ADVERTISEMENT

Kolar Pyroclastic Rocks: ಲಾವಾ ರಸ ಉಕ್ಕಿ ಶಿಲೆಯಾದಾಗ

ಕೆ.ಓಂಕಾರ ಮೂರ್ತಿ
Published 3 ಆಗಸ್ಟ್ 2025, 0:24 IST
Last Updated 3 ಆಗಸ್ಟ್ 2025, 0:24 IST
ಪೈರೋಕ್ಲಾಸ್ಟಿಕ್‌ ಬಂಡೆಕಲ್ಲು
ಪೈರೋಕ್ಲಾಸ್ಟಿಕ್‌ ಬಂಡೆಕಲ್ಲು   

ಬೇಲೂರು, ಹಳೇಬೀಡು, ಹಂಪಿಯಲ್ಲಿ ಶಿಲೆಗಳು ಸಂಗೀತ ಹಾಡಿದರೆ ಇಲ್ಲೊಂದು ಗ್ರಾಮದ ಶಿಲೆಗಳು ಸಾವಿರಾರು ವರ್ಷಗಳ ಇತಿಹಾಸ ಹೇಳುತ್ತಿವೆ. ಈ ಶಿಲೆಗಳನ್ನು ಯಾರೂ ಕೆತ್ತಿಲ್ಲ, ರೂಪ ನೀಡಿಲ್ಲ, ರಕ್ಷಿಸಿಲ್ಲ. ಬದಲಾಗಿ ಸಾವಿರಾರು ವರ್ಷಗಳ ಹಿಂದೆ ಭೂಮಿಯಲ್ಲಿ ಉಂಟಾದ ಜ್ವಾಲಾಮುಖಿಯಲ್ಲಿ ಹರಿದು ಬಂದ ಲಾವಾ ರಸ ಗಟ್ಟಿಯಾಗಿ ಕ್ರಮೇಣ ಶಿಲೆಗಳಾಗಿವೆ.

ಅದುವೇ ಕೋಲಾರ ಜಿಲ್ಲೆಯ ಪೆದ್ದಪಲ್ಲಿ ಪೈರೋಕ್ಲಾಸ್ಟಿಕ್‌ ರಾಕ್ಸ್‌. ನೋಡುಗರ ಕಣ್ಣಿಗೆ ಬಂಡೆಗಳಂತೆ ಕಾಣುತ್ತವೆ. ಊರಿನ ಕೆರೆಗಳ ಬಳಿಯೋ, ಬೆಟ್ಟ ಗುಡ್ಡಗಳ ಬಳಿಯೋ ಇರುವ ಕಲ್ಲು ಬಂಡೆಗಳಂತೆ ಭಾಸವಾಗುತ್ತವೆ. ಆದರೆ, ಒಳಹೊಕ್ಕಿ ನೋಡಿದರೆ ಈ ಬಂಡೆಗಳ ಅಥವಾ ಶಿಲೆಗಳ ದೊಡ್ಡ ಇತಿಹಾಸ ಬಿಚ್ಚಿಕೊಳ್ಳುತ್ತದೆ. ಭೂಮಿಯಲ್ಲಿ ಸ್ಫೋಟ ಪ್ರಕ್ರಿಯೆ ನಡೆದು ಜ್ವಾಲಾಮುಖಿಯಿಂದ ಹೊರಹೊಮ್ಮಿದ ತುಣುಕುಗಳಿಗೆ ‘ಪೈರೋಕ್ಲಾಸ್ಟಿಕ್‌’ ಎನ್ನುತ್ತಾರೆ. ಅವೇ ಪೈರೋಕ್ಲಾಸ್ಟಿಕ್‌ ಬಂಡೆ ಅಥವಾ ಶಿಲೆಗಳಾಗಿವೆ.

ಇವುಗಳನ್ನು ಪತ್ತೆ ಹಚ್ಚಿ 1976ರಲ್ಲೇ ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕ ಎಂದು ಘೋಷಿಸಲಾಗಿದೆ. ಗ್ರಾನೈಟ್‌ ಶಿಲೆಗಳಂತೆ ಇವು ಭಾಸವಾಗುತ್ತವೆ. ದೊಡ್ಡ ಬಂಡೆ ಒಂದು ಕಡೆ ಇದ್ದರೆ ಅಲ್ಲಲ್ಲಿ ಸಣ್ಣ ಕಲ್ಲುಗಳು ಚದುರಿಕೊಂಡಿವೆ.

