ADVERTISEMENT

ಕತ್ತಲೆಯಲ್ಲೂ ಸೂರ್ಯನ ದೀವಿಗೆ..!

ಸಂಪೂರ್ಣ ಸೋಲಾರ್ ಗ್ರಾಮದ ಕಥೆ

ಬಸವರಾಜ ಹವಾಲ್ದಾರ
Published 15 ಅಕ್ಟೋಬರ್ 2018, 19:45 IST
Last Updated 15 ಅಕ್ಟೋಬರ್ 2018, 19:45 IST
(ಚಿತ್ರಗಳು: ಲೇಖಕರವು)
(ಚಿತ್ರಗಳು: ಲೇಖಕರವು)   

ಹುಬ್ಬಳ್ಳಿ ತಾಲ್ಲೂಕು ಶಿರಗುಪ್ಪಿ ಗ್ರಾಮ ಹೊಕ್ಕರೆ ಪ್ರತಿಯೊಬ್ಬರ ಮನೆಯ ಮೇಲೂ ಸೋಲಾರ್ ಪ್ಯಾನಲ್‌ಗಳು ಕಾಣುತ್ತವೆ. ಮನೆಗಳ ಮೇಲಷ್ಟೇ ಅಲ್ಲ, ಸರ್ಕಾರಿ ಕಚೇರಿ, ಸಮುದಾಯ ಭವನದ ಮೇಲೂ ಬೃಹದಾಕಾರದ ಸೌರಶಕ್ತಿ ಪ್ಲೇಟ್‌ಗಳು ಕಾಣುತ್ತವೆ.

ಏನಿದು ಮನೆಗಳೆಲ್ಲ ಸೋಲಾರ್ ತಟ್ಟೆಗಳ ಕಿರೀಟಗಳನ್ನು ಹೊತ್ತುಕೊಂಡಿವೆಯಲ್ಲಾ ಎಂದು ಯೋಚಿಸುತ್ತಿರುವಾಗ, ಸಮೀಪ
ದಲ್ಲೇ ಇದ್ದ ಗ್ರಾಮದ ಹನುಮವ್ವ, ‘ನಮ್ಮೂರಾಗೆ ಮನಿ ಮನಿಗೂ ಸೋಲಾರ್‌ ಕನೆಕ್ಷನ್ ನೀಡ್ಯಾರ್ರಿ. ಒಂದೊಂದು ಮನಿಗೆ ಎರಡು ಲೈಟ್‌ ಹಾಕ್ಯಾರ. ಹಗಲೊತ್ತಿನ್ಯಾಗ ಬೆಳಕ ಇದ್ದಾ ಇರತಾದ. ರಾತ್ರಿನೂ ಹನ್ನೊಂದರ ತನಕ ಬೆಳಕಿರತಾದ್ರಿ. ಸೂರ್ಯ ರಾತ್ರ್ಯಾಗೂ ಮನ್ಯಾಗ ಬಂದಾನೇನು ಅನಸ್ತದ’ ಎಂದು ತಮ್ಮೂರಿನ ಮನೆ ಮೇಲಿರುವ ಸೌರ ಫಲಕಗಳ ಕಿರೀಟದ ಕಥೆಯನ್ನು ಒಂದೇ ಉಸಿರಿಗೆ ಹೇಳಿ ಮುಗಿಸಿದರು.

ಮನೆ ಮನೆಗೂ ಸೋಲಾರ್
ಹೌದು, 2016–17ನೇ ಸಾಲಿನ ‘ನವ ಪರಿವರ್ತನಾ ಯೋಜನೆಯಡಿ’ ಶಿರುಗುಪ್ಪಿ ಗ್ರಾಮದ 996 ಮನೆಗಳಿಗೆ ಸರ್ಕಾರಿ ಕಚೇರಿಗಳಿಗೆ ಸೋಲಾರ್ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದೆ. ಮಾತ್ರವಲ್ಲ, ಸರ್ಕಲ್‌ಗಳಿಗೆ ಬೀದಿ ದೀಪವನ್ನು ಅಳವಡಿಸಲಾಗಿದೆ.

