
ನಂದಗಡದಲ್ಲಿ ನಿರ್ಮಿಸಿದ ‘ವೀರಭೂಮಿ’ ವಸ್ತುಸಂಗ್ರಹಾಲಯದಲ್ಲಿರುವ ರಾಯಣ್ಣ ವೀಕ್ಷಣಾ ಗೋಪುರಚಿತ್ರಗಳು: ಏಕನಾಥ ಅಗಸಿಮನಿ
1831ರ ಜನವರಿ 26ಕ್ಕೆ ಸಂಗೊಳ್ಳಿ ರಾಯಣ್ಣ ಹಾಗೂ ಅವನ ಆರು ಮಂದಿ ಕಲಿಗಳನ್ನು ಗಲ್ಲಿಗೇರಿಸಲಾಯಿತು. ಉಳಿದ ಆರು ಮಂದಿಗೆ ಕರಿ ನೀರಿನ ಶಿಕ್ಷೆ (ಕಾಲಾಪಾನಿ) ನೀಡಿ ಅಂಡಮಾನ್ ಕತ್ತಲಕೂಪಕ್ಕೆ ತಳ್ಳಲಾಯಿತು. ಆ ಘಟನೆ ನಡೆದು 195 ವರ್ಷ ಕಳೆದಿದೆ. ಮಹಾನ್ ಕ್ರಾಂತಿವೀರರು ಕೊನೆಯುಸಿರೆಳೆದಿಲ್ಲ; ಈಗಲೂ ಇಲ್ಲಿ ಉಸಿರಾಡುತ್ತಿದ್ದಾರೆ..
–––
ನಂದಗಡದ ‘ವೀರಭೂಮಿ’ ಒಳಹೊಕ್ಕರೆ ಸಾಕು; ಶೌರ್ಯಭಾವ ಆವರಿಸಿಕೊಳ್ಳುತ್ತದೆ. ಒಂದೆರಡು ಹೆಜ್ಜೆ ಸಾಗುತ್ತಲೇ ವೀರಾವೇಶದಿಂದ ಆರ್ಭಟಿಸುವ ಸಂಗೊಳ್ಳಿ ರಾಯಣ್ಣ ಎದುರಾಗುತ್ತಾನೆ. ಇನ್ನೂರು ವರ್ಷಗಳ ಹಿಂದೆ ಘಟಿಸಿಹೋದ ಘಟನೆಗಳು ಇಲ್ಲಿ ಜೀವ ಪಡೆಯುತ್ತವೆ. ರಾಯಣ್ಣ ಹುಟ್ಟಿದ ಮನೆ, ಆಟವಾಡಿದ ಅಂಗಳ, ಬೆಳೆದುನಿಂತ ಕಿತ್ತೂರು, ಯುದ್ಧ ಕಲಿತ ರಣಾಂಗಣ, ಬ್ರಿಟಿಷರ ಹುಟ್ಟಡಗಿಸಲು ಝಳಪಿಸಿದ ಖಡ್ಗ, ಅಡಗುದಾಣ, ಗಲ್ಲಿಗೇರಿಸಿದ ಮರ, ಬ್ರಿಟಿಷ್ ಸರ್ಕಾರಿ ಕಟ್ಟಡಗಳ ಧ್ವಂಸ, ಲೂಟಿ... ಅಬ್ಬಾ! ಈ ಕೋಟೆಯೊಳಗಿನ ಪ್ರತಿ ಹೆಜ್ಜೆಯೂ ಮೈನವಿರು– ಮನನವಿರು.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಐತಿಹಾಸಿಕ ನಂದಗಡ ಗ್ರಾಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಅವರ ಆರು ಸಂಗಾತಿಗಳನ್ನು ಗಲ್ಲಿಗೇರಿಸಿದ ಜಾಗ. ಏಳೂ ಕ್ರಾಂತಿಕಾರಿಗಳನ್ನು ಏಕಕಾಲಕ್ಕೆ ಬಯಲಲ್ಲಿ ಹೆತ್ತವರ ಸಮ್ಮುಖದಲ್ಲೇ ಆಲದಮರಕ್ಕೆ ನೇಣಿಗೆ ಹಾಕಿದ ಸ್ಥಳ. ಈಗಲೂ ಆ ಆಲದಮರ ಹಾಗೇ ಇತಿಹಾಸಕ್ಕೆ ಕನ್ನಡಿಯಾಗಿ ನಿಂತಿದೆ.
