ADVERTISEMENT

ಅಸಹಾಯಕರ ಬಂಧು ಹಡಪದ ಶಿವಪ್ಪ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 23:30 IST
Last Updated 18 ಅಕ್ಟೋಬರ್ 2025, 23:30 IST
ಹಡಪದ ಶಿವಪ್ಪ
ಹಡಪದ ಶಿವಪ್ಪ   

ಕೊಪ್ಪಳದ ಹಡಪದ ಶಿವಪ್ಪ ಅವರ ಕೈಯಲ್ಲೊಂದು ‘ಕಾಯಕದ ಚೀಲ’. ಕಾಲಲ್ಲಿ ಸಾದಾ ಹವಾಯಿ ಚಪ್ಪಲಿ. ಸೈಕಲ್ ಏರಿ ಓಣಿ ಓಣಿ ತಿರುಗಿ ಅಸಹಾಯಕರು, ರೋಗಿಗಳು, ವೃದ್ಧರ ಮನೆ ಮನೆಗೆ ತೆರಳಿ ಯಾವುದೇ ಮುಜುಗರವಿಲ್ಲದೇ ಕ್ಷೌರ ಮಾಡುವುದು ಇವರ ನಿತ್ಯದ ಕಾಯಕ. ಕ್ಷೌರ ಮಾಡಿದ ಬಳಿಕ ದೇಹಕ್ಕೆ ಮಸಾಜ್ ಮಾಡುತ್ತಾರೆ. ಪ್ರೀತಿಯಿಂದ ನಾಲ್ಕು ಮಾತಾಡಿ ಆತ್ಮಸ್ಥೈರ್ಯ ತುಂಬಿ ಅವರು ಮುಖದ ಮೇಲೆ ನಗುವಿನ ಗೆರೆ ಮೂಡುವಂತೆ ಮಾಡುತ್ತಾರೆ. ಅವರು ಕೊಟ್ಟಷ್ಟು ಹಣವನ್ನು ಖುಷಿಯಿಂದಲೇ ತೆಗೆದುಕೊಂಡು ಮತ್ತೊಂದು ಕಡೆಗೆ ತೆರಳುತ್ತಾರೆ.

ಅಂದಾಜು ಅರವತ್ತು ದಾಟಿರಬಹುದಾದ ಇವರು, ಯಾವುದೇ ಜಾತಿಭೇದವಿಲ್ಲದೆ ಶುಚಿತ್ವ ಕಾಯಕವನ್ನು ಸಂತೋಷದಿಂದಲೇ ಮಾಡುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಕ್ಷೌರಿಕ ವೃತ್ತಿ ಎಂದರೆ ಸಲೂನ್‌ ತೆರೆದು ಅಲ್ಲಿಗೆ ಬರುವ ಗ್ರಾಹಕರಿಗೆ ಸೇವೆ ಒದಗಿಸುವುದು ಮಾತ್ರವೇ ಆಗಿದೆ. ಆದರೆ, ಶಿವಪ್ಪ ಅವರಿಗೆ ಇಂತಹ ಯಾವುದೇ ಸಲೂನ್‌ ಇಲ್ಲ. ಸಾಮಾನ್ಯರಿಗಿಂತ ಹೆಚ್ಚಾಗಿ ರೋಗಿಗಳ ಸೇವೆಗೆ ಆದ್ಯತೆ ನೀಡುತ್ತಾರೆ. ಸಲೂನ್‌ ತೆರೆದರೆ ಪ್ರತಿದಿನ ಸಾವಿರಾರು ರೂಪಾಯಿ ದುಡಿಯಬಹುದು. ಆದರೆ ರೋಗಿಗಳು ಮತ್ತು ಅಸಹಾಯಕರು ಸಲೂನ್‌ಗೆ ಬಂದು ಕ್ಷೌರ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವುದು ಶಿವಪ್ಪ ಅವರ ಕಾಳಜಿ.

ADVERTISEMENT

ಜೇಬಲ್ಲಿರುವ ಕೀಪ್ಯಾಡ್ ಮೊಬೈಲ್ ರಿಂಗಣಿಸಿದರೆ ಸಾಕು, ಜಾಡು ಹಿಡಿದು ರೋಗಿಗಳ ಮನೆ ಹುಡುಕಿಕೊಂಡು ಹೋಗುತ್ತಾರೆ. ರೋಗಿ ಎಂಥದ್ದೇ ಮಲಿನ ಸ್ಥಿತಿಯಲ್ಲಿದ್ದರೂ ಒಂಚೂರು ಅಸಹ್ಯ ಪಟ್ಟುಕೊಳ್ಳದೆ ಶುಚಿಗೊಳಿಸುತ್ತಾರೆ.

