ಚಿತ್ರಗಳು ಮಾತನಾಡುತ್ತವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಚಿತ್ರಗಳು ಒಬ್ಬ ವ್ಯಕ್ತಿ, ಒಂದು ಸಮುದಾಯ, ಒಂದು ಸಂಸ್ಕೃತಿ ಮತ್ತು ಪರಂಪರೆಯ ಹಿಂದಿನ ಸಾವಿರಾರು ಕಥೆಗಳನ್ನು, ಭಾವನೆಗಳನ್ನು ಜೀವಂತವನ್ನಾಗಿಸುವ ಕೆಲಸವನ್ನು ಮಾಡುವ ಮಾಧ್ಯಮವಾಗಿವೆ.
ಖಾಲಿಗೋಡೆ ಮೇಲೆ ಎರಡು ಬಣ್ಣಗಳ ಸಮ್ಮಿಲನದಿಂದ ಮೂಡಿ ಬರುವ ಸುಂದರ ಕಥಾಹಂದರವುಳ್ಳ ಕಲಾಕೃತಿಯು ನೋಡುಗರ ಕಣ್ಮನ ಸೆಳೆದಾಗ ಅದನ್ನು ಆಸ್ವಾದಿಸುವ ಪರಿಯೇ ಸೊಗಸಾದದ್ದು. ಅದೊಂದು ವರ್ಣನಾತೀತವಾದ ಅನುಭವಕ್ಕೆ ಸಮ. ಅಂತಹ ಸುಂದರ ಅನುಭವ ನೀಡುವಂತಹ ಒಂದು ಜನಪದ ವರ್ಣಚಿತ್ರಕಲೆಯೇ ವರ್ಲಿ ಕಲೆ. ಈ ಕಲಾ ಪ್ರಕಾರವನ್ನು ಬಹುತೇಕರು ನೋಡಿರಬಹುದು, ನೋಡಿ ಮೆಚ್ಚಿರಲೂಬಹುದು.
ವರ್ಲಿ ಎಂಬುದು ಒಂದು ಬುಡಕಟ್ಟು ಜನಾಂಗ. ಮಹಾರಾಷ್ಟ್ರದ ಥಾಣೆ ಮತ್ತು ಪಾಲ್ಘರ್ ಜಿಲ್ಲೆಗಳ ಪಶ್ಚಿಮ ಘಟ್ಟಗಳಲ್ಲಿ ವಾಸಿಸುವ ಸ್ಥಳೀಯ ಜನರ ಗುಂಪಾಗಿದೆ. ವರ್ಲಿ ಎಂದರೆ ‘ಒಂದು ತುಂಡು ಭೂಮಿ’ ಎಂದರ್ಥ. ಈ ಕಲೆಯು ಬುಡಕಟ್ಟು ಜನಾಂಗದ ಪ್ರಕೃತಿ ಮತ್ತು ಕಾಡಿನೊಂದಿಗೆ ಸಹಬಾಳ್ವೆಯಿಂದ ಪ್ರೇರಿತವಾಗಿದೆ. ಇದು ಹತ್ತನೇ ಶತಮಾನ ಅಥವಾ ಅದಕ್ಕಿಂತ ಮೊದಲು ಹುಟ್ಟಿಕೊಂಡ ಭಾರತದ ಅತ್ಯಂತ ಮಹತ್ವದ ವರ್ಣಚಿತ್ರ ಕಲೆಗಳಲ್ಲಿ ಒಂದಾಗಿದೆ.
