
ಬೆಂಗಳೂರಿನಿಂದ ದಾವಣಗೆರೆಗೆ ಹೋಗುವ ಹೆದ್ದಾರಿಯಲ್ಲಿ ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಬಳಿ ಅರುಂಧತಿ ಮಂಡ್ಯ ಅವರ ತೋಟವಿದೆ. ಅಲ್ಲಿ ಅವರು ಕೋಳಿ ಸಾಕಾಣಿಕೆ ಮತ್ತು ಪಶುಸಂಗೋಪನೆಯಲ್ಲಿ ತೊಡಗಿದ್ದಾರೆ. ಬಸ್ತಿ (ಭಿಕ್ಷಾಟನೆ) ಮತ್ತು ಲೈಂಗಿಕ ವೃತ್ತಿಯನ್ನು ತ್ಯಜಿಸುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಸಹಾಯ ಮಾಡಲು ಸುಸ್ಥಿರ ಮಾದರಿಯೊಂದನ್ನು ಅಭಿವೃದ್ಧಿಪಡಿಸುವ ಮೂಲಕ, ಹಲವರ ಬದುಕಿಗೆ ದಾರಿದೀಪವಾಗಿದ್ದಾರೆ.
ಅರುಂಧತಿ ಅವರ ಈ ಪಯಣವು ಸುಲಭದ್ದಾಗಿರಲಿಲ್ಲ. ತಿರಸ್ಕಾರ, ನೋವು, ಹತಾಶೆಯಿಂದ ಕೂಡಿದ ಸವಾಲಿನದಾಗಿತ್ತು. ಅರುಣ ಅವರು ಹುಟ್ಟಿದ್ದು ದಕ್ಷಿಣ ಕನ್ನಡದಲ್ಲಿ. ಹತ್ತು ವರ್ಷವಿದ್ದಾಗ ಅವರ ಶಾರೀರದಲ್ಲಿ ಬದಲಾವಣೆಗಳಾಗುತ್ತಿದ್ದವು. ಇದರಿಂದಾಗಿ ಅವರು ತಾತ್ಸಾರ, ವ್ಯಂಗ್ಯದ ಮಾತುಗಳನ್ನು ಎದುರಿಸಬೇಕಾಯಿತು.
ತಾಯಿಯ ಬೆಂಬಲ ಇದ್ದರೂ, ‘ಹುಡುಗ’ನಂತೆ ವರ್ತಿಸು ಎಂದು ಸಹೋದರ ನಿರಂತರವಾಗಿ ಒತ್ತಾಯ ಮಾಡುತ್ತಿದ್ದರು. ಇದರಿಂದ ನೊಂದು ಎಸ್‌ಎಸ್‌ಎಲ್‌ಸಿ ನಂತರ ಮನೆ ತೊರೆದರು. ಮಂಗಳೂರು ರೈಲು ನಿಲ್ದಾಣದಲ್ಲಿ ಒಂಟಿಯಾಗಿ ದಿಕ್ಕು ಕಾಣದೆ ನಿಂತಿದ್ದಾಗ ಲಿಂಗತ್ವ ಅಲ್ಪಸಂಖ್ಯಾತರೊಬ್ಬರ ಪರಿಚಯವಾಯಿತು. ಅವರು ಕೇರಳದ ಲಿಂಗತ್ವ ಅಲ್ಪಸಂಖ್ಯಾತರ ಸಂಸ್ಥೆ ‘ಮಲಬಾರ್ ಕಲ್ಚರಲ್ ಫೋರಮ್’ಗೆ ಕರೆದುಕೊಂಡು ಹೋದರು. ಈ ಸಂಸ್ಥೆಯು ಅರುಣ ಅವರ ಶಿಕ್ಷಣಕ್ಕೆ ಬೆಂಬಲ ನೀಡಿತು.
