
ತುರುವನೂರು ಗ್ರಾಮದಲ್ಲಿ ಸಿದ್ಧಗೊಂಡಿರುವ ಗಾಂಧಿ ಉದ್ಯಾನ
‘ಈಚಲುಮರಗಳು ನಮ್ಮವು, ಮರದಿಂದ ಇಳಿಸುವ ಹೆಂಡ ನಮ್ಮದು, ಹೆಂಡ ಇಳಿಸುವವರೂ ನಮ್ಮವರು, ಹೆಂಡ ಕುಡಿದು ಹಾಳಾಗುತ್ತಿರುವವರೂ ನಮ್ಮವರೇ, ನಷ್ಟವಾಗುತ್ತಿರುವುದು ನಮಗೇ, ಆದಾಯ ಮಾತ್ರ ಬ್ರಿಟಿಷರಿಗೆ ಹೋಗಬೇಕಾ...?’
ಎಸ್.ನಿಜಲಿಂಗಪ್ಪನವರು ತುರುವನೂರು ಹೈಸ್ಕೂಲ್ ಆವರಣದಲ್ಲಿ ಆಡಿದ ಈ ಮಾತುಗಳು ಯುವಕರಲ್ಲಿ ಹೋರಾಟದ ಕಿಚ್ಚು ಹೊತ್ತಿಸಿದವು. ಕೊಡಲಿಗಳನ್ನು ಹೆಗಲೇರಿಸಿಕೊಂಡರು ಹಳ್ಳದ ಸುತ್ತಮುತ್ತ ಬೆಳೆದಿದ್ದ ಸಾವಿರಾರು ಈಚಲು ಮರಗಳನ್ನು ಕತ್ತರಿಸಿ ಬಿಸಾಡಿದರು. ಹೋರಾಟದ ಕಿಚ್ಚು ಸುತ್ತಮುತ್ತಲಿನ ಹಳ್ಳಿಗಳಿಗೂ ವ್ಯಾಪ್ತಿಸಿತು. ಚಳವಳಿಯಲ್ಲಿ ಮಹಿಳೆಯರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕುಡಿದು ಹಾಳಾಗುತ್ತಿದ್ದ ಗಂಡಸರ ಉಳಿವಿಗಾಗಿ ಈ ಚಳವಳಿ ಅವರಿಗೆ ಅಸ್ತ್ರವೂ ಆಗಿತ್ತು.
ಆದಾಯಕ್ಕೆ ಕಲ್ಲುಬಿದ್ದಾಗ ಬ್ರಿಟಿಷ್ ಅಧಿಕಾರಿಗಳು ಹೋರಾಟಗಾರರನ್ನು ಬಂಧಿಸಿದರು, ಹಲವರನ್ನು ಗಡಿಪಾರು ಮಾಡಿದರು. ಆದರೆ ಕಿಚ್ಚು ಆರಲಿಲ್ಲ. ತಂಡೋಪತಂಡವಾಗಿ ತುರುವನೂರಿಗೆ ಬರುತ್ತಿದ್ದ ಜನರು ಈಚಲುಮರ ಕಡಿದು ಬ್ರಿಟಿಷರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದರು. ಊರಿನಲ್ಲಿದ್ದ ಕೋಟೆಯ ಬತ್ತೇರಿ ಮೇಲೆ ತ್ರಿವರ್ಣಧ್ವಜ ಹಾರಿಸಿದರು. ಪೊಲೀಸರು ತಡೆಯಲು ಬಂದಾಗ ಪೊಲೀಸ್ ಠಾಣೆಗೇ ಬೆಂಕಿ ಇಟ್ಟರು.
