
ಕರ್ನಾಟಕ ಲೇಖಕಿಯರ ಸಂಘದ ನೂತನ ಅಧ್ಯಕ್ಷೆಯಾಗಿ ಆರ್. ಸುನಂದಮ್ಮ ಆಯ್ಕೆಯಾಗಿದ್ದಾರೆ. ಸಂಘಟನೆ, ಸಂಶೋಧನೆ, ಚಳವಳಿಯ ನೆಲೆಯಲ್ಲಿ ಮಹಿಳಾ ಅಧ್ಯಯನದ ತಾತ್ವಿಕತೆಯನ್ನು ಗುರುತಿಸುವ ಅವರು, ವರ್ಗೀಕೃತ ಮಹಿಳೆಯರಲ್ಲಿ ಸಮಗ್ರತೆಯ ರೂಪು ನೀಡುವ ಅಗತ್ಯವನ್ನು ‘ಭಾನುವಾರದ ಪುರವಣಿ’ ಜೊತೆ ಹಂಚಿಕೊಂಡಿದ್ದಾರೆ.
‘ಕಲೇಸಂ’ ಅಧ್ಯಕ್ಷೆಯಾಗಿ ಅವಲೋಕನ ಮಾಡಿದಾಗ ಗಮನಕ್ಕೆ ಬಂದ ಸಂಗತಿಗಳು ಏನು?
ಸಂಸ್ಥೆಗೆ 47 ವರ್ಷ ತುಂಬಿದೆ. ಒಂದು ರೂಮಿನ ಮನೆಯೇ ಕಚೇರಿ. ಸಾಕಷ್ಟು ಪುಸ್ತಕಗಳು ಇವೆ. ವ್ಯವಸ್ಥಿತ ಗ್ರಂಥಾಲಯ ಆಗಬೇಕಿದೆ. ಕಾರ್ಯಚಟುವಟಿಕೆಗಳ ನಿರ್ವಹಣೆಗೆ ಸಿಬ್ಬಂದಿ ಇಲ್ಲ. ದತ್ತಿ ಪ್ರಶಸ್ತಿ ಕೊಡುವ ಜವಾಬ್ದಾರಿ ಇದೆ. ಅನ್ಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳನ್ನು ಮಾಡಿದೆ. ‘ಲೇಖ ಲೋಕ’ದ ಒಂಬತ್ತು ಆವೃತ್ತಿಯನ್ನು ಪೂರ್ಣಗೊಳಿಸಿದೆ. 8–9 ಆವೃತ್ತಿಗಳ ಪ್ರಕಟಣೆ ಬಾಕಿ ಇದೆ. ಲೇಖಕಿಯರ ಸಮ್ಮೇಳನ ಮಾಡಿದೆ. ಸಂಘವನ್ನು ಸದೃಢವಾಗಿ ಕಟ್ಟಬೇಕಿದೆ. ಸರ್ಕಾರದ ಅನುದಾನದ ನಿರೀಕ್ಷೆಯಲ್ಲಿದ್ದೇವೆ.
ಯುವ ಲೇಖಕಿಯರ ದೃಷ್ಟಿಯಲ್ಲಿ ಸಂಘದ ಯೋಜನೆಗಳೇನು?
ಉದಯೋನ್ಮುಖ ಲೇಖಕಿಯರಿಗೆ ಒಳ್ಳೆಯ ವೇದಿಕೆ ಇದಾಗಬೇಕು. ಹೊಸ ಸವಾಲನ್ನು ಎದುರಿಸುತ್ತಾ ನಮ್ಮ ಅನುಭವಗಳನ್ನು ವ್ಯಕ್ತಪಡಿಸುವ ಸಾಧ್ಯತೆಗಳ ಬಗ್ಗೆ ಕಾರ್ಯಾಗಾರಗಳನ್ನು ಹೆಚ್ಚು ಮಾಡಬೇಕಿದೆ. ಕಾವ್ಯ–ಕಥಾ, ನಾಟಕ, ವಿಚಾರ ಕಮ್ಮಟಗಳನ್ನು ಏರ್ಪಡಿಸಬೇಕಿದೆ. ಸೈದ್ಧಾಂತಿಕವಾಗಿ ಸ್ತ್ರೀವಾದಿ ಚಿಂತನೆಯನ್ನು ಲೇಖಕಿಯರಲ್ಲಿ ಗಟ್ಟಿಗೊಳಿಸಬೇಕು. ರಾಜ್ಯ ವ್ಯಾಪಿ ಸಂಘದ ಚಟುವಟಿಕೆಯನ್ನು ವಿಸ್ತರಿಸಬೇಕು. ಅವರಿಗಾಗಿ ಕಾರ್ಯಕ್ರಮ ರೂಪಿಸಬೇಕು ಎನ್ನುವುದು ನಮ್ಮ ಇಚ್ಛೆ.
