ADVERTISEMENT

ಅಮೆರಿಕ: ಶ್ವೇತಭವನದ ಬಂಕರ್

ಒಂಚೂರು

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 19:30 IST
Last Updated 13 ಜೂನ್ 2020, 19:30 IST
ಶ್ವೇತಭವನ (ಚಿತ್ರ: ವಿಕಿಕಾಮನ್ಸ್‌)
ಶ್ವೇತಭವನ (ಚಿತ್ರ: ವಿಕಿಕಾಮನ್ಸ್‌)   

ಜಾರ್ಜ್‌ ಫ್ಲಾಯ್ಡ್‌ ಎಂಬ ವ್ಯಕ್ತಿಯನ್ನು ಅಮೆರಿಕದ ಪೊಲೀಸರೇ ಹತ್ಯೆ ಮಾಡಿದ್ದನ್ನು ಖಂಡಿಸಿ ಆ ದೇಶದ ಜನ ಈಚೆಗೆ ತೀವ್ರ ಪ್ರತಿಭಟನೆ ನಡೆಸಿದರು. ಇದು ವಿಶ್ವದಾದ್ಯಂತ ದೊಡ್ಡ ಸುದ್ದಿಯಾಯಿತು. ಈ ದೊಡ್ಡ ಸುದ್ದಿಯ ಜೊತೆಯಲ್ಲೇ, ಚಿಕ್ಕದೊಂದು ಸುದ್ದಿ ಕೂಡ ಬಂತು. ಅದು, ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಶ್ವೇತಭವನದ ನೆಲಮಾಳಿಗೆಯಲ್ಲಿನ ಬಂಕರ್‌ನಲ್ಲಿ ರಕ್ಷಣೆ ಪಡೆದಿದ್ದರು ಎಂಬುದು!

ಪ್ರತಿಭಟನಕಾರರು ಶ್ವೇತಭವನಕ್ಕೆ ಮುತ್ತಿಗೆ ಹಾಕಿದ್ದ ಸಂದರ್ಭದಲ್ಲಿ ಟ್ರಂಪ್ ಅವರನ್ನು ಬಂಕರ್‌ಗೆ ಕರೆದೊಯ್ದಿದ್ದರು ಅವರ ರಕ್ಷಕರು. ಆದರೆ, ‘ನಾನು ಬಂಕರ್‌ ಪರಿಶೀಲಿಸಲು ಹೋಗಿದ್ದೆ’ ಎಂದು ಟ್ರಂಪ್ ಸ್ಪಷ್ಟನೆ ಕೂಡ ನೀಡಿದ್ದಾರೆ.

ಅಮೆರಿಕದ ಅಧ್ಯಕ್ಷರನ್ನು ಆಪತ್ತಿನಿಂದ ಕಾಪಾಡುವ ಉದ್ದೇಶದಿಂದ ನಿರ್ಮಿಸಲಾಗಿರುವ ಈ ಬಂಕರ್‌ನ ವೈಶಿಷ್ಟ್ಯಗಳು ಏನು? ಇದರ ಅಧಿಕೃತ ಹೆಸರು ‘ಅಧ್ಯಕ್ಷರ ತುರ್ತುಸ್ಥಿತಿ ಕಾರ್ಯಾಚರಣೆ ಕೇಂದ್ರ’ (Presidential Emergency Operations Center - PEOC). ಇದು ಶ್ವೇತಭವನದ ಪೂರ್ವಭಾಗದಲ್ಲಿ ಇದೆ.