ಜೀವ್ಯಾ ಸೋಮ ಮಾಶೆ
ಈ ಕಲೆಯನ್ನು ಆಧುನಿಕ ಜಗತ್ತಿಗೆ ಹೆಚ್ಚು ಹತ್ತಿರವಾಗುವಂತೆ ಮಾಡಿದ ಕೀರ್ತಿ ‘ಜೀವ್ಯಾ ಸೋಮ ಮಾಶೆ’ಗೆ ಸಲ್ಲುತ್ತದೆ. ಅವರು 1970ರ ದಶಕದಲ್ಲಿ ಚಿತ್ರಿಸಲು ಪ್ರಾರಂಭಿಸಿದಾಗ ಈ ಜನಪದ ಕಲೆಯು ಬೇರೆಯದೇ ತಿರುವನ್ನು ಪಡೆದುಕೊಂಡಿತು. ಅವರು ತಮ್ಮ ಬುಡಕಟ್ಟು ಸಂಸ್ಕೃತಿ, ಸಂಪ್ರದಾಯ ಮತ್ತು ಪರಿಸರದೊಂದಿಗೆ ಆಳವಾಗಿ ಸಂಪರ್ಕ ಹೊಂದಿರುವ ವಿವಿಧ ಅಂಶಗಳನ್ನು ಥೀಮ್ ಮೂಲಕ ಜೀವ ತುಂಬಲು ಚಿತ್ರದ ಹಿನ್ನೆಲೆಗಾಗಿ ಕಂದುಮಣ್ಣಿನ ಬಣ್ಣವನ್ನು ಹಾಗೂ ಅದರ ಮೇಲೆ ಚುಕ್ಕೆ ಅಥವಾ ಸಪೂರ ಗೆರೆಗಳ ಮೂಲಕ ಚಿತ್ರ ಬಿಡಿಸಲು ಬಿಳಿಬಣ್ಣವನ್ನು ಬಳಸಿದರು. ಹಾಗಾಗಿ ಇವೆರಡು ಬಣ್ಣಗಳು ವರ್ಲಿ ವರ್ಣಚಿತ್ರಕ್ಕೆ ಜೀವಾಳ. ಜೀವ್ಯಾ ಅವರನ್ನು ವರ್ಲಿ ಚಿತ್ರಕಲೆಯ ಆಧುನಿಕ ಪಿತಾಮಹ ಎಂದು ಕರೆಯಲಾಗುತ್ತದೆ. ಅವರ ಈ ಸಾಧನೆಗೆ 2011ರಲ್ಲಿ ಪದ್ಮಶ್ರೀ ಗೌರವ ಸಂದಿದೆ.
ವರ್ಲಿ ವರ್ಣಚಿತ್ರಕಲೆ ಈಗ ಶಾಲೆ, ಗ್ರಂಥಾಲಯ, ಆಸ್ಪತ್ರೆ, ಸರ್ಕಾರಿ ಕಚೇರಿ ಗೋಡೆ, ದೇವಸ್ಥಾನ, ಮದುವೆ ಮನೆ, ಬಸ್ ನಿಲ್ದಾಣ, ಪಾರ್ಕ್, ರಸ್ತೆಬದಿ ಗೋಡೆ ಹಾಗೂ ಬಹುತೇಕ ಮನೆಗಳ ಹೊರ ಮತ್ತು ಒಳಾಂಗಣದ ವಿನ್ಯಾಸದಲ್ಲಿ ಅನಾವರಣಗೊಂಡಿರುವುದನ್ನು ಕಾಣಬಹುದು. ಕೆಲವು ಮಹಾನಗರ ಪಾಲಿಕೆ, ಪುರಸಭೆಗಳು ತಮ್ಮ ನಗರಗಳ ಸೌಂದರ್ಯ ಹೆಚ್ಚಿಸುವ ದೃಷ್ಟಿಯಿಂದ ಪ್ರಮುಖ ಬೀದಿಗಳ ಗೋಡೆಗಳನ್ನು ಈ ಕಲೆಯಿಂದ ಕಂಗೊಳಿಸುವಂತೆ ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಅಷ್ಟೇ ಅಲ್ಲದೇ ಮದುವೆಯ ಕರೆಯೋಲೆ, ಭಿತ್ತಿಚಿತ್ರಗಳು, ಆಮಂತ್ರಣ ಪತ್ರಿಕೆ ಹಾಗೂ ಸಭೆ ಸಮಾರಂಭಗಳ ವೇದಿಕೆಯ ಹಿಂಭಾಗದ ಅಲಂಕಾರದಲ್ಲೂ ಈ ಸುಂದರ ವರ್ಲಿ ಕಲೆ ಬಿತ್ತರಗೊಳ್ಳುತ್ತಿದೆ.