ಸಾಮಾನ್ಯವಾಗಿ ಎಚ್‌ಐವಿ ಪೀಡಿತರು ಮತ್ತು ಕುಷ್ಠರೋಗಿಗಳು ಎಂದರೆ ಬಹುತೇಕರು ಮಾರುದ್ದ ಜಿಗಿದು ನಿಲ್ಲುತ್ತಾರೆ. ಕನಿಷ್ಠ ಮುಟ್ಟಲೂ ಹಿಂಜರಿಯುತ್ತಾರೆ. ಆದರೆ ಅಂತಹ ರೋಗಿಗಳ ಸೇವೆ ಮಾಡಲು ಶಿವಪ್ಪ ಮುಂದಾಗುತ್ತಾರೆ. ಇಷ್ಟೇ ಅಲ್ಲದೆ, ಅಪಘಾತದಲ್ಲಿ ತಲೆಗೆ ಪೆಟ್ಟಾಗಿ ಕೋಮಾ ಸ್ಥಿತಿಯಲ್ಲಿದ್ದವರಿಗೆ, ಕ್ಯಾನ್ಸರ್ ಮತ್ತಿತರ ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ, ವಯಸ್ಸಾಗಿ ನಡೆದಾಡಲು ಸಾಧ್ಯವಾಗದೇ ಹಾಸಿಗೆ ಹಿಡಿದವರಿಗೆ ಸೇವೆ ಮಾಡಲು ಒಂದು ಕರೆ ಮಾಡಿದರೆ ಸಾಕು, ಆಸ್ಪತ್ರೆಗೆ ಅಥವಾ ರೋಗಿ ಇರುವ ಮನೆಗೇ ಹೋಗಿ ಅವರ ಸೇವೆ ಮಾಡುವ ಮೂಲಕ ಕಾಯಕ ಸುಖವನ್ನು ಅನುಭವಿಸುತ್ತಾರೆ.

‘ಕರೆ ಬಂದಾಗಲೆಲ್ಲ ದೂರದ ಸ್ಥಳಗಳಿಗೆ ಹೋಗಿ ಕೆಲಸ ಮಾಡುವುದು ನಿಮಗೆ ಕಷ್ಟವಾಗುವುದಿಲ್ಲವೇ?’ ಎಂದು ಕೇಳಿದರೆ, ‘ಹನ್ನೆರಡನೆಯ ಶತಮಾನದಾಗ ಬಸವಣ್ಣ ಕಾಯಕವೇ ಕೈಲಾಸ ಅಂತ ಹೇಳಿದ್ದಾನಲ್ಲ, ದೀನ ದಲಿತರ ಸೇವೆಯೇ ದೇವರ ಸೇವೆ ಅಂತ ಗಾಂಧಿ ಹೇಳ್ಯಾರ. ಅದರಂತೆ ನಮ್ಮ ಕಾಯಕದಾಗ ಏನೇ ಕಷ್ಟಗಳಿದ್ರೂ ಪ್ರೀತಿಯಿಂದ ಮಾಡಬೇಕು. ಅದೇ ನಮಗ ಆನಂದ ನೀಡುತ್ತೆ’ ಎನ್ನುತ್ತ ಮುಗ್ಧ ನಗೆ ಬೀರುತ್ತಾರೆ.

ಶಿವಪ್ಪ ಬಾಲ್ಯದಲ್ಲಿ ಕೊಪ್ಪಳದ ಗವಿಸಿದ್ಧೇಶ್ವರ ಶಾಲೆಯಲ್ಲಿ ಓದಿದರು. ಅಲ್ಲಿ ಅಕ್ಷರ ಕಲಿಸಿದ ಶಿಕ್ಷಕರೊಬ್ಬರ ಮಗ ಇತ್ತೀಚೆಗೆ ಮನೆಯ ಮೆಟ್ಟಿಲಿನಿಂದ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ಹಾಸಿಗೆ ಹಿಡಿದರು. ಅವರಿಗೆ ಪ್ರತಿದಿನ ತಲೆಗೆ ಮತ್ತು ದೇಹಕ್ಕೆ ಮಸಾಜ್ ಮಾಡಿ ಸೇವೆ ಮಾಡಿದರು. ಗುರುಗಳ ಋಣವನ್ನು ತುಸು ತೀರಿಸಿದ ಸಾರ್ಥಕ ಕ್ಷಣವದು ಎಂದು ಅವರು ಹೇಳಿಕೊಳ್ಳುತ್ತಾರೆ.

