‘ಚಿಣ್ಣರ ಬಿಂಬ’ದ ಸಾಂಸ್ಕೃತಿಕ ಕಾರ್ಯಕ್ರವೊಂದರಲ್ಲಿ ಮಕ್ಕಳ ಪ್ರತಿಭಾ ಪ್ರದರ್ಶನ
ಚಿಣ್ಣರಬಿಂಬವು ಮುಂಬೈನಲ್ಲಿ ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳೇ ನಡೆಸುವ ಒಂದು ವಿಶಿಷ್ಟ ಸಂಸ್ಥೆ. ಒಂದು ವಿಶ್ವವಿದ್ಯಾಲಯ, ಒಂದು ಅಕಾಡೆಮಿ ಮಾಡಬಹುದಾದ ಕಾರ್ಯವನ್ನು ಇದರ ರೂವಾರಿ ಪ್ರಕಾಶ್ ಭಂಡಾರಿ ಅವರು ಮಾಡಿ ತೋರಿಸಿದ್ದಾರೆ. ಚಿಣ್ಣರಬಿಂಬದ ಮೂಲಕ ಸುಮಾರು ಏಳು ಸಾವಿರ ಮಕ್ಕಳು ಕನ್ನಡ ಕಲಿಕೆಯಲ್ಲಿ ನಿರತರಾಗಿರುವುದು ಉಲ್ಲೇಖನೀಯ.
ಮುಂಬೈ ಮಹಾನಗರ ಹಾಗೂ ಉಪನಗರಗಳಲ್ಲಿ ಸುಮಾರು ಹದಿನೆಂಟು-ಇಪ್ಪತ್ತು ಲಕ್ಷ ಕನ್ನಡಿಗರು ನೆಲೆಸಿದ್ದಾರೆ. ಇಲ್ಲಿರುವ ಎಂಬತ್ತು ಪ್ರತಿಶತ ಹೋಟೆಲ್‌ಗಳು ಕನ್ನಡಿಗರದ್ದು ಎಂಬುದು ಅಭಿಮಾನದ ಸಂಗತಿ. ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಬಿಟ್ಟರೆ ಅತಿ ಹೆಚ್ಚು ಕನ್ನಡಿಗರಿರುವ ಮಹಾನಗರವಿದು. ಮುಂಬೈನಲ್ಲಿ ನೂರಾರು ಕನ್ನಡ ಸಂಘ-ಸಂಸ್ಥೆಗಳು ಕನ್ನಡ ಪರಿಚಾರಿಕೆಯಲ್ಲಿ ನಿರತವಾಗಿವೆ. ಈ ಮಹಾನಗರದಲ್ಲಿ ಹೊಸ ಪೀಳಿಗೆ ಕನ್ನಡದಿಂದ ದೂರ ಸರಿಯಬಹುದಾದ ಕಾಲಘಟ್ಟದಲ್ಲಿ ಭಾಷೆಯ ಬಲವರ್ಧನೆಗೆ ಟೊಂಕಕಟ್ಟಿ ನಿಂತ ಸಂಸ್ಥೆ ‘ಚಿಣ್ಣರಬಿಂಬ’. ಮುಂಬೈ ಕನ್ನಡಿಗರ ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳೇ ನಡೆಸುವ ಒಂದು ವಿಶಿಷ್ಟ ಸಾಂಸ್ಕೃತಿಕ ಸಂಸ್ಥೆ ಇದು. ‘ಕಲಾಜಗತ್ತು’ ಮುಂಬೈನ ಪ್ರಸಿದ್ಧ ನಾಟಕ ತಂಡಗಳಲ್ಲಿ ಒಂದು. ಅದರ ರೂವಾರಿ ನಟ–ನಾಟಕಕಾರ ವಿಜಯಕುಮಾರ್ ಶೆಟ್ಟಿ. ‘ಕಲಾಜಗತ್ತಿ’ನ ಇನ್ನೊಂದು ಮುಖ್ಯ ಅಂಗ ಈ ‘ಚಿಣ್ಣರಬಿಂಬ’. 2003ರಲ್ಲಿ ‘ಚಿಣ್ಣರಬಿಂಬ’ ಅಸ್ತಿತ್ವಕ್ಕೆ ಬಂದಿತು. ಮಕ್ಕಳ ಸರ್ವತೋಮುಖ ಅಭಿವೃದ್ಧಿ, ವಿಕಾಸದ ದೃಷ್ಟಿಯಿಂದ ಇಪ್ಪತ್ತು ವರ್ಷಗಳಲ್ಲಿ ‘ಚಿಣ್ಣರಬಿಂಬ’ ಬೃಹತ್ ಸಂಸ್ಥೆಯಾಗಿ ಬೆಳೆದಿದೆ. ಈ ಸಂಸ್ಥೆಯಲ್ಲಿ ಈಗ ಏಳು ಸಾವಿರಕ್ಕೂ ಹೆಚ್ಚು ಮಕ್ಕಳು ಹೆಸರು ನೋಂದಣಿ ಮಾಡಿಕೊಂಡು ವಿಭಿನ್ನ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಮುಂಬೈ ಮಹಾನಗರ, ಉಪನಗರಗಳಲ್ಲಿ ಇದರ ಇಪ್ಪತ್ತೇಳು ಶಾಖೆಗಳಿವೆ. 7ರಿಂದ 14 ವರ್ಷದವರೆಗಿನ ಕರ್ನಾಟಕ ಮೂಲದ ಮಕ್ಕಳು ಯಾವುದೇ ತಾರತಮ್ಯವಿಲ್ಲದೆ ಪ್ರವೇಶ ಪಡೆಯಬಹುದು.