ADVERTISEMENT

ಕೆಜಿಎಫ್‌ನ ಪೆದ್ದಪಲ್ಲಿ ಪೈರೋಕ್ಲಾಸ್ಟಿಕ್‌ ಬಂಡೆಕಲ್ಲು

ಚಿನ್ನದ ಗಣಿಯಿಂದ ಪ್ರಸಿದ್ಧಿ ಪಡೆದಿರುವ ಕೆಜಿಎಫ್‌ ನಗರದ ಮಗ್ಗುಲಲ್ಲೇ ಇರುವ ಪುಟ್ಟ ಗ್ರಾಮ ಪೆದ್ದಪಲ್ಲಿ ಒಡಲಲ್ಲಿ ಪೈರೋಕ್ಲಾಸ್ಟಿಕ್‌ ಶಿಲೆಗಳು ಇವೆ. ಈ ಗ್ರಾಮದ ಗಂಗಮ್ಮನ ಜಾತ್ರೆ ಬಹಳ ಪ್ರಸಿದ್ಧಿ. ಚಿನ್ನ ತೆಗೆಯಲು ಬಂದ ಬ್ರಿಟಿಷರು ಕೂಡ ಗಂಗಮ್ಮನ ಜಾತ್ರೆಗೆ ಹೋಗಲು ಕಾರ್ಮಿಕರಿಗೆ ಅನುವು ಮಾಡಿಕೊಡುತ್ತಿದ್ದರು. ಊರಿನ ಮನೆಗಳು ಹಾಗೂ ಕೆರೆಗೆ ಹೊಂದಿಕೊಂಡೇ ಈ ಶಿಲೆಗಳು ಹರಡಿಕೊಂಡಿವೆ.

ಊರ ಜನ ಜಾನುವಾರುಗಳನ್ನು ಮೇಯಿಸಲು ಹೋದಾಗ ಈ ಬಂಡೆಗಳ ಮೇಲೆ ಕುಳಿತು ವಿಶ್ರಮಿಸುತ್ತಾರೆ. ಊರು ಹಬ್ಬವನ್ನು ಇದೇ ಬಂಡೆ ಮೇಲೆ ಆಚರಿಸುತ್ತಾರೆ. ಕಿಡಿಗೇಡಿಗಳು ಈ ಬಂಡೆ ಮೇಲೆ ಕುಡಿದು ಬಾಟಲಿಗಳನ್ನು ಅಲ್ಲಲ್ಲಿ ಎಸೆದು ಹೋಗಿದ್ದಾರೆ. ಗ್ರಾಮಸ್ಥರೊಬ್ಬರು ಬಂಡೆಯ ಮೇಲೆಯೇ ಮನೆಯನ್ನು ಕಟ್ಟಿಕೊಳ್ಳುವ ಸಾಹಸ ಕೂಡ ಮಾಡಿದ್ದುಂಟು. ಶಿಲೆಗಳ ಐತಿಹಾಸಿಕ ಮಹತ್ವದ ಬಗ್ಗೆ ಗ್ರಾಮಸ್ಥರಿಗೆ ಹೆಚ್ಚೇನೂ ಗೊತ್ತಿಲ್ಲ. 

ಈ ಜಾಗವನ್ನು ಹುಡುಕಿಕೊಂಡು ಆಗಾಗ್ಗೆ ಭೂ ವಿಜ್ಞಾನಿಗಳು, ಇತಿಹಾಸಕಾರರು, ಸಂಶೋಧನಾ ವಿದ್ಯಾರ್ಥಿಗಳು ಗ್ರಾಮಕ್ಕೆ ಬರುತ್ತಿರುತ್ತಾರೆ. ಕುರುಚಲು ಗಿಡಗಳ ಮಧ್ಯೆ ಇರುವ ಈ ಬಂಡೆಗಳನ್ನು ನೋಡಲು ಜನರು ದೂರ ಪ್ರದೇಶಗಳಿಂದ ಬರುತ್ತಾರೆ. ಭೂಗರ್ಭ ವಿಜ್ಞಾನದ ಬಗ್ಗೆ ಅಧ್ಯಯನ ಮಾಡುವವರಿಗೆ ಕೂಡ ಇದು ಸಹಕಾರಿಯಾಗಿದೆ. ಹೊಸದಾಗಿ ನೇಮಕಗೊಂಡ ಭೂ ವಿಜ್ಞಾನಿಗಳ ತರಬೇತಿ, ಅಧ್ಯಯನಕ್ಕಾಗಿ ಬಳಸಲಾಗುತ್ತದೆ. ಆದರೆ, ಇಲ್ಲಿ ಯಾವುದೇ ರೀತಿಯ ಚಟುವಟಿಕೆ ನಡೆಯುವುದಿಲ್ಲ, ಗಣಿಗಾರಿಕೆ ಚಟುವಟಿಕೆ ನಡೆಸಲೂ ಅವಕಾಶವಿಲ್ಲ. ಕೇವಲ ಸಂಶೋಧನೆಗೆ ಈ ಬಂಡೆಕಲ್ಲು ಬಳಸಲಾಗುತ್ತಿದೆ.

