದ ಶಾಂತಾ ಅವರನ್ನು ಆಮೂರರು ವರಿಸಿದ್ದರು.ಆದರೆ, ಪತ್ನಿ ನಿಧನದ ಬಳಿಕ ಆಮೂರರು ಕುಗ್ಗಿದ್ದರು. ‘ಎಂಥ ಬ್ರಿಲಿಯಂಟ್ ಹೆಣ್ಣುಮಗ್ಳು ಆಕಿ.ಹೋಗಿಬಿಟ್ಲಲ್ರೀ...’ಎಂದು ಬೇಸರಿಸಿದ್ದರು.

ಸದಾ ಆಮೂರರನ್ನು ಕಾಪಾಡಿದ್ದು ಅವರಲ್ಲಿದ್ದ ನೈತಿಕ ಧೈರ್ಯ.ಆದರೆ, ಅವರ ಸಾಹಿತ್ಯ ಸೇವೆಗೆ ತಕ್ಕುದಾದ ಗೌರವ ಅವರಿಗೆ ಸಿಗಲಿಲ್ಲ. ಸಾಹಿತ್ಯ ಸಮ್ಮೇಳನಕ್ಕೆ ಉತ್ತರ ಕರ್ನಾಟಕದವರನ್ನೇ ಅಧ್ಯಕ್ಷರನ್ನಾಗಿ ನೇಮಿಸುವ ಪ್ರಸ್ತಾಪ ಬಂದಾಗ ಆಮೂರರ ಹೆಸರು ಮೊದಲನೆಯದಾಗಿ ಕೇಳಿಬಂದಿತ್ತು.ಧಾರವಾಡ,ಮೈಸೂರು ಹಾಗೂ ಕಲಬುರ್ಗಿ ಸಾಹಿತ್ಯ ಸಮ್ಮೇಳನಕ್ಕೆ ಅವರನ್ನು ಅಧ್ಯಕ್ಷರನ್ನಾಗಿಸುತ್ತಾರೆ ಎಂಬ ನಿರೀಕ್ಷೆ ಹೊಂದಿದ್ದ ಅವರ ಅಭಿಮಾನಿಗಳಿಗೆ ನಿರಾಸೆಯಾಗಿತ್ತು.ಕಳೆದ15ದಿನಗಳಿಂದ ಆಸ್ಪತ್ರೆಯ ಐಸಿಯುನಲ್ಲಿದ್ದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅವರಿಗೆ ‘ನೃಪತುಂಗ ಪ್ರಶಸ್ತಿ’ ಘೋಷಿಸಿತಷ್ಟೇ.

ಶಿಕ್ಷಕನಾಗಿದ್ದವರು ಒಂದೋ ಅದ್ಭುತವಾಗಿ ಮಾತನಾಡುತ್ತಾರೆ,ಇಲ್ಲವೇ ಉತ್ತಮ ಬರವಣಿಗೆ ಉಳ್ಳವರಾಗಿರುತ್ತಾರೆ.ಹಾಗೆಯೇ ಬರವಣಿಗೆ,ವೈಚಾರಿಕತೆ ಹಾಗೂ ವ್ಯವಹಾರ ಸ್ವಚ್ಛತೆ ಕಾಪಾಡಿಕೊಂಡು ಅದ್ಭುತ ಎಂದೆನಿಸಿಕೊಂಡವರು ತೀರಾ ವಿರಳ.ಆ ವಿರಳಾತಿ ವಿರಳರಾಗಿದ್ದ ಪ್ರೊ.ಆಮೂರ ಅವರು ಇನ್ನು ನೆನಪು ಮಾತ್ರ.

ನಿರೂಪಣೆ: ಇ.ಎಸ್. ಸುಧೀಂದ್ರ ಪ್ರಸಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.