1939ರಲ್ಲಿ ಆರಂಭವಾದ ಚಳವಳಿ ಹಲವು ವರ್ಷಗಳಿಗೆ ಮುಂದುವರಿಯಿತು. ಮಹಾತ್ಮ ಗಾಂಧಿ 1942ರಲ್ಲಿ ‘ಭಾರತ ಬಿಟ್ಟು ತೊಲಗಿ’ ಹೋರಾಟಕ್ಕೆ ಕರೆ ನೀಡಿದಾಗ ‘ಈಚಲುಮರದ ಚಳವಳಿ’ ದೇಶವೇ ತಿರುಗಿ ನೋಡುವಂತೆ ಮಾಡಿತು. ಇದು ಗಾಂಧೀಜಿಯ ಗಮನವನ್ನೂ ಸೆಳೆಯಿತು. ಮುಂದೆ ಈ ಊರು ಇತಿಹಾಸದ ಪುಟ ಸೇರಿತು. ‘ಸ್ವಾತಂತ್ರ್ಯ ಹೋರಾಟಗಾರರ ಊರು’ ಎಂಬ ಖ್ಯಾತಿಯನ್ನೂ ಪಡೆಯಿತು.
ಈಚಲುಮರದ ಚಳವಳಿಗೆ ಸ್ಫೂರ್ತಿಯಾಗಿದ್ದ ಎಸ್.ನಿಜಲಿಂಗಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾದಾಗ ತುರುವನೂರು ಮತ್ತೊಮ್ಮೆ ಗಮನ ಸೆಳೆಯಿತು. ಗಾಂಧಿ ಸ್ಮೃತಿ ಉಳಿಸಲು ಊರಿನ ಕೋಟೆಯ ಬತ್ತೇರಿ ಮೇಲೆ ಗಾಂಧಿ ಪ್ರತಿಮೆ ಸ್ಥಾಪಿಸುವ ಸಂಕಲ್ಪ ಮಾಡಿದರು. ಗ್ರಾಮಸ್ಥರೆಲ್ಲರೂ ಮನೆಯಲ್ಲಿದ್ದ ಕಂಚಿನಪಾತ್ರೆಗಳನ್ನೆಲ್ಲಾ ಅರ್ಪಿಸಿದರು. ಬಳ್ಳಾರಿ ಮಲ್ಲಕ್ಕ ಎಂಬ ಮಹಿಳೆ ಪ್ರತಿಮೆ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದು ಬರೀ ಪ್ರತಿಮೆಯಾಗಿರಲಿಲ್ಲ, ಸ್ವಾತಂತ್ರ್ಯಾನಂತರ ದೇಶದಲ್ಲಿ ಸ್ಥಾಪನೆಯಾದ ಎರಡನೇ ಕಂಚಿನ ಪ್ರತಿಮೆಯಾಗಿತ್ತು. ಜೊತೆಗೆ 80 ಅಡಿ ಎತ್ತರದ ಬತ್ತೇರಿ ಮೇಲೆ ಸ್ಥಾಪನೆಗೊಂಡ ಮೊದಲ ಗಾಂಧಿ ಪ್ರತಿಮೆಯಾಗಿತ್ತು.
ಸ್ವತಃ ಗಾಂಧೀಜಿಯೇ ಪ್ರತಿಮೆ ಲೋಕಾರ್ಪಣೆಗೆ ಬರಲೊಪ್ಪಿದ್ದರು. ಆದರೆ ಅನಾರೋಗ್ಯದ ಕಾರಣದಿಂದಾಗಿ ಬರಲಾಗಲಿಲ್ಲ. ತಮ್ಮ ಆಪ್ತ ಸಹಾಯಕ ಮೋಹನ್ ದಾಸ್ ಅವರನ್ನು ಕಳುಹಿಸಿದರು. ಫೆಬ್ರುವರಿ 1, 1966 ರಲ್ಲಿ ಪ್ರತಿಮೆ ಲೋಕಾರ್ಪಣೆಗೊಂಡಿತು. ‘ಚೆಂಡು ಹೂವಿನ ಮಳೆ ಸುರಿಸಿ ಮೋಹನ ದಾಸ್, ಎಸ್.ನಿಜಲಿಂಗಪ್ಪ ಅವರನ್ನು ಸ್ವಾಗತಿಸಿದ ಸಂಭ್ರಮವನ್ನು ನಮ್ಮೂರಿನ ಹಿರಿಯರು ಹೇಳುತ್ತಿದ್ದರು. ಹೋರಾಟದ ಕಿಚ್ಚು ಈಗಲೂ ಊರಿನಲ್ಲಿ ಹಸಿರಾಗಿದೆ’ ಎಂದು ತುರುವನೂರು ಗ್ರಾಮ ಪಂಚಾಯಿತಿ ಸದಸ್ಯ ಡಿ.ಆರ್.ಮಂಜುನಾಥ್ ತಿಳಿಸಿದರು.