ADVERTISEMENT

ಈ ಯೋಜನೆಗೆ ಶಿರಗುಪ್ಪಿ ಗ್ರಾಮ ಆಯ್ಕೆಯಾಗಿತ್ತು. ಸೋಲಾರ್ ವಿದ್ಯುದ್ದೀಪಗಳನ್ನು ಅಳವಡಿಸುವುದು ಈ ಯೋಜನೆಯ ಪ್ರಮುಖ ಅಂಶಗಳಲ್ಲೊಂದು. ಅದರಂತೆ ₹ 1.5 ಕೋಟಿ ವೆಚ್ಚದಲ್ಲಿ ಗ್ರಾಮದ ಮನೆ, ಕಚೇರಿಗಳಿಗೆ ಸೋಲಾರ್ ಪ್ಯಾನಲ್‌ ಹಾಕಿಸಿ, ದೀಪಗಳನ್ನು ಅಳವಡಿಸಲಾಗಿದೆ.

ಮಳೆ, ಗಾಳಿಯಿಂದಾಗಿ ವಿದ್ಯುತ್ ಕೈಕೊಟ್ಟರೆ ಮೂರ್ನಾಲ್ಕು ದಿನ ಈ ಊರಿನಲ್ಲಿ ಕರೆಂಟ್ ಇರ್ತಿಲಿಲ್ಲ. ಕುಡಿಯುವ ನೀರು, ಹಿಟ್ಟಿನ ಗಿರಣಿ ಎಲ್ಲ ಬಂದ್ ಆಗುತ್ತಿದ್ದವು. ಬೇಸಿಗೆಯಲ್ಲಂತೂ ಕರೆಂಟ್ ಯಾವಾಗ ಇರ್ತಿತ್ತು, ಯಾವಾಗ ಹೋಗ್ತಿತ್ತೂ ಒಂದೂ ಗೊತ್ತಾಗ್ತಿರಲಿಲ್ಲ. ದೀಪ ಇದ್ದರೂ ಮನೆಯೊಳಗೆ ಚಿಮಣಿ ಹಚ್ಚಿದಂತೆ ಸಣ್ಣಗೆ ಬಲ್ಬ್‌ ಮಿಣುಕುತ್ತಿದ್ದವು.

‘ಕರೆಂಟ್ ಕೈಕೊಟ್ಟು ಅಡಿಗಿನೂ ಕತ್ತಲ್ದಾಗ ಮಾಡಬೇಕಾತಿತ್ತರ್ರಿ. ಮಕ್ಕಳ ಓದಾಕೂ ಬೆಳಕಿರತಿರ
ಲಿಲ್ಲ. ಇಡೀ ಊರಿಗೆ ಊರಾ ಕತ್ತಲಾಗತಿತ್ತ. ಈಗ ಹಂಗಿಲ್ಲ ನೋಡ್ರಿ’ ಎನ್ನುತ್ತಾ ಊರಿನಲ್ಲಾದ ’ಬೆಳಕಿನ ಪ್ರಗತಿ’ಯನ್ನು ಅಪ್ಪಣ್ಣ ಭಗವತಿ ವಿವರಿಸಿದರು.

ಕರೆಂಟ್ ಕಣ್ಣಾಮುಚ್ಚಾಲೆಯಿಂದ ಅಟಲ್‌ಜೀ ಜನ ಸ್ನೇಹಿ ಕೇಂದ್ರದಲ್ಲಿ ಕಂಪ್ಯೂಟರ್‌ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಅಗತ್ಯ ಕಂದಾಯ ದಾಖಲೆಗಳನ್ನು ಪಡೆಯಲು ಜನರು ಪರದಾಡಬೇಕಿತ್ತು. ಇದರಿಂದ ಜನ ರೋಸಿ ಹೋಗಿದ್ದರು. ‌ ಈಗ ಸೋಲಾರ್ ಸೌಲಭ್ಯ ಬಂದ ಮೇಲೆ ಸೌರಶಕ್ತಿ ವಿದ್ಯುತ್‌ನಿಂದ ಕಂಪ್ಯೂಟರ್ ಚಾಲನೆಯಾಗುತ್ತಿದೆ. ಈಗ ಮೊದಲಿನ ತೊಂದರೆ ಇಲ್ಲ. ಜನ ಯಾವಾಗ ಬೇಕಾದರೂ ದಾಖಲೆಗಳನ್ನು ಪಡೆಯಬಹುದಾಗಿದೆ.

