ADVERTISEMENT

ಗ್ರಾಮೀಣ ಕ್ರೀಡೆ: ಟಗರು ಕಾಳಗದ ರೋಚಕ ಕಥನ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 23:30 IST
Last Updated 17 ಜನವರಿ 2026, 23:30 IST
<div class="paragraphs"><p>ಮುಗಿಯದ ಕದನ ಕುತೂಹಲ....&nbsp;</p></div>

ಮುಗಿಯದ ಕದನ ಕುತೂಹಲ.... 

   

ಚಿತ್ರ: ಸತೀಶ ಬಡಿಗೇರ್

ರಾಜ್ಯದಲ್ಲಿ ಸುಗ್ಗಿಯ ನಂತರದ ಬಿಡುವಿನಲ್ಲಿ ಸಾಲು ಸಾಲು ಜಾನುವಾರು ಜಾತ್ರೆಗಳು ನಡೆಯುತ್ತವೆ. ಈ ಸಂದರ್ಭದಲ್ಲೇ ಹಲವು ಕಡೆ ಪ್ರತಿಷ್ಠಿತ ಕಣಗಳಲ್ಲಿ ಟಗರುಗಳ ಗುದ್ದಾಟದ ಸದ್ದು ಜೋರಾಗಿ ಕೇಳಿಸುತ್ತದೆ. ಮೈನವಿರೇಳಿಸುವ ಕಾಳಗಗಳಲ್ಲಿ ಭಾಗವಹಿಸುವ ಟಗರುಗಳ ಕಥನ ಇಲ್ಲಿದೆ.

ಅದು ಬೆಳಗಿನ ಜಾವ. ಮಂಜು, ಚುಮು ಚುಮು ಚಳಿ ಮಧ್ಯೆಯೇ ಕೂಡ್ಲಿಗಿ ಕೆರೆ ಏರಿ ಮೇಲೆ ವಾಕಿಂಗ್ ಹೊರಟಿದ್ದೆ. ಕಣ್ಣಳತೆ ದೂರದಲ್ಲಿ ಬೈಕ್‌ನಲ್ಲಿ ನನ್ನತ್ತಲೇ ಬರುತ್ತಿದ್ದ ದೇವರಮನಿ ಹನುಮಂತಪ್ಪ ಪದೇ ಪದೇ ಹಿಂದಕ್ಕೆ ತಿರುಗಿ ನೋಡುತ್ತಾ ಬೈಕ್ ವೇಗವನ್ನು ಹೆಚ್ಚಿಸುತ್ತಿದ್ದರು. ಕಣ್ಣು ಕೀಲಿಸಿ, ಮಂಜು ಸೀಳಿ ಅವರ ಬೈಕ್ ಹಿಂದಕ್ಕೆ ದೃಷ್ಟಿ ಹಾಯಿಸಿದರೆ ಕಡುಕಪ್ಪು, ಹಾಗೆ ಬಲಿಷ್ಠವಾದ ಪ್ರಾಣಿ ಅವರನ್ನು ಅದೇ ವೇಗದಲ್ಲಿ ಹಿಂಬಾಲಿಸಿತ್ತು. ಅದು ಪಕ್ಕಾ ಕರಡಿಯೇ ಎಂದು ಅಂದಾಜಿಸಿ ನಡುಗುವ ಚಳಿಯಲ್ಲಿಯೇ ಬೆವತು ಬಿಟ್ಟೆ. ಇನ್ನೇನು ಜೀವ ಉಳಿಸಿಕೊಳ್ಳಲು ಆಯಕಟ್ಟಿನ ಸ್ಥಳ ಹುಡುಕಬೇಕು ಎನ್ನುವಷ್ಟರಲ್ಲಿ ಅವರ ಮಗ ವಿಶ್ವನಾಥ ಬೈಕ್‌ನಿಂದ ಇಳಿದು ಆ ಪ್ರಾಣಿಯನ್ನು ಹಿಡಿದು ನಿಲ್ಲಿಸಿದರು! ಸಾವರಿಸಿಕೊಂಡು ಹತ್ತಿರ ಹೋಗಿ ನೋಡಿದರೆ ಅದು ಕರಡಿ ಅಲ್ಲ ಟಗರು.

