ಬಿ.ಸರೋಜಾದೇವಿ
ಕಲೆ: ಗುರು ನಾವಳ್ಳಿ
ಹೆಚ್ಚು ಕಡಿಮೆ ಏಳು ದಶಕ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮೆರೆದ ಮಹಾನ್ ತಾರೆ ಬಿ.ಸರೋಜಾದೇವಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಹಲವು ಸವಾಲುಗಳನ್ನು ಮೆಟ್ಟಿ, ವಿಭಿನ್ನ ಪಾತ್ರಗಳಲ್ಲಿ ನಟಿಸಿ ಅಪಾರ ಜನಮನ್ನಣೆಯನ್ನೂ ಗಳಿಸಿಕೊಂಡಿದ್ದರು. ಇವರು ಈಗ ನಮ್ಮೊಂದಿಗಿಲ್ಲ. ಆದರೆ, ಅವರ ನೆನಪುಗಳು ಸದಾ ಹಸಿರು...
ಚಲನಚಿತ್ರ ಲೋಕದಲ್ಲಿ ಸಾಂಸ್ಕೃತಿಕ ವಿನಿಮಯ, ಕೊಡುಕೊಳ್ಳುವ ಸಂಸ್ಕೃತಿಯೊಂದಿದೆ. ಅದು ತಂತ್ರಜ್ಞಾನವಾಗಿರಬಹುದು, ನಿರ್ದೇಶಕರ ವಲಸೆಯಾಗಿರಬಹುದು, ಕತೆಗಳಾಗಿರಬಹುದು, ನಟ, ನಟಿಯರ ಪರಭಾಷಾ ವಲಸೆಯೂ ಆಗಿರಬಹುದು. ಸಿನಿಮಾ ಲೋಕ ಹೀಗೆ ರಾಜ್ಯ-ಭಾಷೆಗಳ ತಾರತಮ್ಯವಿಲ್ಲದೆ ಪ್ರತಿಭಾನ್ವೇಷಣೆಯ ಮೂಲಕ ಕಲಾವಿದರನ್ನು ಕೈಬೀಸಿ ಕರೆಯುತ್ತದೆ. ಕನ್ನಡ ಚಿತ್ರರಂಗದಲ್ಲಿ ಅಂಬೆಗಾಲಿಟ್ಟು ತಮಿಳು ಚಿತ್ರರಂಗದಲ್ಲಿ ದಾಪುಗಾಲು ಹಾಕಿದ ಬಿ.ಸರೋಜಾದೇವಿ ಅವರು, ಸಿನಿಮಾ ಜಗತ್ತಿನ ಸಾಂಸ್ಕೃತಿಕ ವಿನಿಮಯದ ಪ್ರತೀಕವಾಗಿಯೇ ಇದ್ದರು.
ಬಿ.ಸರೋಜಾದೇವಿ ಅವರು ಪಂಚಭಾಷಾ ತಾರೆಯಾಗಿದ್ದುದೂ, ತಮಿಳಿನಲ್ಲಿ ಅತ್ಯಧಿಕ ಬೇಡಿಕೆಯ ನಟಿಯಾಗಿದ್ದುದು ಪರಂಪರೆಯ ಹಾದಿಯಲ್ಲಿ ನಡೆದು ಬಂದಿರುವ ಸಿನಿಮಾ ಲೋಕದ ವಿದ್ಯಮಾನವೇ ಹೊರತು ಸರೋಜಾದೇವಿಯವರಿಗಾಗಿಯೇ ಸೃಷ್ಟಿಯಾದ ವಿಶೇಷ ಭೂಮಿಕೆಯಾಗಿರಲಿಲ್ಲ. ಕೆಲವರಿಗಷ್ಟೇ ಸಿಗಬಹುದಾದ ಅದ್ಭುತ ಅವಕಾಶಗಳನ್ನು ಅವರು ಸದುಪಯೋಗ ಮಾಡಿಕೊಂಡ ಕಾರಣದಿಂದಲೇ ಅವರು ಪದ್ಮಭೂಷಣದವರೆಗೆ ಬೆಳೆದರು.