ಕೆಜಿಎಫ್‌ನ ಪೆದ್ದಪಲ್ಲಿಯಲ್ಲಿ ಅಲ್ಲಲ್ಲಿ ಹರಡಿಕೊಂಡಿರುವ ಪೈರೋಕ್ಲಾಸ್ಟಿಕ್‌ ಶಿಲೆಗಳು

ಅಪರೂಪದ ಈ ಶಿಲೆಗಳನ್ನು ಕಾಪಾಡಿಕೊಂಡು ಮುಂದಿನ ಜನಾಂಗಕ್ಕೆ ಅದರ ಸ್ವರೂಪವನ್ನು ವಿವರಿಸಲು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣೆ ಇಲಾಖೆ (ಜಿಎಸ್‌ಐ) ಈ ಶಿಲೆಗಳ ನಿರ್ವಹಣೆಯ ಹೊಣೆ ಹೊತ್ತಿದೆ.

ಪೆದ್ದಪಲ್ಲಿ ಗ್ರಾಮದ ಸರ್ವೆ ನಂಬರ್ 15 ಮತ್ತು 17ರ ಭೂ ಪ್ರದೇಶವನ್ನು ಅಧ್ಯಯನದ ಉದ್ದೇಶಕ್ಕಾಗಿ 1976ರಲ್ಲೇ ಕೇಂದ್ರ ಸರ್ಕಾರ ಹಾಗೂ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣೆ ಇಲಾಖೆ ಸರ್ವೆ ನಡೆಸಿ ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕ ಎಂದು ಘೋಷಿಸಿವೆ. ಪೆದ್ದಪಲ್ಲಿ ಹಾಗೂ ಸ್ಕೂಲ್ ಆಫ್ ಮೈನ್ಸ್ ಬಳಿ ಆಗಲೇ ಎರಡು ನಾಮಫಲಕಗಳನ್ನು ಅಳವಡಿಸಲಾಗಿದೆ. ಆದರೆ, ಇದರಲ್ಲಿ ಯಾವುದೇ ಚಿನ್ನ, ಪ್ಲಾಟಿನಂ ಅಥವಾ ವಜ್ರದ ನಿಕ್ಷೇಪಗಳಿಲ್ಲ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಪೆದ್ದಪಲ್ಲಿ ಬಂಡೆಗಳಲ್ಲಿ ವಜ್ರದ ನಿಕ್ಷೇಪಗಳಿವೆ ಎನ್ನುವ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಕೆಲ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕೂಡ ನಡೆಸಿದ್ದರು.

ಕೆಜಿಎಫ್‌ನ ಪೆದ್ದಪಲ್ಲಿ ಪೈರೋಕ್ಲಾಸ್ಟಿಕ್‌ ಶಿಲೆ

ಜ್ವಾಲಾಮುಖಿಯಿಂದ ಸೃಷ್ಟಿಯಾಗಿರುವ ಪೈರೋಕ್ಲಾಸ್ಟಿಕ್ ಬಂಡೆಯಲ್ಲಿ ಯಾವುದೇ ಖನಿಜ ನಿಕ್ಷೇಪ ಇಲ್ಲ. ಇದು ಭೂವೈಜ್ಞಾನಿಕ ಸಂರಚನೆಯ ಬಂಡೆಯಷ್ಟೇ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇಂತಹ ಶಿಲೆಗಳು ಈ ಭಾಗದ ಬೇರೆಲ್ಲೂ ಕಾಣುವುದಿಲ್ಲ. ಕೋಲಾರ ಜಿಲ್ಲೆಯ ಕಾಮಸಮುದ್ರ ರಸ್ತೆಯ ಕೆಲವು ಬಂಡೆಗಳಲ್ಲಿ ಮತ್ತು ವಲಗಮಾದಿ ಬಳಿಯ ಬೆಟ್ಟದಲ್ಲಿಯೂ ಲಾವಾರಸದ ಶಿಲೆಗಳು ಕಂಡು ಬಂದರೂ, ಅವುಗಳಿಗೆ ಪೆದ್ದಪಲ್ಲಿಯ ಶಿಲೆಯಷ್ಟು ಮೌಲ್ಯವಿಲ್ಲ. ಭೂ ವಿಜ್ಞಾನಿಗಳ ದೃಷ್ಟಿಯಲ್ಲಿ ಬೆಂಕಿಯಿಂದ ಬಂದು ತಣ್ಣಗಾಗಿ ಬಂಡೆಯಾಗಿ ರೂಪುಗೊಂಡ ಪೈರೋಕ್ಲಾಸ್ಟಿಕ್‌ ಸಂಶೋಧನೆಗೆ ಅರ್ಹವಾಗಿದೆ.