ತಾಯಂದಿರ ಮರಣ ಅನುಪಾತ ಪ್ರಮಾಣಕ್ಕೆ ಸಂಬಂಧಿಸಿದಂತೆ ಸಂಘ ಏನು ಮಾಡಬಹುದು?
ತಾಯಂದಿರ ಮರಣ ಪ್ರಮಾಣ ದಕ್ಷಿಣ ಭಾರತ ರಾಜ್ಯಗಳಲ್ಲಿ ಕರ್ನಾಟಕದಲ್ಲಿ ಹೆಚ್ಚಿದೆ. ಕಾರಣ ಶಿಕ್ಷಿತ ಮಹಿಳೆಯರ ಪ್ರಮಾಣ. ಅಕ್ಷರ ಬಲ್ಲವರನ್ನೆಲ್ಲ ಶಿಕ್ಷಿತರು ಎಂದು ಗುರುತಿಸುವುದು ಬೇರೆ. ಒಂದು ಪುಸ್ತಕವನ್ನು ಓದಿ ಸ್ವತಂತ್ರವಾಗಿ ವಿವೇಚಿಸುವುದು ಬೇರೆ. ಅಕ್ಷರ ಕಲಿತರೆ ಸಾಕ್ಷರತೆ ಅಲ್ಲ. ಈ ನಿಟ್ಟಿನಲ್ಲಿ ಲೇಖಕಿಯರ ಸಂಘ ಕೆಲಸ ಮಾಡುತ್ತದೆ. ಮಹಿಳಾ ಅಧ್ಯಯನವನ್ನು ಪಠ್ಯದಲ್ಲಿ ಅಳವಡಿಸಬೇಕು. ಅದರ ಅನುಷ್ಠಾನಕ್ಕೆ ನಮ್ಮ ಸಂಘ ಸರ್ಕಾರವನ್ನು ಒತ್ತಾಯಿಸಲಿದೆ. ಸಾಮಾಜಿಕ ಸಂರಚನೆಯಲ್ಲಿ ಬದಲಾವಣೆ ಬರಬೇಕು. ಮಾಧ್ಯಮಿಕ ಮತ್ತು ಪ್ರೌಢಶಾಲೆಯ ಹಂತದಲ್ಲಿ ಲಿಂಗತ್ವದ ಬಗ್ಗೆ ಸರಿಯಾದ ತಿಳಿವಳಿಕೆಯನ್ನು ಮೂಡಿಸಬೇಕು. ‘ಸಮತಾ ಅಧ್ಯಯನ ಕೇಂದ್ರ’ದ ಮೂಲಕ ನಾವೂ ಆ ಪ್ರಯತ್ನ ಮಾಡಿದ್ದೇವೆ. ಇದು ಸಮಾಜದ ಎಲ್ಲರ ಜವಾಬ್ದಾರಿ.
ವಿಜ್ಞಾನ ವಿದ್ಯಾರ್ಥಿನಿಯಾದ ನಿಮಗೆ ಸಾಹಿತ್ಯದ ಒಲವು ಮೂಡಿದ್ದು ಹೇಗೆ?