ಪ್ರಸ್ತುತ ಸಿನಿಮಾ ಲೋಕದ ವಿದ್ಯಮಾನವನ್ನೇ ಗಮನಿಸಿ. ಕನ್ನಡದ ತಾರೆಯರು ಬೇರೆ ಭಾಷಾ ಚಿತ್ರರಂಗಕ್ಕೆ ತೆರಳಿ ಅಪಾರ ಜನಪ್ರಿಯತೆ ಪಡೆಯುತ್ತಾರೆ. ಅಂತಹ ವಿಶಾಲ ಅವಕಾಶ ಅಲ್ಲಿದೆ. ಸರೋಜಾದೇವಿಯವರು, ಚಿತ್ರರಂಗದಿಂದ ನಿವೃತ್ತರಾಗಿ ವಿಶ್ರಾಂತ ಜೀವನ ನಡೆಸುತ್ತಿರುವಾಗಲೇ ಕನ್ನಡದ ನಟಿ ರಶ್ಮಿಕಾ ಮಂದಣ್ಣ ತೆಲುಗು, ತಮಿಳು, ಹಿಂದಿ ಹೀಗೆ ಬೇರೆ ಭಾಷೆಗಳಲ್ಲಿ ಅತ್ಯಂತ ಜನಪ್ರಿಯತೆ ಪಡೆದು ‘ನ್ಯಾಷನಲ್ ಕ್ರಷ್’ ಎನಿಸಿಕೊಂಡು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕನ್ನಡದವರೇ ಆದ ಐಶ್ವರ್ಯ ರೈ ಹಿಂದಿ ಚಿತ್ರರಂಗದಲ್ಲಿ ನಂಬರ್ ಒನ್ ಸ್ಥಾನಕ್ಕೇರಿದರು. ದೀಪಿಕಾ ಪಡುಕೋಣೆ ಕೂಡ ಕನ್ನಡದ ಮೆಟ್ಟಿಲು ಹತ್ತಿ, ಹಿಂದಿ ಚಿತ್ರರಂಗಕ್ಕೆ ಜಿಗಿದವರು. ಹೀಗೆ ಸಾಲುಸಾಲಾಗಿ ಕನ್ನಡದಿಂದ ವಲಸೆ ಹೋದ ಪ್ರತಿಭೆಗಳು ಬೇರೆ ಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ದಕ್ಷಿಣ ಭಾರತದ ನಟಿಯರೆಂದರೆ ಹಿಂದಿ ಚಿತ್ರರಂಗದವರಿಗೆ ಬಲು ಪ್ರೀತಿ.
ಯಾರೇ ಶೋಮ್ಯಾನ್ ನಿರ್ದೇಶಕರಿದ್ದರೂ ಅವರು ತಮ್ಮ ಹೊಸ ಚಿತ್ರದ ನಾಯಕಿಯರಿಗಾಗಿ ತಲಾಷ್ ನಡೆಸುವುದು ಚೆನ್ನೈ, ಬೆಂಗಳೂರು, ಹೈದರಾಬಾದ್‌ಗಳಲ್ಲಿ. ವೈಜಯಂತಿಮಾಲಾ ಅವರು ರಾಜ್‌ಕಪೂರ್ ಅವರ ಶೋಧವಾಗಿ, ಹಿಂದಿಯಲ್ಲಿ ಸಾಮ್ರಾಜ್ಯವನ್ನು ಕಟ್ಟಿದರು. ಹೇಮಾಮಾಲಿನಿ ‘ಡ್ರೀಮ್ ಗರ್ಲ್’ ಎಂದೇ ಹೆಸರಾದರು. ನಲವತ್ತರ ದಶಕದಲ್ಲೇ ದೇವಿಕಾರಾಣಿ ಅವರನ್ನು ಭಾರತದ ನಂಬರ್ ವನ್ ಡ್ರೀಮ್ ಗರ್ಲ್ ಎಂದು ಕರೆಯುತ್ತಿದ್ದರು. ನಲವತ್ತರ ದಶಕದಲ್ಲಿ ದೇವಿಕಾ ಅತ್ಯಂತ ಜನಪ್ರಿಯರಾಗಿದ್ದರು.
