ADVERTISEMENT

ರೊಶೊಮನ್‌ ಸತ್ಯ ಎನ್ನುವುದು ಮಿಂಚಿನ ಹಾಗೆ!

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 23:31 IST
Last Updated 12 ಏಪ್ರಿಲ್ 2025, 23:31 IST
ನಾಟಕದ ದೃಶ್ಯ
ನಾಟಕದ ದೃಶ್ಯ   

ಮಿಂಚು, ಗುಡುಗುಗಳ ಕೆಳಗೆ ನಿಂತ ಶತಮಾನಗಳಷ್ಟು ಹಳೆಯದಾದ ರೊಶೊಮನ್‌ ದ್ವಾರ. ಒಬ್ಬ ಬೌದ್ಧ ಭಿಕ್ಷು ಮತ್ತು ಒಬ್ಬ ಮರ ಕಡಿಯುವವ ದ್ವಾರದಡಿ ಸೇರಿದ್ದಾರೆ. ಈ ನಡುವೆ ಮಳೆಯಿಂದ ರಕ್ಷಣೆ ಪಡೆಯಲು ಕಳ್ಳನೊಬ್ಬನೂ ಇವರ ಮಧ್ಯೆ ಸಿಕ್ಕಿಕೊಳ್ಳುತ್ತಾನೆ. ಮಾತು ಕಾಡಿನಲ್ಲಿ ಸಿಕ್ಕಿದ ಸಮುರಾಯ್‌ ನ ಹೆಣದ ಸುತ್ತ ಸುತ್ತತೊಡಗುತ್ತದೆ. ಆ ಹೆಣವನ್ನು ಮೊದಲು ಕಂಡವನೂ ಪೊಲೀಸರಿಗೆ ಸುದ್ದಿ ಮುಟ್ಟಿಸಿದವನೂ ಇದೇ ಕಟ್ಟಿಗೆ ಕಡಿಯುವವನೇ. ಆತನ ದೃಶ್ಯ ವಿವರಣೆಯೇ ನಾಟಕದ ಮೂಲಕ್ಕೂ, ಕ್ರೂರಿ, ಡಕಾಯಿತ ತಾಜೋಮಾರೋವಿನ ಪಾತ್ರಕ್ಕೂ ಪ್ರವೇಶ ದೊರಕಿಸಿಕೊಡುತ್ತದೆ.

ಕೊಲೆ ಆರೋಪಿ ಡಕಾಯಿತ ತಾಜೋಮಾರೋನನ್ನು ಪೊಲೀಸರು ಹಿಡಿದು ತಂದಿದ್ದಾರೆ. ಆತ ಕತೆಯನ್ನು ಹೇಳತೊಡಗಿದ್ದಾನೆ.

‘ಮರಗಳ ಅಡಿಯಲ್ಲಿ ಬಿದಿರು ಮೆಳೆಗಳ ನಡುವೆ ನಾನು ಮಲಗಿದ್ದೆ. ಯೋಧನೂ, ಹೆಂಡತಿಯೂ ಕುದುರೆಯೇರಿ ಬರುತ್ತಿದ್ದರು. ಗಾಳಿಗೆ ಸೆರಗು ಹಾರಿದಾಗ ನಾನು ಆಕೆಯನ್ನು ಕಂಡೆ. ಯೋಧನನ್ನು ದೂರ ಕರೆದುಕೊಂಡು ಹೋಗಿ ಆತನ ಕೈ ಬಾಯಿ ಕಟ್ಟಿಹಾಕಿದೆ. ಆಕೆಯ ಮೇಲೆರಗಿದೆ. ಆತನನ್ನು ಕೊಂದೆ. ಇದಕ್ಕಿಂತ ಭಿನ್ನವಾಗಿ ಆ ಹೆಣ್ಣು ಹೇಳುವ ಸಾಕ್ಷ್ಯವೇ ಬೇರೆ. ಇಲ್ಲಿ, ಯೋಧನನ್ನು ಕೊಂದವಳು ಆಕೆಯೇ. ಈ ನಡುವೆ ಮಾಧ್ಯಮವೊಂದರ ಮೂಲಕ ಕೊಲೆಯಾದ ಯೋಧನನ್ನೂ ಮಾತನಾಡಿಸಲಾಗುತ್ತದೆ. ಅವನ ಪ್ರಕಾರ ಆತನನ್ನು ಕೊಂದುಕೊಂಡಿದ್ದು ಆತನೇ. ಹೀಗೆ ಕೊಲೆಯ ಆ ಒಂದು ಘಟನೆ ಬೇರೆ ಬೇರೆ ವ್ಯಕ್ತಿಗಳ ಬಾಯಲ್ಲಿ ಬೇರೆ ಬೇರೆ ರೂಪ ಪಡೆದುಕೊಳ್ಳುತ್ತ ಹೋಗುತ್ತದೆ. ಎಲ್ಲವೂ ಸತ್ಯ ಎನಿಸುವ ಹಾಗೆ. ಎಲ್ಲವೂ ಗೋಜಲಾಗುವಂತೆ ಕೂಡ.