ಕಚೇರಿಗಳು, ಆಸ್ಪತ್ರೆಗಳಿಗೂ ...
ಗ್ರಾಮ ಪಂಚಾಯ್ತಿ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ, ಸರ್ಕಾರಿ ಶಾಲೆ, ರೈತ ಸಂಪರ್ಕ ಕೇಂದ್ರಗಳ ಮೇಲೆ ಸೋಲಾರ ಪ್ಯಾನಲ್‌ಗಳನ್ನು ಅಳವಡಿಸಲಾಗಿದೆ. ಇನ್‌ವರ್ಟರ್‌ ಕೂಡಿಸಲಾಗಿದೆ. ‘ಈ ಕಚೇರಿಗಳು ಸಂಪೂರ್ಣವಾಗಿ ಸೋಲಾರ್‌ ವಿದ್ಯುತ್‌ ಅವಲಂಬಿಸಿವೆ’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಭುವನೇಶ್ವರಿ ಶಿವನಗೌಡ್ರ.

ಗ್ರಾಮದಲ್ಲಿರುವ ಆರು ವೃತ್ತಗಳಲ್ಲಿ ದೊಡ್ಡದಾದ ಸೋಲಾರ್‌ ಲೈಟ್‌ಗಳನ್ನು ಅಳವಡಿಸಲಾಗಿದೆ. ಐದು ಅಂಗನವಾಡಿ, 21 ದೇವಸ್ಥಾನ, ಒಂದು ಮಸೀದಿ, ಒಂದು ಸಮುದಾಯ ಭವನ ಹಾಗೂ ಒಂದು ಜೈನ ಬಸಿದಿಗೂ ಸೋಲಾರ್‌ ಪ್ಯಾನೆಲ್‌ಗಳನ್ನು ಅಳವಡಿಸಿದ್ದಾರೆ. ಆರು ಕಡೆಗಳಲ್ಲಿ ಹೈಮಾಸ್ಟ್‌ ದೀಪಗಳನ್ನೂ ಸಹ ಅಳವಡಿಸಲಾಗಿದೆ.

‘ಗ್ರಾಮದ ಎಲ್ಲ ಮನೆಗಳಿಗೂ ಸೌರಶಕ್ತಿ ಸಂಪರ್ಕ ಕಲ್ಪಿಸಲಾಗಿದೆ. ನಾಲ್ಕು ತಿಂಗಳಿನಿಂದ ಗ್ರಾಮ ಪಂಚಾಯ್ತಿ ವಿದ್ಯುತ್‌ ಬಿಲ್‌ ಶೂನ್ಯವಾಗಿದೆ. ಮನೆಗಳಿಗೆ ಬರುತ್ತಿದ್ದ ಬಿಲ್‌ನಲ್ಲಿಯೂ ಅರ್ಧದಷ್ಟು ಕಡಿಮೆಯಾಗಿದೆ. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ ಅವರ ಪ್ರಯತ್ನದಿಂದ ನಮ್ಮೂರು ಸೋಲಾರ ಗ್ರಾಮವಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು.

‘ಮೂರು ವರ್ಷಗಳ ಕಾಲ ಸೆಲ್ಕೊ ಕಂಪನಿಯವರೇ ಈ ಸೌರಶಕ್ತಿ ಫಲಕಗಳು ಮತ್ತು ಚಾರ್ಜಿಂಗ್ ಉಪಕರಣಗಳನ್ನು ನಿರ್ವಹಣೆ ಮಾಡಲಿದ್ದಾರೆ. ಆದರೂ, ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಯಾಗಬಾರದು ಎನ್ನುವ ಮುಂದಾಲೋಚನೆಯಿಂದ ಗ್ರಾಮದ ಪ್ರತಿ ಮನೆಯಿಂದ ತಿಂಗಳಿಗೆ ₹20 ಸಂಗ್ರಹಿಸಲಾಗುತ್ತಿದೆ’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ಗುರುಪಾದಪ್ಪ ಶಿರೂರ.

ಪ್ರತಿ ಮನೆಗೆ ಸೋಲಾರ್ ವಿದ್ಯುತ್ ಅಳವಡಿಸಲು ₹18 ಸಾವಿರ ವೆಚ್ಚವಾಗಿದೆ. ಒಂದು ಮನೆಗೆ ಎರಡು ಲೈಟ್‌, ಮೊಬೈಲ್‌ ಚಾರ್ಜ್‌ಗೆ ಅವಕಾಶವಿದೆ. ಒಮ್ಮೆ ಪೂರ್ಣ ಚಾರ್ಜ್ ಆದರೆ ಆರು ಗಂಟೆ ಲೈಟ್‌ಗಳನ್ನು ಬಳಸಬಹುದಾಗಿದೆ ಎಂದು ಸೆಲ್ಕೊ ಸೋಲಾರ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಸುಬ್ರಾಯ ಹೆಗಡೆ ತಾಂತ್ರಿಕ ವಿವರಣೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.