ತಮಿಳಿನಲ್ಲಿ ಮಿಂಚಿದವರು:
ತಮಿಳುನಾಡಿಗೆ ಬಿ.ಸರೋಜಾದೇವಿ ಅವರು ಹೋಗಿ ನೆಲೆ ಊರುವ ಮುನ್ನವೇ ಅಲ್ಲಿ ಹೆಸರು ಮಾಡಿದ್ದ ಕನ್ನಡದ ಜನಪ್ರಿಯ ತಾರೆಯರಿದ್ದರು ಎನ್ನುವುದನ್ನೂ ಇತಿಹಾಸದ ಪುಟಗಳು ಹೇಳುತ್ತವೆ. ಕನ್ನಡದ ರಂಗಭೂಮಿಯ ಮೂಲಕ ಚಲನಚಿತ್ರರಂಗ ಪ್ರವೇಶಿಸಿದ್ದ ಎಂ.ವಿ.ರಾಜಮ್ಮ 1940 ರಲ್ಲೇ ‘ಗುಮಾಸ್ತವಿನ್‌ಪೆಣ್’ ಚಲನಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ತೆಲುಗು, ತಮಿಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಆ ಕಾಲಕ್ಕೇ ಅತ್ಯಂತ ಹೆಸರುವಾಸಿಯಾಗಿದ್ದರು. ನಟಿಯಾಗಿ, ನಿರ್ಮಾಪಕಿಯಾಗಿ ಅವರು ಖ್ಯಾತಿ ಗಳಿಸಿದ್ದರು. ಅವರು ಕನ್ನಡದ ಮೊದಲ ನಿರ್ಮಾಪಕಿ. ಸಂಸಾರ ನೌಕೆ (ಕನ್ನಡ), ಯೋಗಿ ವೇಮನ (ತೆಲುಗು), ಜ್ಞಾನ ಸುಂದರಿ (ತಮಿಳು) ಅವರ ಯಶಸ್ವಿ ಚಿತ್ರಗಳು. ತಮಿಳುನಾಡಿನಲ್ಲೇ ನೆಲೆಸಿ, ಎಂಜಿಆರ್, ಶಿವಾಜಿ ಗಣೇಶನ್ ಅವರ ತಾಯಿಯಾಗಿ ಅಭಿನಯಿಸಿದರು. ಕನ್ನಡದಲ್ಲೂ ರಾಜಕುಮಾರ್ ಅವರ ತಾಯಿಯಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.
ಬಿ.ಜಯಮ್ಮನವರು ಕೂಡ ಆ ಕಾಲದಲ್ಲಿ ಅತ್ಯಂತ ಜನಪ್ರಿಯ ಬಹುಭಾಷಾ ನಟಿಯಾಗಿದ್ದರು. ಟಿ.ಆರ್.ರಾಜಕುಮಾರಿ ಅವರನ್ನು ದಕ್ಷಿಣ ಭಾರತದ ಡ್ರೀಮ್‌ಗರ್ಲ್ ಎಂದೇ ಕರೆಯುತ್ತಿದ್ದರು. ತ್ಯಾಗರಾಜ ಭಾಗವತ ಅವರೊಂದಿಗೆ ನಾಯಕಿಯಾಗಿ ರಾಜಕುಮಾರಿ ಅಭಿನಯಿಸಿದ ‘ಹರಿದಾಸ’ ಚಲನಚಿತ್ರ ಸತತವಾಗಿ 114 ವಾರಗಳ ಕಾಲ ಪ್ರದರ್ಶನಗೊಂಡು ದಾಖಲೆ ಸೃಷ್ಟಿಸಿದೆ. ರಾಜಕುಮಾರಿ ಎಂಜಿಆರ್ ಜೋಡಿಯಾಗಿ ಅಭಿನಯಿಸಿದ ‘ಗುಲೇಬಕಾವಲಿ’ (1955) ಅತ್ಯಂತ ಜನಪ್ರಿಯವಾಯಿತು. ಬಿ.