ಕಲೆ, ಸಾಹಿತ್ಯ, ಸಂಸ್ಕೃತಿ, ಭಾಷೆ ಹೀಗೆ ಮಗುವಿನ ಬಾಳಿಗೆ ಬೆಳಕಾಗಬಲ್ಲ ಯೋಗ್ಯ ಮಾರ್ಗದರ್ಶನ ನೀಡಿ, ಪ್ರತಿಭೆಯನ್ನು ಗುರುತಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಕೇವಲ ಐವತ್ತು ಮಕ್ಕಳೊಂದಿಗೆ ಆರಂಭವಾದ ಚಿಣ್ಣರಬಿಂಬ ಇಂದು ಸಾವಿರಾರು ಮಕ್ಕಳಿಗೆ ತಮ್ಮ ಪ್ರತಿಭೆ, ಕೌಶಲ ಅಭಿವ್ಯಕ್ತಗೊಳಿಸಲು ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ.
ಯಕ್ಷಗಾನ, ಭಜನೆ, ಭೂತಾರಾಧನೆ, ಜಾನಪದ ಕಲೆ, ರಂಗೋಲಿ, ನೃತ್ಯ, ಪುಷ್ಪ ಶೃಂಗಾರ, ನಾಟಕ, ಗ್ರಾಮೀಣ ಕ್ರೀಡೆ ಹೀಗೆ ವೈವಿಧ್ಯಮಯ ಶಿಬಿರಗಳ ಮೂಲಕ ಮಕ್ಕಳಲ್ಲಿ ಉತ್ತಮ ಜೀವನಮೌಲ್ಯಗಳ ಬಗೆಗೆ ಅರಿವು ಮೂಡಿಸಲಾಗುತ್ತಿದೆ. ರಜಾದಿನಗಳಲ್ಲಿ ‘ಚಿಣ್ಣರಬಿಂಬ’ ನಡೆಸಿಕೊಂಡು ಬರುತ್ತಿರುವ ವಿಭಿನ್ನ ಬಗೆಯ ಶಿಬಿರ, ಕಮ್ಮಟಗಳಿಂದ ಎಳೆಯ ಮಕ್ಕಳ ಬುದ್ಧಿ, ಹೃದಯಗಳು ಅರಳಲು ಅವಕಾಶ ದೊರಕಿದೆ. ಮಕ್ಕಳಲ್ಲಿ ಭಯ, ಸಭಾಕಂಪನ, ಅನಾಥಪ್ರಜ್ಞೆ, ಏಕಾಕಿತನಗಳು ಕಾಣೆಯಾಗಿ ಸ್ನೇಹ, ಸಹಕಾರ, ಖುಷಿ ಗರಿಗೆದರಿದೆ ಎಂಬುದು ‘ಚಿಣ್ಣರಬಿಂಬ’ದ ಪಾಲಕರು ಕಂಡುಕೊಂಡ ಸತ್ಯ.