ನನಗೆ ಓದುವ ಹಂಬಲ ಇತ್ತು. ಎಂಎಸ್‌ಸಿಗೆ ಸೀಟು ಸಿಗಲಿಲ್ಲ. ಆಗ ಎಲ್‌ಎಲ್‌ಬಿ ಸೇರುವ ಆಸೆ ಇತ್ತು. ತಂದೆಗೆ ಅದು ಇಷ್ಟ ಇರಲಿಲ್ಲ. ಬೆಂಗಳೂರು ವಿವಿಯಲ್ಲಿ ಕನ್ನಡ ಎಂಎಗೆ ಭಾಷಾ ಅಧ್ಯಯನಕ್ಕೂ ಅವಕಾಶ ಇದ್ದಿದ್ದರಿಂದ ಅರ್ಜಿ ಹಾಕಿದೆ. ಆಗ ಜಿ.ಎಸ್.ಶಿವರುದ್ರಪ್ಪ ಪ್ರಾಧ್ಯಾಪಕರಾಗಿದ್ದರು. ದಲಿತ ಬಂಡಾಯ ಚಳವಳಿ ಉತ್ತುಂಗದಲ್ಲಿತ್ತು. ಅದು ನಮ್ಮ ಯೋಚನೆಗೆ ಸ್ಪಷ್ಟತೆಯನ್ನು ನೀಡಿತು. ಮೊದಲ ಯತ್ನದಲ್ಲಿಯೇ ಎನ್‌ಇಟಿ ಪರೀಕ್ಷೆಯಲ್ಲಿ ಸಂಶೋಧನಾ ಫೇಲೊಷಿಪ್ ಅರ್ಹತೆ ಪಡೆದೆ. ಮೈಸೂರಿನಲ್ಲಿ ಸಂಶೋಧನೆ ಮಾಡಿದೆ. ಅಲ್ಲೇ ಸಂಶೋಧಕ ಸಹಾಯಕಿಯಾಗಿ ಕೆಲಸಕ್ಕೆ ಸೇರಿದೆ. ಆಗಲೇ ವಿಜಯ ದಬ್ಬೆ ಅವರ ಮೂಲಕ ಲೇಖಕಿಯರ ಸಂಘದ ಜೊತೆ ಸಂಬಂಧ ಬೆಳೆಯಿತು. ಮಹಿಳೆಯರ ಸಬಲೀಕರಣ ಚಟುವಟಿಕೆ, ಚಳವಳಿ, ಸಾಹಿತ್ಯ ಒಟ್ಟಿಗೆ ಸಾಗಿಬಂತು.
ಸಂಘ–ಸಂಸ್ಥೆಗಳು ಪಾರದರ್ಶಕತೆಯನ್ನು ಹೇಗೆ ಕಾಪಾಡಬೇಕು?
‘ಕರ್ನಾಟಕ ಮಹಿಳಾ ದೌರ್ಜನ್ಯ ಒಕ್ಕೂಟ’ದಲ್ಲಿಯೂ ಸಕ್ರಿಯವಾಗಿದ್ದೇನೆ. ಅದು ನೋಂದಾಯಿತ ಸಂಸ್ಥೆಯಲ್ಲ. ಜನರಿಂದಲೇ ಹಣ ಸಂಗ್ರಹಿಸುತ್ತೇವೆ. ಲೆಕ್ಕ ಕೊಡುವ ಅಗತ್ಯ ಇಲ್ಲ. ಆದರೂ ನಮ್ಮ ನಡುವೆ ಖರ್ಚು ವೆಚ್ಚ ಕಾಣುವಂತೆ ಇರುತ್ತದೆ. ಸಂಗ್ರಹ ಖರ್ಚು ಉಳಿಕೆಯ ವಿವರವನ್ನು ಪ್ರತಿ ಕಾರ್ಯಕ್ರಮದ ನಂತರ ಕೊಡುತ್ತೇವೆ. ಇಲ್ಲೂ ಅಷ್ಟೇ. ಇರುವ ಸಂಪನ್ಮೂಲವನ್ನು ಕಾರ್ಯಕಾರಿ ಸಮಿತಿಯ ಗಮನಕ್ಕೆ ತರಬೇಕು. ಸಮಿತಿಯ ಅನುಮತಿ ತೆಗೆದುಕೊಳ್ಳಬೇಕಾಗುತ್ತದೆ. ಕಾರ್ಯಕ್ರಮದ ಖರ್ಚು ವೆಚ್ಚದ ಅಂದಾಜು ಮಾಡುವುದೂ ಪಾರದರ್ಶಕತೆ. ಕಾರ್ಯಕಾರಿ ಸಮಿತಿ ಸಮ್ಮುಖದಲ್ಲಿಯೇ ಎಲ್ಲ ಕಾರ್ಯಸ್ವರೂಪ ನೆರವೇರುತ್ತದೆ. ನಮ್ಮಲ್ಲಿ ದತ್ತಿ ಪ್ರಶಸ್ತಿಗಳು ಇವೆ. ಅದಕ್ಕೆ ಸಮಿತಿಯನ್ನು ಮಾಡುತ್ತೇವೆ. ಅದಕ್ಕೆ ಲಿಖಿತ ಸೂಚನೆಗಳು ಇವೆ. ಅದನ್ನು ಪಾಲಿಸುತ್ತೇವೆ.
ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಮಹಿಳಾ ಪ್ರಾತಿನಿಧ್ಯದ ಬಗ್ಗೆ ಏನು ಹೇಳುತ್ತೀರಿ?
ಸ್ಥಳೀಯ ಸಂಸ್ಥೆಗಳ ಮಾದರಿಯಲ್ಲೇ ವಿಧಾನಸಭೆ–ಲೋಕಸಭೆಯಲ್ಲಿ ಮೀಸಲು ನಿರೀಕ್ಷೆ ಇದೆ. ಎಂತಹ ಮಹಿಳೆಯರಿಗೆ ರಾಜಕೀಯ ಪಕ್ಷಗಳು ಆದ್ಯತೆ ಕೊಡುತ್ತವೆ ಎನ್ನುವ ಪ್ರಶ್ನೆ ಕಾಡುತ್ತದೆ. ರಾಜಕೀಯ ಶಕ್ತಿಯಾಗಿ ಮಹಿಳೆ ಯೋಚಿಸಬೇಕು. ನಮ್ಮ ಪ್ರತಿ ಪ್ರತಿಕ್ರಿಯೆ ಕೂಡ ರಾಜಕೀಯ. ನಮ್ಮ ಮನೆಯೊಳಗಿನಿಂದ ಸಮಾಜದ ಎಲ್ಲ ಹಂತವೂ ರಾಜಕೀಯ ಇರುವುದು ಮನವರಿಕೆ ಆಗಬೇಕು. ಈ ನಿಟ್ಟಿನಲ್ಲಿ ನಿರಂತರ ಚರ್ಚೆಗಳನ್ನು ನಾವು ಮಾಡಿದ್ದೇವೆ. ಪಂಚಾಯತ್ ರಾಜ್‌ನಲ್ಲಿ ಮಹಿಳೆಯರ ಪ್ರಾತಿನಿಧ್ಯದ ಬಗ್ಗೆ ಅಧ್ಯಯನವನ್ನೂ ಮಾಡಿದ್ದೇವೆ. ಮನೆ ಮತ್ತು ಸಮಾಜವನ್ನು ಸಮತೋಲನ ಮಾಡುವ ಶಕ್ತಿ ಆಕೆಗೆ ಬರಬೇಕಿದೆ ಎಂದು ಅರಿತಿದ್ದೇನೆ. ಆ ಬದಲಾವಣೆ ಕುಟುಂಬದಿಂದಲೇ ಆಗಬೇಕು.
ನಿಮ್ಮ ಆಶಯ ಅನುಷ್ಠಾನಕ್ಕೆ ಎದುರಾಗುವ ಸವಾಲುಗಳು...
ಸಂಪನ್ಮೂಲದ ಕೊರತೆ ತುಂಬ ಇದೆ. ಅದನ್ನು ಹೊಂದಿಸಿಕೊಳ್ಳಬೇಕಿದೆ. ಸಹಯೋಗದ ಕಾರ್ಯಕ್ರಮ ಮಾಡುವ ಉತ್ಸಾಹ ನಮ್ಮಲ್ಲಿ ಇದೆ. ಸ್ಥಳದ ಅಗತ್ಯ ಇದೆ. ಪ್ರಶಸ್ತಿ ಪ್ರದಾನ ಮಾಡುವುದರಿಂದ ಆಚೆ ಬೇರೆ ಇನ್ನೇನಾದರೂ ಮಾಡಬೇಕಿದೆ. ಆರ್ಥಿಕ ಮಿತಿಯನ್ನು ಮೀರಲು ಸಾಧ್ಯ ಎನ್ನುವುದನ್ನು ನೋಡಬೇಕಿದೆ. ಲೇಖಕಿಯರನ್ನು ಭಿನ್ನವಾಗಿ ಬೆಳೆಸಬೇಕು. ಸೈದ್ಧಾಂತಿಕ ಅರಿವು ಮೂಡಿಸುವ ಕೆಲಸವೂ ಆಗಬೇಕಿದೆ.
ಜಾತಿ–ಬುಡಕಟ್ಟು ಗ್ರಾಮೀಣ–ನಗರ ಹೀಗೆ ಮಹಿಳೆಯರಲ್ಲಿಯೂ ವರ್ಗ ಇದೆ. ಆದ್ಯತೆ ವಿಷಯ ಬಂದಾಗ ಈ ಬಗ್ಗೆ ಹೇಗೆ ನಿರ್ಧರಿಸುತ್ತೀರಿ?