ಈಗ ರಾಜ್ಯ ಸರ್ಕಾರ ಇದನ್ನು ವಸ್ತುಸಂಗ್ರಹಾಲಯವಾಗಿ ಅಭಿವೃದ್ಧಿಪಡಿಸಿದೆ. ಹತ್ತು ಎಕರೆ ಜಾಗವನ್ನು ಬಳಸಿಕೊಂಡು ಚರಿತ್ರೆಯನ್ನು ಮರುಸೃಷ್ಟಿಸಿ, ‘ವೀರಭೂಮಿ’ ಎಂದು ಕರೆದಿದೆ. ಈ ಸ್ಥಳವನ್ನು ಜಾಗತಿಕ ಮಟ್ಟದ ಪ್ರವಾಸಿ ತಾಣ ಮಾಡಬೇಕೆಂಬ ಆಶಯದತ್ತ ಹೆಜ್ಜೆ ಇಡಲಾಗಿದೆ.
ರಾಯಣ್ಣ ಪುಟ್ಟ ಕಂದಮ್ಮನಾಗಿ ಆಟವಾಡಿದ ತೊಟ್ಟಿಲಿನಿಂದ ಹಿಡಿದು ಹೂಂಕರಿಸುತ್ತ ನೇಣಿಗೆ ಕೊರಳೊಡ್ಡಿದ ಮರದವರೆಗೆ ಎಲ್ಲವೂ ಇಲ್ಲಿವೆ.
ಏನೇನಿದೆ ಒಳಗೆ?
ರಾಣಿ ಚನ್ನಮ್ಮನ ಬಲಗೈ ಬಂಟ, ಮಹಾನ್ ಸೇನಾನಿ ಸಂಗೊಳ್ಳಿ ರಾಯಣ್ಣನ ಚರಿತ್ರೆಯನ್ನು ಮೂರ್ತರೂಪದಲ್ಲಿ ಕಟ್ಟಿಕೊಡಲಾಗಿದೆ. ಗುಡ್ಡಗಾಡನ್ನು ಇದ್ದ ಹಾಗೇ ಉಳಿಸಿಕೊಂಡು ಸುತ್ತಲೂ ಪಾರಂಪರಿಕ ಶೈಲಿಯ ಕಟ್ಟಡಗಳನ್ನು ಕಟ್ಟಲಾಗಿದೆ. ಇದರಿಂದ ಈ ಪ್ರದೇಶದ ನೋಟ ವಾಸ್ತವಕ್ಕೆ ತುಂಬ ಹತ್ತಿರವಾಗಿದೆ ಎಂಬುದು ಗೋಚರಿಸುತ್ತದೆ. ತ್ರಿಡಿ ದೃಶ್ಯಾವಳಿ, ಧ್ವನಿ–ಬೆಳಕಿನ ವೈಭವ, ಎಸ್ಕಲೇಟ್ ವ್ಯವಸ್ಥೆ, ಹವಾನಿಯಂತ್ರಿತ ಥಿಯೇಟರ್ ಸೇರಿದಂತೆ ಇತಿಹಾಸಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದೆ.
ಒಂದು ನಿರ್ದಿಷ್ಟ ಸ್ಥಳದಿಂದ ಯುದ್ಧ ಸಾರುತ್ತೇವೆ ಎಂದು ವೈರಿಗಳಿಗೆ ಸಂದೇಶ ತಲುಪಿಸಿ ಬೇರೊಂದು ಕಡೆಯಿಂದ ಯುದ್ಧ ಮಾಡುವುದು, ಅಡಗುದಾಣಗಳ ಬಗ್ಗೆ ಮಾಹಿತಿ ನೀಡಿ ಅಲ್ಲಿಗೆ ವೈರಿಗಳು ಬರುವಂತೆ ಮಾಡಿ ಅವರನ್ನು ಮುಗಿಸುವುದು, ಊರ ಜನರನ್ನೇ ಬೇಹುಗಾರರನ್ನಾಗಿ ಮಾಡಿಕೊಳ್ಳುವುದು ಇಂಥ ತಂತ್ರಗಳನ್ನೇ ‘ಕೂಟಯುದ್ಧ’ (ಗೆರಿಲ್ಲಾ ವಾರ್) ಎನ್ನುತ್ತಾರೆ. ರಾಯಣ್ಣನ ‘ಕೂಟಯುದ್ಧ’ದ ಮಾದರಿಗಳು ಇಲ್ಲಿ ಸ್ಪಷ್ಟ ಮಾಹಿತಿ ನೀಡುತ್ತವೆ.
