ADVERTISEMENT

ಸುರಭಿಯ ಗಾನ ಮಾಧುರ್ಯ...

ಶ್ರೀಧರ ಬಸಯ್ಯ ಪೂಜಾರ
Published 4 ಏಪ್ರಿಲ್ 2019, 6:30 IST
Last Updated 4 ಏಪ್ರಿಲ್ 2019, 6:30 IST
ಸುರಭಿ
ಸುರಭಿ   

ಹಾರ್ಮೋನಿಯಂ ನುಡಿಸುತ್ತಾ, ತಂಬೂರಿ ಮೀಟುತ್ತಾ ಸುಶ್ರಾವ್ಯವಾಗಿ ಹಾಡುತ್ತಾಳೆ. ಕೈಯಲ್ಲಿ ಕುಂಚ ಹಿಡಿದರೆ, ಚಿತ್ರಕಲಾವಿದೆಯಾಗುತ್ತಾಳೆ. ಛದ್ಮವೇಷ ಸ್ಪರ್ಧೆಯಲ್ಲಿ ಬಹುಮಾನಗಳನ್ನು ಪಡೆದಿದ್ದಾಳೆ. ಕಥೆ ಹೇಳುತ್ತಾಳೆ.. ತನ್ನೆಲ್ಲ ಚಟುವಟಿಕೆಯಿಂದ ಜನರ ಮನ ಗೆದ್ದಿದ್ದಾಳೆ, ಜಿಲ್ಲೆ, ರಾಜ್ಯಮಟ್ಟದ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾಳೆ...

ಇಂಥದ್ದೊಂದು ಬಹುಮುಖ ಪ್ರತಿಭೆಯ ಹೆಸರು ಸುರಭಿ. ಧಾರವಾಡದ ಕಲ್ಯಾಣ ನಗರದ ನಿವಾಸಿ. ಆರ್‌ಎನ್‌ಶೆಟ್ಟಿ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿರುವ ಈಕೆ, ಮೂರನೇ ವಯಸ್ಸಿನಲ್ಲೇ ಕವಿ ವಿ.ಸಿ.ಐರಸಂಗರವರ ’ನಮ್ಮ ಭೂಮಿ ಕನ್ನಡದ’ ಗೀತೆಯನ್ನು ತೊದಲು ನುಡಿಯಲ್ಲಿ ಹಾಡಿ, ಪ್ರಥಮ ಬಹುಮಾನ ಪಡೆದಿದ್ದಾಳೆ. ಅಂದಿನಿಂದ ಶುರುವಾದ ಈಕೆಯ ಸಂಗೀತ ಸಾಧನೆ, ಈಟಿವಿ ವಾಹನಿಯ ’ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದವರೆಗೂ ತಲುಪಿತು.

ಮನೆ ಮೊದಲ ಶಾಲೆ

ADVERTISEMENT

ಬಾಲ್ಯದಲ್ಲೇ ಈಕೆಯಲ್ಲಿದ್ದ ಸಂಗೀತದ ಆಸಕ್ತಿಯನ್ನು ಗುರುತಿಸಿದ ತಂದೆ ಗೋವಿಂದರೆಡ್ಡಿ, ತಾಯಿ ಸುರೇಖ ಮಗಳಿಗೆ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಕಲಿಸಲು ಆಸಕ್ತಿ ತೋರಿಸಿದರು. ಸುರಭಿಗೆ ಮನೆಯ ಮೊದಲು ಸಂಗೀತ ಶಾಲೆಯಾಯಿತು. ತಾಯಿ ಸುರೇಖ ಮೊದಲ ಸಂಗೀತದ ಗುರುವಾದರು. ನಂತರ ಉಸ್ತಾದ್ ಷಫೀಕ್ ಖಾನ್ ಅವರ ಬಳಿ ತಂಬೂರಿ, ಸಿತಾರ್‌ ವಾದ್ಯಗಳನ್ನು ನುಡಿಸುವುದನ್ನು ಕಲಿಸಿದರು

ಧಾರವಾಡದಿಂದ ಆರಂಭವಾದ ಸುರಭಿಯ ಸಂಗೀತದ ಪಯಣ, ಈಟಿವಿ ವಾಹಿನಿಯ 2014-15ರ ’ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದವರೆಗೂ ಮುಂದುವರಿಯಿತು. ಆ ತಂಡದಲ್ಲಿ ಸುರಭಿ ಸೆಮಿ ಫೈನಲ್ ಹಂತದವರೆಗೂ ತಲುಪಿದಳು. ಕಾರ್ಯಕ್ರಮ ತೀರ್ಪುಗಾರ, ಖ್ಯಾತ ಹಿನ್ನಲೆ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರಿಂದ ‘ಭೇಷ್‌’ ಎನ್ನಿಸಿಕೊಂಡಳು.