ADVERTISEMENT

ಇದು ಕಾಳಗಕ್ಕಾಗಿ ಟಗರನ್ನು ಅಣಿಗೊಳಿಸುವ ಒಂದು ದೃಶ್ಯವಷ್ಟೆ. ಇಂತಹ ಹತ್ತಾರು ಚಿತ್ರಣಗಳು ಇಲ್ಲಿವೆ.

ಕಾಳಗಕ್ಕೆಂದೇ ಟಗರು ಸಾಕುವುದು ರೂಢಿ. ಗ್ರಾಮೀಣ ಕ್ರೀಡೆಯಾಗಿ ಬೆಳೆದು ಬಂದಿರುವ ಈ ಕಾಳಗವು ವಿಶೇಷವಾಗಿ ಕಳೆದ ಎರಡು ದಶಕಗಳಿಂದ ಹೆಚ್ಚು ಜನಪ್ರಿಯವಾಗುತ್ತಿದೆ. ಈ ಕಾರಣಕ್ಕೆ ಕಾದಾಟಕ್ಕೆಂದೇ ಜವಾರಿ ಟಗರುಗಳನ್ನು ಸಾಕುವ ಟ್ರೆಂಡ್, ಕ್ರೇಜ್ ಹೆಚ್ಚುತ್ತಿದೆ. ವಿಜಯನಗರ, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಹಾವೇರಿ, ಹುಬ್ಬಳ್ಳಿ ಇಲ್ಲೆಲ್ಲ ಜವಾರಿ ಟಗರುಗಳನ್ನು ಸಾಕುತ್ತಾರೆ. ಕೆಲವರು ಮರಿಗಳನ್ನು ಸಾಕಿ, ಸ್ಪರ್ಧೆಗೆ ತಯಾರಿ ಮಾಡಿ ಮಾರುತ್ತಾರೆ. ಮತ್ತೆ ಕೆಲವರು ಖುಷಿಗೆ, ಗರ್ವಕ್ಕೆ, ಟಗರಿನ ಧೈರ್ಯ, ತಾಕತ್ತು ಪರೀಕ್ಷಿಸಲು, ಸ್ಪರ್ಧೆಯಲ್ಲಿ ಗೆಲ್ಲಲು ಸಾಕುತ್ತಾರೆ.

ಮರಿಗಳ ಆಯ್ಕೆ ಗುಟ್ಟು

ಕಾಳಗದ ಮರಿಗಳ ಆಯ್ಕೆ ಸವಾಲಿನದ್ದು. ಒಬ್ಬೊಬ್ಬರದ್ದು ಒಂದೊಂದು ವಿಧಾನ. ಮರಿಯನ್ನು ಅಡಿಯಿಂದ ಮುಡಿಯವರೆಗೂ ಪರೀಕ್ಷಿಸಲಾಗುತ್ತದೆ. ಬಹುತೇಕರು ಮೊದಲು ನೋಡುವುದು ಬೀಜವನ್ನು. ಅದು ಮಜಬೂತ್ ಆಗಿರಬೇಕು. ಅದರ ಕೊಂಬು ದಪ್ಪವೂ, ಬಿರುಸು ಇರಬೇಕು. ಎದೆ ಅಗಲವಾಗಿರಬೇಕು. ಎತ್ತರ ಹಾಗೆ ಉದ್ದದಲ್ಲೂ ಮನಸ್ಸಿಗೆ ಹಿಡಿಸಬೇಕು. ಮುಸುಡಿ ಮುಂದೆ ಸುಳಿ ಇದ್ದರೆ ಅದು ಮತ್ತು ಕೊಂಬಿನ ಹಿಂಭಾಗವು ವೃತ್ತಾಕಾರದಲ್ಲಿ ಇರಬೇಕು. ಮುಖದಲ್ಲಿ ರೋಷ, ಕಿಚ್ಚು ಎದ್ದು ಕಾಣುತ್ತಿರಬೇಕು. ಸಂತೆಯಲ್ಲೂ ಇಂತಹ ಗುಣಗಳನ್ನೇ ಹೋಲುವ ಮರಿಗಳನ್ನು ಖರೀದಿಸುತ್ತಾರೆ. ಟಗರಿನ ಶಕ್ತಿ ಸಾಮರ್ಥ್ಯದ ಜೊತೆಗೆ ಕೊಂಬಿನ ಗಾತ್ರ ಮತ್ತು ಆಕಾರ ಅದರ ಸೋಲು-ಗೆಲುವನ್ನು ನಿರ್ಣಯಿಸುತ್ತದೆ. ಕೊಂಬುಗಳು ಗೆಲುವನ್ನೂ, ಚದುರಿದ ಕೊಂಬುಗಳು ಸೋಲಿನ ರುಚಿಯನ್ನೂ ಉಣಿಸುತ್ತವೆ ಎನ್ನುತ್ತಾರೆ ಅನುಭವಿಗಳು.

