ADVERTISEMENT

PV Web Exclusive | ಬೆಳಗಾವಿಯಲ್ಲೊಂದು ಅಂಚೆಚೀಟಿ ಪ್ರಪಂಚ

ಉತ್ತರ ಕರ್ನಾಟಕದ ಏಕೈಕ ‘ಫಿಲಾಟೆಲಿಕ್ ಬ್ಯೂರೊ’

ಎಂ.ಮಹೇಶ
Published 7 ಜನವರಿ 2021, 9:39 IST
Last Updated 7 ಜನವರಿ 2021, 9:39 IST
ಮಹಾತ್ಮ ಗಾಂಧೀಜಿಗೆ ಸಂಬಂಧಿಸಿದ ಅಂಚೆಚೀಟಿಗಳ ಪ್ರದರ್ಶನ
ಮಹಾತ್ಮ ಗಾಂಧೀಜಿಗೆ ಸಂಬಂಧಿಸಿದ ಅಂಚೆಚೀಟಿಗಳ ಪ್ರದರ್ಶನ   

ಬೆಳಗಾವಿ: ಉತ್ತರ ಕರ್ನಾಟಕದ ಏಕೈಕ ಅಂಚೆಚೀಟಿಗಳ ಲೋಕ (ಫಿಲಾಟೆಲಿಕ್ ಬ್ಯೂರೊ) ಬೆಳಗಾವಿಯ ಮುಖ್ಯ ಅಂಚೆ ಕಚೇರಿಯಲ್ಲಿ ಅತ್ಯಾಕರ್ಷಕವಾಗಿ ಅನಾವರಣಗೊಂಡಿದ್ದು, ಮಕ್ಕಳು ಹಾಗೂ ಅಂಚೆಚೀಟಿಗಳನ್ನು ಸಂಗ್ರಹಿಸುವ ಹವ್ಯಾಸವುಳ್ಳವರನ್ನು ಕೈಬೀಸಿ ಕರೆಯುತ್ತಿದೆ.

14 ಜಿಲ್ಲೆಗಳ ವ್ಯಾಪ್ತಿ ಒಳಗೊಂಡಿರುವ ಈ ಬ್ಯೂರೊ ಸಂಸ್ಮರಣ ಅಂಚೆಚೀಟಿಗಳನ್ನು ಬಿಡುಗಡೆ ಮಾಡುವ ಕೇಂದ್ರವೂ ಆಗಿದೆ. ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಅಂಚೆಚೀಟಿಗಳ ಸಂಗ್ರಹದ ಹವ್ಯಾಸ ಬೆಳೆಸುವ ಮುಖ್ಯ ಉದ್ದೇಶಕ್ಕೆ ಪೂರಕವಾಗಿ ಕೇಂದ್ರವನ್ನು ಅಂಚೆ ಚೀಟಿಗಳಿಂದಲೇ ಸಿಂಗರಿಸಲಾಗಿದೆ. ಈ ‘ಚೀಟಿ’ಗಳು ನಾಡು ಹಾಗೂ ದೇಶದ ವೈಶಿಷ್ಟ್ಯವನ್ನು ಹೇಗೆ ಬಿಂಬಿಸುತ್ತಿವೆ ಎನ್ನುವುದನ್ನು ಪ್ರದರ್ಶಿಸಲಾಗಿದೆ. ಇದರೊಂದಿಗೆ ಇದು, ಪ್ರವಾಸಿಗರು ಅಥವಾ ಸಂದರ್ಶಕರನ್ನು ಆಕರ್ಷಿಸುವ ನಗರದ ಮತ್ತೊಂದು ಪ್ರವಾಸಿ ತಾಣವಾಗಿಯೂ ಹೊರಹೊಮ್ಮಿದೆ.