ಸರೋಜಾದೇವಿ ಅವರು ಅದೇ ವರ್ಷ ಕಚದೇವಯಾನಿಯಲ್ಲಿ ಸಣ್ಣ ಪಾತ್ರವಹಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಕನ್ನಡದಲ್ಲಿ ಮಹಾಕವಿ ಕಾಳಿದಾಸ ಚಲನಚಿತ್ರ ನಿರ್ಮಿಸಲು ಹೊನ್ನಪ್ಪ ಭಾಗವತರ್ ಅವರು ನಟಿಯ ಶೋಧದಲ್ಲಿದ್ದರು. ಆಗ ಬಿ.ಸರೋಜಾದೇವಿ ಅವರ ಕಣ್ಣಿಗೆ ಬಿದ್ದರು. ಸಾಮಾನ್ಯವಾಗಿ ನಾಯಕಿಯರ ಶೋಧದಲ್ಲಿರುವ ನಿರ್ದೇಶಕರು, ನಟರು ಸ್ಟುಡಿಯೊಗಳಿಗೆ ಹೋಗಿ ನಟಿಯರನ್ನು ಭೇಟಿಯಾಗುವುದು ಪ್ರತೀತಿ. ಮೈಸೂರಿನ ನವಜ್ಯೋತಿ ಸ್ಟುಡಿಯೊದಲ್ಲಿ ‘ಶ್ರೀರಾಮ ಪೂಜಾ’ ಸೆಟ್‌ನಲ್ಲಿ ಬಿ.ಸರೋಜಾದೇವಿ ಅವರು ಹೊನ್ನಪ್ಪ ಭಾಗವತರ್ ಅವರ ಕಣ್ಣಿಗೆ ಬಿದ್ದರು. ಅಲ್ಲೇ ಕಾಳಿದಾಸ ಚಿತ್ರದ ನಾಯಕಿಯಾಗಿ ಆಯ್ಕೆಯಾದರು.
ಎಂಜಿಆರ್ ಜೊತೆ 26 ಚಿತ್ರಗಳಲ್ಲಿ ನಾಯಕಿ!:
ಎಂಜಿಆರ್ ಅವರಿಗೆ ಸರೋಜಾದೇವಿ ಕಂಡದ್ದು ಎಲ್ಲಿ ಎಂದು ವಿವರಿಸಿದರೆ, ಅದು ಹೊನ್ನಪ್ಪ ಭಾಗವತರ್ ಅವರ ಕತೆಯನ್ನೇ ಪುನರಾವರ್ತಿಸಿದಂತಾಗಬಹುದು. ನ್ಯೂಟೋನ್ ಸ್ಟುಡಿಯೊದಲ್ಲಿ ಕಚದೇವಯಾನಿ ಶೂಟಿಂಗ್ ನಡೆಯುತ್ತಿತ್ತು. ಸರೋಜಾದೇವಿ-ಕೆ.ಎಸ್.ಅಶ್ವತ್ಥ್ ಅಭಿನಯಿಸುತ್ತಿದ್ದರು. ಅಕಸ್ಮಾತ್ ಎಂಜಿಆರ್ ಅಲ್ಲಿಗೆ ಬಂದರು. ನಾಯಕಿಯ ಹುಡುಕಾಟದಲ್ಲಿದ್ದವರಿಗೆ ನಾಯಕಿಯೇ ಸಿಕ್ಕಂತಾಯಿತು. ಅದರ ಫಲವೇ ಎಂಜಿಆರ್ ಅವರೇ ನಿರ್ದೇಶಿಸಿ, ನಾಯಕರಾಗಿದ್ದ ‘ನಾಡೋಡಿ ಮನ್ನನ್’ ಚಿತ್ರಕ್ಕೆ ನಾಯಕಿಯಾಗಿ ಸರೋಜಾದೇವಿ ಆಯ್ಕೆಯಾದರು. ನಾಡೋಡಿ ಮನ್ನನ್ ಯಶಸ್ಸು, ಎಂಜಿಆರ್ ಅವರ ಚಿತ್ರರಂಗದ ದಿಕ್ಕನ್ನೇ ಬದಲಿಸಿತು. ಎಂಜಿಆರ್ ಜೊತೆಯಾಗಿ 26 ಚಿತ್ರಗಳಲ್ಲಿ ನಾಯಕಿಯಾಗಿ ಮೆರೆಯುವುದಕ್ಕೆ ಇದೊಂದು ದಿಕ್ಸೂಚಿಯಾಯಿತು. 