ADVERTISEMENT

ವಾಷಿಂಗ್ಟನ್‌ ಮೇಲೆ ವೈಮಾನಿಕ ದಾಳಿ ನಡೆದರೆ, ಅಧ್ಯಕ್ಷರನ್ನು ಕಾಪಾಡಲು ಈ ಬಂಕರ್‌ ಅನ್ನು ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ನಿರ್ಮಿಸಲಾಯಿತು. ಆಗ ಫ್ರಾಂಕ್ಲಿನ್ ಡಿ. ರೂಸ್‌ವೆಲ್ಟ್‌ ಅವರು ಅಮೆರಿಕದ ಅಧ್ಯಕ್ಷರಾಗಿದ್ದರು. ನಿರ್ದಿಷ್ಟವಾಗಿ ಹೇಳಬೇಕೆಂದರೆ, ಪರ್ಲ್‌ ಹಾರ್ಬರ್‌ ಮೇಲೆ ಜಪಾನ್‌ ಪಡೆ ದಾಳಿ ನಡೆಸಿದ ನಂತರ ಈ ಬಂಕರ್ ನಿರ್ಮಾಣ ಆಯಿತು. 2001ರ ಸೆಪ್ಟೆಂಬರ್‌ 11ರಂದು ಅಮೆರಿಕದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದಾಗ ಅಂದಿನ ಉಪಾಧ್ಯಕ್ಷ ರಿಚರ್ಡ್‌ ಬಿ. ಚೆನಿ ಅವರು ಈ ಬಂಕರ್‌ನಲ್ಲಿ ಆಶ್ರಯ ಪಡೆದಿದ್ದರು. ಆ ಹೊತ್ತಿನಲ್ಲಿ ಅಂದಿನ ಅಧ್ಯಕ್ಷ ಜಾರ್ಜ್‌ ಬುಷ್‌ ಅವರು ವಾಷಿಂಗ್ಟನ್‌ನಲ್ಲಿ ಇರಲಿಲ್ಲ.

ವಾಷಿಂಗ್ಟನ್‌ ಮೇಲೆ ಯಾವುದೇ ರೀತಿಯ ದಾಳಿ ನಡೆದರೆ, ಅಧ್ಯಕ್ಷರನ್ನು ಹಾಗೂ ಅವರ ಪರಿವಾರದವರನ್ನು ರಸ್ತೆ ಮಾರ್ಗದ ಮೂಲಕ ಬೇರೆಡೆ ಕರೆದೊಯ್ಯಲು ಸಾಧ್ಯವಿಲ್ಲ. ಹಾಗೆಯೇ, ವಾಯುಮಾರ್ಗದ ಮೂಲಕವೂ ಬೇರೆ ಸ್ಥಳಕ್ಕೆ ಅವರನ್ನು ಸಾಗಿಸಲು ಸುಲಭಕ್ಕೆ ಆಗುವುದಿಲ್ಲ ಎಂಬ ಕಾರಣಕ್ಕೆ, ಶ್ವೇತಭವನದ ಆವರಣದಲ್ಲೇ ನೆಲಮಾಳಿಗೆಯ ರೂಪದಲ್ಲಿ ಈ ಬಂಕರ್‌ ನಿರ್ಮಾಣ ಆಗಿದೆ ಎಂದು ಹೇಳಲಾಗುತ್ತಿದೆ.

ಅಮೆರಿಕದ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯ ವರದಿಗಾರ ಆಗಿದ್ದ ರೊನಾಲ್ಡ್‌ ಕೆಸ್ಲರ್‌ ಹೇಳುವಂತೆ, ಈ ಬಂಕರ್‌ ಸಾಮಾನ್ಯದ್ದಲ್ಲ. ಇದು ಶ್ವೇತಭವನದ ಆವರಣದಲ್ಲಿ ನೆಲದ ಅಡಿಯಲ್ಲಿ ಐದು ಮಹಡಿಗಳಷ್ಟು ಬೃಹತ್ ಆಗಿದೆ! ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ, ಟ್ರಂಪ್ ಅವರು ಈ ಬಂಕರ್‌ನಲ್ಲಿ ಒಂದು ಸುತ್ತಾಟ ನಡೆಸಿದ್ದರು ಎಂದೂ ಕೆಸ್ಲರ್ ಅವರು ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.