ಏನಿದು ಬ್ಯೂರೋ?:ಉತ್ತರ ಕರ್ನಾಟಕ ವಲಯ ಪೋಸ್ಟ್‌ ಮಾಸ್ಟರ್ ಜನರಲ್‌ ವೀಣಾ ಆರ್. ಶ್ರೀನಿವಾಸ್ ಹಾಗೂ ಬೆಳಗಾವಿ ವಿಭಾಗದ ಸೂಪರಿಂಟೆಂಡೆಂಟ್ ಎಸ್‌.ಡಿ. ಕುಲಕರ್ಣಿ (ಕೆಲ ದಿನಗಳ ಹಿಂದೆ ನಿವೃತ್ತರಾಗಿದ್ದಾರೆ) ಅವರ ಸಾರಥ್ಯದಲ್ಲಿ ನೂತನ ಬ್ಯೂರೊ ಸಜ್ಜುಗೊಳಿಸಲಾಗಿದೆ. ಧರ್ಮೇಂದ್ರ ಜಾಯಿ, ಶ್ರೀನಿವಾಸ ಆರ್. ಚವಾಣ್, ಮಂಜುನಾಥ ಅಂಗಡಿ ಅವರನ್ನು ಒಳಗೊಂಡ ತಂಡವು, ದೇಶದಲ್ಲೇ ವಿಶೇಷ ಹಾಗೂ ಶೈಕ್ಷಣಿಕ ಕೇಂದ್ರವನ್ನಾಗಿ ರೂಪಿಸಿದೆ. ಇದನ್ನು ಈಚೆಗೆ ಉದ್ಘಾಟಿಸಿದ ಕರ್ನಾಟಕ ವೃತ್ತದ ಚೀಫ್ ಪೋಸ್ಟ್‌ ಮಾಸ್ಟರ್ ಜನರಲ್ ಶಾರದಾ ಸಂಪತ್‌ ಶ್ಲಾಘಿಸಿದ್ದಾರೆ.

ADVERTISEMENT
ಬೆಳಗಾವಿಯ ಫಿಲಾಟೆಲಿಕ್ ಬ್ಯೂರೊದ ನೋಟ

ದೇಶದ ಹಾಗೂ ನಾಡಿನ ಇತಿಹಾಸ, ಪರಂಪರೆ, ಸಾಧನೆ, ಭೌಗೋಳಿಕ ಮಹತ್ವ, ಕ್ರೀಡೆ, ಮಹಾತ್ಮ ಗಾಂಧೀಜಿ ಸೇರಿದಂತೆ, ಮಹಾನ್‌ ನಾಯಕರು, ದಾರ್ಶನಿಕರು, ಸಾಂಸ್ಕೃತಿಕ ನಾಯಕರು, ಪ್ರಾಚೀನ ಸ್ಮಾರಕಗಳು, ಸಸ್ಯ ಮತ್ತು ‍ಪ್ರಾಣಿಗಳು, ಮಹಿಳಾ ಸಬಲೀಕರಣ, ಅಂಚೆ ಇತಿಹಾಸ, ಸೈನ್ಯ ಹೀಗೆ... ಹಲವು ವಿಷಯಗಳಿಗೆ ಸಂಬಂಧಿಸಿದ ಅಂಚೆಚೀಟಿಗಳು ಇಲ್ಲಿ ಗೋಡೆಗಳನ್ನು ಅಲಂಕರಿಸಿವೆ. ವೀಕ್ಷಿಸಿದವರ ಮನಸ್ಸನ್ನೂ ಅಲಂಕರಿಸುವ ರೀತಿಯಲ್ಲಿ ಅವುಗಳನ್ನು ಪ್ರದರ್ಶಿಸಲಾಗಿದೆ. ಅಪರೂಪದ ಅಂಚೆಚೀಟಿಗಳನ್ನೂ ಕಣ್ತುಂಬಿಕೊಳ್ಳಬಹುದು.