ADVERTISEMENT

ಮಳೆ ನಿಂತಿದೆ. ವಿರೋಧಾಭಾಸದ ಹೇಳಿಕೆಗಳಿಂದ ಬೇಸರಗೊಂಡ ಭಿಕ್ಷು ಇನ್ನೇನು ಹೊರಡಬೇಕು ಎನ್ನುವಾಗ ಬಾಗಿಲಾಚೆಯಿಂದ ಮಗುವಿನ ಅಳುವೊಂದು ಕೇಳುತ್ತದೆ. ಅನಾಥ ಮಗುವನ್ನೆತ್ತಿಕೊಂಡ ಭಿಕ್ಷು ಅದನ್ನು ಕಟ್ಟಿಗೆ ಕಡಿಯುವವನ ಕೈಗಿಡುತ್ತಾನೆ. ಆತ ಮಗುವನ್ನು ಎದೆಗಿಟ್ಟು ಅಪ್ಪುತ್ತಾನೆ. ಹಿತವಾದ ಸಂಗೀತ, ದಾರಿ ತೋರುವ ಬೆಳಕು. ಕತ್ತಲು ಮಾಯವಾಗುತ್ತಿದೆ. ಮಾನವೀಯತೆ ಮೆರೆಯುತ್ತದೆ.

ಹೆಸರಾಂತ ನಿರ್ದೇಶಕ ಅಕಿರಾ ಕುರಸೋವಾನ ‘ರೊಶೊಮನ್‌’ ಸಿನಿಮಾದಿಂದ ಪ್ರೇರಿತವಾದ, ಪ್ರಸ್ತುತ ರಂಗ ಪ್ರಯೋಗ ಎಸ್.ಮಾಲತಿಯವರ ಅನುವಾದವನ್ನು ಆಧರಿಸಿದ್ದು.

‘ರೊಶೊಮನ್‌’ ನ ಸಂಕೀರ್ಣತೆಗೆ ಸವಾಲೇನೋ ಎಂಬಂತೆ ತುಂಬ ಸರಳವಾದ ರಂಗಸಜ್ಜಿಕೆಯಲ್ಲಿ ನಾಟಕ ಕಟ್ಟುತ್ತಾರೆ ಮಂಗಳಾ. ರಂಗವನ್ನೂ ಅಷ್ಟೇ ಸರಳವಾಗಿ ವಿಭಾಗಿಸಿಕೊಳ್ಳುತ್ತಾರೆ. ರಂಗದ ಒಂದು ಮೂಲೆಯಲ್ಲಿ ಶಿಥಿಲವಾದ ‘ರೊಶೊಮನ್‌’ ಬಾಗಿಲು. ನಾಟಕದ ಜೀವವಾದ ಕತ್ತಿವರಸೆಗೆ ತಡೆಯಾಗದಂತೆ, ಮುಖ್ಯಾಂಗಣದಲ್ಲಿ ದೂರ ದೂರದಲ್ಲಿ ಬಿದಿರು ಮೆಳೆಗಳು. ಆದರೆ ಇವುಗಳನ್ನು ಉಪಯೋಗಿಸುವುದರಲ್ಲಿಯೇ ಜಾಣತನ ತೋರುತ್ತಾರೆ. ಹಲವಾರು ಸಂದರ್ಭಗಳಲ್ಲಿ ಬಿದಿರು ಮೆಳೆಗಳ ಹಿಂಭಾಗ ತುಂಬ ಪ್ರಭಾವಶಾಲಿಯಾಗಿ ಉಪಯೋಗವಾಗಿದೆ. ಕಲಾತ್ಮಕ ನೋಟಗಳನ್ನೂ ಕೊಡುತ್ತದೆ. ದೃಶ್ಯಗಳ ಹೆಣಿಗೆಯೂ ಚೆನ್ನ. ಕೆಲವು ಸಂದರ್ಭಗಳಲ್ಲಂತೂ ಮಾತುಗಳನ್ನೂ ಮೀರಿ ಪಾತ್ರಗಳ ನೋಟಗಳೇ ಎಲ್ಲವನ್ನೂ ಹೇಳಿಬಿಡುತ್ತವೆ.