ಗ್ರಾಮದ ಮಾರಿಕಾಂಬ ಹಾಗೂ ಕಲ್ಲೇಶ್ವರ ದೇವಾಲಯಗಳ ನಡುವಿನ ಬತ್ತೇರಿ ಮೇಲೆ ವಿರಾಜಮಾನರಾಗಿರುವ ಗಾಂಧಿ ಪ್ರತಿಮೆಯನ್ನು ಗ್ರಾಮಸ್ಥರು ದೇವರೆಂದೇ ನಂಬಿದ್ದಾರೆ, ನಿತ್ಯವೂ ಪೂಜಿಸುತ್ತಾರೆ. ಊರಹಬ್ಬ, ರಾಷ್ಟ್ರೀಯ ಹಬ್ಬಗಳ ದಿನದಂದು ವಿಶೇಷ ಅಲಂಕಾರ, ವಿಶೇಷ ಪೂಜೆಗಳು ನೆರವೇರುತ್ತವೆ. ಶಿವಮೊಗ್ಗ ಜಿಲ್ಲೆ ಈಸೂರು ನಂತರ ಅತೀ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರು ತುರುವನೂರಿನಲ್ಲಿದ್ದರು. ಈಗ ಎಲ್ಲರೂ ನಿಧನರಾಗಿದ್ದಾರೆ. ತುರುವನೂರು ಪಕ್ಕದ ಕೂನಬೇವು ಗ್ರಾಮದಲ್ಲಿ 98ರ ಹರೆಯದ ಎನ್.ಭೀಮಪ್ಪ ಮಾತ್ರ ಉಳಿದಿದ್ದಾರೆ. ಈಚಲುಮರದ ಚಳವಳಿಯನ್ನು ಅವರು ಕಣ್ಣಿಗೆ ಕಟ್ಟಿದಂತೆ ವಿವರಿಸುತ್ತಾರೆ.
‘ಎಸ್.ನಿಜಲಿಂಗಪ್ಪ ಅವರ ಭಾಷಣ ಕೇಳಿ ನಾನೂ ಹೋರಾಟಕ್ಕಿಳಿದೆ, ಈಚಲುಮರ ಕಡಿದೆ. ನಾವು ಹುಡುಗರೆಂಬ ಕಾರಣಕ್ಕೆ ನಮ್ಮನ್ನು ಜೈಲಿನಲ್ಲಿ ಇಟ್ಟುಕೊಳ್ಳಲಿಲ್ಲ. ಆದರೂ ನಾನು ಜೈಲು ಬಿಟ್ಟು ಬರಲಿಲ್ಲ, ನಮ್ಮವರ ಬಿಡುಗಡೆಗಾಗಿ ಉಪವಾಸ ಸತ್ಯಾಗ್ರಹ ಮಾಡಿದೆ’ ಎಂದು ಎನ್.ಭೀಮಪ್ಪ ಬಿಚ್ಚಿಟ್ಟರು.
ಮಧ್ಯ ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ತುರುವನೂರು ಇಲ್ಲಿಯವರೆಗೂ ಅಜ್ಞಾತವಾಗಿಯೇ ಉಳಿದಿತ್ತು. ಆದರೆ ಈಗ ಗ್ರಾಮಕ್ಕೆ ಪ್ರವಾಸಿ ತಾಣ ರೂಪ ನೀಡುವ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಚಿತ್ರದುರ್ಗದಿಂದ 22 ಕಿ.ಮೀ ದೂರದಲ್ಲಿರುವ ಈ ಗ್ರಾಮ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಶಾಸಕ ಟಿ.ರಘುಮೂರ್ತಿ ಅವರ ನೇತೃತ್ವದಲ್ಲಿ ಗ್ರಾಮ ಹೊಸ ರೂಪ ಪಡೆಯುತ್ತಿದೆ.