ಮರಿಯು 3 ರಿಂದ 6 ತಿಂಗಳ ಪ್ರಾಯದಲ್ಲಿ ಇರುವಾಗಲೇ ಅದರ ಕೊಂಬುಗಳನ್ನು ಕೀಳಲಾಗುತ್ತದೆ. ನಂತರ ಗಾಯದ ನಿವಾರಣೆಗೆ ಔಷಧೋಪಚಾರದ ಜೊತೆಗೆ ಆ ಸ್ಥಳಕ್ಕೆ ಬೂದಿ, ಅರಿಸಿನ, ಜಾಜು ಹಚ್ಚುತ್ತಾರೆ. ಹೊಸ ಕೊಂಬು ಮೂಡುವಾಗ್ಗೆ ಕಡಿತ ಬರುವ ಕಾರಣಕ್ಕೆ ಗೋಡೆ, ಕಲ್ಲು, ಗೂಟಕ್ಕೆ ಅಂಟಿಕೊಂಡು ಮರಿಯನ್ನು ಕಟ್ಟುವುದಿಲ್ಲ. ಮೂಡುವ ಕೊಂಬು ದಪ್ಪ ಬೆಳೆಯುತ್ತವೆ.

ಮೇಯಿಸುವುದೇ ಸೊಗಸು..

ಟಗರು ಪ್ರಾಯಕ್ಕೆ ಬರುತ್ತಿದ್ದಂತೆ ಮೇಯಿಸುವ ರೀತಿಯೇ ಬದಲಾಗುತ್ತದೆ. ಮೇವಿನ ಜೊತೆಗೆ ಕುಚ್ಚಿದ ಅಥವಾ ನೆನೆಸಿಟ್ಟ ಹುರುಳಿ, ಹಸಿ ಹಾಲು, ಮೊಟ್ಟೆ, ಒಣ ಕೊಬ್ಬರಿ, ಉತ್ತತ್ತಿ, ಗೋಡಂಬಿ, ಬಾದಾಮಿ, ಅಳಿವೆ ಬೀಜ… ಹೀಗೆ ತರೇಹವಾರಿ ಪೌಷ್ಟಿಕ ಆಹಾರ ಕೊಡುತ್ತಾರೆ. ತಿನ್ನದಿದ್ದರೆ ಬಾಯಿಗೆ ಹೆಬ್ಬೆರಳಿಟ್ಟು ಆಹಾರ ಇಡುತ್ತಾರೆ. ಸಹಜವಾಗಿ ಟಗರು ಕೊಬ್ಬಿ, ಬಲಿಷ್ಠವಾಗಿ ಬೆಳೆಯುತ್ತದೆ. ತಲೆ ಗಾತ್ರ ಹಿಗ್ಗುತ್ತದೆ. ಇಂತಹ ಟಗರಿಗೆ ಉತ್ತಮ ಗಾಳಿ ಬೆಳಕು ಇರುವ ಜಾಗದಲ್ಲಿ ಕಟ್ಟುತ್ತಾರೆ. ನಿತ್ಯವೂ ಮಸಾಜ್ ಮಾಡುತ್ತಾರೆ. ಕಣದಲ್ಲಿ ಕಾದಾಡಿ ಬಂದ ಮೇಲೆ ನಿತ್ರಾಣಗೊಂಡಿದ್ದರೆ ಮೊದಲು ಎಳನೀರು, ನೋವು ನಿವಾರಕ ಕೊಡುತ್ತಾರೆ. ಚೇತರಿಸಿಕೊಳ್ಳುವವರೆಗೆ ಒತ್ತಾಯ ಪೂರ್ವಕವಾಗಿ ಆಹಾರ ಕೊಡುವುದಿಲ್ಲ.  