‘ಚಿಣ್ಣರಬಿಂಬ’ವು ಮುಂಬೈ ಮಹಾನಗರದಲ್ಲಿ ಸಾವಿರಾರು ಮಕ್ಕಳಿಗೆ ಕನ್ನಡದ ದೀಕ್ಷೆಯನ್ನು ನೀಡಿದೆ. ಕಳೆದ ಅನೇಕ ವರ್ಷಗಳಿಂದ ತನ್ನದೇ ಆದ ಕನ್ನಡ ಕಲಿಕಾ ಪಠ್ಯವನ್ನು ಸಿದ್ಧಪಡಿಸಿಕೊಂಡು ನುರಿತ ಶಿಕ್ಷಕರಿಂದ ಕನ್ನಡ ಕಲಿಸುವ ಯೋಜನೆಯನ್ನು ಶಿಸ್ತುಬದ್ಧವಾಗಿ ನಡೆಸಿಕೊಂಡು ಬರುತ್ತಿದೆ. ಈ ಮೂಲಕ ಮುಂಬೈ ಮಹಾನಗರದಲ್ಲಿ ಆಂಗ್ಲ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳಿಗೆ ಕನ್ನಡ-ಕರ್ನಾಟಕ ಸಂಸ್ಕೃತಿಯ ಭವ್ಯ ಪರಂಪರೆಯನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿದೆ.
ರೂವಾರಿ ಪ್ರಕಾಶ್ ಭಂಡಾರಿ: ವೃತ್ತಿಯಲ್ಲಿ ಪ್ರಕಾಶ್ ಭಂಡಾರಿ ಹಿರಿಯ ಪೊಲೀಸ್ ಅಧಿಕಾರಿ. ಅವರ ಪ್ರವೃತ್ತಿ ಸಂಸ್ಕೃತಿ ಪ್ರಸಾರ, ನುಡಿಸೇವೆ. ಮಹಾರಾಷ್ಟ್ರ ಸರ್ಕಾರದ ಗುಪ್ತಚರ ಇಲಾಖೆಯಲ್ಲಿ ಉನ್ನತ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಅವರದು ಬಹುಮುಖ ಪ್ರತಿಭೆ. ಅವರು ‘ಚಿಣ್ಣರಬಿಂಬ’ದ ಕುಲಪತಿ. ಮಕ್ಕಳ ಪ್ರಗತಿಗೆ ಅವರು ಪಟ್ಟ ಪರಿಶ್ರಮ, ನಡೆಸಿದ ಹೋರಾಟ, ಮಾಡಿದ ತ್ಯಾಗ ಮುಂಬೈ ಕನ್ನಡಿಗರಿಗೆ ಗೊತ್ತಿದೆ. ಅವರ ಇಡೀ ಕುಟುಂಬವೇ ಈ ಸಂಸ್ಥೆಯ ಏಳಿಗೆಗೆ ಟೊಂಕಕಟ್ಟಿ ನಿಂತಿದೆ. ಅವರ ಪುತ್ರಿ ಪೂಜಾ ಭಂಡಾರಿ ‘ಚಿಣ್ಣರಬಿಂಬ’ದ ಸ್ಥಾಪಕ ಅಧ್ಯಕ್ಷೆಯಾಗಿದ್ದರು. ಕಿರಿಯ ಮಗಳು ನಯನಾ ಭಂಡಾರಿ ಕಾರ್ಯಾಧ್ಯಕ್ಷೆಯಾಗಿ ಸತತವಾಗಿ ಕೆಲಸ ಮಾಡಿದ್ದಾರೆ. ಪ್ರಕಾಶ್ ಭಂಡಾರಿ ಅವರ ಪತ್ನಿ ರೇಣುಕಾ ಭಂಡಾರಿ ಅವರೂ ಚಿಣ್ಣರ ಶ್ರೇಯೋಭಿವೃದ್ಧಿ ಚಟುವಟಿಕೆಯಲ್ಲಿ ತೊಡಗಿರುವುದು ಅನುಕರಣೀಯ.
‘ಚಿಣ್ಣರಬಿಂಬ’ದ ಕನ್ನಡ ಸರ್ಟಿಫಿಕೇಟ್ ಕೋರ್ಸ್ ಮಾನ್ಯತೆ ನೀಡುವಂತೆ ಪ್ರಕಾಶ್ ಭಂಡಾರಿ ಅವರು ಕೋರುತ್ತಲೇ ಇದ್ದಾರೆ. ಅವರ ಮನವಿಗೆ ಕರ್ನಾಟಕ ಸರ್ಕಾರ ಈವರೆಗೆ ಸ್ಪಂದಿಸಿಲ್ಲ. ಬಾಲವಿಕಾಸ ಅಕಾಡೆಮಿಯೊಂದು ಮಾಡಬಹುದಾದ ಕೆಲಸಗಳನ್ನು ಈ ಸಂಸ್ಥೆ ಮಾಡುತ್ತಿರುವುದಂತೂ ಶ್ಲಾಘನೀಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.