ಸಮೃದ್ಧ ಮಾಹಿತಿ:ದೇಶದ ಇತಿಹಾಸ, ವಿಶೇಷ, ಸಾಧನೆ ಹಾಗೂ ನಾಡಿನ ಪರಂಪರೆ ತಿಳಿದುಕೊಳ್ಳಲು ಬಯಸುವವರಿಗೆ ಒಂದೇ ಸೂರಿನ ‘ಸಮೃದ್ಧ ಮಾಹಿತಿ ಲೋಕ’ವಾಗಿಯೂ ಇದು ತೆರೆದುಕೊಂಡಿದೆ. ಇದನ್ನು ಅಂಚೆಚೀಟಿಗಳ ಸಂಗ್ರಹಾಲಯ ಅಥವಾ ಕಲಾ ಗ್ಯಾಲರಿ ಎನ್ನುವುದಕ್ಕೂ ಅಡ್ಡಿ ಇಲ್ಲ. ಜ್ಞಾನಪಿಪಾಸುಗಳಿಗೆ ಹೇಳಿ ಮಾಡಿಸಿದ ತಾಣವೂ ಹೌದು.

ಮಹಾತ್ಮ ಗಾಂಧೀಜಿ ಅವರ ಆಕರ್ಷಕ ಕಲಾಕೃತಿಯ ಸುತ್ತಲೂ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಅಂಚೆ ಇಲಾಖೆಯಿಂದ ಬಿಡುಗಡೆ ಮಾಡಲಾದ ಅಂಚೆಚೀಟಿಗಳನ್ನು ಹಾಕಲಾಗಿದೆ.

‘ಅಂಚೆಚೀಟಿಗಳ ಹವ್ಯಾಸದ ಬಗ್ಗೆ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳಿಗೆ, ಇಂದಿನ ‍ಪೀಳಿಗೆಯವರನ್ನು ಸೆಳೆಯುವ ಕೆಲಸವನ್ನು ಬ್ಯೂರೊ ಮಾಡುತ್ತಿದೆ. ಚಿಕ್ಕದಾಗಿದ್ದ ಕೇಂದ್ರವೀಗ ಹಿರಿಯ ಅಧಿಕಾರಿಗಳ ಸಹಕಾರದಿಂದಾಗಿ ದೇಶದಲ್ಲಿಯೇ ಮಾದರಿಯಾಗಿ ರೂಪಗೊಂಡಿದೆ. ಅತ್ಯುತ್ತಮ ಶೈಕ್ಷಣಿಕ ಬ್ಯೂರೋ ಕೂಡ ಎನಿಸಿದೆ. ಇಲ್ಲಿ ಪ್ರದರ್ಶಿಸಿರುವ ಅಂಚೆಚೀಟಿಗಳನ್ನು ವೀಕ್ಷಿಸುವ ಮೂಲಕ ಒಂದೇ ಸೂರಿನಲ್ಲಿ ಮತ್ತು ಕೆಲವೇ ಸಮಯದಲ್ಲಿ ಹತ್ತು ಹಲವು ವಿಷಯಗಳ ಕುರಿತು ಮಾಹಿತಿ ಪಡೆಯಬಹುದು’ ಎಂದು ಬ್ಯೂರೊದ ಮುಖ್ಯಸ್ಥ ಧರ್ಮೇಂದ್ರ ಜಾಯಿ ‘ಪ್ರಜಾವಾಣಿ’ಯೊಂದಿಗೆ ಹೆಮ್ಮೆಯಿಂದ ಹಂಚಿಕೊಂಡರು.