ಪೈಲ್ವಾನ್ ರೀತಿ ಟಗರನ್ನು ಅಣಿಗೊಳಿಸುತ್ತಾರೆ. ಕಟ್ಟುಮಸ್ತಾಗಿ ಬೆಳೆಯಲು ತುಸು ಹೆಚ್ಚೇ ತಿನ್ನಿಸುವ ಕಾರಣಕ್ಕೆ ಆಹಾರ ಜೀರ್ಣವಾಗಲಿಕ್ಕೆ, ನೆಣ ಹೆಚ್ಚಾಗದಂತೆ ರಾತ್ರಿ ಮತ್ತು ಬೆಳಗಿನ ಜಾವ ನಿಯಮಿತವಾಗಿ ವಾಕಿಂಗ್, ರನ್ನಿಂಗ್ ಮಾಡಿಸುತ್ತಾರೆ. ಕೆರೆ ಕಟ್ಟೆಗಳಲ್ಲಿ ಈಜು ಆಡಿಸುತ್ತಾರೆ. ಆ ಮೂಲಕ ದಮ್ಮು ಕಟ್ಟಿಸುತ್ತಾರೆ. ಅದರ ಕೊಂಬಿಗೆ ಬಣ್ಣ ಹಚ್ಚಿ, ಉಣ್ಣೆ ತೆಗೆದು ಆಕರ್ಷಕವಾಗಿ ಕಾಣಲು ಮೈಮೇಲೆ ಬಿಟ್ಟ ಅಲ್ಪಕೂದಲಿಗೆ ಬಣ್ಣ ಹಚ್ಚಿ ಚೆಂದಗಾಣಿಸುತ್ತಾರೆ.

ಹೆಸರಾದ ಕಣ (ಅಖಾಡ)ಗಳಲ್ಲಿ ನಡೆಯುವ ಕಾಳಗಕ್ಕೆ ನೂರಾರು ಟಗರುಗಳು ಬರುತ್ತವೆ. ಎಲ್ಲರಿಗೂ ತಮ್ಮ ಟಗರೇ ಗೆಲ್ಲಬೇಕೆಂಬ ಹಟ. ಹೀಗಾಗಿ ಕೆಲವರು ಮೋಸದಾಟಕ್ಕೆ ಇಳಿಯುತ್ತಾರೆ. ಟಗರಿಗೆ ತೋಳ ಅಥವಾ ಚಿರತೆಯ ನೆಣ ಹಚ್ಚಿ ಎದುರಾಳಿ ಟಗರು ಆ ವಾಸನೆಗೆ ಅಲ್ಲಿಂದ ಕಾಲ್ಕೀಳುವಂತೆ ಮಾಡುವುದು, ಹಾನಿಯಾದ ಕೊಂಬಿನ ಒಳಗೆ ಕಬ್ಬಿಣದ ಚೂರು ಅಥವಾ ಕಬ್ಬಿಣದ ಪುಡಿಯನ್ನು ಎಂ-ಸೀಲ್ ನೊಂದಿಗೆ ಬೆರೆಸಿ ತುಂಬಿ ಮೂಲ ಕೊಂಬಿಗೆ ಹೋಲುವ ರೂಪ ಕೊಟ್ಟು ಎದುರಾಳಿ ಟಗರಿಗೆ ಹಾನಿ ಮಾಡುವುದು, ಟಗರಿನ ದಪ್ಪ ಹಲ್ಲನ್ನು ಅರದಿಂದ ತಿಕ್ಕಿ ಅಸಲಿ ವಯಸ್ಸನ್ನು ಮರೆ ಮಾಚುವುದು, ಉದ್ದೀಪನ ಮದ್ದು ಕೊಡುವುದು, ತಮ್ಮದೇ ಟಗರು ಗೆಲ್ಲಬೇಕೆಂಬ ಆಸೆಯಿಂದ ಕೆಲವು ಕಡೆ ಕಮಿಟಿಯವರು ಡಬ್ಬದಲ್ಲಿ ಚೀಟಿ ಹಾಕದೇ ಹಿಡಿದು ಆಡಿಸುತ್ತಾರೆ ಇತ್ಯಾದಿ ಆಪಾದನೆಗಳೂ ಇವೆ.  

