ಇಡೀ ದೇಶದಲ್ಲಿ ಮೊದಲ ಸ್ವತಂತ್ರ ಗ್ರಾಮವೆಂದು ಘೋಷಿಸಿಕೊಂಡು ಗಮನ ಸೆಳೆದ ಶಿವಮೊಗ್ಗ ಜಿಲ್ಲೆಯ ಈಸೂರು ಚಳವಳಿ ನಡೆದು 84 ವರ್ಷವಾಯಿತು. ಅದರ ಸ್ಮರಣಾರ್ಥ ಇದೇ ಜನವರಿ 29 ಮತ್ತು 30 ರಂದು ಹುತಾತ್ಮರ ದಿನದಂದು ಗ್ರಾಮದಲ್ಲಿ ಸರ್ವೋದಯ ಮಂಡಲದ ರಾಷ್ಟ್ರೀಯ ಸಮ್ಮೇಳನ ನಡೆಯುತ್ತಿದೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಈಸೂರು ದೇಶದಲ್ಲಿ ಹೆಸರು ಮಾಡಿದ ಗ್ರಾಮ. ಬ್ರಿಟಿಷರ ವಿರುದ್ಧ ಹೋರಾಡಿ, ಪ್ರಥಮ ಸ್ವತಂತ್ರ ಗ್ರಾಮವೆಂದು ಘೋಷಿಸಿಕೊಂಡ ಹಿರಿಮೆ ಇದರದ್ದು. ಇದು ಕಲಿಗಳ ಬೀಡಾಗಿತ್ತು. ಆದ್ದರಿಂದಲೇ ‘ಏಸೂರು ಕೊಟ್ಟರೂ, ಈಸೂರು ಬಿಡೆವು’ ಎಂಬ ಗಾದೆ ಈ ಭಾಗದಲ್ಲಿ ಜನಜನಿತವಾಗಿತ್ತು. ಅಂತಹ ಸಮೃದ್ಧ ಮತ್ತು ವೀರರ ಬೀಡು ಈ ಗ್ರಾಮ.
ಇಡೀ ಗ್ರಾಮದ ಜನರು ಸ್ವಾತಂತ್ಯ ಚಳವಳಿಯಲ್ಲಿ ಪಾಲ್ಗೊಂಡ ಕೀರ್ತಿಗೆ ಪಾತ್ರವಾದ ಈಸೂರನ್ನು, ವೀರಪುತ್ರರ ನಾಡೆಂದು ಗುರುತಿಸುತ್ತಿದ್ದರು. 1942ಕ್ಕಿಂತ ಮೊದಲೇ ಇಲ್ಲಿನ ಪ್ರತಿಯೊಂದು ಮನೆಯವರೂ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡವರೇ. ಈ ಕಾರಣಕ್ಕಾಗಿ ದೇಶದ ಗಮನ ಸೆಳೆದ ಈ ಗ್ರಾಮದ ಕಥೆಯೇ ರೋಚಕ...
1942 ಸೆಪ್ಟೆಂಬರ್ 25 ಗ್ರಾಮದ ವೀರಭದ್ರಸ್ವಾಮಿ ದೇವಾಲಯದ ಮೇಲೆ ತ್ರಿವರ್ಣಧ್ವಜ ಹಾರಿಸಿ ತಮ್ಮ ಗ್ರಾಮ ಸ್ವತಂತ್ರ, ತಾವು ಯಾರಿಗೂ ಗುಲಾಮರಲ್ಲ ಎಂದು ಘೋಷಿಸಲಾಯಿತು. ಸರ್ಕಾರಕ್ಕೆ ಯಾವ ತೆರಿಗೆಯನ್ನೂ ಕಟ್ಟದೆ ಅಸಹಕಾರ ಚಳವಳಿಯಲ್ಲಿ ಪಾಲ್ಗೊಂಡರು. ಗಾಂಧೀಜಿಯ ಅಪ್ಪಟ ಅನುಯಾಯಿಗಳಾಗಿ, ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚನ್ನು ಹೆಚ್ಚಿಸಿದರು.