ಗೌರವಯುತವಾದ ಜೀವನ ನಡೆಸುವ ಹಂಬಲದಿಂದ ಅವರು ಹಗಲಿನಲ್ಲಿ ಸಾರ್ವಜನಿಕ ಸಂಪರ್ಕ ವ್ಯಕ್ತಿಯಾಗಿ ಮತ್ತು ರಾತ್ರಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಲೇ ದೂರ ಶಿಕ್ಷಣದ ಮೂಲಕ 2011ರಲ್ಲಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಬಳಿಕ ಕರ್ನಾಟಕಕ್ಕೆ ಮರಳಿ ರಾಮನಗರದಲ್ಲಿರುವ ಸರ್ಕಾರೇತರ ಸಂಘಟನೆ (ಎನ್‌ಜಿಒ) ಸೇರಿದರು. ಅಲ್ಲಿ ಪಶುಸಂಗೋಪನೆ ಕುರಿತು ಲಿಂಗತ್ವ ಅಲ್ಪಸಂಖ್ಯಾತರಿಗೆ ತರಬೇತಿ ನೀಡುತ್ತಿದ್ದರು. ಆದರೆ 2012ರಲ್ಲಿ ಯೋಜನೆಯು ನಿಂತ ಕಾರಣ ಕೆಲಸ ಕಳೆದುಕೊಂಡರು.
ಉದ್ಯೋಗ ಪಡೆಯಲು ಹುಡುಕಾಟ ಆರಂಭಿಸಿದಾಗ ಜನರ ಪೂರ್ವಾಗ್ರಹವು ಅವರನ್ನು ಕಂಗೆಡಿಸಿತು. ಕಾರ್ಖಾನೆಗಳು, ಗಾರ್ಮೆಂಟ್ಸ್ ಘಟಕಗಳಲ್ಲಿ ಉದ್ಯೋಗ ಕೇಳಿದರು. ಅಲ್ಲಿ ತಿರಸ್ಕಾರವೇ ಉತ್ತರವಾಗಿತ್ತು. ಒಬ್ಬರು ‘ಪುರುಷ’ನಂತೆ ಕಾಣಿಸಿಕೊಂಡರೆ ಉದ್ಯೋಗ ನೀಡುವುದಾಗಿ ಹೇಳಿದರು. ಅರುಂಧತಿ ‘ನಾನು ನನ್ನಂತೆಯೇ ಇರುತ್ತೇನೆ. ನನಗೆ ಕೆಲಸವಿಲ್ಲದಿದ್ದರೂ ಸರಿಯೇ’ ಎಂದು ಹೇಳಿ ವಾಪಸ್ ಬಂದರು.
ಹೀಗೆ ಉದ್ಯೋಗದ ಎಲ್ಲಾ ಬಾಗಿಲುಗಳು ಮುಚ್ಚಿದಾಗ ಭಿಕ್ಷಾಟನೆ ಮತ್ತು ಲೈಂಗಿಕ ವೃತ್ತಿಯನ್ನು ಆಶ್ರಯಿಸಿದರು. ಈ ಮಧ್ಯೆ ಅರುಣ ಅವರ ಪರಿಚಯಸ್ಥರಾದ ಸಾವಿತ್ರಮ್ಮ ಕುರಿ ಮತ್ತು ಕೋಳಿ ಸಾಕಣೆ ಮಾಡುವಂತೆ ಸಲಹೆ ನೀಡಿದರು. ಜೊತೆಗೆ ಉದ್ಯೋಗ ಪಡೆಯಲೂ ನೆರವಾದರು.
ಬಳಿಕ ಮಂಡ್ಯ ಸಮೀಪದ ಇಂಡುವಾಳು ಗ್ರಾಮದಲ್ಲಿ ನಾಲ್ಕು ಕುರಿಮರಿಗಳೊಂದಿಗೆ ಹೊಸ ಬದುಕಿಗೆ ಅಡಿಇಟ್ಟರು. 2019ರ ಹೊತ್ತಿಗೆ 25 ಮೇಕೆಗಳು, 100 ಕೋಳಿಗಳು ಮತ್ತು ಕೆಲವು ಕುರಿಗಳನ್ನು ಸಾಕುವ ಮೂಲಕ ತಮ್ಮ ವ್ಯವಹಾರವನ್ನು ವಿಸ್ತರಿಸಿದರು. ಹಂತಹಂತವಾಗಿ ಬೆಳೆದು ‘ಅರುಂಧತಿ ಮಂಡ್ಯ’ ಎಂಬ ಹೆಸರು ಪಡೆದರು. ಹೀಗಿರುವಾಗಲೇ ಲಿಂಗತ್ವ ಅಲ್ಪಸಂಖ್ಯಾತರು ಎಂಬ ಕಾರಣಕ್ಕಾಗಿ ಅರುಂಧತಿ ಮತ್ತು ಅವರ ಸಮುದಾಯವನ್ನು ಗ್ರಾಮಸ್ಥರು ಗ್ರಾಮದಿಂದ ಹೊರಹಾಕಿದರು.