ಕಣ ಕುತೂಹಲ

ಸ್ಪರ್ಧೆಯಲ್ಲಿ ಜವಾರಿ ತಳಿಗಳಿಗೆ ಮಾತ್ರ ಪ್ರವೇಶ. ದೇಸಿ ತಳಿಯ ಟಗರುಗಳನ್ನು ಸಾಕಲು ಪ್ರೋತ್ಸಾಹಿಸಬೇಕು. ಆ ಮೂಲಕ ಆ ತಳಿಯನ್ನು ಸಂರಕ್ಷಿಸಬೇಕು ಎನ್ನುವ ಕಾಳಜಿ ಇದರ ಹಿಂದಿದೆ. ಈ ಕಾರಣಕ್ಕೆ ಇಲಾಯಿತಿ, ರಾಂಪುರಿ ತಳಿಗಳು ಸ್ಪರ್ಧೆಯಲ್ಲಿ ನಿಷಿದ್ಧ. ಕೇವಲ ಕರಿ ಮರಿಗಳು, ಏಳಗ (ಬಿಳಿ), ಮೌಳಿ ಜಾತಿ ಟಗರುಗಳಿಗೆ ಅಖಾಡದಲ್ಲಿ ಅವಕಾಶ.

ಎಲ್ಲಾದರೂ ಸ್ಪರ್ಧೆ ‍ಘೋಷಣೆ ಆಗುತ್ತಿದ್ದಂತೆ ಇಂತಹ ಟಗರು ಸಾಕುವವರಲ್ಲಿ ಉರುಪು ಬರುತ್ತದೆ. ಪಂದ್ಯಕ್ಕೆ ಟಗರನ್ನು ಅಣಿಗೊಳಿಸಲು ಅದರ ದೇಖ್ ರೇಖ್ ಹಾಗೆ ತಾಲೀಮು ತೀವ್ರವಾಗುತ್ತದೆ. ಕಣದಲ್ಲಿ ಟಗರುಗಳನ್ನು ಕಾದಾಡಿಸಲು, ಈ ರೋಚಕ ದೃಶ್ಯವನ್ನು ಕಣ್ಣು ತುಂಬಿಕೊಳ್ಳಲು ರಾಜ್ಯ, ಹೊರ ರಾಜ್ಯಗಳಿಂದ ಆಸಕ್ತರು ಬರುತ್ತಾರೆ. ಇಲ್ಲಿಯ ಟಗರುಗಳನ್ನು ಹೊರ ರಾಜ್ಯದಲ್ಲಿ ನಡೆಯುವ ಸ್ಪರ್ಧೆಗೂ ಕರೆದೊಯ್ಯುತ್ತಾರೆ. ಮರಿ ಟಗರು, 2, 4, 6, 8 ಹಲ್ಲುಗಳ ಟಗರುಗಳು ತಮ್ಮ ಸಮ ವಯಸ್ಸಿನ ಟಗರುಗಳೊಂದಿಗೆ ಕಾದಾಡುತ್ತವೆ. ಇಲ್ಲಿ ಎರಡೂ ಟಗರುಗಳು ಬಲಿಷ್ಠವಾಗಿದ್ದರೆ ಅವುಗಳ ಕದನ ಮೈನವಿರೇಳಿಸುತ್ತದೆ. ಉಸಿರು ಬಿಗಿ ಹಿಡಿದು ಪ್ರೇಕ್ಷಕರು ಆ ಗುದ್ದಾಟ ಆನಂದಿಸುತ್ತಾರೆ. ಕೆಲವೊಂದು ಟಗರುಗಳು ಗಂಟಗಟ್ಟಲೆ, 80-100 ಸುತ್ತು ಕಾದಾಡಿದ ದಾಖಲೆಗಳಿವೆ!

