ರಾಯಚೂರು ಜಿಲ್ಲೆಯ ಸಿಂಧನೂರು ಎಂದರೆ ಭತ್ತದ ಗದ್ದೆ, ರಸಗೊಬ್ಬರದ ಧೂಳು, ಕ್ರಿಮಿನಾಶಕದ ಘಾಟು, ಬಿಸಿಲಿನ ಒಣ ಪರಿಸರ ಕಣ್ಮುಂದೆ ಬರುತ್ತದೆ. ಆದರೆ ಈಗ ನಗರದ ಚಿತ್ರಣ ಬದಲಾಗಿದೆ. ಸ್ಥಳೀಯ ಉದ್ಯಮಿ ರಾಮಬಾಬು ಚಿಟ್ಟೂರಿ ಅವರು ಹತ್ತು ವರ್ಷಗಳ ಹಿಂದೆ ನಾಟಿ ಮಾಡಿದ ಸಸಿಗಳು ಈಗ ರಸ್ತೆಗಳಿಗೆ ನೆರಳಿನ ಹಂದರ ಹೆಣೆದಿವೆ. ಬೆಳಗಿನ ಜಾವ ಹಕ್ಕಿಗಳ ಇಂಚರ ಕಿವಿಗೆ ಹಿತ ನೀಡಿದರೆ, ತಂಪಾದ ವಾತಾವರಣ ಆಹ್ಲಾದ ನೀಡುತ್ತದೆ. ಜನರಲ್ಲಿ ಪರಿಸರ ಕಾಳಜಿಯೂ ಮೂಡಿದೆ.
ಆರಂಭದಲ್ಲಿ ಸಿಂಧನೂರು ನಗರದ ರಸ್ತೆಗಳ ಎರಡೂ ಬದಿಗಳಲ್ಲೂ ಗಿಡ ನೆಡುವುದಕ್ಕಾಗಿ ಆಯುಕ್ತರ ಬಳಿ ಅನುಮತಿಗಾಗಿ ಹೋದಾಗ ‘ಈ ನೆಲದಲ್ಲಿ ಸಸಿಗಳು ಬೆಳೆಯುವುದಿಲ್ಲ, ನೀವೇನು ಸಸಿ ನಾಟಿ ಮಾಡಿ ಹೋಗ್ತೀರಿ, ಆದ್ರೆ ಮುಂದೆ ಅವುಗಳನ್ನು ನೋಡಿಕೊಳ್ಳುವವರು ಯಾರ್‍ರಿ?’ ಎಂದಿದ್ದರಂತೆ. ‘ಸಸಿಗಳ ಯೋಗಕ್ಷೇಮದ ಪೂರ್ಣ ಜವಾಬ್ದಾರಿ ನಮ್ಮದು’ ಎಂದು ರಾಮಬಾಬು ಮುಚ್ಚಳಿಕೆ ಬರೆದುಕೊಟ್ಟು ಅನುಮತಿ ಪಡೆದುಕೊಂಡರು.
ಅನುಮತಿ ದೊರೆತ ನಂತರ ಯಾವ ಯಾವ ರಸ್ತೆಗಳಲ್ಲಿ ಸಸಿ ನಾಟಿ ಮಾಡಬೇಕು, ಅಂತರ ಎಷ್ಟಿರಬೇಕು, ಯಾವ ಸಸಿ ನಾಟಿ ಮಾಡಬೇಕು ಎಂಬ ನೀಲನಕ್ಷೆ ತಯಾರಿಸಿದರು. ಇವರು ಸಸಿ ನಾಟಿ ಮಾಡಲು ಗುರುತು ಮಾಡಲು ಹೋದಾಗ ‘ಗಿಡ ನಾಟಿ ಮಾಡಿದರೆ ನಮಗೆ ಜಾಗ ಇಲ್ಲದಂತಾಗುತ್ತದೆ. ವಾಹನ ಬರಲು, ನಿಲ್ಲಲು ತೊಂದರೆಯಾಗುತ್ತದೆ’ ಎಂದು ಮಳಿಗೆಗಳ ಹಾಗೂ ಬೀದಿಬದಿಯ ವ್ಯಾಪಾರಸ್ಥರು ಪ್ರತಿರೋಧ ತೋರಿಸಿದರು. ಎಷ್ಟೇ ಮನವಿ ಮಾಡಿಕೊಂಡರೂ ವ್ಯಾಪಾರಸ್ಥರು ಜಪ್ಪಯ್ಯ ಎನ್ನಲಿಲ್ಲ. ಅನಿವಾರ್ಯವಾಗಿ ತಹಶೀಲ್ದಾರ್ ಕಚೇರಿ ಹಾಗೂ ಪೊಲೀಸ್ ಠಾಣೆಗೆ ಹೋಗಿ ಸಹಾಯ ಕೋರಿದರು. ಇಂತಹ ಸಾಮಾಜಿಕ ಕಾರ್ಯದ ಯೋಚನೆಗೆ ಬೆಂಬಲವಾಗಿದ್ದ ಆಗಿನ ತಹಶೀಲ್ದಾರ್ ಸಂತೋಷಕುಮಾರ ಹಾಗೂ ಪೊಲೀಸರು ಇವರೊಂದಿಗೆ ಬಂದರು. ನಾಟಿ ಮಾಡಬೇಕಾದ ಸ್ಥಳದ ಗುರುತು ಮಾಡುತ್ತ ರಾಮಬಾಬು ಹಾಗೂ ತಹಶೀಲ್ದಾರ್ ಮುಂದೆ ಹೋದರೆ, ಹಿಂದೆ ಪೊಲೀಸರು ವ್ಯಾಪಾರಸ್ಥರಿಗೆ ಎಚ್ಚರಿಕೆ ಕೊಡುತ್ತಾ ಬರುತ್ತಿದ್ದರು. ಒಟ್ಟಾರೆ ಆ ನೆಲದಲ್ಲಿ ಅಂದವಾಗಿ ಮಡಿ ತೆಗೆದು ಸಸಿ ನಾಟಿ ಮಾಡುವ ಕಾರ್ಯ ಆರಂಭವಾಗಿತ್ತು.
ವೇಗವಾಗಿ, ಎತ್ತರವಾಗಿ ಬೆಳೆಯಬಲ್ಲ, ಅಗಲವಾಗಿ ನೆರಳು ನೀಡಬಲ್ಲ, ಹೆಚ್ಚು ಆಮ್ಲಜನಕ ಉತ್ಪಾದಿಸಬಲ್ಲ, ಫಾರ್ಮನಲ್ಲಿಯೇ ಎರಡು ವರ್ಷ ಬೆಳೆದಿದ್ದ 15 ಅಡಿ ಎತ್ತರದ 10 ಸಾವಿರ ‘ಫಿಲ್ಟೋ ಫಾಮಾ’ ಸಸಿಗಳನ್ನು ಆಂಧ್ರಪ್ರದೇಶದ ರಾಜಮಂಡ್ರಿ ಹತ್ತಿರದ ಕಡಿಯಂನಿಂದ ತರಿಸಿದರು. ಆರಂಭದಲ್ಲಿ ಮಹಾತ್ಮಗಾಂಧಿ ವೃತ್ತದಿಂದ ಎಂ.ಕೆ.ಗೋಪಾಲ ವೃತ್ತದವರೆಗೆ ಆರಂಭವಾಗಿ ಅದೇ ವರ್ಷ ಇಡೀ ನಗರದ ತುಂಬೆಲ್ಲ ನಾಟಿ ಮಾಡಲಾಯಿತು. ಸಮಯಕ್ಕೆ ಸರಿಯಾಗಿ ಮೇಲುಗೊಬ್ಬರ, ನೀರು ನೀಡಿದ್ದರಿಂದ, ಸಕಾಲಕ್ಕೆ ಪ್ರೋನಿಂಗ್ ಮಾಡುವುದರಿಂದ ಸಸಿಗಳು ಆರೋಗ್ಯಕರವಾಗಿ ಬೆಳೆಯಲಾರಂಭಿಸಿದವು.
ಕುಷ್ಟಗಿ, ಗಂಗಾವತಿ, ರಾಯಚೂರು ರಸ್ತೆ ಸೇರಿದಂತೆ ದೇವಸ್ಥಾನ, ಚರ್ಚ್, ಮಸೀದಿ, ಶಾಲಾ, ಕಾಲೇಜು, ಅಗ್ನಿಶಾಮಕ, ತಹಶೀಲ್ದಾರ್ ಕಚೇರಿ, ಪೊಲೀಸ ಠಾಣೆ ಅಷ್ಟೇ ಏಕೆ ಸ್ಮಶಾನ... ಹೀಗೆ ಹಲವು ಕಡೆ 10 ಸಾವಿರ ಸಸಿಗಳು ಹಂತ ಹಂತವಾಗಿ ನಾಟಿಯಾದವು. ಇದಕ್ಕಾಗಿಯೇ ದೂರದಲ್ಲಿ ಜಾಗ ಖರೀದಿಸಿ ಅಲ್ಲಿ ಕೊಳವೆಬಾವಿ ಕೊರೆಯಿಸಿದರು. ಉತ್ತಮ ನೀರು ದೊರಕಿತು. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದರು.