ಲಾಕ್‌ಡೌನ್ ಸಂದರ್ಭದಲ್ಲಿ 20 ಕುರಿಗಳು ಮತ್ತು 30 ಕೋಳಿಗಳು ಕಳುವಾದವು. ಇದರಿಂದಾಗಿ ಜೀವನ ಮತ್ತೆ ಹಳಿ ತಪ್ಪಿತು. ಮನಸ್ಸಿಲ್ಲದಿದ್ದರೂ ಜೀವನ ನಿರ್ವಹಣೆಗಾಗಿ ಮತ್ತೆ ಮೂರು ತಿಂಗಳು ಲೈಂಗಿಕ ವೃತ್ತಿಗಿಳಿದರು.
ನಂತರ ಚಿತ್ರದುರ್ಗಕ್ಕೆ ತೆರಳಿ ಸ್ನೇಹಿತೆಯೊಬ್ಬರ ಸಹಾಯದಿಂದ ಮತ್ತೆ ಪಶುಸಂಗೋಪನೆಯನ್ನು ಆರಂಭಿಸಿದರು. 2023ರಲ್ಲಿ ಮತ್ತೆ 50 ಮೇಕೆಗಳು ಕಳುವಾದವು. ತಮ್ಮ ಸಮುದಾಯದಿಂದಲೇ ದ್ರೋಹ ಮತ್ತು ನಿರ್ಲಕ್ಷ್ಯ ಎದುರಿಸಿದರು. ಪೊಲೀಸರೂ ಬೆಂಬಲ ನೀಡಲಿಲ್ಲ. ಇದರಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದರು.
ಹೀಗಿರುವಾಗ ಒಮ್ಮೆ ಅರುಂಧತಿ ಅವರು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಆಗಿನ ವ್ಯವಸ್ಥಾಪಕ ನಿರ್ದೇಶಕಿ ಪುಷ್ಪಲತಾ ಅವರನ್ನು ಭೇಟಿಯಾದರು. ಪುಷ್ಪಲತಾ ಅವರು ಬೆಂಬಲದ ಭರವಸೆ ನೀಡಿದರು. ಮಹಿಳಾ ಅಭಿವೃದ್ಧಿ ನಿಗಮವು ಅರುಂಧತಿ ಅವರಿಗೆ ಬೆಂಬಲವಾಗಿ ಶೇಕಡ 50ರಷ್ಟು ಸಬ್ಸಿಡಿಯಲ್ಲಿ ₹23 ಲಕ್ಷ ಸಾಲವನ್ನು ಮಂಜೂರು ಮಾಡಿತು. ಅರುಂಧತಿ ಅವರು ಸ್ನೇಹಿತೆ ಟ್ರಾನ್ಸ್‌ವುಮನ್ ಚೈತ್ರಾ ಅವರ ಜೊತೆ ಸೇರಿ ಭರಮಸಾಗರದಲ್ಲಿ ಚಹಾ ಅಂಗಡಿಯನ್ನು ತೆರೆದರು. ಸಾಲ ಮತ್ತು ಉದ್ಯಮ ತರಬೇತಿ ಫೆಲೊಶಿಪ್ ಹಣವನ್ನು ಬಳಸಿಕೊಂಡು ತಮ್ಮ ತೋಟವನ್ನು ಮಾಡಿದರು. ಈಗ ಅವರ ಜಮೀನಿನಲ್ಲಿ ಸುಮಾರು 50 ಕೋಳಿಗಳು, 100 ಮೇಕೆಗಳು ಮತ್ತು ಕುರಿಗಳಿವೆ.
‘ಅರುಂಧತಿ ಅವರ ಕೌಶಲ ಮತ್ತು ಸ್ವಾವಲಂಬಿ ಜೀವನದ ಇಂಗಿತವನ್ನು ಕಂಡು ಪ್ರಭಾವಿತಳಾಗಿದ್ದೇನೆ’ ಎನ್ನುತ್ತಾರೆ ಪುಷ್ಪಲತಾ.