ಬಹುಮಾನಗಳದ್ದೇ ದಾಖಲೆ

ಆಟ ನಡೆಸುವ ಕಮಿಟಿಗಳ ಮೇಲೆ ಬಹುಮಾನಗಳು ನಿಗದಿಯಾಗುತ್ತವೆ. ಕೆಲವೊಂದು ಕಣಗಳು ಗೆದ್ದ ಹಾಗೆ  ರನ್ನರ್ ಅಪ್ ಆದ ಮೊದಲ ಹತ್ತು ಟಗರುಗಳಿಗೆ ಬಹುಮಾನ ನೀಡುತ್ತವೆ. ಬಂಗಾರ, ಬೆಳ್ಳಿ ಕಡಗ, ಟ್ರ್ಯಾಕ್ಟರ್, ಕಾರು, ಬುಲೆಟ್, ಬೈಕ್, ವಾಷಿಂಗ್ ಮಷಿನ್, ರೆಫ್ರಿಜರೇಟರ್‌, ಲಕ್ಷ ಲಕ್ಷ ನಗದು ಬಹುಮಾನ ಇಟ್ಟಿರುತ್ತಾರೆ. ಸ್ಪರ್ಧೆಯಲ್ಲಿ ಸಮರ್ಥವಾಗಿ ಕಾದಾಡಿ ಗೆದ್ದ ಟಗರುಗಳಿಗೆ ಮತ್ತು ಅದರ ಮಾಲೀಕನಿಗೆ ಬಹುಮಾನದ ಜೊತೆಗೆ ಸನ್ಮಾನಗಳು, ಟಗರು ಪ್ರೇಮಿಗಳಿಂದ ಅಭಿನಂದನೆಗಳ ಸುರಿಮಳೆ ಸಿಗುತ್ತದೆ. ಅಂತಹ ಟಗರುಗಳಿಗೆ ಫ್ಯಾನ್ಸ್, ಫಾಲೋವರ್ಸ್ ಹೆಚ್ಚಾಗುತ್ತಾರೆ. ಹೀಗೆ ಟಗರುಗಳು ತನ್ನ ಒಡೆಯನಿಗೆ ಸಮಾಜದಲ್ಲಿ ಹೆಸರು, ಅಸ್ಥಿತ್ವ ಹಾಗೆಯೇ ಹಣವನ್ನು ತಂದು ಕೊಡುವುದಲ್ಲದೇ ಸಾಕಷ್ಟು ಬೇಡಿಕೆ ಸೃಷ್ಟಿಸಿಕೊಳ್ಳುತ್ತದೆ.

ಜನಪ್ರಿಯ ಕಣಗಳು

ಗ್ರಾಮ ಜಾತ್ರೆ, ಉತ್ಸವ, ಸಂಕ್ರಾತಿ, ದೀಪಾವಳಿಗಳಲ್ಲಿ ಇಲ್ಲವೇ ದಾನಿಗಳು ಮುಂದೆ ಬಂದು ಆಸಕ್ತಿ ತೋರಿಸಿದರೆ ಟಗರು ಕಾಳಗ ಸ್ಪರ್ಧೆ ಸ್ಥಳೀಯ ಆಡಳಿತದ ಅನುಮತಿಯೊಂದಿಗೆ ಜರುಗುತ್ತವೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕೊಣ್ಣೂರ ಕಣ ರಾಜ್ಯದಲ್ಲಿಯೇ ಹೆಸರುವಾಸಿ. ಉಳಿದಂತೆ ದಾವಣಗೆರೆ ದುಗ್ಗಮ್ಮ, ಹೊನ್ನಾಳ್ಳಿ ಕೇಸರಿ, ಬೀಳಗಿ, ಮುಧೋಳ, ಬಾಗಲಕೋಟೆಯ ಜಾಲಿಹಾಳ, ದಾವಣಗೆರೆ, ಶಿವಮೊಗ್ಗ, ಹರಿಹರ ಇಂತಹ ಒಂದಿಷ್ಟು ಕಣಗಳಲ್ಲಿ ನಡೆಯುವ ಸ್ಪರ್ಧೆ ಕೂತೂಹಲ ಕೆರಳಿಸುತ್ತವೆ. ಇಲ್ಲಿ ಗೆಲ್ಲಲ್ಲಿಕ್ಕೆ ರಾಜ್ಯದಿಂದ ಮಾತ್ರವಲ್ಲದೇ ಆಂಧ್ರಪ್ರದೇಶ, ಮಹಾರಾಷ್ಠ್ರಗಳಿಂದಲೂ ಟಗರುಗಳು ಅಖಾಡಕ್ಕೆ ಇಳಿಯುತ್ತವೆ. 2-3 ದಿನ ಹಗಲಿರುಳು ಸ್ಪರ್ಧೆ ನಡೆಯುತ್ತದೆ. ಇಂತಹ ರೋಚಕ ಸ್ಪರ್ಧೆಯನ್ನು ಕಣ್ಣು ತುಂಬಿಕೊಳ್ಳಲು ಜನ ಸಾಗರವೇ ಹರಿದು ಬರುತ್ತದೆ.