ಈಗಲೂ ಪ್ರತಿ ದಿನ ರಾಮಬಾಬು, ಅವರ ಮಗ ವಿನಯ ಒಂದೊಂದು ರಸ್ತೆಗೆ ಹೋಗಿ ಗಿಡಗಳ ಯೋಗಕ್ಷೇಮ ನೋಡಿಕೊಂಡು ಬರುತ್ತಾರೆ. ಯಾವುದಾದರೂ ಸಸಿ ಹಾಳಾಗಿದ್ದರೆ ಕೂಡಲೇ ಆ ಸ್ಥಳದಲ್ಲೇ ನಾಟಿ ಮಾಡಲಾಗುತ್ತದೆ.
ಮಳಿಗೆ ವ್ಯಾಪಾರಿಗಳು, ಬೀದಿ ಬದಿಯ ವ್ಯಾಪಾರಿಗಳು ಗಿಡಗಳ ಮೇಲೆ ಈಗ ಪ್ರೀತಿಯನ್ನು ಬೆಳೆಸಿಕೊಂಡಿದ್ದಾರೆ. ಅವರಿಗೀಗ ಗಿಡಮರಗಳ ಮೇಲೆ ಎಷ್ಟೊಂದು ಕಾಳಜಿ ಬೆಳೆದಿದೆ ಎಂದರೆ, ಆರಂಭದಲ್ಲಿ ಗಿಡಗಳ ಕೊಂಬೆಗಳು ಮುರಿದರೆ ರಾಮಬಾಬು ಅವರಿಗೆ ಫೋನ್ ಮಾಡುತ್ತಿದ್ದರು. ಈಗ ತಾವೇ ಅದನ್ನೆಲ್ಲ ಸರಿಪಡಿಸಿ ಫೋಟೊ ಸಮೇತ ಮಾಹಿತಿ ನೀಡುತ್ತಾರೆ. ‘ಜೆಸ್ಕಾಂನವರು ಗಿಡಮರಗಳ ಟೊಂಗೆಗಳನ್ನು ತೆಗೆಯಬೇಕಾದರೆ ನಮಗೆ ಫೋನ್ ಮಾಡುತ್ತಾರೆ. ನಾವೇ ಹೋಗಿ ಟೊಂಗೆಗಳನ್ನು ಕತ್ತರಿಸಿ, ನಂಜು ನಿರೋಧಕ ಔಷಧಿ ಸಿಂಪಡಿಸುತ್ತೇವೆ’ ಎಂದು ರಾಮಬಾಬು ಅವರ ಮಗ ವಿನಯ ಚಿಟ್ಟೂರಿ ಮಾಹಿತಿ ನೀಡಿದರು.
ಈ ಮೊದಲು ನೆರಳಿಗಾಗಿ ಛತ್ರಿ ಬಳಸುತ್ತಿದ್ದ ವ್ಯಾಪಾರಸ್ಥರು ಈಗ ತಣ್ಣಗೆ ನೆರಳಡಿ ಕುಳಿತುಕೊಳ್ಳುತ್ತಾರೆ. ಕಾರ್ಮಿಕರು ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಾರೆ. ವಾಹನಗಳು ನೆರಳಿನಡಿ ನಿಲ್ಲುತ್ತವೆ. ‘ಪ್ರತಿ ಗಿಡಗಳಿಗೆ ನೀರಿನ ತತ್ರಾಣಿಗಳನ್ನು ಹಾಕಿದರೆ ಹಕ್ಕಿಪಕ್ಷಿಗಳಿಗೆ ನೀರಿನ ದಾಹ ಹಿಂಗಿಸಿದಂತಾಗುತ್ತದೆ. ಅದೊಂದು ಮಾತ್ರ ಬಾಕಿ ಇದೆ ನೋಡ್ರಿ' ಎಂದು ಪರಿಸರ ಪ್ರೇಮಿಗಳಾದ ರಾಜೇಂದ್ರ ಹಂಪಿಕರ ಹಾಗೂ ಆನಂದ ಹೇಳಿದಾಗ, ರಾಮಬಾಬು ಅವರು ‘ಮುಂದಿನ ದಿನ ಆ ಕೆಲಸವನ್ನೂ ಮಾಡೋಣ ಬಿಡಿ’ ಎಂದರು.