1965 ರ ನಂತರ ತಮಿಳಿನಲ್ಲಿ ನಿರಂತರ ಹಿಟ್ ಚಿತ್ರಗಳಲ್ಲಿ ಅಭಿನಯಿಸುವ ಮುನ್ನವೆ ಕನ್ನಡದಲ್ಲಿ ಸರೋಜಾದೇವಿ ಮಹಾಕವಿ ಕಾಳಿದಾಸ, ಕಚದೇವಯಾನಿ, ಕೋಕಿಲವಾಣಿ, ಪಂಚರತ್ನ, ಚಿಂತಾಮಣಿ, ರತ್ನಗಿರಿ ರಹಸ್ಯ, ಸ್ಕೂಲ್ ಮಾಸ್ಟರ್, ಭೂಕೈಲಾಸ, ಅಣ್ಣ ತಂಗಿ, ಜಗಜ್ಯೋತಿ ಬಸವೇಶ್ವರ, ಕಿತ್ತೂರು ಚೆನ್ನಮ್ಮ ಮೊದಲಾದ ಚಿತ್ರಗಳ ಮೂಲಕ ಜನಪ್ರಿಯರಾಗಿದ್ದರು.ಕನ್ನಡದ ಮೊದಲ ಬಣ್ಣದ ಸಿನಿಮಾ ‘ಅಮರಶಿಲ್ಪಿ ಜಕಣಾಚಾರಿ’ಯ ನಾಯಕಿಯಾಗಿ 1964ರಲ್ಲಿ ಕಾಣಿಸಿಕೊಂಡರು.
ಕುರಾಶಿ ಮನೆಪಾಠ...
ಐವತ್ತು, ಅರವತ್ತರ ದಶಕದ ತಾರೆಯರ ದೊಡ್ಡ ಸಮಸ್ಯೆಯೆಂದರೆ ಸಹಜಾಭಿನಯದ ಕೊರತೆ. ಸರೋಜಾದೇವಿ ಅವರ ಕತೆ ಬೇರೆ ಅಲ್ಲ, ಅವರದೂ ನಾಟಕೀಯ ಅಭಿನಯ. ಸಂಭಾಷಣೆಯದು ಕೃತಕ ಶೈಲಿ. ಚನ್ನಪಟ್ಟಣದ ಬಳಿಯ ದಶಾವರ ಗ್ರಾಮದವರಾದ ಸರೋಜಾದೇವಿ ಹಳ್ಳಿಯ ಶೈಲಿಯಲ್ಲಿ ಮಾತನಾಡುತ್ತಿದ್ದರು. ಹೀಗಾಗಿ ‘ಅಣ್ಣ ತಂಗಿ’ ಇಂದಿಗೂ ಅದ್ಭುತವಾಗಿದೆ. ‘ಮಹಾಕವಿ ಕಾಳಿದಾಸ’ ಚಿತ್ರಕ್ಕೆ ಆಯ್ಕೆ ಮಾಡಿದ ಹೊನ್ನಪ್ಪ ಭಾಗವತರ್ ಅವರು, ಚಿತ್ರ ಸಾಹಿತಿ ಕು.ರಾ.ಸೀತಾರಾಮಶಾಸ್ತ್ರೀ ಅವರನ್ನು ಸರೋಜಾದೇವಿಗೆ ಕನ್ನಡ ಕಲಿಸಲು ನೇಮಿಸಿದರು. ಅಭಿನಯ, ಸಂಭಾಷಣೆಯಲ್ಲಿನ ಉಚ್ಚಾರ, ಶಬ್ದದ ಏರಿಳಿತಗಳು ಹೀಗೆ ಅಭಿನಯದ ಎಲ್ಲ ಸೂಕ್ಷ್ಮಗಳನ್ನು ಕುರಾಸೀ ಅವರ ಮನೆಪಾಠದ ಮೂಲಕ ಸರೋಜಾದೇವಿ ಅವರಿಗೆ ಕಲಿಸಿದರು. ಆದರೂ ಸರೋಜಾದೇವಿ ಅವರ ಬಹಳಷ್ಟು ಸಿನಿಮಾಗಳು ಅವರ ಕೃತಕ, ನಾಟಕೀಯ ಸಂಭಾಷಣೆಯನ್ನು ಒಪ್ಪಿಸುವ ಭಾರದಿಂದ ನಲುಗಿವೆ. ಈ ಸಹಜತೆ ಇಲ್ಲದ ಕಾರಣದಿಂದಲೇ ಸರೋಜಾದೇವಿ ಅವರು ಹಿಂದಿ ಚಿತ್ರರಂಗದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ. ಮಲಯಾಳಂ ಚಿತ್ರರಂಗ ಪ್ರವೇಶಿಸಲೂ ಸಾಧ್ಯವಾಗಲಿಲ್ಲ.