1942 ರ ಸೆಪ್ಟೆಂಬರ್ 28 ರಂದು, ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಗ್ರಾಮದ ವೀರ ಹೋರಾಟಗಾರರು ಸಕ್ರಿಯವಾಗಿ ಭಾಗವಹಿಸಿದರು. ಇಡೀ ಗ್ರಾಮವೇ ಚಳವಳಿಗೆ ಧುಮುಕಿತು. ಗ್ರಾಮದಲ್ಲಿ ತಮ್ಮದೇ ಅಧಿಕಾರಿಗಳನ್ನು ನೇಮಿಸಿಕೊಂಡು ಗ್ರಾಮವನ್ನು ಸ್ವತಂತ್ರ ಗ್ರಾಮವೆಂದು ಘೋಷಿಸಿಕೊಂಡರು. ಆಡಳಿತ ಮಾಡಲು ಹದಿನಾಲ್ಕು ವರ್ಷದ ಜಯಣ್ಣನನ್ನು ಅಮಲ್ದಾರನನ್ನಾಗಿ, ಪೋಲಿಸ್ ಸಬ್ ಇನ್‌ಸ್ಪೆಕ್ಟರ್ ಆಗಿ ಮಲ್ಲಣ್ಣ ಅವರನ್ನು ನೇಮಕ ಮಾಡಿಕೊಂಡರು. ಸಾಹುಕಾರ್ ಬಸವಣ್ಣೆಪ್ಪನವರಂತೂ ಕಂದಾಯ ವಸೂಲಿಗೆ ಗ್ರಾಮಕ್ಕೆ ಬಂದಿದ್ದ ಶಾನುಭೋಗ ಮತ್ತು ಕುಲಕರ್ಣಿಯ ಕೈಲಿದ್ದ ಕಂದಾಯ ಪುಸ್ತಕವನ್ನೇ ಕಸಿದುಕೊಂಡು ಬೆಂಕಿಗೆ ಹಾಕಿದರು. ಅವರಿಗೆ ಗಾಂಧಿ ಟೋಪಿ ಹಾಕಿಕೊಳ್ಳಲು ತಾಕೀತು ಮಾಡಿದರು. ಅವರಿಬ್ಬರು ಶಿಕಾರಿಪುರಕ್ಕೆ ಓಡಿಹೋಗಿ ಘಟನೆಯ ವಿವರಗಳನ್ನು ಅಮಲ್ದಾರರಿಗೆ ವರದಿ ಮಾಡಿದರು.
ಬ್ರಿಟಿಷ್ ಸರ್ಕಾರ ಸುಮ್ಮನಿರಲಿಲ್ಲ. ಇವರ ದಂಗೆಯನ್ನು ಅಡಗಿಸಲು ತಹಶೀಲ್ದಾರ್ ಚನ್ನಕೃಷ್ಣಯ್ಯ ಮತ್ತು ಸಬ್ ಇನ್‌ಸ್ಪೆಕ್ಟರ್ ಕೆಂಚೇಗೌಡರ ನೇತೃತ್ವದಲ್ಲಿ ಪೋಲಿಸರನ್ನು ಕಳಿಸಿತು. ಈ ಸಂದರ್ಭದಲ್ಲಿ ಬ್ರಿಟಿಷ್ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ತೀವ್ರ ಸಂಘರ್ಷ ನಡೆಯಿತು. ಈ ಗಲಭೆಯಲ್ಲಿ ಅಮಲ್ದಾರ ಮತ್ತು ಸಬ್ ಇನ್‌ಸ್ಪೆಕ್ಟರ್ ಇಬ್ಬರನ್ನೂ ಜನಗಳ ಗುಂಪು ಹತ್ಯೆ ಮಾಡಿತು. ಇದನ್ನು ಕಂಡ ಬ್ರಿಟಿಷ್ ಸರ್ಕಾರ ಕೆರಳಿ, ಹೆಚ್ಚಿನ ಪೋಲಿಸ್ ತುಕಡಿಯನ್ನು ಈಸೂರಿಗೆ ಕಳುಹಿಸಿಕೊಟ್ಟಿತು. ಪೋಲಿಸರ ಲಾಠಿ ಪ್ರಹಾರ ಮತ್ತು ಗೋಲಿಬಾರ್‌ನಿಂದ ವಿಚಲಿತರಾದ ಅನೇಕರು ಊರು ಬಿಟ್ಟು ಪರಾರಿಯಾದರು. ಬ್ರಿಟಷ್ ಅಧಿಕಾರಿಗಳು ಗುಂಡು ಹಾರಿಸಿದ್ದರಿಂದ ಗ್ರಾಮದ ಮೂವರು ಹುತಾತ್ಮರಾದರು. ಮನೆಗಳಿಗೆ ಬೆಂಕಿ ಹಚ್ಚಿ, ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಿ, ಬ್ರಿಟಿಷರು ದಬ್ಬಾಳಿಕೆ ಮಾಡಿದರು. ದೊಂಬಿಗೆ ಸಂಬಂಧಿಸಿದಂತೆ ಅನೇಕರನ್ನು ಬಂಧಿಸಲಾಯಿತು. ಬಹುತೇಕರು ಕಾಡಿಗೆ ಪಲಾಯನ ಮಾಡಿ ತಲೆಮರೆಸಿಕೊಂಡರು. ಬಸವಣ್ಣಪ್ಪ ಮತ್ತು ಎ.ಹಾಲಪ್ಪ ಭೂಗತರಾಗಿದ್ದುಕೊಂಡೇ ಕ್ರಾಂತಿಕಾರಿಗಳಿಗೆ ನೆರವಾಗುತ್ತಿದ್ದರು.