ಅಂಚೆಚೀಟಿಗಳ ಪ್ರದರ್ಶನದ ನೋಟ

ಮುದ್ರೆಗಳ ಬಿಡುಗಡೆ:ಖಾನಾಪುರ ತಾಲ್ಲೂಕಿನಲ್ಲಿರುವ ಹಲಸಿಯಲ್ಲಿ ಶಿಲ್ಪಕಲಾ ವೈಭವ ಸಾರುವ ಭೂವರಾಹ ನರಸಿಂಹ, ನಾರಾಯಣ ದೇವರ ದೇವಾಲಯದ ‘ಶಾಶ್ವತ ಚಿತ್ರಮಯ ಅಂಚೆ ಮುದ್ರೆ’ ಜೊತೆಗೆ ಹೊಸದಾಗಿ ಮತ್ತೆ ಮೂರು ಐತಿಹಾಸಿಕ ತಾಣಗಳ ‘ಶಾಶ್ವತ ಚಿತ್ರಮಯ ಅಂಚೆ ಮುದ್ರೆ’ಗಳನ್ನು ಈಚೆಗೆ ಬಿಡುಗಡೆ ಮಾಡಲಾಗಿದೆ. ಗಣಪತಿ ಗಲ್ಲಿಯಲ್ಲಿರುವ ನಗರದ ಅಸ್ಮಿತೆಯ ಪ್ರತೀಕವಾದ ದೊಡ್ಡ ಗಡಿಯಾರ ಪ್ರದೇಶ, ಕೋಟೆ ಪ್ರದೇಶದಲ್ಲಿರುವ ಕಮಲ ಬಸದಿ, ಸವದತ್ತಿ ತಾಲ್ಲೂಕಿನ ಹೂಲಿಯ ಪಂಚಲಿಂಗೇಶ್ವರ ದೇವಸ್ಥಾನದ ‘ಶಾಶ್ವತ ಚಿತ್ರಮಯ ಅಂಚೆ ಮುದ್ರೆ’ಯನ್ನು ಇಲಾಖೆ ತಯಾರಿಸಿದೆ. ಈ ಮೂಲಕ ಈ ತಾಣಗಳನ್ನು ದೇಶದೊಂದಿಗೆ ಇಡೀ ಜಗತ್ತಿಗೆ ಪರಿಚಯಿಸುವ ಕಾರ್ಯವನ್ನು ಮಾಡಲಾಗಿದೆ.

ನವೀಕರಿಸಿದ ಪಿಲಾಟೆಲಿಕ್ ಬ್ಯೂರೊ, ಉತ್ತರ ಕರ್ನಾಟಕದ ಪ್ರಸಿದ್ಧ ಹಾಗೂ ಈ ಭಾಗದಲ್ಲಿ ಅಂಚೆ ಚೀಟಿಗಳ ಸಂಗ್ರಹದ ಹವ್ಯಾಸವನ್ನು ಮೊದಲು ಆರಂಭಿಸಿದ ಶತಾಯುಷಿ ದಿ.ಕೆ.ಜಿ. ಕಡೆಕೊಡಿ, ಫಾಂಗುಳ ಗಲ್ಲಿಯಲ್ಲಿರುವ ಅಶ್ವತ್ಥಾಮ ಮಂದಿರ, ಕಮಲ ಬಸದಿಯ ನವಗ್ರಹ ಹಾಗೂ ನೇಮಿನಾಥ ಮತ್ತು ಈಚೆಗೆ ಶತಮಾನೋತ್ಸವ ಆಚರಿಸಿದ ಪೋಸ್ಟಲ್ ಮತ್ತು ಆರ್‌ಎಂಎಸ್ ಡಿವಿಷನ್ ಕೋ–ಆಪರೇಟಿವ್ ಸೊಸೈಟಿಯ ಕುರಿತು ಐದು ವಿಶೇಷ ಅಂಚೆ ಲಕೋಟೆಗಳನ್ನೂ ಈಚೆಗೆ ಬಿಡುಗಡೆ ಮಾಡಲಾಗಿದೆ.