ಅರುಂಧತಿ ಅವರು 2022ರಲ್ಲಿ ‘ಮಡಿಲು ಸ್ವಾವಲಂಬಿ ಟ್ರಸ್ಟ್’ (ದಕ್ಷಿಣ ಭಾರತ) ಸ್ಥಾಪಿಸಿದರು. 25 ಮಂದಿ ಸದಸ್ಯರಿರುವ ಈ ಟ್ರಸ್ಟ್ ಲಿಂಗತ್ವ ಅಲ್ಪಸಂಖ್ಯಾತರ ಆರ್ಥಿಕ ಸಬಲೀಕರಣದ ದೃಷ್ಟಿಯಿಂದಲೇ ಕೆಲಸ ಮಾಡುತ್ತಿದೆ. ಬಸ್ತಿ ಮತ್ತು ಲೈಂಗಿಕ ವೃತ್ತಿ ತ್ಯಜಿಸಿ ಜೀವನ ಕಟ್ಟಿಕೊಳ್ಳುವ ಹಂಬಲದಿಂದ ಬರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಅರುಂಧತಿ ಅವರು ಉಚಿತವಾಗಿ ಎರಡು ಮೇಕೆ ಮತ್ತು ಐದು ಕೋಳಿಗಳನ್ನು ನೀಡುತ್ತಾರೆ. ಸ್ವಾವಲಂಬಿಗಳಾದ ನಂತರ ಅವರು ಅವುಗಳನ್ನು ಇನ್ನೊಬ್ಬರಿಗೆ ವರ್ಗಾಯಿಸಬೇಕೆಂಬ ಒಪ್ಪಂದ ಮಾಡಿಕೊಳ್ಳುತ್ತಾರೆ. ಹೀಗಾಗಿ ಅರುಂಧತಿ ಅವರ ಈ ನಡೆಯು ಅನೇಕ ಲಿಂಗತ್ವ ಅಲ್ಪಸಂಖ್ಯಾತರ ಬಾಳಿಗೆ ಬೆಳಕು ನೀಡಿದೆ.
ಅರುಂಧತಿ ಅವರು ಈವರೆಗೆ 25 ಲೈಂಗಿಕ ಅಲ್ಪಸಂಖ್ಯಾತರಿಗೆ ಉಚಿತವಾಗಿ ಕೋಳಿ ಮತ್ತು ಮೇಕೆಗಳನ್ನು ನೀಡಿದ್ದಾರೆ ಮತ್ತು 35 ಲಿಂಗತ್ವ ಅಲ್ಪಸಂಖ್ಯಾತರಿಗೆ ತೋಟಗಾರಿಕೆ, ಕೃಷಿ ತರಬೇತಿ ನೀಡಿದ್ದಾರೆ. ಅವರ ಕೆಲಸವು ಹಲವು ಲಿಂಗತ್ವ ಅಲ್ಪಸಂಖ್ಯಾತರಿಗೆ ಸ್ಫೂರ್ತಿಯಾಗಿದೆ. ಕೊಪ್ಪಳ, ಮಂಡ್ಯ, ವಿಜಯಪುರ, ಬಾಗಲಕೋಟೆ ಮತ್ತು ಚಿಕ್ಕಮಗಳೂರಿನಲ್ಲಿ ಹಲವರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಅರುಂಧತಿ ತಮ್ಮ ಸಮುದಾಯದವರಿಗೆ ಎದುರಾಗುವ ಕಾನೂನಾತ್ಮಕ ಸಮಸ್ಯೆಗಳನ್ನೂ ಪರಿಹರಿಸಲು ನೆರವು ನೀಡುತ್ತಾರೆ. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಗಳಂತಹ ಅಗತ್ಯ ಗುರುತಿನ ದಾಖಲೆಗಳನ್ನು ಮಾಡಿಸಿಕೊಡುತ್ತಾರೆ.
ತಮ್ಮ ಸಮುದಾಯಕ್ಕೆ ಅಂಟಿರುವ ಕಳಂಕವನ್ನು ತೊಡೆದುಹಾಕಲು ಆರ್ಥಿಕ ಸಬಲೀಕರಣವೊಂದೇ ದಾರಿ ಎಂದು ಅರಿತಿರುವ ಅರುಂಧತಿ, ಕೋಳಿ, ಕುರಿ ಸಾಕಣೆ, ಹೈನುಗಾರಿಕೆ ಮತ್ತು ಕೃಷಿಗೆ ಸಂಬಂಧಿಸಿದಂತೆ ಕೌಶಲ ತರಬೇತಿ ಶಾಲೆಯನ್ನು ಸ್ಥಾಪಿಸಲು ಚಿಂತನೆ ನಡೆಸಿದ್ದಾರೆ.