ಆಗ ಬಂಧಿತರಾದ ಗ್ರಾಮದ 50 ಜನರನ್ನು ಬೆಂಗಳೂರು ಮತ್ತು ಶಿವಮೊಗ್ಗ ಜೈಲಿನಲ್ಲಿಟ್ಟು ವಿಚಾರಣೆಗೆ ಗುರಿಪಡಿಸಲಾಯಿತು. ಅವರಲ್ಲಿ ಅನೇಕರನ್ನು ನಿರಪರಾಧಿಗಳೆಂದು ನ್ಯಾಯಾಲಯ ಬಿಡುಗಡೆ ಮಾಡಿತು. ಉಳಿದವರಲ್ಲಿ ಗೌಡರ ಶಂಕರಪ್ಪ, ಬಡಕಳ್ಳಿ ಹಾಲಪ್ಪ, ಕೆ.ಮಲ್ಲಪ್ಪ, ಕೆ.ಗುರಪ್ಪ ಮತ್ತು ಸೂರ್ಯ ನಾರಾಯಣಾಚಾರ್ ಅವರಿಗೆ ಮರಣದಂಡನೆ ವಿಧಿಸಿ, ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ 1943ರಲ್ಲಿ ನೇಣುಗಂಬಕ್ಕೇರಿಸಲಾಯಿತು. ಇತರರಿಗೆ ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಯಿತು. ಹೀಗೆ ದೇಶಕ್ಕಾಗಿ ಪ್ರಾಣ ನೀಡಿ ಹುತಾತ್ಮರಾದ ಅವರ ಹೆಸರು ದೇಶದ ಸ್ವಾತಂತ್ರ್ಯದ ಇತಿಹಾಸದಲ್ಲಿ ದಾಖಲಾಗಿ, ಅಜರಾಮರವಾಗಿದೆ. ಈಗ ಅವರ ಸ್ಮರಣಾರ್ಥ ಈಸೂರಿನಲ್ಲಿ ಸ್ಮಾರಕವಿದೆ.
ಶೌರ್ಯಕ್ಕೆ, ಮಹಾಕ್ರಾಂತಿಗೆ ಹೆಸರಾದ ಶಿವಮೊಗ್ಗ ಜಿಲ್ಲೆಯ ಈಸೂರು ಬ್ರಿಟಿಷ್ ಸರ್ಕಾರವನ್ನೇ ನಡುಗಿಸಿದ್ದು ಸಾಮಾನ್ಯ ವಿಷಯವಲ್ಲ. ಇಲ್ಲಿನ ಜನ ಬ್ರಿಟಿಷರ ವಿರುದ್ಧ ಹೋರಾಡಿ, ಕಾದಾಡಿ, ಮನೆ ಮಠಗಳನ್ನು ಕಳೆದುಕೊಂಡು, ಕೊನೆಗೆ ಐವರ ಬಲಿದಾನವನ್ನೂ ಮಾಡಿ ವೀರಪುತ್ರರ ನಾಡು ಎಂದು ಕರೆಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.