ಅಂತೆಯೇ ನಾಟಕದುದ್ದಕ್ಕೂ ಯೋಧ ಮತ್ತು ಅವನ ಹೆಂಡತಿಯ ಸಂಬಂಧವನ್ನೂ ಮುಖ್ಯವಾಹಿನಿಗೆ ತರಲೆತ್ನಿಸುತ್ತಾರೆ ಮಂಗಳಾ. ಆ ಮಹಿಳೆಯ ಮಾನಸಿಕ ಯಾತನೆ, ನೋವು, ಅವಮಾನಗಳು ತೀಕ್ಷ್ಣವಾಗಿ ಇಲ್ಲಿ ನಿವೇದಿಸಲ್ಪಡುತ್ತವೆ. ನಾಟಕ ಮಹಿಳಾ ಪರ ದನಿಯನ್ನೂ ಎತ್ತತೊಡಗುತ್ತದೆ. ಇವೆಲ್ಲವುಗಳ ಒಟ್ಟೂ ಮೊತ್ತ ದಾಖಲಾಗುವುದು ಕೊನೆಯ ದೃಶ್ಯದಲ್ಲಿ. ಹಾಗಾಗಿ ಈ ರಂಗ ಪ್ರಯೋಗ ಮಗುವಿನ ಎತ್ತಿಕೊಳ್ಳುವಿಕೆಯೊಂದಿಗೆ ಮುಗಿಯುವುದಿಲ್ಲ. ಆ ಯುವತಿಗೆ ನ್ಯಾಯ ಕೇಳಬೇಕಿದೆ. ಆಕೆಯ ‘ಆತ್ಮ ಹಾಗೂ ದೇಹಕ್ಕಾದ ಘಾತಕ್ಕಾಗಿ, ನೋವುಂಡ ಬದುಕಿಗಾಗಿ. ಇದು ಮಹಿಳೆಯರೆಲ್ಲರ ಧ್ವನಿಯಾಗುತ್ತ ಹಿನ್ನೆಲೆಯಲ್ಲಿ ಕೇಳುವ ಇಂಥದೇ ದನಿಗಳ ಜೊತೆಗೆ ಸೇರಿಕೊಳ್ಳುತ್ತದೆ.

ನಾಟಕದ ಚಲನೆಯ ಮುಖ್ಯ ಭಾಗ ಕತ್ತಿವರಸೆ ಯುದ್ಧ. ಅದನ್ನು ಸಾಕಷ್ಟು ತೀಕ್ಷ್ಣವಾಗಿಯೂ ಕರಾರುವಾಕ್ಕಾಗಿಯೂ ನಾಟಕದಲ್ಲಿ ಬಳಸಿಕೊಳ್ಳಲಾಗಿದೆ. (ಅಂಜು ಸಿಂಗ್)‌ ದೇಹಭಾಷೆಯ ಅತ್ಯುತ್ತಮ ಬಳಕೆಯಿದೆ.

ಅಭಿನಯದ ತಂಡ ಶಕ್ತಿಯುತವಾಗಿದೆ. ಧನುಷ್‌ ನಾಗ್‌, ಚುಕ್ಕಿ ರಮಾ, ಸೂರಜ್‌ ನಾಯ್ಕ್‌, ನಾಗರಾಜ ವಿ. ಸಂದೀಪ್‌ ಜೈನ್‌, ಚಿರಂತನ್‌, ಆರ್ಯಕ್‌ ಮತ್ತು ಅಭಿಷೇಕ್ ಪ್ರಬುದ್ಧವಾಗಿಯೇ ಅಭಿನಯಿಸಿದ್ದಾರೆ. ಕತ್ತಿವರಸೆಯಲ್ಲೂ ಮಿಂಚುತ್ತಾರೆ. ಸಂಗೀತ ಹಿತವಾಗಿದೆ. ಸರಳವಾದ ಬೆಳಕಿನ ವಿನ್ಯಾಸ ಪೂರಕವಾಗಿದೆ. ಯುದ್ಧದ ದೃಶ್ಯಗಳಲ್ಲಿ ಇನ್ನಷ್ಟು ಬೆಳಕಿನಾಟ ಆಡಬಹುದಿತ್ತೇನೋ. ಮೂಲವನ್ನೇ ಆಧರಿಸಿದ ವಸ್ತ್ರವಿನ್ಯಾಸ ನಿಖರವಾಗಿದೆ.‌

ನಾಟಕದ ದೃಶ್ಯ

‌ಇಷ್ಟಾಗಿಯೂ ನಾಟಕದ ಮುಖ್ಯ ಭಾಗದ ದೃಶ್ಯಗಳ ಕಟ್ಟುವಿಕೆ ಇನ್ನಷ್ಟು ಕಲಾತ್ಮಕವಾಗಿಯೂ ಗಟ್ಟಿಯಾಗಿಯೂ ಇರಬಹುದಿತ್ತೇನೋ ಎನಿಸದಿರದು.

ನಾಟಕದ ಕೊನೆಯಲ್ಲಿ ಕಳ್ಳ ಒಂದು ಮಾತು ಹೇಳುತ್ತಾನೆ: ‘ಸತ್ಯ ಮಿಂಚಿನ ಥರ. ಅದು ಈಗ ಹೊಳೆಯುತ್ತೆ, ಈಗ ಮಾಯವಾಗುತ್ತೆ. ಆದರೆ ಸುಳ್ಳು ತಿಗಣೆಯ ಥರ, ಪ್ರತಿ ದಿನವೂ ಮಲಗುವಾಗ ಕಚ್ಚುತ್ತೆ. ನಾವು ಅದನ್ನು ಹಾಸಿಗೆಯಲ್ಲಿ ಹೊಸಕಿ ಹೊಸಕಿ ಹಾಕುತ್ತಿರುತ್ತೇವೆ’. ಇದು ಸ್ವಲ್ಪ ಒರಟಾಗಿದೆ. ಆದರೆ ನಾಟಕ ಇದನ್ನೇ ಧ್ವನಿಸಲು ಪ್ರಯತಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.