‘ನಮ್ಮ ಸಮರ ಸಾರಥಿ ಅಭಿಯಾನದ ಮೂಲಕ ಲಿಂಗತ್ವ ಅಲ್ಪಸಂಖ್ಯಾತರಿಗೆ ತಮ್ಮ ಗುರುತಿನ ಹಕ್ಕು ಮತ್ತು ಸರ್ಕಾರದ ಯೋಜನೆಗಳ ಅನುಕೂಲಗಳನ್ನು ಪಡೆಯುವ ಬಗ್ಗೆ ತರಬೇತಿ ನೀಡಲಾಗುತ್ತಿದೆ’ ಎನ್ನುತ್ತಾರೆ ಅರುಂಧತಿ.
‘ಇವತ್ತಿಗೂ ಜನರು ನಮ್ಮ ಧ್ವನಿಯನ್ನು ಕೇಳಿದ ಬಳಿಕ ಚಹಾ ಅಂಗಡಿಯಿಂದ ಹಿಂದೆ ಸರಿಯುತ್ತಾರೆ. ಕಠಿಣ ಪರಿಶ್ರಮದಿಂದ ಜೀವನೋಪಾಯ ಕಂಡುಕೊಂಡಿದ್ದರೂ ಸಮಾಜ ನಮ್ಮನ್ನು ತಿರಸ್ಕರಿಸುತ್ತದೆ. ತಮಿಳುನಾಡು ಮತ್ತು ಕೇರಳದಲ್ಲಿರುವಂತೆ ಕರ್ನಾಟಕದಲ್ಲಿಯೂ ಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ನಿಗಮ ಸ್ಥಾಪಿಸಬೇಕು’ ಎನ್ನುವುದು ಅರುಂಧತಿ ಅವರ ಮನದ ಮಾತು.
ಚಿಕ್ಕಮಗಳೂರಿನ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಸದಸ್ಯೆ ಮೇಘಾ ಮಲ್ನಾಡ್ ಅವರು, ‘ಮಡಿಲು ಸ್ವಾವಲಂಬಿ ಟ್ರಸ್ಟ್ ಐದು ಮೇಕೆಗಳನ್ನು ನೀಡಿತ್ತು. ನಾನು ಅಂಜುಗೆ ಮೇಕೆಗಳನ್ನು ನೀಡಿದೆ. ಅಂಜು ಮೇಕೆಗಳನ್ನು ಸಾಕಿ ಅವುಗಳ ಹಿಂಡು ಹತ್ತಕ್ಕೆ ಬೆಳೆದಾಗ, ಹರ್ಷಿತಾಗೆ ಐದನ್ನು ನೀಡಿದರು. ಹರ್ಷಿತಾ ಮತ್ತೊಬ್ಬರಿಗೆ ಕೊಟ್ಟರು. ಈ ಸರಪಳಿ ನಮ್ಮ ಸಮುದಾಯಕ್ಕೆ ಬಲ ನೀಡಿದೆ’ ಎನ್ನುತ್ತಾ ಸುಸ್ಥಿರ ಮಾದರಿಯ ಸಾಫಲ್ಯವನ್ನು ವಿವರಿಸಿದ್ದಾರೆ.
‘ಸಮುದಾಯದ ಅನೇಕರು ಗೌರವಾನ್ವಿತ, ಸ್ವಾವಲಂಬಿ ಜೀವನ ನಡೆಸಲು ಅರುಂಧತಿ ಸ್ಫೂರ್ತಿಯಾಗಿದ್ದಾರೆ’ ಎನ್ನುತ್ತಾರೆ ಬೆಂಗಳೂರಿನ ಲಿಂಗತ್ವ ಅಲ್ಪಸಂಖ್ಯಾತೆ ಮಲ್ಲಮ್ಮ ಕುಂಬಾರ.
(ಆತ್ಮಹತ್ಯೆಯಂತಹ ಕೆಟ್ಟ ಆಲೋಚನೆಗಳು ನಿಮ್ಮನ್ನು ಕಾಡುತ್ತಿದ್ದರೆ ಅದರಿಂದ ಹೊರಬಂದು ಬದುಕು ಕಟ್ಟಿಕೊಳ್ಳಲು ನೆರವು ನೀಡಲು ನಾವು ಸದಾ ಸಿದ್ಧ. ಸಂಪರ್ಕಕ್ಕಾಗಿ 14416 ಅಥವಾ 7893078930 ಕರೆ ಮಾಡಿ.)
ಅನುವಾದ: ಕೀರ್ತಿಕುಮಾರಿ ಎಂ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.