ADVERTISEMENT

ಗತಕಾಲದ ಸಾವಧಾನ, ವರ್ತಮಾನದ ಧಾವಂತ!

ಪ್ರೇಮ ಬರಹ ಕೋಟಿ ತರಹ

ಪೂರ್ವಿ
Published 13 ಫೆಬ್ರುವರಿ 2019, 19:45 IST
Last Updated 13 ಫೆಬ್ರುವರಿ 2019, 19:45 IST

ಅಂದು– ಸಹಪಾಠಿ ಹುಡುಗಿ ಊಟಕೆ ಕರೆದರೆ ಪುಲಕ. ಇಂದು–ತುತ್ತನ್ನು ಬಾಯಿಗಿಟ್ಟರೂ ‘ಅದೇನು ಮಹಾ’ ಎಂಬ ಭಾವ.
ಅಂದು–ಅವಳ ಲಂಗ ದಾವಣಿಗೆ ಹುಡುಗನ ಕಣ್ಣೋಟದಲ್ಲೇ ಮೆಚ್ಚುಗೆ. ಅವಳ ಕೆನ್ನೆಮೇಲೆ ನಾಚಿಕೆಯ ಕೆಂಪು. ಇಂದು–ಮೈಗಂಟಿರುವುದು ಹೊಸಬಟ್ಟೆ ಎಂದು ಗುರುತಿಸಲೇಬೇಕೆಂದೇನೂ ಇಲ್ಲ. ಗುರುತಿಸಿದರೂ ಕೆನ್ನೆಮೇಲೆ ಇರುವುದು ಮೇಕಪ್ಪಿನ ಕೆಂಪು.
ಅಂದು–ಒಲವಿನ ಉಡುಗೊರೆ ಕೊಡಲೇನು, ‘ರಕುತದಿ ಬರೆದೆನು ಇದ ನಾನು’. ಇಂದು–ಮೆಸೇಜು ಬರಬಹುದು ಕಾಯ್ತಾ ಇರಿ.

ಪ್ರೇಮ ಬದಲಾಗಿಲ್ಲ, ಬದಲಾಗುವುದೂ ಇಲ್ಲ. ಪ್ರೇಮಿಗಳೂ ಹಾಗೇ ಇದ್ದಾರೆ. ಆದರೆ, ಪ್ರೇಮಿಸುವ ವಿಧಾನ, ಸಾವಧಾನದಲ್ಲಿ ಎದ್ದುಕಾಣುವ ಬದಲಾವಣೆಗಳಾಗಿವೆ. ರಾತ್ರಿ ಇಡೀ ಪದಗಳ ಪೋಣಿಸಿ, ಒಂದು ಕಾಟೂ ಗೀಟೂ ಇಲ್ಲದ ಮುದ್ದಾದ ಬರಹದ ಪ್ರೇಮಪತ್ರವ ಅಂಚೆಯ ಕೆಂಪು ಡಬ್ಬಕ್ಕೆ ಹಾಕಿ, ಅದು ಅಭಿಸಾರಿಕೆಯ ತಲುಪಿತೋ ಇಲ್ಲವೋ ಎಂಬ ಚಡಪಡಿಕೆಗೆ ಸಾಕ್ಷಿಯಾಗಿದ್ದ ಕಾಲ ಅದು. ವಾಟ್ಸ್‌ಆ್ಯಪ್‌ನಲ್ಲಿ ಪಟಪಟನೆ ಕುಟ್ಟಿದ ಮೆಸೇಜು ತಲುಪಿದ್ದೇ ಎರಡು ನೀಲಿ ಗೆರೆಗಳು ಮೂಡಿದಾಗ ಹೃದಯ ಕುಣಿಯುವ ಕಾಲವಿದು.ಪ್ರೇಮದ ತೀವ್ರತೆಯನ್ನು ವಿರಹ ಹೆಚ್ಚುಮಾಡುತ್ತಿದ್ದ ಸಂದರ್ಭವಿತ್ತು. ಈಗ ಅದು ಕಡಿಮೆಯಾಗಿದೆ. ಕೃಪೆ: ಸಂವಹನ ಕ್ರಾಂತಿ, ಸಂಪರ್ಕ ಕ್ರಾಂತಿ. ‘ವಿರಹದಲ್ಲಿ ಪ್ರೀತಿ ಜಾಸ್ತಿ’ ಎಂದು ಜಿಎಸ್ಸೆಸ್ ಹೇಳಿದ್ದು ತಮಾಷೆಗೆ ಅಲ್ಲವಷ್ಟೆ. ಈಗಿನ ವಿರಹ ಅಲ್ಪಾವಧಿಯದ್ದು. ವಿರಹದ ಸೈರಣಾ ಶಕ್ತಿಯೂ ಕಡಿಮೆಯೆನ್ನಿ.