ಸ್ವಾತಂತ್ರ್ಯ ಹೋರಾಟಗಾರರು ಕಲಿತ ಗ್ರಾಮದ ಪ್ರಾಥಮಿಕ ಶಾಲೆಗೆ ನೂರು ವರ್ಷಗಳು ತುಂಬಿದೆ. ಎಸ್.ನಿಜಲಿಂಗಪ್ಪ ಭಾಷಣ ಮಾಡಿದ್ದ ಹೈಸ್ಕೂಲ್‌ಗೆ 75 ವರ್ಷ ತುಂಬಿದೆ. ಎರಡೂ ಶಾಲೆಗಳು ಈಗ ಹೊಸದಾಗಿ ನಿರ್ಮಾಣಗೊಂಡಿದ್ದು ವಿಕಾಸಸೌಧ ತದ್ರೂಪ ಪಡೆದಿವೆ. ಶಾಲೆಗಳಿಗೆ ಅತ್ಯಾಧುನಿಕ ರೂಪ ಒದಗಿಸಲಾಗಿದೆ. ಎಲ್‌ಕೆಜಿಯಿಂದ ಪದವಿವರೆಗೂ ಶಾಲಾ, ಕಾಲೇಜುಗಳು ಹೈಟೆಕ್ ರೂಪದಲ್ಲಿ ನಿರ್ಮಾಣಗೊಂಡಿವೆ. ಗಾಂಧಿ ಉದ್ಯಾನದ ಎದುರಿನಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಜಾಗ ಮೀಸಲಿಡಲಾಗಿದೆ.
ಗಾಂಧಿ ಪ್ರತಿಮೆ ಸ್ಥಾಪನೆ, ಗಾಂಧಿ ಉದ್ಯಾನ ಉದ್ಘಾಟನೆ, ಪ್ರಾಥಮಿಕ ಶಾಲೆ ಶತಮಾನೋತ್ಸವ, ಹೈಸ್ಕೂಲ್ ಸುವರ್ಣ ಮಹೋತ್ಸವ ಸೇರಿ ‘ಶತಮಾನ– ಸುವರ್ಣ ಸಂಭ್ರಮ’ಕ್ಕೆ ತುರುವನೂರು ಸಜ್ಜಾಗುತ್ತಿದೆ. ಫೆಬ್ರುವರಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಗಾಂಧಿಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವ, ಜೀವಂತವಾಗಿಡುವ ಕೆಲಸ ನಡೆಯುತ್ತಿರುವುದು ಸಂತೋಷವೇ.
***
ಪೂರ್ವಿಕರು ಇತಿಹಾಸ ಸೃಷ್ಟಿಸಿದ್ದಾರೆ. ಆ ಇತಿಹಾಸವನ್ನು ಉಳಿಸಿ ಬೆಳೆಸಬೇಕಾದುದು ನಮ್ಮ ಜವಾಬ್ದಾರಿ. ಗ್ರಾಮದಲ್ಲಿರುವ ಪ್ರತಿ ಐತಿಹಾಸಿಕ ಕಟ್ಟಡಕ್ಕೂ ಹೊಸರೂಪ ನೀಡಲಾಗಿದೆ. ತುರುವನೂರು ಪ್ರಮುಖ ಪ್ರವಾಸಿ ತಾಣವಾಗಬೇಕು ಎಂಬ ಉದ್ದೇಶದಿಂದ ಗ್ರಾಮಾಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ
–ಟಿ.ರಘುಮೂರ್ತಿ ಚಳ್ಳಕೆರೆ ಶಾಸಕ
ಗಾಂಧಿ ಉದ್ಯಾನ ವಸ್ತುಸಂಗ್ರಹಾಲಯ
ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಶತಮಾನೋತ್ಸವ ತುಂಬಿದ ಹೊತ್ತಿನಲ್ಲಿ ತುರುವನೂರು ಗ್ರಾಮಾಭಿವೃದ್ಧಿಗೆ ವಿಶೇಷ ಪ್ಯಾಕೇಜ್ ತರಲಾಗಿದೆ. ಇದರ ಫಲವಾಗಿ ಗ್ರಾಮದಲ್ಲಿ ಗಾಂಧಿ ಉದ್ಯಾನ ತಲೆ ಎತ್ತಿದೆ. ಉದ್ಯಾನದ ನಡುವೆ ಸ್ತೂಪವೊಂದನ್ನು ನಿರ್ಮಿಸಿದ್ದು ಅಲ್ಲಿ ಕಲ್ಲಿನಿಂದ ಕೆತ್ತಿಸಿದ ಗಾಂಧಿ ಪ್ರತಿಮೆ ಪ್ರತಿಷ್ಠಾಪಿಸಲಾಗುತ್ತಿದೆ. ಕೋಲಾರ ಜಿಲ್ಲೆಯ ಶಿವಾರ ಪಟ್ನ ಶಿಲ್ಪಿಗಳಿಂದ ಗಾಂಧಿ ಪ್ರತಿಮೆ ಕೆತ್ತನೆ ಮಾಡಿಸಲಾಗಿದೆ. ಕುಳಿತ ಸ್ಥಿತಿಯಲ್ಲಿರುವ ಆರು ಅಡಿ ಎತ್ತರದ ಪ್ರತಿಮೆ ಸಿದ್ಧಗೊಂಡಿದೆ. ಗ್ರಾಮದ ಹೃದಯಭಾಗದಲ್ಲಿ 70 ಅಡಿ ಆಳದ ಕಂದಕವೊಂದಿತ್ತು. ಮಳೆಗಾಲದಲ್ಲಿ ನೀರು ನುಗ್ಗಿ ಪ್ರವಾಹವನ್ನೇ ಸೃಷ್ಟಿಸುತ್ತಿತ್ತು. ಇದೇ ಜಾಗ ಈಗ ಉದ್ಯಾನ ರೂಪ ಪಡೆದಿದೆ. ಕಂದಕದ ತಳದಲ್ಲಿ ರಾಜಕಾಲುವೆ ನಿರ್ಮಿಸಿ ತಳದಿಂದ ಪಿಲ್ಲರ್ ಹಾಕಿ ಇಡೀ ಜಾಗವನ್ನು ಮೇಲೆತ್ತರಿಸಲಾಗಿದೆ. ಶಾಸಕ ರಘುಮೂರ್ತಿ ಸ್ವತಃ ಎಂಜಿನಿಯರ್ ಆಗಿರುವ ಕಾರಣ ಈ ಕಾಮಗಾರಿ ಸಾಕಾರಗೊಂಡಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಒಂದು ಎಕರೆ ಜಾಗದಲ್ಲಿ ಜೀವತಳೆದು ನಿಂತಿರುವ ಉದ್ಯಾನದಲ್ಲಿ ಕಲ್ಲುಮಂಟಪಗಳಿವೆ ಕಲ್ಲಿನಿಂದಲೇ ಗಣೇಶ ದೇವಾಲಯ ನಿರ್ಮಿಸಲಾಗಿದೆ. ಆಕರ್ಷಕ ದೀಪಗಳು ಹೊಸ ವಾತಾವರಣ ಸೃಷ್ಟಿಸಿವೆ. ಸ್ತೂಪದ ಸುತ್ತಲೂ ತುರುವನೂರಿನ ಸ್ವಾತಂತ್ರ್ಯ ಹೋರಾಟಗಾರರ ದಾಖಲಾಗಲಿವೆ. ಗಾಂಧಿ ಉದ್ಯಾನದ ಜೊತೆಗೆ ಗಾಂಧಿ ನೆನಪಿನ ವಸ್ತುಸಂಗ್ರಹಾಲಯ ಗ್ರಾಮೀಣ ಯುವಕರಿಗಾಗಿ ಮಾಹಿತಿ ಕೇಂದ್ರ ತೆರೆಯಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ.
***
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.