ತಮಿಳಿನಲ್ಲಿ ಪ್ರೇಕ್ಷಕರು ಸದಾ ಬಿ.ಸರೋಜಾದೇವಿ ಅವರನ್ನು ನೆನಪಿಸಿಕೊಳ್ಳಲು ಅಲ್ಲಿನ ನಾಯಕರ ಪ್ರಭಾವವೂ ಇದೆ. ತಮಿಳುನಾಡಿನಲ್ಲಿ ಎಂಜಿಆರ್ ಎಂದರೆ ಇಂದಿಗೂ ಪ್ರೇಕ್ಷಕರಿಗೆ ಏನೋ ಪುಳಕ. ಎಂಗವೀಟ್ಟು ಪಿಳ್ಳೈ, ಅನ್ಬೇವಾ,ತಿರುಡಾದೆ, ಪಡಕೋಟಿ ಮೊದಲಾದ ಚಿತ್ರಗಳನ್ನು ಪದೇ ಪದೇ ವೀಕ್ಷಿಸಲು ಇಷ್ಟಪಡುವ ಅಭಿಮಾನಿಗಳು ಸದಾ ಸರೋಜಾದೇವಿ ಅವರನ್ನು ಸ್ಮರಿಸುತ್ತಲೇ ಇರುತ್ತಾರೆ. ಕನ್ನಡ ಪ್ರೇಕ್ಷಕರೂ ಚಾರಿತ್ರಿಕ ಚಿತ್ರ ಎನ್ನುವ ಕಾರಣದಿಂದ ಕಿತ್ತೂರು ಚೆನ್ನಮ್ಮ, ರಾಜ್‌ಕುಮಾರ್ ಅವರೊಂದಿಗೆ ಅಭಿನಯಿಸಿರುವ ಭಾಗ್ಯವಂತರು, ಮಲ್ಲಮ್ಮನ ಪವಾಡ ಚಿತ್ರಗಳಲ್ಲಿ ಸರೋಜಾದೇವಿ ಅವರ ಅಭಿನಯವನ್ನು ನೆನಪಿಸಿಕೊಳ್ಳುತ್ತಾರೆ. ಪುಟ್ಟಣ್ಣ ಕಣಗಾಲ್ ಅವರ ‘ಕಥಾಸಂಗಮ’ ಚಿತ್ರದಲ್ಲಿನ ‘ಅತಿಥಿ’ ಚಿತ್ರದ ಹಾಸ್ಟೆಲ್ ವಾರ್ಡನ್ ಯಾರಿಗೆ ನೆನಪಿಲ್ಲ. ಜಕಣಾಚಾರಿ ಚಿತ್ರದ ಪಾತ್ರ ಕೂಡ ಬಣ್ಣದಲ್ಲಿ ಅತ್ಯಾಕರ್ಷಕ. ಎಂಜಿಆರ್‌ಗೂ ಶಿವಾಜಿ ಗಣೇಶನ್ ಅವರ ಜೊತೆ ಸರೋಜಾದೇವಿ ಅವರು ಅಭಿನಯಿಸಿರುವ ಚಿತ್ರಗಳು ಗಮನಸೆಳೆಯುವಂತಿವೆ. ‘ಪಾಲುಂ ಪಳಮುಂ’ ಚಿತ್ರದಲ್ಲಿ ಸರೋಜಾದೇವಿ ನನಗಿಂತಲೂ ಚೆನ್ನಾಗಿ ಅಭಿನಯಿಸಿದ್ದಾರೆ ಎಂದು ಶಿವಾಜಿ ಗಣೇಶನ್ ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ. ನಟನೆಯಲ್ಲಿ ಎತ್ತರದಲ್ಲಿದ್ದವರ ಮುಂದೆ ಅಭಿನಯಿಸುವುದೇ ಸರೋಜಾದೇವಿ ಅವರಿಗೆ ಒಂದು ಸವಾಲಾಗಿತ್ತು. ಸಾಮಾನ್ಯವಾಗಿ ಜನಪ್ರಿಯ ನಟನಟಿಯರ ಅಭಿನಯವನ್ನು ಹೊಸಬರು ಅನುಕರಿಸುವುದನ್ನು