ಟ್ರೆಂಡಿ ಟಗರುಗಳು..

ಕಣದಲ್ಲಿ ಗೆದ್ದ ಟಗರು

ಕೂಡ್ಲಿಗಿಯ ಜಾಲ, ಹಟವಾದಿ, ಜೀವ ಅಲಿಯಾಸ್ ಅಭಿಮನ್ಯು, ದಾವಣಗೆರೆಯ ಇಂಡಿಯನ್ ಆರ್ಮಿ, ಗೋಕಾಕ್ ನ ಸಿಂಧಿ ಕುರುಬೆಟ್ಟ, ಶಿವಮೊಗ್ಗದ ಪಾಯಿಸನ್ ಕರಿಯ, ಗದ್ದನಕೇರಿ ವರದ, ಮನೆ ಮಗ ಮಲ್ಲ, ಚಿಂದು ಕುರುಬರೇಟ್, ಆಂಟಿ ಲವ್ವರ್, ಮೆಂಟಲ್ ಮಂಜ, ವನ್ಯಧಾಮ ಪುಣ್ಯಕೋಟಿ, ರೋಲೆಕ್ಸ್,..ಹೀಗೆ ಒಂದಿಷ್ಟು ಟಗರುಗಳು ಈಗ ಟ್ರೆಂಡ್‌ನಲ್ಲಿವೆ.  

ಪಂದ್ಯ ಗೆಲ್ಲುವ ದುರಾಸೆಯಿಂದ ಟಗರಿನ ಆರೋಗ್ಯ, ಸುರಕ್ಷತೆಯನ್ನೂ ಲೆಕ್ಕಿಸದಿದ್ದಾಗ ಅದರ ಜೀವಕ್ಕೆ ಹಾನಿ ಆಗುತ್ತದೆ. ಕಾಳಗಕ್ಕೆಂದೇ ಸಾಕುವ ಟಗರು ಮೊದಲೇ ವೆಚ್ಚದಾಯಕ. ಆರಂಭದಲ್ಲೇ ಅಂತಹ ಟಗರುಗಳಿಗೆ ಹಿನ್ನಡೆಯಾದರೆ, ಅಸಹಜ ಸಾವಿಗೆ ತುತ್ತಾದರೆ, ಜಿದ್ದಿಗೆ ಬಿದ್ದು ಟಗರಿನಿಂದಲೇ ಹಣ, ಹೆಸರು ಮಾಡಬೇಕೆಂಬ ಹಪಾಹಪಿಯಿದ್ದರೆ ಆರ್ಥಿಕ ನಷ್ಟ ಕಟ್ಟಿಟ್ಟ ಬುತ್ತಿ.

ದೇಶಿ ತಳಿಗಳನ್ನು ಸಂರಕ್ಷಿಸಬೇಕು. ಅವುಗಳನ್ನು ರೈತರು ಸಾಕಲು ಪ್ರೇರೇಪಿಸಬೇಕು ಎನ್ನುವ ಸದಾಶಯ ಈ ಟಗರು ಕಾಳಗದ ಹಿಂದಿದೆ. ಇದು ಜೂಜಾಟವಾಗದೇ, ದೇಶಿಯ ಕ್ರೀಡೆಯಾಗಿಯೇ ಉಳಿಯಲಿ. 