ಕೆಲವೊಂದು ರಸ್ತೆಗಳಲ್ಲಿ 8-10 ವರ್ಷಗಳ ಹಿಂದೆ ನಾಟಿ ಮಾಡಿದ ಸಸಿಗಳು ಈಗ ದೊಡ್ಡ ಮರಗಳಾಗಿ ಬೆಳೆದು ಒಂದಕ್ಕೊಂದು ಪೋಣಿಸಿಕೊಂಡು ರಸ್ತೆ ಗುಂಟ ನೆರಳಿನ ಹಂದರ ಹೆಣೆದಿವೆ. ರಾಮಬಾಬು ಅವರು ಈ ಎಲ್ಲ ಸಸಿಗಳನ್ನು ತಮ್ಮ ಮಕ್ಕಳಂತೆ ಬೆಳೆಸುತ್ತಿದ್ದಾರೆ. ಖಾಲಿ ಜಾಗದಲ್ಲೆಲ್ಲಾ ಸಸಿಗಳನ್ನು ನಾಟಿ ಮಾಡಲು ರಾಮಬಾಬು ಅವರಿಗೆ ಪೂರ್ಣ ಸಹಕಾರ ನೀಡಿದವರು ದುದ್ದೂಪೂಡಿ ಕಾಲೇಜಿನ ಕಾರ್ಯದರ್ಶಿ ಆರ್.ಸಿ.ಪಾಟೀಲ, ಆ ಕಾಲೇಜಿನ ಎನ್ನೆಸ್ಸೆಸ್ಸೆ ವಿದ್ಯಾರ್ಥಿಗಳು.
‘ನಮ್ಮ ವಿದ್ಯಾರ್ಥಿಗಳು ಎಷ್ಟು ಕೆಲಸ ಮಾಡುತ್ತಾರೆ ಎಂಬುದಕ್ಕಿಂತ ಅವರಲ್ಲಿ ಪರಿಸರ ಪ್ರಜ್ಞೆ ಬೆಳೆಯುತ್ತಿದೆಯಲ್ಲ, ಅದೇ ನಮಗೆ ಖುಷಿ ತಂದಿದೆ’ ಎಂದು ಆರ್.ಸಿ.ಪಾಟೀಲ ಅಭಿಮಾನ ವ್ಯಕ್ತಪಡಿಸುತ್ತಾರೆ. ಈ ಎಲ್ಲ ಕಾರಣಗಳಿಂದ ನೆಟ್ಟ ಸಸಿಗಳೆಲ್ಲ ಈಗ ಯಾರೂ ನೀರು, ಗೊಬ್ಬರ ಹಾಕಬೇಕಾಗಿಲ್ಲ, ಬೆಳೆಯುತ್ತಿವೆ.
ಸುತ್ತಮುತ್ತಲಿನ ಹಳ್ಳಿಗರು ಅವಕಾಶ ನೀಡಿದರೆ ನೆರಳಿನ ಮರ ಸೇರಿದಂತೆ ಹಣ್ಣಿನ ಮರಗಳನ್ನು ಬೆಳೆಸುವ ವಿಚಾರವಿದೆ ಎಂದು ರಾಮಬಾಬು ಹೇಳುತ್ತಾರೆ. ಹೆಚ್ಚಿನ ಮಾಹಿತಿಗೆ 9845404599 ಇಲ್ಲಿಗೆ ಸಂಪರ್ಕಿಸಬಹುದು.
₹30 ಲಕ್ಷ ಖರ್ಚು!
‘ಈ ಸಸಿಗಳು ಆಂಧ್ರಪ್ರದೇಶದಿಂದ ಸಿಂಧನೂರಿಗೆ ತರಲು ತಲಾ ಸಸಿಗೆ ₹200 ತಗ್ಗು ತೋಡಿ ನೆಡಲು ₹150 ಸಸಿಯ ಸುತ್ತ ಒಂದು ಅಡಿಯ ಸಿಮೆಂಟ್ ರಿಂಗ್‌ಗೆ ₹200 ತಂತಿಯ ಜಾಲರಿಗೆ ₹150 ಹಾಗೂ ಸಸಿಗಳ ಆಧಾರಕ್ಕೆ ಬೊಂಬುಗೆ ₹60 ನೀರು ನಿರ್ವಹಣೆ ಹೀಗೆ ಎಲ್ಲ ಸೇರಿ ಆಗಿನ ಸಮಯದಲ್ಲಿ ಹೆಚ್ಚು ಕಡಿಮೆ ₹30 ಲಕ್ಷ ಖರ್ಚು ಮಾಡಿದ್ದೇನೆ. ಈಗ ಈ ಹಸಿರು ಮರಗಳು ನಗರದ ಅಂದ ಹೆಚ್ಚಿಸಿದ್ದು ಪಕ್ಷಿಗಳ ಇಂಚರ ಖುಷಿ ತಂದಿದೆ’ ಎಂದು ರಾಮಬಾಬು ಚಿಟ್ಟೂರಿ ಸಂತೃಪ್ತಭಾವದಿಂದ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.