ಕಂಡಿದ್ದೇವೆ. ಕಲ್ಪನಾ, ಮಂಜುಳಾ, ಮಾಲಾಶ್ರೀ, ಸಾಧನಾ, ಮಾಧುರಿ, ಶ್ರೀದೇವಿ ಅವರ ಅಭಿನಯವನ್ನು ಕಾಪಿ ಮಾಡುವ ನಟಿಯರೂ ಇದ್ದಾರೆ. ಆದರೆ ಇದುವರೆಗೆ ಸರೋಜಾದೇವಿಯವರ ಅಭಿನಯವನ್ನು ಅನುಕರಿಸಿದವರನ್ನು ನಾವು ನೋಡಿಲ್ಲ.
69 ವರ್ಷ ಚಿತ್ರರಂಗದಲ್ಲಿದ್ದರೂ ಸರೋಜಾದೇವಿ ಅವರಿಗೆ ಸ್ಟುಡಿಯೊ ಸ್ಥಾಪಿಸಬೇಕೆಂಬ, ಚಿತ್ರರಂಗಕ್ಕೆ ನೆರವಾಗುವ ಏನಾದರೂ ಯೋಜನೆಗಳನ್ನು ಮಾಡಬೇಕೆಂಬ ಹಂಬಲ ಬರಲೇ ಇಲ್ಲ. ಉದ್ಯಮಶೀಲರಾಗುವ ಎಲ್ಲ ಅವಕಾಶಗಳು ಅವರಿಗಿತ್ತು. ಸರೋಜಾದೇವಿಯವರು ದಂತ ಗೋಪುರದಲ್ಲೇ ಜೀವಿತಾವಧಿಯನ್ನು ಕಳೆದರು. ಸಭೆ ಸಮಾರಂಭಗಳಿಂದ ದೂರು ಉಳಿಯುತ್ತಿದ್ದರು. ಅದು ಅವರ ಜನಪ್ರಿಯತೆಯ ಅತ್ಯಂತ ಎತ್ತರದಲ್ಲಿದ್ದ ಕಾಲದ ಮನೋಭಾವ. ಅವರು ಆಗ ದಿನಕ್ಕೆ 20 ಗಂಟೆಗಳ ಕಾಲ ಶೂಟಿಂಗ್‌ನಲ್ಲಿ ಬಿಜಿಯಾಗಿರುತ್ತಿದ್ದರಂತೆ. ಆ ಎತ್ತರಕ್ಕೆ ಏರಿ ಇಳಿದವರು ಕೊನೆಗಾಲದಲ್ಲಿ ಸಾವಿತ್ರಿ ಅವರಂತೆ, ಮೀನಾಕುಮಾರಿ ಅವರಂತೆ ದುರಂತದ ಜೀವನ ಕಂಡಿರುವುದನ್ನು ನೋಡಿದ್ದೇವೆ. ಆದರೆ ಬಿ.ಸರೋಜಾದೇವಿ ಅವರದು ಸಂತೃಪ್ತ ಬದುಕು. ಕೊನೆ ದಿನಗಳವರೆಗೂ ಅವರು ಸಂತೋಷವಾಗಿಯೇ ದಿನಗಳನ್ನು ಕಳೆದರು. ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಕಾರ್ಯಕ್ರಮದಲ್ಲಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದ ಸಂದರ್ಭದಲ್ಲಿ ‘ಇನ್ನು ಸಾಕು, ಅಭಿನಯ ಮಾಡುವುದಿಲ್ಲ’ ಎಂದು ಹೇಳಿಯೇ ತೆರೆಮರೆಗೆ ಸಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.