ದಲಿತ ಕೇರಿಯಲ್ಲಿ...

ಕೆಲವು ವರ್ಷಗಳ ಹಿಂದೆ ಕೊಪ್ಪಳ ತಾಲ್ಲೂಕಿನ ಹಳ್ಳಿಗಳಲ್ಲಿ ದಲಿತ ಮತ್ತು ಬಲಾಢ್ಯರ ನಡುವೆ ಕಲಹಗಳು ನಡೆದು ಆ ಊರುಗಳ ದಲಿತರಿಗೆ ಕ್ಷೌರ ಮಾಡದಿರುವ ಸ್ಥಿತಿ ನಿರ್ಮಾಣವಾಯಿತು. ಆ ಸಂದರ್ಭದಲ್ಲಿ ಆ ಊರುಗಳಿಗೆ ಕಾಯಕ ಚೀಲದೊಂದಿಗೆ ಸೈಕಲ್ ಏರಿ ಹೋಗಿ ದಲಿತರಿಗೆ ಕ್ಷೌರ ಮಾಡಿದರು. ಇದರಿಂದ ಆ ಊರುಗಳ ದಲಿತರಿಗೆ ಯಾವುದೇ ಸೇವೆ ಸಿಗದಂತೆ ಮಾಡುವ ಬಲಾಢ್ಯರ ಪ್ರಯತ್ನಕ್ಕೆ ಬಲವಾದ ಪೆಟ್ಟುಕೊಟ್ಟರು. ಇದರಿಂದ ಶಿವಪ್ಪ ಕೆಲವೊಮ್ಮೆ ಆ ಗ್ರಾಮಗಳ ಬಲಾಢ್ಯ ವರ್ಗದವರಿಂದ ಹಾಗೂ ಸ್ವಜಾತಿಯವರಿಂದಲೇ ವಿರೋಧವನ್ನು ಎದುರಿಸಬೇಕಾಯಿತು. ಆ ಊರುಗಳ ಪ್ರಕ್ಷುಬ್ಧ ಪರಿಸ್ಥಿತಿ ಕಾಲಕ್ರಮೇಣ ತಿಳಿಗೊಂಡು ಸಹಜ ಸ್ಥಿತಿ ನಿರ್ಮಾಣವಾಗುತ್ತ ಬಂದಿತು ಎಂಬುದು ಬೇರೆ ಮಾತು.

ನಗರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿರುವ ಹಿಂದುಳಿದ ವರ್ಗಗಳ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಶಿವಪ್ಪನವರ ಕ್ಷೌರವೇ ಇಷ್ಟ. ಕ್ಷೌರಕ್ಕೆ ಪ್ರತಿಯಾಗಿ ಕನಿಷ್ಠ ಗೌರವ ಸಂಭಾವನೆ ಇರುತ್ತರಾದರೂ ಹಾಸ್ಟೆಲ್ ಹುಡುಗರು ಮತ್ತು ಶಿವಪ್ಪಜ್ಜನ ನಡುವಿನ ಆತ್ಮೀಯ ಭಾವವೇ ಇಲ್ಲಿ ಗಣ್ಯ. ಶಿವಪ್ಪ ಅವರ ಅಜ್ಜ (ಅವರ ಹೆಸರೂ ಶಿವಪ್ಪ ಹಡಪದ) ಸ್ವಾತಂತ್ರ್ಯ ಪೂರ್ವದಲ್ಲಿ ಹೈದರಾಬಾದ್ ನಿಜಾಮನ ಸರ್ಕಾರದಲ್ಲಿ ಪೊಲೀಸ್ ಇಲಾಖೆ ಸೇರಿ ಕ್ಷೌರಿಕ ಕೆಲಸವನ್ನೂ ಮಾಡಿದ್ದರು.

ತಮ್ಮ ಪ್ರಾಮಾಣಿಕ ಸಮಾಜ ಸೇವೆಯನ್ನು ಎಲ್ಲಿಯೂ ಹೇಳಿಕೊಳ್ಳದ ಹಡಪದ ಶಿವಪ್ಪನವರ ಕ್ಷೌರ ಸೇವೆ ಕೊಪ್ಪಳದಲ್ಲಿ ಜನಜನಿತ.