ಕಿತ್ತೂರು ಸಂಸ್ಥಾನದ ಮರುಸ್ಥಾಪನೆಗೆ ಊರೂರು ಅಲೆಯುವುದು, ಗುಹೆಗಳಲ್ಲಿ ಸಭೆಗಳನ್ನು ಮಾಡುವುದು, ಅರಣ್ಯ ವಾಸಿಗಳನ್ನು ಸೇರಿಸಿಕೊಳ್ಳುವುದು ಮುಂತಾದವುಗಳ ಪ್ರತಿಮೆಗಳು ಸುಂದರವಾಗಿವೆ.
ಯುದ್ಧ ತರಬೇತಿ, ಶಸ್ತ್ರಗಳ ತಯಾರಿಕೆ, ಅಡಗುದಾಣಗಳ ಹುಡುಕಾಟ, ಸೈನಿಕರ ಊಟಕ್ಕೆ ಜನರ ಸಹಕಾರ, ವೇಷಭೂಷಣ, ಆಶ್ರಯ ನೀಡಿದ ಹಂಡಿಬಡಗನಾಥ ಮಠ, ರಾಯಣ್ಣನನ್ನು ಬಂಧಿಸಿದ ಡೋರಿಹಳ್ಳ... ಒಂದಕ್ಕಿಂತ ಒಂದು ಸಹಜವಾಗಿ ಮೂಡಿಬಂದಿವೆ.
ರಾಯಣ್ಣನ ಬಂಧನದ ನಂತರ ವಿಚಾರಣೆ ನಡೆಸಿದ ಧಾರವಾಡದ ಕಲೆಕ್ಟರ್ ಕಚೇರಿ ಕಟ್ಟಡ, ಸಂಪಗಾವಿಯ ಆಗಿನ ಅಮಲ್ದಾರ್ (ಈಗಿನ ತಹಶೀಲ್ದಾರ್) ಕಚೇರಿ, ರಾಯಣ್ಣನ ತಾಯಿಗೆ ಸುಂಕದಕಲ್ಲು ಹೇರಿ ಶಿಕ್ಷೆ ನೀಡಿದ ಕುಲಕರ್ಣಿಯ ಮನೆ, ಮನೆಯೊಳಗೆ ನಡೆದ ಘಟನಾವಳಿಗಳ ರೂಪಕ, ಯುದ್ಧಕ್ಕೆ ನೆರವು ನೀಡಿದ ಸುರಪುರದ ಅರಸರ ಅರಮನೆ, ಸೈನಿಕರಿಗೆ ಬೆಂಬಲವಾಗಿ ನಿಂತವರ ಮನೆಗಳು, ಆ ಕಾಲದ ಹಳ್ಳಿಗಳ ಮಾದರಿಗಳು, ಗುಹೆಗಳು, ಹಳ್ಳಗಳು... ಹೀಗೆ ಪ್ರತಿಯೊಂದನ್ನೂ ಯಥಾವತ್ ಮರು ನಿರ್ಮಾಣ ಮಾಡಿದ್ದು, ಇವುಗಳು ಮನಸೆಳೆಯುತ್ತವೆ.
ಮೌನಾಲಯದ ಗರ್ಜನೆ
ಇಲ್ಲಿನ ಅತ್ಯಂತ ವಿಶೇಷವೆಂದರೆ ಮೌನಾಲಯ. ರಾಯಣ್ಣ ಸೇರಿ ಏಳೂ ಜನ ಗಲ್ಲಿಗೇರಿದ ಕ್ಷಣಗಳನ್ನು ತ್ರಿಡಿ ಸ್ಪರ್ಶದೊಂದಿಗೆ ಗೋಡೆಗಳ ಮೇಲೆ ಸುಂದರವಾಗಿ ಬಿಡಿಸಲಾಗಿದೆ. ಉಬ್ಬುಚಿತ್ರಗಳಿಗೆ ಬೆಳಕಿನ ಚಾಕಚಕ್ಯತೆ ಮೇಳೇಸಿದೆ. ‘ಪ್ರತಿ ಮನೆಯಲ್ಲೂ ಸಂಗೊಳ್ಳಿ ರಾಯಣ್ಣ ಹುಟ್ಟುತ್ತಾನೆ. ನಮ್ಮಂಥವರು ಪ್ರತಿ ಮನೆಯಲ್ಲೂ ಹುಟ್ಟುತ್ತಾರೆ. ಸ್ವಾತಂತ್ರ್ಯ ಸಂಗ್ರಾಮ ನಿರಂತರ’ ಎಂದು ಗಲ್ಲಿಗೇರುವ ಮುನ್ನ ರಾಯಣ್ಣ ಗರ್ಜಿಸುತ್ತಾನೆ. ಆ ಗರ್ಜನೆ ಇಲ್ಲಿನ ನೀರವ ಮೌನದಲ್ಲೂ ಕಿವಿಗೆ ಬಡಿಯುತ್ತದೆ.