ಇದು ಕಾಲದ ಒತ್ತಾಸೆ ಕೂಡ ಆಗಬೇಕಾಗುತ್ತದೆ. ಎಲ್ಲ ಮಹಿಳೆಯರು ಒಂದೇ ಎಂದು ಯೋಚನೆ ಮಾಡುವ ಜೊತೆಗೆ ಅದು ಲಿಂಗ ಪ್ರದೇಶ ಭಾಷೆ ವರ್ಗ ಜಾತಿ ಧರ್ಮ ಎಲ್ಲವನ್ನೂ ಒಳಗೊಳ್ಳಬೇಕು. ಸಂವಿಧಾನ 15ನೇ ವಿಧಿ ಎಲ್ಲ ರೀತಿಯ ಅಸಮಾನತೆ ಹೋಗಲಾಡಿಸಬೇಕು ಎನ್ನುತ್ತದೆ. ಈ ಬಗ್ಗೆ ಸಮಗ್ರವಾಗಿ ‘ಪಿತೃ ಪ್ರಧಾನತೆ’ಗೆ ಅಡ್ರೆಸ್ ಮಾಡಬೇಕಿದೆ. ಅದನ್ನು ಅಧಿಕಾರ ಎಂದು ನೋಡಬೇಕಿದೆ. ಅದನ್ನು ಹೆಣ್ಣು–ಗಂಡು ಒಂದೇ ರೀತಿ ನೋಡುತ್ತದೆ. ಮಹಿಳೆ ಅಧಿಕಾರ ಹಿಡಿದರೆ ಗಂಡಿನಂತೆಯೇ ಆಳ್ವಿಕೆ ಮಾಡುತ್ತಾಳೆ. ಅವಳಿಗೆ ಇರುವ ಮಾದರಿ ಅದು. ಹೆಣ್ಣಿನಂತೆ ಆಳುವುದು ಹೇಗೆ? ಅದನ್ನು ಹೆಣ್ತನ ಎನ್ನುತ್ತೇನೆ.
ತಾಯ್ತನ ಹೇರಿದ ಮೌಲ್ಯ ಎನ್ನುವುದು ನನ್ನ ಅಭಿಮತ. ಹೆಣ್ಣಾಗಿ ನಮ್ಮ ಅಸ್ಮಿತೆಯನ್ನು ಆಡಳಿತದಲ್ಲಿ ತರಲು ನಡೆಸಬೇಕಾದ ಹೋರಾಟವೇ ಭಿನ್ನವಾದುದು. ತಾರತಮ್ಯ ಪಾತ್ರಗಳ ರಚನಾ ಕ್ರಮವನ್ನು ನಿರಚನೆ ಮಾಡಬೇಕು ಎಂದು ನಂಬಿದ್ದೇನೆ. ನನ್ನ ಜೊತೆ ಕೆಲಸ ಮಾಡುವ ಎಲ್ಲರು ಒಟ್ಟುಗೂಡಿ ಕಾರ್ಯಯೋಜನೆಯನ್ನು ಸಾಧಿಸುತ್ತೇವೆ ಎನ್ನುವುದರ ಮೇಲೆ ಇದಕ್ಕೆ ಉತ್ತರ ಕಂಡುಕೊಳ್ಳಬಹುದು. ನಾವೆಲ್ಲ ಬೇರೆ ಬೇರೆ ಕಾರಣಕ್ಕೆ ವರ್ಗೀಕರಣಗೊಂಡಿದ್ದೇವೆ. ಗ್ರಂಥಸ್ಥ ಕನ್ನಡವನ್ನು ಚೆನ್ನಾಗಿ ಮಾತನಾಡುವವರು ಶ್ರೇಷ್ಠ ಎನ್ನುವುದು ಎಷ್ಟು ಚೆನ್ನ? ಚೆನ್ನಾಗಿ ಅನ್ನುವುದು ಯಾವುದೂ ಇಲ್ಲ. ಕೋಲಾರದವರಿಗೆ ಕೋಲಾರ ಕನ್ನಡ ಚೆನ್ನ. ಬೀದರ್‌ನವರಿಗೆ ಅವರ ಭಾಷೆ ಚೆನ್ನ. ಯಾವ ಭಾಷೆಯನ್ನು ನಾವು ಚೆನ್ನ ಮಾಡುತ್ತೇವೆ. ತಾರತಮ್ಯ ಮಾಡುವಾಗ ನಮ್ಮ ಮನಸ್ಥಿತಿ ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಮುಖ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.