ಶಿವಪ್ಪನವರ ಕಾಯಕದ ಕಥೆಯನ್ನು ಕೇಳುತ್ತಿದ್ದಾಗಲೇ ಅವರ ಜೇಬಿನಲ್ಲಿದ್ದ ಮೊಬೈಲ್‌ ರಿಂಗಣಿಸಿತು. ಕರೆಯನ್ನು ಆಲಿಸಿ ‘ಮತ್ತೆ ಸಿಗೋಣ’ ಎಂದು ನಗೆಯೊಂದನ್ನು ಬೀರಿ ಸೈಕಲ್‌ ಏರಿ ಹೊರಟರು.

ಹೋರಾಟಕ್ಕೂ ಸದಾ ಜೈ

ಕ್ಷೌರ ಸೇವೆಯೊಂದಿಗೆ ಹೊಟ್ಟೆ ತುಂಬಿಸಿಕೊಳ್ಳುತ್ತ ಬದುಕು ಸಾಗಿಸುತ್ತಿರುವ ಶಿವಪ್ಪ ಅವರಿಗೂ ಹೋರಾಟಕ್ಕೂ ಎತ್ತಣದಿಂದೆತ್ತ ಸಂಬಂಧ? ಕಡುಬಡತನದ ಕ್ಷೌರಿಕರೊಬ್ಬರು ಹೋರಾಟಗಾರರಾಗಿ ಬದಲಾದುದರ ಹಿಂದೆ ಸ್ವಾರಸ್ಯಕರ ಕಥೆಯೇ ಇದೆ. ಸುಮಾರು ಮೂರು ದಶಕದ ಹಿಂದೆ (ಆಗಿನ್ನೂ ಕೊಪ್ಪಳ ಜಿಲ್ಲೆಯಾಗಿರಲಿಲ್ಲ) ಕೊಪ್ಪಳ ಜಿಲ್ಲಾ ಹೋರಾಟದ ಚರ್ಚೆ ಅಲ್ಲಲ್ಲಿ ನಡೆದಿತ್ತು. ಶಿವಪ್ಪ ತಮ್ಮ ಗೆಳೆಯರ ಬಳಗದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಊಟದ ತಟ್ಟೆ ಬಾರಿಸುತ್ತ ಜಿಲ್ಲಾ ಹೋರಾಟದ ಕೂಗಿಗೆ ದನಿಗೂಡಿಸುತ್ತಿದ್ದರು. ಇದನ್ನು ನೋಡಿ ಕೆಲವರು ನಕ್ಕರು, ಅಪಹಾಸ್ಯ ಮಾಡಿದರು. ಕ್ರಮೇಣ ಜಿಲ್ಲಾ ಪ್ರಮುಖ ಹೋರಾಟಗಾರರು ಈ ತಂಡವನ್ನು ಗುರುತಿಸಿ ಸಮಿತಿಗೆ ಸೇರಿಸಿಕೊಂಡು ಹೋರಾಟಕ್ಕೆ ಅಣಿಗೊಳಿಸಿದರು. ಇದು ಶಿವಪ್ಪ ಅವರು ಹೋರಾಟಕ್ಕೆ ಕಾಲಿಡಲು ಕಾರಣವಾದ ಸಂದರ್ಭ.

ನಂತರದ ದಿನಗಳಲ್ಲಿ ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಸೇರಿದಂತೆ ಯಾವುದೇ ಜನಸಮುದಾಯಕ್ಕೆ ಉಂಟಾಗುವ ಅನ್ಯಾಯವನ್ನು ಖಂಡಿಸಲು ಶಿವಪ್ಪ ಹೋರಾಟಕ್ಕೆ ಧುಮುಕಿದರು. ಕಾರ್ಖಾನೆ ವಿರೋಧಿ ಹೋರಾಟ, ರಕ್ತನಿಧಿ ಸ್ಥಾಪನೆಗಾಗಿ ಹೋರಾಟ, ದೂಳು ನಿಯಂತ್ರಣಕ್ಕಾಗಿ ಹೋರಾಟ–ಹೀಗೆ ನಾನಾ ಕಾರಣಗಳಿಗಾಗಿ ನಡೆಯುವ ಹೋರಾಟಗಳಲ್ಲಿ ಭಾಗಿಯಾಗಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ.

ಕ್ಷೌರ ಸೇವೆಯಲ್ಲಿ ಶಿವಪ್ಪ   ಚಿತ್ರಗಳು: ಭರತ್‌ ಕಂದಕೂರ