ರಾಣಿ ಚನ್ನಮ್ಮ ಸೆರೆವಾಸದಲ್ಲೇ ಕೊನೆಯುಸಿರೆಳೆದಾಗ ಬೈಲಹೊಂಗಲದಲ್ಲಿ ಅಂತ್ಯಕ್ರಿಯೆ ನಡೆಯುತ್ತದೆ. ರಾಯಣ್ಣ ಹಾಗೂ ಸಂಗಾತಿಗಳು ಮಾರುವೇಷದಲ್ಲಿ ಅದರಲ್ಲಿ ಪಾಲ್ಗೊಂಡು ರಾಜಮಾತೆಗೆ ಅಂತಿಮ ನಮನ ಸಲ್ಲಿಸುತ್ತಾರೆ. ಇದರ ದೃಶ್ಯಾವಳಿಗಳಂತೂ ಕ್ಷಣಕಾಲ ಮನಸ್ಸನ್ನು ಇತಿಹಾಸದ ಪುಟಕ್ಕೆ ಎಳೆದೊಯ್ಯುತ್ತಿವೆ.
ಸೆನ್ಸರ್ ಮೂಲಕ ಕಥೆ
ಗಮನಾರ್ಹವೆಂದರೆ; ಇಲ್ಲಿನ ಯಾವುದೇ ಪ್ರತಿಮೆ ಬಳಿ ಹೋದರೆ ಅದರ ಕಥೆ ತಾನಾಗಿಯೇ ಕೇಳಿಸಲು ಶುರುವಾಗುತ್ತದೆ. ಪ್ರತಿಮೆಗಳ ಅಡಿ ಲೌಡ್‌ಸ್ಪೀಕರ್‌ಗಳನ್ನು ಅಳವಡಿಸಿದ್ದು, ಅವುಗಳು ಸೆನ್ಸರ್ ಮೂಲಕ ಕೆಲಸ ಮಾಡುತ್ತವೆ. ಪ್ರವಾಸಿಗರು ಹತ್ತಿರ ಹೋದ ತಕ್ಷಣ ಗೈಡ್‌ನಂತೆ ಎಲ್ಲ ವಿವರವನ್ನು ನೀಡುತ್ತದೆ.
‘ವೀರಭೂಮಿ’ಯಲ್ಲಿ ಒಂದು ಸುತ್ತು ಹಾಕಿದರೆ ಸಾಕು. ಇನ್ನೂರು ವರ್ಷಗಳ ಹಿಂದಿನ ಇತಿಹಾಸ ತೆರೆದುಕೊಳ್ಳುತ್ತದೆ. ಪ್ರವಾಸಿಗರು, ಇತಿಹಾಸದಲ್ಲಿ ಆಸಕ್ತಿ ಇರುವವರು ನೋಡಲೇಬೇಕಾದ ತಾಣ.
ರಾಯಣ್ಣನ ಜತೆಗೆ ಗಲ್ಲಿಗೇರಿದವರು
ಬಸ್ತವಾಡದ ಬಾಳನಾಯಕ ಹಣಬರಟ್ಟಿಯ ಬಸಲಿಂಗಪ್ಪ ಬೆಳವಡಿಯ ಕರಿಬಸಪ್ಪ ಹೊಗರ್ತಿಯ ಭೀಮಾ ಜಿಡ್ಡೀಮನಿ ಕೊಪ್ಪದ ಸಂಗ್ರೇಶ್ ಕೆಂಚಪ್ಪ ಸುತಗಟ್ಟಿಯ ಅಪ್ಪೋಜಿ ನಾಯಕ ಕರಿನೀರಿನ ಶಿಕ್ಷೆಗೆ ಗುರಿಯಾದವರು: ಬೆಳವಡಿಯ ರುದ್ರನಾಯಕ ನೀಲನಾಯಕ ಬೆಳವಡಿಯ ಯಲ್ಲಾನಾಯಕ ತಿಗಡೊಳ್ಳಿಯ ಅಪ್ಪೋಣಿ ಮಜ್ಜಿಗಡಾದ ರಾಣೋಜಿಕೊಂಡ ತೋಪಿನಕಟ್ಟೆ ಕೊನೇರಿ ಕೊಡಚವಾಡ ನೇಮಣ್ಣ
ಆಗಬೇಕಿರುವುದೇನು?