ಈ ಭಾಗದವರಾದ:ಕಿತ್ತೂರು ರಾಣಿ ಚನ್ನಮ್ಮ, ಕಿರ್ಲೋಸ್ಕರ್, ಗಂಗೂಬಾಯಿ ಹಾನಗಲ್, ಬಸವಣ್ಣ, ಹಂಪಿ ಕಲ್ಲಿನ ರಥ, ಪಂಡಿತ್ ಭೀಮಸೇನ ಜೋಶಿ, ಗೋಳಗುಮ್ಮಟ, ಮೈಲಾರ ಮಹಾದೇವಪ್ಪ, ಶ್ರೀಕೃಷ್ಣ ದೇವರಾಯ, ಹಾನಗಲ್ ಕುಮಾರ ಸ್ವಾಮೀಜಿ, ಮುಧೋಳ ತಳಿಯ ಶ್ವಾನ ಹೀಗೆ... ಉತ್ತರ ಕರ್ನಾಟಕ ಭಾಗದಲ್ಲಿ ಈವರೆಗೆ ಬಿಡುಗಡೆಯಾದ 29 ಅಂಚೆಚೀಟಿಗಳನ್ನು ಗ್ಯಾಲರಿಯಲ್ಲಿ ಪ್ರದರ್ಶಿಸಲಾಗಿದೆ.

‘ಬೆಳಗಾವಿಯಲ್ಲಿ ಪ್ರವಾಸೋದ್ಯಮ ಪ್ರೋತ್ಸಾಹಿಸುವ ಉದ್ದೇಶವೂ ಇದರದ್ದಾಗಿದೆ. ಸಾರ್ವಜನಿಕರು, ವಿಶೇಷವಾಗಿ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಬ್ಯೂರೊಗೆ ಭೇಟಿ ನೀಡಿ ವೀಕ್ಷಿಸಬೇಕು. ಅಂಚೆಚೀಟಿಗಳನ್ನು ಸಂಗ್ರಹಿಸುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಬಹಳಷ್ಟು ಅನುಕೂಲವಾಗುತ್ತದೆ. ಒಂದೊಂದು ಅಂಚೆಚೀಟಿಯೂ ಸಾಕಷ್ಟು ಇತಿಹಾಸವನ್ನು ತಿಳಿಸುತ್ತದೆ’ ಎನ್ನುತ್ತಾರೆ ಧರ್ಮೇಂದ್ರ.

ಅಂಚೆಚೀಟಿಗಳ ಪ್ರದರ್ಶನದ ನೋಟ

‘ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಶಾಲೆಗಳಲ್ಲಿ ಅಂಚೆಚೀಟಿಗಳಿಗೆ ಸಂಬಂಧಿಸಿದ ಕಾರ್ಯಾಗಾರ ನಡೆಸುತ್ತಿದ್ದೇವೆ. ಪ್ರದರ್ಶನ ಹಾಗೂ ಅಂತರ ಶಾಲಾ ಸ್ಪರ್ಧೆಗಳನ್ನು ಆಯೋಜಿಸುತ್ತಿರುತ್ತೇವೆ. 6ರಿಂದ 9ನೇ ತರಗತಿಯವರಿಗೆ ಕೇಂದ್ರ ಸರ್ಕಾರದಿಂದ ದೀನದಯಾಳ್ ಉಪಾಧ್ಯಾಯ ವಿದ್ಯಾರ್ಥಿವೇತನ ಯೋಜನೆಯೂ ಇದೆ. ಪತ್ರ ಬರೆಯುವುದು, ಪ್ರಬಂಧ ರಚನೆ ಮತ್ತು ಅಂಚೆಚೀಟಿ ವಿನ್ಯಾಸದಂತಹ ಸ್ಪರ್ಧೆಗಳನ್ನು ಕೂಡ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಅಂಚೆ ಚೀಟಿಗಳ ಸೊಬಗಿನ ಲೋಕದ ಬಗ್ಗೆ ಇನ್ನಷ್ಟು ತಿಳಿಯಲು ನೀವು ಇಲ್ಲಿಗೇ ಬರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.