ಗಾಯನ, ವಾದನ

ಗೀತೆಗಳನ್ನು ಹಾಡುವ ಜತೆಗೆ, ಹಾರ್ಮೋನಿಯಂ ಮತ್ತು ತಂಬೂರಿಯನ್ನೂ ನುಡಿಸುತ್ತಾಳೆ. ವಾದ್ಯಗಳನ್ನು ನುಡಿಸುತ್ತಾ ಹಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ಈಕೆ, ಇಲ್ಲಿವರೆಗೂ ಒಂದು ಸಾವಿರಕ್ಕೂ ಅಧಿಕ ಕಾರ್ಯಕ್ರಮ ನೀಡಿದ್ದಾಳೆ.

ಹಾಡುಗಾರಿಕೆಯಷ್ಟೇ ಅಲ್ಲ, ಶಿಕ್ಷಣದಲ್ಲೂ ಪ್ರಥಮ ಶ್ರೇಣಿಯಲ್ಲಿ ಪಡೆದಿರುವ ಸುರಭಿ, ಸಂಗೀತದ ಜತೆ ಜತೆಗೆ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲೂ ಮುಂದಿದ್ದಾಳೆ. ಶಾಲೆಯಲ್ಲಿ ನಡೆಸುವ ಛದ್ಮವೇಷ ಸ್ಪರ್ಧೆ, ಕಥೆ ಹೇಳುವುದು, ಕಾವ್ಯವಾಚನ, ನಾಟಕ, ಭಾಷಣ, ಪೇಂಟಿಂಗ್ ಸ್ಪರ್ಧೆ.. ಹೀಗೆ ಹಲವು ಚಟುವಟಿಕೆಗಳಲ್ಲಿ ಸುರಭಿ ಮುಂದಿದ್ದಾಳೆ.

ಸಂಗೀತ ಕ್ಷೇತ್ರದ ಬಗ್ಗೆ ಅಷ್ಟೆಲ್ಲ ಪ್ರೀತಿ ಹೊಂದಿದ್ದರೂ, ಈಕೆಗೆ ಸಿನಿಮಾ ಗೀತೆಗಳ ಬಗ್ಗೆ ಅಷ್ಟಾಗಿ ಒಲವಿಲ್ಲ. ಹಿಂದೂಸ್ತಾನಿ ಗಾಯನ ಮತ್ತು ಸುಗಮ ಸಂಗೀತಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾಳೆ.

ಪ್ರತಿಭೆಗೆ ಪುರಸ್ಕಾರ...

ಸುರಭಿಯ ಪ್ರತಿಭೆಯನ್ನು ಗುರುತಿಸಿ ನೂರಕ್ಕೂ ಹೆಚ್ಚು ಪುರಸ್ಕಾರಗಳು, ಏಳು ರಾಜ್ಯ ಮಟ್ಟದ ಪ್ರಶಸ್ತಿಗಳು ಹಾಗೂ ಎರಡು ರಾಷ್ಟ್ರಮಟ್ಟದ ಪ್ರಶಸ್ತಿಗಳು ಒಲಿದಿವೆ. ಅದರಲ್ಲಿ ಪ್ರಮುಖವಾದವು; ಡೆಕನ್‌ ಹೆರಾಲ್ಡ್‌ ಜೂನಿಯರ್‌ ಸಿಂಕಾಂಪಿಟೇಷನ್‌ 2013’ , ’ಇಸ್ಕಾನ್ ಸಂಗೀತ ಕಾರ್ಯಕ್ರಮ 2014’ ಕಾರ್ಯಕ್ರಮಗಳಲ್ಲಿ ಪ್ರಥಮ ಬಹುಮಾನ. 2013ರಲ್ಲಿ ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಸುಗಮಸಂಗೀತ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ರಾಷ್ಟ್ರಯ ಹಿಂದೂಸ್ತಾನಿ ಗಾಯನ ಸಂಜೋಗ ಟ್ರಸ್ಟ್‌ ಗೋಡ್ಕಂಡಿಯಲ್ಲಿ ದ್ವಿತೀಯ ಬಹುಮಾನ. ಹಂಸಲೇಖ ಅವರಿಂದ ರಾಜ್ಯಮಟ್ಟದ ಕಲಾ ಪ್ರತಿಭೋತ್ಸವ, ಬಾಲವಿಕಾಸ ಅಕಾಡೆಮಿಯ ಪುಸ್ಕಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.