ಸರ್ಕಾರಿ ಜಾಗ ಇದಾಗಿದ್ದು, ಸದ್ಯ ಪೈರೋಕ್ಲಾಸ್ಟಿಕ್‌ ಶಿಲೆಗಳಿಗೆ ಸಂರಕ್ಷಣೆ ಇಲ್ಲವಾಗಿದೆ. ಕಾಂಪೌಂಡ್‌ ಕೂಡ ನಿರ್ಮಿಸಿಲ್ಲ. ಜೊತೆಗೆ ಸರಿಯಾದ ನಿರ್ವಹಣೆ ಕೊರತೆ ಕಾಡುತ್ತಿದೆ. ಶಿಲೆ ಪಕ್ಕದಲ್ಲೇ ಕೊಳಚೆ ನೀರಿನ ಗುಂಡಿ ಇದೆ. ಸುತ್ತಲೂ ದಟ್ಟ ಕಳೆ ಬೆಳೆದಿದೆ. ಪ್ರವಾಸೋದ್ಯಮಕ್ಕೆ ಯೋಗ್ಯವಾದ ಪ್ರದೇಶ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಪೈರೋಕ್ಲಾಸ್ಟಿಕ್‌ ಬಂಡೆಕಲ್ಲಿಗೆ ಸಂಬಂಧಿಸಿದ ಸೂಚನಾ ಫಲಕ 

ಬಂಡೆ ಕಲ್ಲುಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಭೂಗರ್ಭ ವಿಜ್ಞಾನಿಗಳು ಆಗಾಗ್ಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಬಂಡೆಗಳು ಇರುವ ಸುತ್ತಮುತ್ತಲಿನ ಐದು ಎಕರೆ ಜಾಗವನ್ನು ರೈತರಿಂದ, ಒತ್ತುವರಿದಾರರಿಂದ ಬಿಡಿಸಿಕೊಂಡು ಸಂರಕ್ಷಿಸುವ ಕೆಲಸಕ್ಕೆ ಮುಂದಾಗಿದೆ.⇒v

ಎಲ್ಲಿದೆ ಪೆದ್ದಪಲ್ಲಿ?

ಪೆದ್ದಪಲ್ಲಿ ಪೈರೋಕ್ಲಾಸ್ಟಿಕ್‌ ರಾಕ್ಸ್‌ ಬೆಂಗಳೂರಿನಿಂದ ಸುಮಾರು 100 ಕಿ.ಮೀ ದೂರದಲ್ಲಿದೆ. ಕೋಲಾರ ಜಿಲ್ಲೆಯ ಕೆಜಿಎಫ್‌ ನಗರದಿಂದ 4 ಕಿ.ಮೀ ಆಗುತ್ತದೆ. ಬೇತಮಂಗಲ ರಸ್ತೆಯಲ್ಲಿ ಬಲಕ್ಕೆ ತಿರುವು ಪಡೆದು 1 ಕಿ.ಮೀ ಮುಂದೆ ಸಾಗಿದರೆ ಈ ಪೈರೋಕ್ಲಾಸ್ಟಿಕ್‌ ಬಂಡೆಗಳು ಕಾಣುತ್ತವೆ. ಬೇತಮಂಗಲ ರಸ್ತೆಯ ತಿರುವಿನಲ್ಲಿ ಹಾಗೂ ಬಂಡೆ ಇರುವ ಸ್ಥಳದಲ್ಲಿ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣೆ ಇಲಾಖೆ ನಾಮಫಲಕ ಅಳವಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.