‘ಪ್ರೇಮಿಗಳ ದಿನ’ ಬಂತೆಂದರೆ ಚೆಂದದೊಂದು ಶುಭಾಶಯ ಪತ್ರವನ್ನು ತಾನೇ ತಯಾರಿಸಿ, ಅದರ ಮೇಲೆ ಬಣ್ಣ ಬಣ್ಣದ ಚಿತ್ತಾರ ಮಾಡಿ ಲಲನೆಯ ಚಿತ್ತಾಪಹರಿಸುವ ಸೃಜನಶೀಲತೆಯೊಂದು ಉಕ್ಕುತ್ತಿತ್ತು. ಇದ್ದಕ್ಕಿದ್ದಂತೆ ಕವಿಹೃದಯಗಳೂ ಎಚ್ಚರಗೊಳ್ಳುತ್ತಿದ್ದವು. ಬರೆಯುವ ಕವನ ಹೃದಯದಾಳಕ್ಕಿಳಿದು ಅವಳನ್ನು ಎಳೆದು ತರಬೇಕೆಂಬ ಉನ್ಮಾದ. ಈಗ ಉನ್ಮಾದವೇನೋ ಅದೇ; ಆದರೆ, ಪ್ರಕಟಪಡಿಸುವ ವಿಧಾನ ಬೇರೆ. ಕಾಲೇಜು ತ್ರಿಕೋನ ಪ್ರೇಮಕಥೆಗಳಲ್ಲಿ ಹೊಡೆದಾಟ ಅಂದು ಸುದ್ದಿ, ಇಂದು ವೈರಲ್. ಕೋಡ್‌ ವರ್ಡ್‌ಗಳಲ್ಲೇ ಸಹಸ್ರಾರು ಚುಟುಕು ಸಂದೇಶಗಳ ಪಾರಿವಾಳಗಳನ್ನು ಮೊಬೈಲಿನಲ್ಲೇ ಹಾರಿಬಿಡುವ ಆಧುನಿಕ ಪ್ರೇಮಿಗಳಿಗೆ ಯೂಟ್ಯೂಬ್, ಫೇಸ್‌ಬುಕ್‌, ಟ್ವಿಟ್ಟರ್‌ನ ವಯಾ ಮೀಡಿಯಾಗಳಿವೆ. ಡಬ್‌ಸ್ಮ್ಯಾಷ್‌ನಂಥ ಹೊಸ ಮಾರ್ಗವೂ ಉಂಟು. ಕಾಫಿ ಶಾಪಿನ ನೊರೆಯಲ್ಲಿ ಹೃದಯ ಮೂಡಿಸಿದವನ್ಯಾರೋ? ಕೊಡಿಸಿದವನು ಅದರ ಬಿಂಬವನ್ನು ಎದುರಲ್ಲಿ ಕುಳಿತವಳ ಕಣ್ಣಲ್ಲಿ ಕಂಡು ಗಂಟಲುಬ್ಬಿಸಿಕೊಳ್ಳುತ್ತಾನೆ.

ADVERTISEMENT

ಒಂದು ಹೆಣ್ಣಿಗೊಂದು ಗಂಡು/ಹೇಗೋ ಸೇರಿ ಹೊಂದಿಕೊಂಡು/ಕಾಣದೊಂದ ಕನಸ ಕಂಡು ದುಃಖ ಹಗುರ ಎನುತಿರೆ/ಪ್ರೇಮವೆನಲು ಹಾಸ್ಯವೇ–ಎಂಬ ಕೆ.ಎಸ್‌.ನ ಕವಿವಾಣಿಯಲ್ಲಿನ ಕೊನೆಯ ಪ್ರಶ್ನಾರ್ಥ ಇಂದೂ ಎಷ್ಟೋ ತುಂಡ ಹೈಕಳು–ತರಳೆಗಳ ತಲೆಯಲ್ಲಿನ ಗುಂಗಿಹುಳ.

ಲ್ಯಾಂಡ್‌ಲೈನ್‌ಗೆ ಫೋನ್‌ ಮಾಡಿ, ಅವಳೇ ಎತ್ತಿಕೊಳ್ಳಲಿ ಎಂದು ಇಷ್ಟದೇವರಿಗೆ ಮೊರೆಯಿಡುವ ಹಳೆ ಪ್ರೇಮಿಯ ನೆನಪು. ಮಿಸ್ಡ್‌ ಕಾಲ್‌ಗಳಿಗೆ ತನ್ನದೇ ಅರ್ಥ ಆರೋಪಿಸಿಕೊಂಡು ವರ್ತಿಸುವ ಹೊಸ ಪ್ರೇಮಿಯ ವರಾತದ ದರ್ಶನ.

ಯಾವುದೋ ಗಂಡು ಹೆಸರಿನಲ್ಲಿ ಸೇವಾದ ಹುಡುಗಿಯ ಮೊಬೈಲ್‌ ಕರೆಯನ್ನು ಅವ್ವನೋ, ಅಪ್ಪನೋ ರಿಸೀವ್ ಮಾಡಿಬಿಟ್ಟರೆ ಏನು ಗತಿ ಎಂದು ಹೃದಯದ ಬಡಿತ ಇಂದು ಜೋರಾಗುವಾಗಲೇ, ಹಿಂದೆ ಮಗಳಿಗೆ ಬಂದ ಪ್ರೇಮಪತ್ರ ಅವಳ ಅಪ್ಪನ ಕೈಗೆ ಸಿಕ್ಕಿ ಆದ ಫಜೀತಿಯ ಜ್ಞಾಪಕ ಚಿತ್ರಶಾಲೆಯೂ ತೆರೆದುಕೊಳ್ಳುತ್ತದೆ.

ಪ್ರೇಮ, ಪ್ರೀತಿ ಹಾಗೇ ಇದೆ. ಅದಕ್ಕೆ ಚಾಚಿರುವ ಕೈಗಳಿಗೀಗ ಮೊಬೈಲ್ ಎಂಬ ಮಾಂತ್ರಿಕ ಶಕ್ತಿ ಬಂದಿದೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.