ADVERTISEMENT

ಧರ್ಮದ ನಡೆಯಲ್ಲಿ ಹೆಣ್ಣು

ಧರ್ಮ ಮತ್ತು ಹೆಣ್ಣು

ದೀಪಾ ಫಡ್ಕೆ
Published 14 ಜೂನ್ 2019, 19:30 IST
Last Updated 14 ಜೂನ್ 2019, 19:30 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಧರ್ಮ ಎನ್ನುವುದು ದೇಶಾತೀತ ಮತ್ತು ಕಾಲಾತೀತ ಜೀವನಮೌಲ್ಯ. ಭಾರತೀಯ ಬದುಕಿನ ನಾಲ್ಕು ಜೀವನೋದ್ದೇಶಗಳಲ್ಲಿ ‘ಧರ್ಮ’ವೂ ಒಂದು. ಆದರೆ ಅದರ ಪ್ರಭಾವ ದೊಡ್ಡದು. ಅದು ನೀಡಿದ ಮತ್ತು ನೀಡುತ್ತಿರುವ ತಿಳಿವು ಆಂತರಿಕವಾದುದು. ಅದು ಹೆಚ್ಚಾಗಿ ಮನಸ್ಸಿಗೆ ಸಂಬಂಧ ಪಟ್ಟದ್ದು. ಹಾಗಾಗಿ ಧರ್ಮ ಎನ್ನುವುದು ನೈತಿಕ ಮೌಲ್ಯ ಎನಿಸಿಕೊಳ್ಳುತ್ತದೆ. ಫಲಪ್ರಾಪ್ತಿಯಯಾವುದೇ ದೊಡ್ಡ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಸಹಜವಾಗಿ, ಪಾಲಿಗೆ ಬಂದ ಆಟವನ್ನು ಆಟವಾಡುತ್ತಾ ಪ್ರಕೃತಿಯ ಸಂಚಲನಕ್ಕೆ ಸಾಕ್ಷಿಯಾಗುವವಳು ಹೆಣ್ಣು. ಹೀಗಾಗಿ ಧರ್ಮ ಎನ್ನುವುದು ಹೆಣ್ಣಿಗೊಂದು ಸಹಜ ನಡೆ ಅಷ್ಟೇ.

ಹೊರಗಿನ ಉಡುಪು, ಅಲಂಕಾರ – ಇವು ಕೂಡ ಹೆಣ್ಣಿಗೆ ಧಾರ್ಮಿಕ ಆಚರಣೆಯ ಭಾಗಗಳೇ. ನಿತ್ಯದ ಆಚರಣೆಯಲ್ಲಿ ಸಹಜವಾಗಿರುವ ಧರ್ಮದ ಅಂಶಗಳು ಅವಳಿಗೆ ಬದುಕಿನ ಕಳೆಯನ್ನು ಹೆಚ್ಚಿಸುವ ಸಾಧನ, ಮಾರ್ಗ. ಹಬ್ಬ ಹರಿದಿನಗಳ ಸಂಪ್ರದಾಯಗಳನ್ನೂ ಹೆಣ್ಣು ಉತ್ಸಾಹದಿಂದಲೂ ನಿರ್ವಿಕಾರದಿಂದಲೂ ಆಚರಿಸುತ್ತಾ ಸಾಗುತ್ತಾಳೆ. ಉತ್ಸಾಹ ಏಕೆಂದರೆ ಆಕೆಗೆ ನಿತ್ಯವೂ ಹೊಸತಾಗುವ ತುಡಿತ. ಸಹಜವಾಗಿ ಆಚರಣೆಯ ಧರ್ಮವನ್ನು ನಡೆಸಿ ಕೊಂಡು ಹೋಗುವ ಜವಾಬ್ದಾರಿಯಿಂದ ಬಂದಿರುವ ಸಹಜಗುಣವಾದುದರಿಂದ ನಿರ್ವಿಕಾರ. ಹೀಗೇ ಏಕಕಾಲದಲ್ಲಿ ಉತ್ಸಾಹ ಮತ್ತು ನಿರ್ವಿಕಾರದಿಂದ ಬದುಕಿನ ದೊಡ್ಡ ಧ್ಯೇಯವಾದ ಧರ್ಮವನ್ನು ಮುನ್ನಡೆಸಿ ಕೊಂಡು ಹೋಗುವ ಹೆಣ್ಣಿಗೆ ನಿಜಕ್ಕೂ ಧರ್ಮವೆನ್ನುವುದು ಆತ್ಮಗುಣವಾಗಿ ಕಾಣುತ್ತದೆ.

ಧರ್ಮ ಹೆಣ್ಣಿಗೆ ಸಾಧನಮಾರ್ಗವಾಗಿಯೂ ಕಾಣುವುದಿದೆ. ತನ್ನೊಳಗಿನ ಶಕ್ತಿಗಳನ್ನು ಶೋಧಿಸುತ್ತಾ, ತನ್ನಿರುವಿಕೆಯ ಗುರುತುಗಳನ್ನು ಹಲವು ಆಯಾಮಗಳಲ್ಲಿ ಪ್ರಕಟಿಸುವುದು ಈ ತಲೆಮಾರಿನ ಹೆಣ್ಣಿನ ಧರ್ಮವಾಗಿದೆ. ತಾಯಿ, ಮಗಳು, ಸಂಗಾತಿ, ಸಹೋದರಿ, ಗೆಳತಿ, ಗುರು – ಹೀಗೆ ವ್ಯಕ್ತಿತ್ವದ ಎಲ್ಲ ಸಾಧ್ಯತೆಗಳನ್ನು ನಿಕಷಕ್ಕೆ ಒಡ್ಡುತ್ತಾ ಸಾಗುವ ಅವಳ ಈ ಗುಣ ಆಕೆಯಲ್ಲಿ ಅಂತಸ್ಥವಾಗಿರುವ ಕರುಣೆ, ಮಮತೆ, ಪ್ರೇಮ, ಸ್ನೇಹ, ಅಂತಃಕರಣವೆಂಬ ಧರ್ಮಪ್ರಜ್ಞೆಯ ಪ್ರತೀಕಗಳೇ ಹೌದು.

ADVERTISEMENT

ಧರ್ಮ ಮತ್ತು ಹೆಣ್ಣು ಪರಸ್ಪರ ಪೂರಕವಾದುದು. ಹೇಗೆ ಹೆಣ್ಣು ತನ್ನ ಶರೀರದಿಂದ ಹೊಸ ಜೀವವನ್ನು ಸೃಷ್ಟಿಸಿ ಸೃಷ್ಟಿಯ ನಿರಂತರತೆಯನ್ನು ಕಾಪಿಡುತ್ತಾಳೋ, ಹಾಗೇ ಕಾಲಕಾಲಕ್ಕೆ ಧರ್ಮವೂ ತನ್ನ ಹೊಸದಾದ ಸ್ವರೂಪವನ್ನು ಧಾರಣ ಮಾಡಿಯೇ ತೀರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.