ರಾಯಣ್ಣನ ಜತೆಗೆ ನೇಣಿಗೆ ಕೊರಳೊಡ್ಡಿದ ಇತರ ಆರು ಯೋಧರ ಸಮಾಧಿಗಳನ್ನು ಗುರುತಿಸಬೇಕು. ಅವರ ಕುಟುಂಬದವರನ್ನು ಪತ್ತೆ ಮಾಡಬೇಕು. ಕಾಲಾಪಾನಿ ಶಿಕ್ಷೆಗೆ ಒಳಗಾದ ಇನ್ನೂ ಆರು ವೀರರು ಏನಾದರು ಎನ್ನುವುದನ್ನು ಹುಡುಕಬೇಕು. ಜೊತೆಗೆ ಅವರ ಕುಟುಂಬಗಳನ್ನು ಗುರುತಿಸಬೇಕು. ಕಿತ್ತೂರಿನಲ್ಲಿ ಉತ್ಖನನ ಸಹ ಮಾಡಬೇಕು ಎಂಬುದು ಸಂಶೋಧಕ ಪ್ರೊ.ಸಿ.ಕೆ. ನಾವಲಗಿ ಅವರ ಕೋರಿಕೆ. ‘ವೀರಭೂಮಿ’ ಸಂಪರ್ಕಿಸಲು ಸುಸಜ್ಜಿತವಾದ ರಸ್ತೆ ಆಗಬೇಕು. ರಾಯಣ್ಣ ಹಾಗೂ ಸಹಚರರು ಬಳಸುತ್ತಿದ್ದ ಕೆರೆಗಳು ಡೋರಿಹಳ್ಳದ ಅಭಿವೃದ್ಧಿ ಆಗಬೇಕು. ಆಶ್ರಯ ಪಡೆದಿದ್ದ ಗುಹೆಗಳನ್ನು ರಕ್ಷಿಸಬೇಕು ಎಂಬ ಬೇಡಿಕೆಯೂ ಜನರಿಂದ ಕೇಳಿಬಂದಿದೆ.
ಅಪರೂಪದ ವಿನ್ಯಾಸ
ಅಹಮದಾಬಾದ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್‌ನಲ್ಲಿ ತರಬೇತಿ ಪಡೆದ ಸೂರ್ಯಪ್ರಕಾಶ್ ‘ವೀರಭೂಮಿ’ಗೆ ರೂಪ ನೀಡಿದವರು. ಈ ತರಬೇತಿ ಪಡೆದವರು ದೇಶದಲ್ಲಿ ವಿರಳ. ಹೀಗಾಗಿ ಬಯಲು ಪ್ರದರ್ಶನಾಲಯ ನಿರ್ಮಿಸುವಲ್ಲಿ ಅವರ ಹೆಸರು ಮುಂಚೂಣಿಯಲ್ಲಿರುತ್ತದೆ.
‘ಸಂಶೋಧಕ ಪ್ರೊ.ಜ್ಯೋತಿ ಹೊಸೂರು ಹಾಗೂ ಇತಿಹಾಸಕಾರ ಬಸವರಾಜ ಕಾಮತ ಅವರ ಸಲಹೆಯಂತೆ ನಂದಗಡದಲ್ಲಿ ಇತಿಹಾಸಕ್ಕೆ ಚ್ಯುತಿ ಬಾರದಂತೆ ಪ್ರದರ್ಶನಾಲಯ ನಿರ್ಮಿಸಿದ್ದೇವೆ. ಕಟ್ಟಡಗಳ ಆಕೃತಿ ಮನುಷ್ಯರ ಆಕೃತಿ ಸೇರಿದಂತೆ ಎಲ್ಲವನ್ನೂ ನೈಜತೆಗೆ ತಕ್ಕಂತೆ ಮಾಡಿದ್ದೇವೆ. ಇದರಿಂದ ಪ್ರವಾಸಿಗರಿಗೆ ಸಹಜ ಇತಿಹಾಸ ಅನುಭವಕ್ಕೆ ಬರುತ್ತದೆ’ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.