ವರ್ಲಿ ಕಲೆಯಲ್ಲಿ ಧಾರ್ಮಿಕ ಚಿತ್ರಕಲೆ, ಆಚರಣೆಯ ವರ್ಣಚಿತ್ರ, ನೈಸರ್ಗಿಕ ಪ್ರಪಂಚದ ವರ್ಣಚಿತ್ರ, ಜ್ಯಾಮಿತೀಯ ವರ್ಣಚಿತ್ರ, ಸಾಮಾಜಿಕ ವ್ಯಾಖ್ಯಾನದ ವರ್ಣಚಿತ್ರಗಳು ಎಂಬ ವಿಧಗಳಿವೆ. ಬುಡಕಟ್ಟು ಜನಾಂಗದ ಕಲಾವಿದರು ಚಿತ್ರಿಸುವ ಥೀಮ್‌ಗಳಲ್ಲಿ ಮುಖ್ಯವಾಗಿ ಬುಡಕಟ್ಟು ಜನಾಂಗದವರ ನೃತ್ಯ, ಬೇಟೆಯಾಡುವ ದೃಶ್ಯ, ಪಕ್ಷಿ ಪ್ರಾಣಿ ಮತ್ತು ಕೀಟ, ಕಾಡಿನ ಜನ ಜೀವನದ ಚಿತ್ರಣ, ಮದುವೆಯ ಮೆರವಣಿಗೆ, ಜಾತ್ರೆ, ಭತ್ತ ಕುಟ್ಟುವ ದೃಶ್ಯ, ತೊಟ್ಟಿಲು ತೂಗುವ, ಬಿತ್ತನೆ ಮಾಡುವ, ಸುಗ್ಗಿ ಹಬ್ಬ, ದಸರಾ ವೈಭವದಂತಹ ಸಾಂಸ್ಕೃತಿಕ ಆಚರಣೆಗಳ ಚಿತ್ರಗಳು ಹೆಚ್ಚು ಪ್ರಚಲಿತವಾಗಿದೆ.
ನಮ್ಮ ಕರುನಾಡಿನ ಮಲೆನಾಡಿನ ದೀವರೂ ಎಂಬ ಆದಿಮ ಸಮುದಾಯದ ಹಸೆ ಚಿತ್ತಾರವೆಂಬ ಕಲಾ ಪ್ರಕಾರವೊಂದು ಹೇಗೆ ಆ ಭಾಗದಲ್ಲಿ ಹಾಸು ಹೊಕ್ಕಾಗಿದೆಯೋ, ಅಂತೆಯೇ ವರ್ಲಿ ವರ್ಣಚಿತ್ರಕಲೆಯೂ ದೇಶಾದ್ಯಂತ ವ್ಯಾಪಕವಾಗಿ ಆಕರ್ಷಿಸುತ್ತಿದೆ. ಆಧುನಿಕ ಜಗತ್ತಿನ ನೂರಾರು ತಂತ್ರಜ್ಞಾನಾಧಾರಿತ ಕಲಾ ಪ್ರಕಾರಗಳ ನಡುವೆಯೂ ಜನಪದ ಸೊಗಡಿನ ಸಾವಿರಾರು ಕಥೆಗಳನ್ನು, ನೋಡುಗರಿಗೆ ತನ್ನದೇ ಕಲಾಶೈಲಿಯ ಮೂಲಕ ತಲುಪಿಸುತ್ತದೆ. ವರ್ಲಿ ವರ್ಣಚಿತ್ರಕಲೆಯು ಇಂದು ಹೊಸದೊಂದು ಟ್ರೆಂಡ್ ಹುಟ್ಟು ಹಾಕುತ್ತಿದೆ. ಹೀಗೆ ಹೊಸಕಾಲದ ಹೊಸ ಅಗತ್ಯಕ್ಕೆ ತಕ್ಕಂತೆ ಬದಲಾಗುತ್ತ, ಬಾಳುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.