ಹುಟ್ಟುಹಬ್ಬ, ಸಮಾಧಿ ಇತ್ಯಾದಿ...

ಕಾಳಿಯ ನೆನಪಿನಲ್ಲಿ...

ಹಣ, ಕೀರ್ತಿ ತಂದ ಟಗರುಗಳನ್ನಂತೂ ಒಂದು ಗುಂಜಿ ಹೆಚ್ಚೇ ಅಕ್ಕರೆಯಿಂದ ಸಾಕುತ್ತಾರೆ. ಅವುಗಳ ಜನ್ಮದಿನ, ಖರೀದಿಸಿದ ದಿನವನ್ನು ಹಬ್ಬದಂತೆ ಆಚರಿಸಿ ಸಂಭ್ರಮಿಸುತ್ತಾರೆ. ಅವು ಕಣ ಗೆದ್ದಾಗ ಇಲ್ಲವೇ ಮೃತಪಟ್ಟಾಗ ಊರು ತುಂಬ ಮೆರವಣಿಗೆ ಮಾಡುತ್ತಾರೆ. ಸಮಾಧಿ ಕಟ್ಟಿಸುತ್ತಾರೆ, ದೇವರ ಕೋಣೆಯಲ್ಲಿ ಫೋಟೊ ಇಟ್ಟು ಪೂಜಿಸುತ್ತಾರೆ. ಮನೆಯ ಮೇಲೆ ಅವುಗಳ ಕಲಾಕೃತಿ ನಿರ್ಮಿಸುತ್ತಾರೆ.

ಒಡೆಯನ ಜೀವ ಉಳಿಸಿದ ‘ಬೆಟ್ಟದ ಹುಲಿ’!

ನಾಗರಮುನ್ನೋಳ್ಳಿಯ ‘ಬೆಟ್ಟದ ಹುಲಿ’ ಟಗರು ತನ್ನ ಒಡೆಯನ ಹೃದಯ ಶಸ್ತ್ರಚಿಕಿತ್ಸೆಗೆ ಬೇಕಾದ ಹಣವನ್ನು ಸರಣಿ ಗೆಲುವಿನ ಮೂಲಕ ಗಳಿಸಿ ಜೀವ ಉಳಿಸಿದ ಕೀರ್ತಿಗೆ ಪಾತ್ರವಾಗಿದೆ.

ಬೆಳ್ಳೊಡಿ ‘ಕಾಳಿ’ಯೂ ಸೋಲಿಲ್ಲದ ಸರದಾರ ಎಂದು ಹೆಸರಾಗಿತ್ತು. ಇದರ ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನರು ಸೇರಿದ್ದರು. ಹೀಗೆ ಜನಮನ ಗೆದ್ದ ಕಾಳಿಗೆ ಗುಡಿ ಕಟ್ಟಿಸಿ ಪೂಜೆ ಸಲ್ಲಿಸಲಾಗುತ್ತಿದೆ.

ಇವುಗಳಂತೆ ಮುಂಗಾರು ಮಳೆ ನೀಲ, ಅಜಯ್ ಸೀಟಿ ಪಟ್ಲಿ, ಏಕಲವ್ಯ, ಜಲಸ, ವಾಲ್ಮೀಕಿ, ಮಯೂರ, ಮದಕರಿ ಬಾಬು, ಕೇಶಾಪುರ ಗಿಡ್ಡ, ಚಿಗಡೋಳಿ ವಿಕ್ಕಿ 8999, ಅಲಗವಾಡಿಯ ಜೀವ, ಅಂಡಬಂಡು, ಕರ್ನಾಟಕದ ಸುಪುತ್ರ ಮುಂತಾದವು ಕಾಳಗದಲ್ಲಿ ತಮ್ಮದೇ ಹವಾ ಎಬ್ಬಿಸಿ ದಾಖಲೆ ಬರೆದು ಭೌತಿಕವಾಗಿ ಇಲ್ಲವಾಗಿದ್ದರೂ ಜನಮಾನಸದಲ್ಲಿ ಜೀವಂತವಾಗಿವೆ.

ಕಾಳಗಕ್ಕೆ ಸಜ್ಜಾದ ಟಗರುಗಳು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.